ಕಲ್ಮಡ್ಕ ಹೊನಲು ಬೆಳಕಿನ ಆಟದ ಮೈದಾನಕ್ಕೆ 9 ಲಕ್ಷ ವೆಚ್ಚ: ಆದರೆ ಹೊನಲು ಬೆಳಕೂ ಇಲ್ಲ. ಗ್ಯಾಲರಿಯೂ ಇಲ್ಲ

Advt_Headding_Middle

 

ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

 

ಕಲ್ಮಡ್ಕ ಸ.ಹಿ.ಪ್ರಾ.ಶಾಲಾ ಬಳಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ವಿಕಾಸ ಯೋಜನೆಯ ಅನುದಾನದಲ್ಲಿ ನಿರ್ಮಿಸಿದ ಹೊನಲು ಬೆಳಕಿನ ಆಟದ ಮೈದಾನ ಈಗ ಭಾರೀ ಚರ್ಚೆಯಲ್ಲಿದೆ. ಅದರ ಫೋಟೊ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹೊನಲು ಬೆಳಕಿನ ಆಟದ ಮೈದಾನ ಎಂಬ ಕ್ರಿಯಾಯೋಜನೆಯಲ್ಲಿ 9 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಈ ಆಟದ ಮೈದಾನದಲ್ಲಿ ಹೊನಲು ಬೆಳಕೂ ಇಲ್ಲ – ಗ್ಯಾಲರಿಯೂ ಇಲ್ಲ ಎಂಬುದು ಈಗ ಚರ್ಚೆಯ ವಿಷಯ.
ಕಲ್ಮಡ್ಕದವರೇ ಆದ ಎಡಕ್ಕಾನ ರಾಜಾರಾಂ ಭಟ್ ಎಂಬವರು ಈ ಮೈದಾನದ ವೀಡಿಯೋ ಮಾಡಿ, ” ಇದಕ್ಕೆ 9 ಲಕ್ಷ ಖರ್ಚಾಗಿದೆ. ಇದರಲ್ಲಿ ಗ್ಯಾಲರಿ ಎಲ್ಲಿದೆ ? ಹೊನಲು ಬೆಳಕಿನ ವ್ಯವಸ್ಥೆ ಎಲ್ಲಿದೆ ?” ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಅದು ಇದೀಗ ಕಲ್ಮಡ್ಕ ಗ್ರಾಮದಲ್ಲಿ ಸಂಚಲನ ಸೃಷ್ಠಿಸಿದೆ. ಜನರು ನಾನಾ ಬಗೆಯಲ್ಲಿ ಮಾತಾಡತೊಡಗಿದ್ದಾರೆ.
2014 – 15 ನೇ ಸಾಲಿನಲ್ಲಿ ಕಲ್ಮಡ್ಕ ಗ್ರಾ.ಪಂ.ಗೆ ರಾಜ್ಯ ಸರಕಾರದಿಂದ ಗ್ರಾಮ ವಿಕಾಸ ಯೋಜನೆಯಲ್ಲಿ 75 ಲಕ್ಷ ರೂ. ಮಂಜೂರಾಗಿತ್ತು. ಈ ಅನುದಾನವನ್ನು ಯಾವ ರೀತಿ ಬಳಸಬೇಕೆಂಬ ಮಾರ್ಗಸೂಚಿಯನ್ನೂ ಸರಕಾರ ನೀಡಿತ್ತು. ಮಾರ್ಗಸೂಚಿಯನ್ವಯ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಗೊಳಿಸಿದ ಗ್ರಾಮ ಪಂಚಾಯತು ಅದನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಕೆ.ಆರ್.ಐ.ಡಿ.ಎಲ್. ( ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಲಿಮಿಟೆಡ್ ) ಸಂಸ್ಥೆಗೆ ಒಪ್ಪಿಸಿತು. ಅದರಲ್ಲಿ ಆಗಿರುವ ಈ ಮೈದಾನ ಕಾಮಗಾರಿ ಈಗ ಬಾರೀ ಸದ್ದು ಮಾಡಿರುವುದು.
ಕ್ರಿಯಾಯೋಜನೆಯಲ್ಲಿ ಹೊನಲು ಬೆಳಕಿನ ಕ್ರೀಡಾಂಗಣ ನಿರ್ಮಾಣ ಎಂದು ಇದ್ದರೂ ಹೊನಲು ಬೆಳಕಿನ ವ್ಯವಸ್ಥೆ ಯಾಕೆ ಮಾಡಿಲ್ಲ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ರವರನ್ನು ಸಂಪರ್ಕಿಸಿ ವಿಚಾರಿಸಿದಾಗ,
ಕಲ್ಮಡ್ಕ ಗ್ರಾಮ ಪಂಚಾಯತಿನ 2014-15 ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಲ್ಲಿ 75 ಲಕ್ಷ ರೂಪಾಯಿಗಳ ವಿವಿಧ ಕಾಮಗಾರಿಗಳು ಕಲ್ಮಡ್ಕ ಗ್ರಾಮದ ವ್ಯಾಪ್ತಿಯಲ್ಲಿ KRIDL ಸಂಸ್ಥೆಯ ಮೂಲಕ ಅನುಷ್ಠಾನಗೊಂಡಿದ್ದು, ಈ ಕಾಮಗಾರಿಗಳಲ್ಲಿ ಒಂದು ಕಲ್ಮಡ್ಕದ ಸಾರ್ವಜನಿಕ ಆಟದ ಮೈದಾನ ಆಗಿರುತ್ತದೆ. ಗ್ರಾಮಸ್ಥರೊಬ್ಬರು ಕಲ್ಮಡ್ಕದ ಸಾರ್ವಜನಿಕ ಹೊನಲು ಬೆಳಕಿನ ