ಕೊರೋನಾ ಗೆದ್ದವರ ಮಾತು

Advt_Headding_Middle

ವೈದ್ಯೋ ನಾರಾಯಣೋ ಹರಿ…

– ಪಿಜಿಎಸ್‌ಎನ್ ಪ್ರಸಾದ್

ಕೊರೋನಾ ಕಾರಣದಿಂದಾಗಿ ಹದಿನೈದು ದಿನಗಳ ಆಸ್ಪತ್ರೆ ವಾಸದ ಬಳಿಕ ಇದೀಗ ಗುಣಮುಖನಾಗಿ ಮತ್ತೆ ಮನೆ ಸೇರಿದೆ.

ನಮ್ಮದು ಆಯುರ್ವೇದ ವೈದ್ಯಕೀಯ ಪರಂಪರೆ. ಅಜ್ಜ ಪಾಟಾಜೆ ಶಂಕರನಾರಾಯಣ ಭಟ್ಟ, ತಂದೆ ಡಾ.ಪಿ.ಎಸ್ ಗೋವಿಂದಯ್ಯ, ಚಿಕ್ಕಪ್ಪ ಡಾ.ಪಿ.ಯಸ್.ಗಣಪ್ಪಯ್ಯ ಈಗ ಯಾರೂ ಇಲ್ಲ. ಕಳೆದ ವರ್ಷ ನನ್ನ ಸಹೋದರ ಡಾ.ಪಿ.ಜಿ.ಎಸ್.ಪ್ರಕಾಶನ ಅಕಾಲಿಕ ಅಗಲುವಿಕೆ ಎಲ್ಲ ದೃಷ್ಟಿಯಿಂದಲೂ ನನ್ನನ್ನು ಅಧೀರನನ್ನಾಗಿ ಮಾಡಿತ್ತು. ತಂಗಿ ಡಾ ರಾಜಲಕ್ಷ್ಮೀ ದೂರದ ಅಮೇರಿಕದಲ್ಲಿ. ಅಕ್ಕನ ಮಗಳು ಡಾ. ಎಂ. ಬಿ. ಗೀತಾ ಬೆಂಗಳೂರಿನ ಮಾಗಡಿಯಲ್ಲಿ ತಾಲೂಕು ವೈದ್ಯಾಧಿಕಾರಿ. ಇವರು ಇಲ್ಲಿ ಸೇವೆಗೆ ಲಭ್ಯರಿಲ್ಲ. ಕೊನೆಯ ಸಹೋದರ ಡಾ.ಪಿ.ಜಿ.ಎಸ್.ಪ್ರಸನ್ನ ಸ್ವತ: ವೈದ್ಯನೇ ಅಲ್ಲದಿದ್ದರೂ ಅದೇ ವಿಭಾಗದಲ್ಲಿ ಪಿಎಚ್‌ಡಿ ಪದವಿ ಗಳಿಸಿ ಅಮೇರಿಕಾದ ಅತ್ಯುನ್ನತ ಸಂಸ್ಥೆಯಾದ ಕ್ಯಾನ್ಸರ್ ಅಧ್ಯಯನ ಕೇಂದ್ರದ ಪ್ರೋಗ್ರಾಮ್ ಡೈರೆಕ್ಟರ್. ಇವರು ಯಾರೂ ಇಲ್ಲಿ ಸೇವೆಗೆ ಲಭ್ಯರಿಲ್ಲದ್ದರೂ ಇವರಿಂದ ಒಂದಷ್ಟು ವೈದ್ಯಕೀಯ ಸಲಹೆ ಪಡಕೊಳ್ಳುತ್ತಿದ್ದೆ.
ಸಣ್ಣ ಜ್ವರದ ಹಿನ್ನಲೆಯಲ್ಲಿ ನಾನು ಮತ್ತು ಮಗ ವಿಜೇತಕೃಷ್ಣ ಡೆಂಗ್ಯೂ ಅನುಮಾನದಿಂದ ವೈದ್ಯರಲ್ಲಿಗೆ ಹೋಗಿದ್ದೆವು. ಅಲ್ಲಿ ಕೋವಿಡ್ ಪರೀಕ್ಷೆಗೊಳಗಾದೆವು. ಮಗನಿಗೆ ಪಾಸಿಟಿವ್ ಬಂತು. ನನಗೆ ನೆಗೆಟಿವ್ ಬಂತು. ವೈದ್ಯರ ಸಲಹೆ ಮೇರೆಗೆ ಸುಳ್ಯದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿದಾಗ ನನಗೂ ಕೋವಿಡ್ ಪಾಸಿಟಿವ್ ಬಂತು. ಮೈಕೈ ನೋವು, ಕೆಮ್ಮು ಮತ್ತು ಸಣ್ಣಕ್ಕೆ ಜ್ವರ ಇತ್ತು. ಮಗನಿಗೆ ಯಾವುದೇ ಲಕ್ಷಣಗಳಿರಲಿಲ್ಲ.
“ಯಾವ ವೈದ್ಯರನ್ನು ಭೇಟಿಯಾಗುವುದಪ್ಪಾ..” ಎಂದು ಒಂದಷ್ಟು ಗಲಿಬಿಲಿಗೊಳಗಾದದ್ದೂ ಹೌದು. ಬೆಳ್ಳಾರೆಯ ಡಾ.ತಿಲಕರ ಸಲಹೆಯ ಮೇರೆಗೆ ಸುಳ್ಯದ ಕೆ.ವಿ.ಜಿ.ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾದೆ.
