ಕನ್ನಡ ಶಾಲೆ ಉಳಿಸೋಕೆ ಟೊಂಕಕಟ್ಟಿ ನಿಂತ ಹಳೆ ವಿದ್ಯಾರ್ಥಿಗಳು..!

Advt_Headding_Middle
Advt_Headding_Middle

ಕಲ್ಲುಗುಂಡಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಸಾಹಸ

ಶಾಲೆಯ ಋಣ ತೀರಿಸಲು ಮುಂದಾದ ಮಾದರಿ ನಡೆಗೆ ವ್ಯಾಪಕ ಶ್ಲಾಘನೆ

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯನ್ನ ಉಳಿಸಬೇಕೆನ್ನುವ ಕೂಗು ಇತ್ತೀಚೆಗೆ ಹೆಚ್ಚಾಗುತ್ತಿದೆ. ಬೆನ್ನಲ್ಲೇ ಇಲ್ಲೊಂದು ಹಳೆ ವಿದ್ಯಾರ್ಥಿಗಳ ತಂಡ ತಾವು ಓದಿದ ಸರ್ಕಾರಿ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ ಟೊಂಕಕೊಟ್ಟಿ ನಿಂತ ಅಪರೂಪದ ಪ್ರಯತ್ನವೊಂದು ನಡೆದಿದೆ.

ಹೌದು…ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿಯ ಹಳೆ ವಿದ್ಯಾರ್ಥಿಗಳ ತಂಡವೇ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿ ಈಗ ಸುದ್ದಿಯಲ್ಲಿದೆ. ನಮ್ಮೂರ ಶಾಲೆಯನ್ನು ಉಳಿಸೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ವಾಟ್ಸಪ್ ನಲ್ಲಿ ನೂರಕ್ಕೂ ಹೆಚ್ಚಿನ ಹಳೆ ವಿದ್ಯಾರ್ಥಿಗಳ ತಂಡ ಒಂದಾಗಿದೆ. ಶಾಲೆಯ ಅಧ್ಯಾಪಕ ಬಳಗ, ಊರಿನ ಗುರು-ಹಿರಿಯರ ಮಾರ್ಗದರ್ಶನ ಪಡೆದು ಈ ತಂಡ ಶಾಲೆಯ ಸಬಲೀಕರಣಕ್ಕೆ ಮುಂದಾಗಿರುವುದಕ್ಕೆ ಇದೀಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

‘ನಮ್ಮೂರ ಶಾಲೆ ಉಳಿಸೋಣ’ ಊರಿನ ಶಾಲೆಯ ಮೂಲಭೂತ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು. ಶಾಲೆಯ ಬೌದ್ಧಿಕ ಸಂಪತ್ತನ್ನು ಹೆಚ್ಚಿಸುವುದು. ಮಕ್ಕಳಿಗೆ ಓದಲು ಪೂರಕ ವಾತಾವರಣ ನಿರ್ಮಿಸುವುದು. ಒಟ್ಟಾರೆ ಕಲ್ಲುಗುಂಡಿಯ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವುದೇ ಹಳೆ ವಿದ್ಯಾರ್ಥಿಗಳ ತಂಡದ ಪ್ರಮುಖ ಧ್ಯೇಯೋದ್ದೇಶವಾಗಿದೆ.

