ತೊಡಿಕಾನ ತಮಿಳು ಕಾಲನಿಯಲ್ಲಿ ಕೊರೊನಾ ಸ್ಫೋಟ

Advt_Headding_Middle

 

ಇಬ್ಬರ ಸಾವು, ಒಂದೇ ದಿನ 30 ಪಾಸಿಟಿವ್, ಆತಂಕದ ಸ್ಥಿತಿ

ಸೋಂಕಿತರು ಕೋವಿಡ್ ಸೆಂಟರ್ ಗೆ ಶಿಫ್ಟ್: ಸ್ಥಳಕ್ಕೆ ಅಧಿಕಾರಿಗಳ ಭೇಟಿ

ತೊಡಿಕಾನ ತಮಿಳು ಕಾಲನಿಯಲ್ಲಿ ಕೊರೊನಾ ಸ್ಫೋಟ

ಅರಂತೋಡು ಗ್ರಾಮ ಪಂಚಾಯತ್‌ಗೊಳಪಡುವ ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿರುವ ತಮಿಳು ಕಾಲನಿಯಲ್ಲಿ ಕೊರೋನ ಸ್ಫೋಟಗೊಂಡಿದ್ದು, ನಿನ್ನೆ ಒಟ್ಟು ೩೦ ಮಂದಿಗೆ ಕೊರೋನ ಸೋಂಕು ಧೃಢ ಪಟ್ಟಿದೆ. ಒಟ್ಟು ೫೫ ಮಂದಿಗೆ ಸೋಂಕು ಕಂಡುಬಂದಿದೆ. ಕೆಲದಿನಗಳ ಹಿಂದೆ ಇಲ್ಲಿನ ಕೊರೋನ ಸೋಂಕಿತರೊಬ್ಬರು ಮೃತಪಟ್ಟಿದ್ದರು. ಜೂ.4ರಂದು ಮತ್ತೊಬ್ಬರು ಮೃತರಾಗಿರುವುದರಿಂದ ಕಾಲನಿ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೊರೋನ ಸೋಂಕಿತರೆಲ್ಲರನ್ನು ಸುಳ್ಯದ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಲಾಗಿದೆ.
ಅಡ್ಯಡ್ಕ ತಮಿಳು ಕಾಲನಿಯ ಕುಟುಂಬವೊಂದರ ಕೆಲವು ಸದಸ್ಯರು ಎಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ಹೋಗಿ ಮೇ ತಿಂಗಳಲ್ಲಿ ಹಿಂತಿರುಗಿದ್ದರು. ಅವರಲ್ಲಿ ಒಂದಿಬ್ಬರಿಗೆ ಜ್ವರ ಬಂದುದರಿಂದ ಪರೀಕ್ಷೆಗೊಳಪಡಿಸಿದಾಗ ಬಹುತೇಕರಿಗೆ ಕೊರೋನ ಪಾಸಿಟಿವ್ ಬಂದಿತ್ತು.
ಆ ಮನೆಯವರು ವ್ಯಾಪಾರಕ್ಕೆ ಹೋಗುತ್ತಿದ್ದ ಅಂಗಡಿಯವರಾದ ಅಡ್ಯಡ್ಕ ದೇವಸ್ಥಾನ ಮೊಕ್ತೇಸರ ಸುಬ್ರಹ್ಮಣ್ಯರವರಿಗೆ ಜ್ವರ ಬಂದು ಪರೀಕ್ಷೆ ನಡೆಸಿದಾಗ ಕೊರೋನ ಪಾಸಿಟಿವ್ ಬಂತು. ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಸ್ಥಳೀಯರಾದ ಕಾಂಗ್ರೆಸ್ ಮುಖಂಡ ಗಣೇಶ್ ಅಡ್ಯಡ್ಕರವರಿಗೆ ಜ್ವರ ಕಂಡುಬಂದುದರಿಂದ ಅವರನ್ನೂ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಕಂಡುಬಂದು ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಅದೇ ವೇಳೆ ಖಾಸಗಿ ಆಸ್ಪತ್ರೆಯಲ್ಲಿದ್ದ ಸುಬ್ರಹ್ಮಣ್ಯರನ್ನು ಆಕ್ಸಿಜನ್‌ಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ಅಲ್ಲಿ ಅವರು ನಿಧನರಾದರು. ಬಳಿಕ ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಗೊಂಡ ಗಣೇಶ ಅಡ್ಯಡ್ಕರವರು ಜೂ.೪ರಂದು ಕೊನೆಯುಸಿರೆಳೆದಿದ್ದಾರೆ. ಜೂ.೩ರಂದು ಅಡ್ಯಡ್ಕ ಕಾಲನಿಯ ಬಹುತೇಕ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು ಅವರಲ್ಲಿ ೩೦ ಮಂದಿಗೆ ಕೊರೋನ ಪಾಸಿಟಿವ್ ಬಂದಿತು. ಇದರಿಂದಾಗಿ ಒಟ್ಟು ೫೫ ಮಂದಿ ಕಾಲನಿ ನಿವಾಸಿಗಳು ಕೋವಿಡ್ ಪಾಸಿಟಿವ್‌ಗೆ ಒಳಗಾದಂತಾಯಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಜಿಲ್ಲಾ ಕೋವಿಡ್ ಸಮನ್ವಯಾಧಿಕಾರಿ ಡಾ.