ಕೊರೋನಾ ಚಿಕಿತ್ಸೆಯಲ್ಲಿ ಈ ಭಾಗದ ಆಧುನಿಕ ಸೌಲಭ್ಯಗಳ ಅತ್ಯುತ್ತಮ ಆಸ್ಪತ್ರೆ. ಜನರಲ್ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ ಎಲ್ಲೆಡೆ ಸ್ವಚ್ಛತೆಗೆ ಪ್ರಥಮ ಆದ್ಯತೆ. ತಜ್ಞ ವೈದ್ಯರಾದ ಡಾ.ಪ್ರೀತಿರಾಜ್ ಬಲ್ಲಾಳ್ ರವರು ಹೆಸರಿಗೆ ತಕ್ಕಂತೆ ಅತ್ಯಂತ ಪ್ರೀತಿಯಿಂದ ಮಾತನಾಡಿಸಿ, ರೋಗಿಗಳಲ್ಲಿ ಧೈರ್ಯ ತುಂಬುತ್ತಿದ್ದರು. ಅವರು ನನ್ನ ತಮ್ಮನಿಲ್ಲದ ಶೂನ್ಯವನ್ನು ಈ ಸಂದರ್ಭದಲ್ಲಿ ತುಂಬಿದರು. ಅವರು, ಮತ್ತವರ ತಂಡವನ್ನು ನಾನು ತುಂಬಾ ಮೆಚ್ಚಿಕೊಂಡಿದ್ದೇನೆ. ನುರಿತ ದಾದಿಯರು.. ಪಿಪಿಇ ಕಿಟ್ ಧರಿಸಿದ ಅವರ ಕಷ್ಟ ಯಾರಿಗೂ ಬೇಡ.. ಆದರೂ ಎಳ್ಳಷ್ಟೂ ಉದಾಸೀನವೂ ಇಲ್ಲ, ರೋಗಿಗಳ ಶುಶ್ರೂಷೆಯಲ್ಲಿ ಲೋಪವೂ ಇಲ್ಲ. ಇವರೆಲ್ಲರಿಗೂ ನಾನು ಆಭಾರಿ.
ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಅದೆಷ್ಟೋ ಮಂದಿಗೆ ಆಧುನಿಕ ಶಿಕ್ಷಣ ಸೌಲಭ್ಯ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸಿದ ಸ್ವರ್ಗೀಯ ಕುರುಂಜಿ ವೆಂಕಟ್ರಮಣ ಗೌಡರು ಪ್ರಾತಃ ಸ್ಮರಣೀಯರು.
ದೂರವಾಣಿ ಮೂಲಕ ಅನೇಕ ಮಂದಿ ಮಿತ್ರರ ಶುಭ ಹಾರೈಕೆಗಳು, ಮನೆಯವರು ನಿರಂತರ ತುಂಬುತ್ತಿದ್ದ ಧೈರ್ಯ ನನ್ನನ್ನು ಅಧೀರನನ್ನಾಗಿಸಲಿಲ್ಲ. ನಂಬಿದ ದೇವರು, ದೈವಗಳು ನನ್ನನ್ನು ರಕ್ಷಿಸಿದರು.
ಕೋವಿಡ್ ಬಂದರೆ ಹೆದರಬೇಕಾದ ಅವಶ್ಯಕತೆ ಇಲ್ಲ. ಹಾಗೆಯೇ “ನನಗೇನಾಗುವುದಿಲ್ಲ” ಎಂಬ ಅತಿ ವಿಶ್ವಾಸವೂ ಬೇಡ. ತೀರಾ ಅಗತ್ಯವಿದ್ದರೆ ಮಾತ್ರ ಹೊರ ಹೋಗಿ. ಸಾರ್ವಜನಿಕ ಅಂತರವನ್ನು ಕಾಪಾಡಿ, ಮಾಸ್ಕ್ ಧರಿಸಿ.
“ಅನಿವಾರ್ಯ, ತೀರಾ ಅಗತ್ಯವಿದ್ದರೆ ಮಾತ್ರ.” ಪದಗಳ ದುರ್ಬಳಕೆ ಆಗದಿರಲಿ. ನಾನು ತಿಳಿಯದೇ ಮಾಡಿದ ಯಾವುದೋ ಚಿಕ್ಕ ಅಜಾಗ್ರತೆ ಭಾರೀ ತೊಂದರೆಯನ್ನೇ ಉಂಟು ಮಾಡಿತು. ಎಲ್ಲರ ಸಹಕಾರ ಇದ್ದರೆ ಕೊರೋನಾವನ್ನು ನಮ್ಮ ನಾಡಿನಿಂದ ಓಡಿಸುವುದು ಕಷ್ಟವೇನಲ್ಲ.
– ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.