ಶಾಲೆಗೆ ಶತಮಾನದ ಇತಿಹಾಸ
ಕಲ್ಲುಗುಂಡಿ ಶಾಲೆಗೆ ನೂರು ವರ್ಷಗಳ ಇತಿಹಾಸವಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ಮಂದಿರವಾಗಿದ್ದ ಶಾಲೆಯೀಗ ಖಾಸಗಿ ಶಾಲೆಗಳ ಹೊಡೆತಕ್ಕೆ ಸಿಲುಕಿ ವಿದ್ಯಾರ್ಥಿಗಳ ಕೊರತೆ ಅನುಭವಿಸುತ್ತಿದೆ. ಇಲ್ಲಿ ಮೂಲ ಸೌಕರ್ಯದ ಕೊರತೆ ಇರುವುದರಿಂದ ಪೋಷಕರು ಖಾಸಗಿ ಶಾಲೆಯತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೆಲ್ಲವನ್ನು ಅರಿತ ಹಿರಿಯ ವಿದ್ಯಾರ್ಥಿಗಳ ತಂಡ ಈಗ ಮುರಿದು ಹೋಗಿರುವ ಶಾಲೆಯ ಬೆಂಚ್, ಡೆಸ್ಕ್, ಕಿಟಕಿ, ಬಾಗಿಲುಗಳನ್ನು ತೆಗೆದು ಹೊಸದಾಗಿಸಲು ನಿರ್ಧರಿಸಿದೆ.
ಜತೆಗೆ ಶಾಲೆಯ ಸುರಕ್ಷತೆಗಾಗಿ ಮೂರು ಸಿಸಿ ಕ್ಯಾಮರಾಗಳನ್ನು ಅಳವಡಿಸುವುದಕ್ಕೆ ಮುಂದೆ ಬಂದಿದೆ. ಇದೆಲ್ಲದರ ಖರ್ಚು ವೆಚ್ಚದ ಬಗ್ಗೆ ವಾಟ್ಸಪ್ ನಲ್ಲಿ ಸದ್ಯ ಹಿರಿಯ ವಿದ್ಯಾರ್ಥಿಗಳ ತಂಡ ಲೆಕ್ಕಾಚಾರ ಹಾಕುತ್ತಿದೆ. ಎಲ್ಲವೂ ಅಂತಿಮಗೊಂಡು ಇನ್ನೊಂದು ತಿಂಗಳ ಒಳಗಾಗಿ ಶಾಲೆಗೆ ಹೊಸ ಪೀಠೋಪಕರಣ ಹಾಗೂ ಅಗತ್ಯ ವಸ್ತುಗಳನ್ನು ನೀಡಲಿದೆ.
ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಪ್ರಸ್ತಾವನೆ ಸದ್ಯ ರಾಜ್ಯ ಸರ್ಕಾರದ ಮುಂದಿದೆ. ನಮ್ಮ ಊರಿನಲ್ಲಿ ಅಂತಹ ಪರಿಸ್ಥಿತಿ ಬರಬಾರದು, ನಾವು ಓದಿದ ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಮುಚ್ಚಬಾರದು. ಭವಿಷ್ಯದಲ್ಲೂ ಶಿಕ್ಷಣಾಂಮೃತವನ್ನು ಕಲ್ಲುಗುಂಡಿಯ ಶಾಲೆ ನಿರಂತರವಾಗಿ ಬಡ ವಿದ್ಯಾರ್ಥಿಗಳಿಗೆ ಉಣಬಡಿಸಬೇಕೆನ್ನುವ ಕನಸನ್ನಿಟ್ಟುಕೊಂಡ ಹಳೆ ವಿದ್ಯಾರ್ಥಿಗಳ ತಂಡ ಇಂತಹ ಕಾರ್ಯಕ್ಕೆ ಮುಂದಾಗಿದೆ.