ಅಶೋಕ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ಮತ್ತಿತರರು ಜೂ.೪ರಂದು ಆಡ್ಯಡ್ಕ ತಮಿಳು ಕಾಲನಿಗೆ ಹೋಗಿ ಪರಿಶೀಲಿಸಿ , ಎಲ್ಲ ಸೋಂಕಿತರನ್ನು ಸುಳ್ಯದ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಲು ಸೂಚನೆ ನೀಡಿದರು. ಕಾಲನಿಯನ್ನು ಪೂರ್ಣ ಸೀಲ್ ಡೌನ್ ಮಾಡಲು ನಿರ್ಧರಿಸಿದರು. ಬಳಿಕ ಪುತ್ತೂರು ಎ.ಸಿ. ಡಾ. ಯತೀಶ್ ಉಳ್ಳಾಲ್ ರವರು ಮತ್ತು ತಹಶೀಲ್ದಾರ್ ಕು.ಅನಿತಾಲಕ್ಷ್ಮಿಯವರು ಅಡ್ಯಡ್ಕ ಕಾಲನಿಗೆ ಭೇಟಿ ನೀಡಿ ಸೋಂಕಿತರನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಇನ್ನರ್‌ವೀಲ್ ಕ್ಲಬ್‌ನವರು ಕಾಲನಿಯನ್ನು ಸ್ಯಾನಿಟೈಸ್ ಮಾಡಿದರು.
ಅಡ್ಯಡ್ಕ ತಮಿಳು ಕಾಲನಿಯಲ್ಲಿ ಒಟ್ಟು ೮೪ ಮನೆಗಳಿದ್ದು ಅವುಗಳಲ್ಲಿ 71 ಮನೆಗಳಲ್ಲಿ ತಮಿಳು ಕಾರ್ಮಿಕರು ವಾಸವಾಗಿದ್ದರು. ಅವರಲ್ಲಿ 6 ಮನೆಗಳವರು ಬೇರೆ ಬೇರೆ ಕಾರಣಗಳಿಗಾಗಿ ಲಾಕ್ಡೌನ್ ಗಿಂತ ಮೊದಲು ಬೇರೆ ಊರಿಗೆ ಹೋಗಿದ್ದು, ಅವರಿಗೆ ಹಿಂತಿರುಗಲು ಸಾಧ್ಯವಾಗಿಲ್ಲ. ಉಳಿದ 65 ಮನೆಗಳವರಲ್ಲಿ ೩ ಮನೆಗಳ ಎಲ್ಲರಿಗೂ ಕೊರೋನ ಪಾಸಿಟಿವ್ ಬಂದಿರುವುದರಿಂದ ಅವರೆಲ್ಲರನ್ನು ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. ಇನ್ನುಳಿದ ೬೨ ಮನೆಗಳವರಲ್ಲಿ ಪಾಸಿಟಿವ್ ಬಂದವರನ್ನು ಹೊರತು ಪಡಿಸಿ ಇತರರು ಕಾಲನಿಯ ತಮ್ಮ ಮನೆಗಳಲ್ಲಿದ್ದಾರೆ. ೪೪ ಮಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿದ್ದಾರೆ. ಇನ್ನು ಸುಮಾರು 5೦ ಮಂದಿ ಪರೀಕ್ಷೆಗೆ ಬಾಕಿ ಇದ್ದಾರೆ.
ಇಡೀ ಕಾಲನಿಯನ್ನು ಟೇಪ್ ಕಟ್ಟಿ ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಿ ಓರ್ವ ಪೋಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿದೆ. ಕಾಲನಿ ನಿವಾಸಿಗಳನ್ನು ನಾಲ್ಕು ವಿಭಾಗವನ್ನಾಗಿ ಮಾಡಿ ತಲಾ ನಾಲ್ವರು ಯುವಕರಿಗೆ ಅವರನ್ನು ನೋಡಿಕೊಳ್ಳುವ, ಹಾಗೂ ಅವರುಗಳಿಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ತಲುಪಿಸುವ ಜವಾಬ್ದಾರಿ ನೀಡಲಾಗಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಶಂಕರಲಿಂಗಂ ರವರಿಗೆ ಈ ಎಲ್ಲ ಸೇವಾ ಕಾರ್ಯಗಳ ಮುಖ್ಯ ಜವಾಬ್ದಾರಿ ನೀಡಲಾಗಿದೆ.
ಇಂದು ದಾನಿಗಳಿಂದ ಪಂಚಾಯತ್ ಸಂಗ್ರಹಿಸಿದ ಹಣದಿಂದ ಕಿಟ್ ವಿತರಣೆ ಮಾಡಲಾಗುತ್ತಿದೆ. ಜತೆಗೆ ಕಾಲನಿ ನಿವಾಸಿಗಳಿಗೆ ಅವಶ್ಯಕವಾಗಿ ಬೇಕಾದ ದಿನಸಿ ಸಾಮಗ್ರಿಗಳನ್ನು ಅರಂತೋಡು ಸೊಸೈಟಿಯ ಸಮೃದ್ಧಿ ಮಾರ್ಟ್ ಮೂಲಕ ಸಾಲದ ರೂಪದಲ್ಲಿ ಕೊಡಲು ಸೊಸೈಟಿಯವರು ಮುಂದೆ ಬಂದಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.