ಬೆಳ್ಳಾರೆಯಲ್ಲಿ ಪಾರ್ಕ್, ಬಾವುಟಗುಡ್ಡೆಯಲ್ಲಿ ಸ್ಮಾರಕ : ಜಿಲ್ಲಾಧಿಕಾರಿ
ಭಾರತದ ಸ್ವಾತಂತ್ರ್ಯ ಸಮರ ಆರಂಭಗೊಂಡಿತೆಂದು ಹೇಳಲಾದ 1857 ರ ಸಿಪಾಯಿ ದಂಗೆಗಿಂತ 2೦ ವರ್ಷ ಮೊದಲೇ 1837 ರಲ್ಲಿ ಸುಳ್ಯದಿಂದ ಮಂಗಳೂರುವರೆಗೆ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಸಂಸ್ಮರಣೆ ಎ. ೫ರಂದು ಸುಳ್ಯ ಮತ್ತು ಮಂಗಳೂರಿನಲ್ಲಿ ನಡೆಯಿತು.
ದ.ಕ. ಒಕ್ಕಲಿಗ ಗೌಡ ಸೇವಾ ಸಂಘ ಮಂಗಳೂರು ಮತ್ತು ಅದರ ಮಹಿಳಾ ಘಟಕ ಹಾಗೂ ಯುವ ಘಟಕ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಬಾವುಟಗುಡ್ಡೆಯ ಠಾಗೂರ್ ಪಾರ್ಕ್ನಲ್ಲಿ ನಡೆದ ಸಂಸ್ಮರಣಾ ಕಾರ್ಯಕ್ರಮದ ಅತಿಥಿ ಸ್ಥಾನದಿಂದ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು, “ಅಮರ ಸುಳ್ಯ ಸ್ವಾತಂತ್ರ್ಯ ಸಮರದ ಹೋರಾಟಗಾರರ ಹೆಸರು ಶಾಶ್ವತವಾಗಿ ಉಳಿಯಬೇಕಾಗಿದೆ. ಅದಕ್ಕಾಗಿ ಆ ಹೋರಾಟ ಆರಂಭಗೊಂಡ ಸುಳ್ಯದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಅಮರ ಕ್ರಾಂತಿ ಪಾರ್ಕ್ ಹಾಗೂ ಹೋರಾಟದ ಅಂತಿಮ ಗುರಿ ತಲುಪಿದ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಮಾರಕ ನಿರ್ಮಿಸಲಾಗುವುದು” ಎಂದು ಹೇಳಿದರು.
“ಅಮರ ಸುಳ್ಯ ಸ್ವಾತಂತ್ರ್ಯದ ಹೋರಾಟಗಾರರು ಬ್ರಿಟೀಷರನ್ನು ಮಂಗಳೂರಿನಿಂದ ಹೊಡೆದೋಡಿಸಿ ಬಾವುಟಗುಡ್ಡೆಯಲ್ಲಿದ್ದ ಬ್ರಿಟಿಷ್ ಧ್ವಜವನ್ನು ಕಿತ್ತೊಗೆದು ಸ್ವಾತಂತ್ರ್ಯದ ಬಾವುಟ ಹಾರಿಸಿದ್ದು ರೋಚಕ ಇತಿಹಾಸ. ಈ ಕತೆಯನ್ನು ಕೇಳುವಾಗ ಮೈ ರೋಮಾಂಚನಗೊಳ್ಳುತ್ತದೆ. ಬ್ರಿಟಿಷರ ವಿರುದ್ಧ ಯಾವುದೇ ಆಧುನಿಕ ಶಸ್ತಾಸ್ತ್ರಗಳಿಲ್ಲದೆ ಕೆಚ್ಚೆದೆಯಿಂದ ಹೋರಾಡಿದ ಕ್ರಾಂತಿಕಾರಿ ಹೋರಾಟಗಾರರ ಬಗ್ಗೆನಮಗೆ ಮಾಹಿತಿಯೇ ಇಲ್ಲವಾಗಿತ್ತು. ಈ ನಿಟ್ಟಿನಲ್ಲಿ ಅಮರ ಸುಳ್ಯ ಹೋರಾಟಗಾರರ ದಾಖಲೀಕರಣವಾಗಬೇಕು. ಅವರ ಆದರ್ಶವನ್ನು ಯುವಜನತೆ ಪಾಲಿಸಿಕೊಂಡು ನಡೆಯಬೇಕು. ಹಿರಿಯ ತ್ಯಾಗ ಬಲಿದಾನ ವ್ಯರ್ಥವಾಗಬಾರದು” ಎಂದು ಜಿಲ್ಲಾಧಿಕಾರಿ ಪ್ರತಿಪಾದಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, “ದೇಶಕ್ಕಾಗಿ ಹೋರಾಟ ಮಾಡಿದವರನ್ನು ಜನತೆ ಎಂದೂ ಮರೆಯಬಾರದು. ಸ್ವಾರ್ಥಕ್ಕಾಗಿ ಇತಿಹಾಸ ತಿರುಚುವ ಕೆಲಸವೂ ಆಗಬಾರದು” ಎಂದರು.
ಅಮರ ಸುಳ್ಯ ಸ್ವಾತಂತ್ರ್ಯದ ಕುರಿತು ಉಪನ್ಯಾಸ ನೀಡಿದ ಲೇಖಕ ಅರವಿಂದ ಚೊಕ್ಕಾಡಿಯವರು, “ಅಮರ ಸುಳ್ಯ ಹೋರಾಟವು ರಾಷ್ಟ್ರೀಯ ಪ್ರಜ್ಞೆಯ ಹೋರಾಟವಾಗಿದ್ದು, ಪ್ರಾದೇಶಿಕ ರಾಷ್ಟ್ರೀಯತೆಗಾಗಿ ಜನತಾ ಬಂಡಾಯವಾಗಿ ಆ ಸಮರ ಕಾವು ಪಡೆಯಿತು. ಬ್ರಿಟೀಷರನ್ನು ಹೊಡೆದೋಡಿಸಬೇಕೆಂಬುದೇ ಹೋರಾಟದ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಅವರು ಪಟ್ಟ ಶ್ರಮಕ್ಕೆ ಬೆಲೆ ಕಟ್ಟಲಾಗದು” ಎಂದು ಹೇಳಿದರು. ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್ ಎ.ಸಿ.ವಿನಯರಾಜ್, ಲೇಖಕ ಹಾಗೂ ಹೋರಾಟಗಾರರಾದ ಎನ್.ಎಸ್.ದೇವಿಪ್ರಸಾದ್ ಸಂಪಾಜೆ, ಲೇಖಕ ಅನಂತರಾಜ್ ಗೌಡ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜೆಗದ್ದೆ, ಕೊಡಗು ಮತ್ತು ದ.ಕ. ಗೌಡ ಸಮಾಜದ ಅಧ್ಯಕ್ಷ ತೇನನ ರಾಜೇಶ, ದ.ಕ. ಜಿಲ್ಲಾ ಒಕ್ಕಲಿಗರ ಗೌಡ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಗೌರಿ ಬನ್ನೂರು, ಯುವ ಘಟಕದ ಅಧ್ಯಕ್ಷ ಅಕ್ಷಯ್ ಕೆ.ಸಿ. ಕುರುಂಜಿ, ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ, ಸೌಮ್ಯಾ ಸುಕುಮಾರ್ ವೇದಿಕೆಯಲ್ಲಿದ್ದರು.
ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಡಾ. ದಾಮೋದರ ನಾರಾಲು ಸ್ವಾಗತಿಸಿ, ಯುವ ಘಟಕದ ಅಧ್ಯಕ್ಷ ಎಂ.ಬಿ. ಕಿರಣ್ ಬುಡ್ಲೆಗುತ್ತು ವಂದಿಸಿದರು. ಕಾರ್ಯದರ್ಶಿ ರಾಮಣ್ಣ ಗೌಡ ಕೊಂಡೆಬಾಯಿ ಕಾರ್ಯಕ್ರಮ ನಿರೂಪಿಸಿದರು.