ಮೊಗ್ರದಲ್ಲಿ ಕಬ್ಬಿಣದ ಕಾಲು ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರ ನಿರ್ಧಾರ

Advt_Headding_Middle

 

ಸೇತುವೆ ಇನ್ನೂ ಮರೀಚಿಕೆ

ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಒಂದು ಸೇತುವೆ ನಿರ್ಮಾಣ ಆಗಬಹುದು… ಮಳೆಗಾಲದಲ್ಲಿ ಮಕ್ಕಳು ತುಂಬಿ ಹರಿಯುವ ಹೊಳೆಯನ್ನು ದಾಟದೆ ಸುರಕ್ಷಿತರಾಗಿ ಶಾಲೆ, ಮನೆ ಸೇರಬಹುದು ಎಂಬ ಭರವಸೆ ಈಗ ಹುಸಿಯಾಗಿದೆ.

ಸರಕಾರ, ಜನ ಪ್ರತಿನಿಧಿಗಳು, ಅಧಿಕಾರಿಗಳು ನೀಡಿದ ಭರವಸೆ, ಆಶ್ವಾಸನೆಗಳೆಲ್ಲವೂ ನೀರ ಮೇಲಿಟ್ಟ ಹೋಮದಂತಾಗಿದೆ. ಸೇತುವೆಗಾಗಿ ಕಾದು ಸುಸ್ತಾದ ಜನರು ನಡೆದಾಡಲು ತಾವೇ ಸ್ವಂತ ಖರ್ಚು ಮಾಡಿ ತಾತ್ಕಾಲಿಕವಾಗಿ  ಒಂದು ಕಬ್ಬಿಣದ ಕಾಲು ಸೇತುವೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಮ್ಮ ವಾರ್ಡ್ ನ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ಪಣತೊಟ್ಟ ಗ್ರಾಮ ಭಾರತ ತಂಡ ಚುನಾವಣೆಯಲ್ಲಿ ಅದೇ ವಾರ್ಡ್ ನಲ್ಲಿ ತಂಡದ ಸದಸ್ಯರು ಪ್ರಚಂಡ ವಿಜಯ ಸಾಧಿಸಿ ಗ್ರಾಮ ಪಂಚಾಯತ್ ಸದಸ್ಯರಾದರು.


ಇದೀಗ ಗ್ರಾಮ ಭಾರತ ತಂಡದ ನೇತೃತ್ವದಲ್ಲಿ ಸ್ಥಳೀಯರು ಮೊಗ್ರ ಹೊಳೆಗೆ ಕಬ್ಬಿಣದ ಕಾಲು ಸೇತುವೆ ನಿರ್ಮಾಣಕ್ಕೆ
ಹಲವು ಸುತ್ತಿನ ಮಾತುಕತೆ, ಚರ್ಚೆ ನಡೆಸಿ ಯೋಜನೆ ರೂಪಿಸಿದ್ದಾರೆ. ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರಧ್ವಾಜ್ ಅವರ ಪುತ್ರ ಪತಂಜಲಿ ಭಾರದ್ವಾಜ್ ಅವರ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ಸುರಕ್ಷಿತವಾಗಿ ನಡೆದಾಡಲು, ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗುವಂತೆ ಕಬ್ಬಿಣದ ಕಾಲು ಸೇತುವೆ ರಚನೆ ಮಾಡಲು ಅಂದಾಜುಪಟ್ಟಿ ತಯಾರಿಸಲಾಗಿದೆ. ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಒಂದು ಸೇತುವೆ ಇಲ್ಲ ಎಂಬುದು ಈ ಹಳ್ಳಿಯ ಜನತೆಯ ನೋವಿನ ಕಥೆ.‌ ಭೋರ್ಗರೆವ ಮಳೆಗಾಲ ಆರಂಭವಾಗುವಾಗ ಇವರ ಮನಸಿನಲ್ಲಿ ದಿಗಿಲು ಆರಂಭವಾಗುತ್ತದೆ.ಮಳೆ ಬಂದು ಹೊಳೆ ತುಂಬುವಾಗ ಮೊಗ್ರ ಹೊಳೆಯ ಸಮೀಪದ ಪ್ರದೇಶಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡು ದ್ವೀಪದಂತಾಗುತ್ತದೆ. ಮೊಗ್ರದಲ್ಲಿ ಮೊಗ್ರ ಸರಕಾರಿ ಶಾಲೆ- ಆರೋಗ್ಯ ಉಪಕೇಂದ್ರ-ಅಂಗನವಾಡಿ- ಮೊಗ್ರ‌‌ ಕನ್ನಡ ದೇವತೆ ಯಾನೆ ದೈವಸ್ಥಾನ ಇದೆ. ಇಲ್ಲಿಗೆ ಸಂಪರ್ಕಕ್ಕೆ, ಏರಣಗುಡ್ಡೆ-ಕಮಿಲ ಭಾಗದಿಂದ ಸಂಪರ್ಕಕ್ಕೆ ಇನ್ನಿಲ್ಲದ ಸಮಸ್ಯೆಯಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಳೆಗಾಲ‌ದಲ್ಲಿ ಹೊಳೆ ದಾಟಿ ಹೋಗಲು ಮಕ್ಕಳಿಗೆ ತೀರಾ ಕಷ್ಟವಾಗುತ್ತದೆ, ಯಾವುದೇ ವಾಹನ ಓಡುವುದಿಲ್ಲ. ದ್ವಿಚಕ್ರ ವಾಹನ ಓಡಿಸಿದರೆ ಹಲವು ಸಮಸ್ಯೆ ಉಂಟಾಗುತ್ತದೆ.‌ ಆದುದರಿಂದ ಈ ಹೊಳೆಗೆ ಒಂದು ಸೇತುವೆ ನಿರ್ಮಿಸಿಕೊಡಿ ಎಂಬ ಬೇಡಿಕೆ ದಶಕಗಳಿಂದ ಇದೆ. ಅದಕ್ಕಾಗಿ ಹಲವಾರು ವಿಭಿನ್ನ ಹೋರಾಟವನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಮಳೆಗಾಲ ಆರಂಭಗೊಂಡು ಹೊಳೆ ತುಂಬಿ ಹರಿಯುವ ಸಂದರ್ಭದಲ್ಲಿ ಹೊಳೆ ದಾಟಲು ಪ್ರತೀ ಬಾರಿಯೂ ಗ್ರಾಮ ಪಂಚಾಯತ್ ವತಿಯಿಂದ ಅಡಿಕೆ ಮರದ ಪಾಲ ಹಾಕುತ್ತಾರೆ. ಅದರಲ್ಲಿ ಮಕ್ಕಳು ಸೇರಿದಂತೆ ಊರವರು ಸರ್ಕಸ್ ಮಾಡುತ್ತಾ ದಾಟುವ ಪರಿಸ್ಥಿತಿ ಇದೆ. ಈ ಹಿನ್ನಲೆಯಲ್ಲಿ ಸರಕಾರ, ಜನ ಪ್ರತಿನಿಧಿಗಳನ್ನು ಕಾಯದೇ ತಮ್ಮ ಕೈಲಾಗುವ ಮೊತ್ತವನ್ನು ಸಂಗ್ರಹಿಸಿ ನಡೆದಾಡಲು, ದ್ವಿಚಕ್ರ ವಾಹನ ಸಂಚರಿಸುವ ರೀತಿಯಲ್ಲಿ ಕಬ್ಬಿಣದ ಕಾಲು ಸೇತುವೆ ನಿರ್ಮಿಸಲು ಸ್ಥಳೀಯರು ಹಾಗೂ ಗ್ರಾಮಭಾರತ ತಂಡ ಸೇರಿ ಯೋಜನೆಯೊಂದನ್ನು ರೂಪಿಸಿದ್ದಾರೆ. ಹಳ್ಳಿಯ ಬೇಡಿಕೆಗೆ ಪುಟ್ಟ ಬೆಳಕಾಗುವ ಕನಸು ಅದು. ತಂಡದ ಸದಸ್ಯ ಸುರೇಶ್ ಅವರು ನೀಡಿದ ಸಲಹೆಗೆ ಎಲ್ಲರೂ ಚಪ್ಪಾಳೆ ತಟ್ಟಿ ಅಂಗೀಕರಿಸಿ ಕನಸು ನನಸಾಗಿಸಲು ಒಟ್ಟಾಗಿ ಕಾರ್ಯ ಪ್ರವೃತ್ತರಾಗಿದ್ದೇವೆ ಎನ್ನುತ್ತಾರೆ ಸ್ಥಳೀಯರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.