ಕನಸು ಹುಟ್ಟಿದ್ದೇಗೆ?
ಕಲ್ಲುಗುಂಡಿ ಶಾಲೆಯಲ್ಲಿ ಇಂತಹದ್ದೊದು ಕೆಲಸವನ್ನು ಮಾಡಬೇಕು ಅನ್ನುವ ಕನಸಿನ ಹಿಂದೆ ಇರುವುದು ಪತ್ರಕರ್ತ ಹೇಮಂತ್ ಸಂಪಾಜೆ ಹಾಗೂ ವಿನಯ್ ಸುವರ್ಣ. ಇಬ್ಬರು ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ್ದಾಗ ಶಾಲೆಯ ಮೂಲಸೌಲಭ್ಯ ಕುಸಿದಿರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಬೇಕು ಎಂದು ತಕ್ಷಣ ದೃಢ ಸಂಕಲ್ಪ ಮಾಡಿದ ಅವರಿಬ್ಬರು ಅಲ್ಲೇ ‘ನಮ್ಮೂರ ಶಾಲೆ ಉಳಿಸೋಣ’ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ತೆರೆದರು. ಫೇಸ್ ಬುಕ್ ಮೂಲಕ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿದರು. ‘ನಮ್ಮೂರ ಶಾಲೆ ಉಳಿಸೋಣ’ ಎಂಬ ವಾಟ್ಸಪ್ ಗುಂಪನ್ನು ಸೇರುವಂತೆ, ನಾವು ಓದಿದ ಶಾಲೆಯನ್ನು ಉಳಿಸುವಂತೆ ಮನವಿ ಮಾಡಿದರು. ಇದಕ್ಕೆ ಹಳೆ ವಿದ್ಯಾರ್ಥಿಗಳಾದ ಕೀಲಾರು ರಾಜಾರಾಂ, ಕೊಂದಲಕಾಡು ರವಿಶಂಕರ್ ಭಟ್, ಶ್ರೀವತ್ಸ, ಶರತ್ ಕೀಲಾರು, ಧನರಾಜ್ ರೈ, ಅಶ್ವಿನಿ ಸೇರಿದಂತೆ ನೂರಕ್ಕೂ ಹೆಚ್ಚಿನ ಹಳೆ ವಿದ್ಯಾರ್ಥಿಗಳು ತುರ್ತಾಗಿ ಸ್ಪಂದಿಸಿ ವಾಟ್ಸಪ್ ಗುಂಪು ಸೇರಿದರು. ಜತೆಗೆ ಪರವೂರಿನ ಕನ್ನಡ ಅಭಿಮಾನಿಗಳು ಕೂಡ ಸಾಥ್ ನೀಡುತ್ತಿದ್ದಾರೆ. ಬಂಟ್ವಾಳದ ಸೌಹಾರ್ದ ಫ್ರೆಂಡ್ಸ್ ವೇದಿಕೆ ಹಾಗೂ ಬೆಂಗಳೂರಿನ ರಮೇಶ್ ತೆಂಕಿಲ್ ಕೂಡ ಕೈ ಜೋಡಿಸುವ ಭರವಸೆ ನೀಡಿದ್ದಾರೆ.

“ಹಳೆ ವಿದ್ಯಾರ್ಥಿಗಳ ಈ ನಡೆ ಎಲ್ಲರಿಗೂ ಮಾದರಿಯಾಗಿದೆ. ಪ್ರತಿ ಊರಿನಲ್ಲೂ ಇಂತಹುದೇ ಬದಲಾವಣೆ ಬಂದರೆ ಯಾವುದೇ ಖಾಸಗಿ ಶಾಲೆಗಳಿಗೆ ಸರಿ ಸಮಾನವಾಗಿ ಸರ್ಕಾರಿ ಕನ್ನಡ ಶಾಲೆ ಬೆಳೆಯುವುದರಲ್ಲಿ ಅನುಮಾನವೇ ಇಲ್ಲ. ಕಲ್ಲುಗುಂಡಿಯ ಹಳೆ ವಿದ್ಯಾರ್ಥಿಗಳ ತಂಡದ ಮಾರ್ಗದರ್ಶಕನಾಗಿ ನಾನು ಅವರೊಂದಿಗೆ ಇರುತ್ತೇನೆ” ಎಂದು ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆತ ಮುಖ್ಯಸ್ಥ ಡಾ ಚಂದ್ರಶೇಖರ್ ದಾಮ್ಲೆ ಹೇಳಿದರು.
– ದಯಾಮಣಿ ಹೇಮಂತ್

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.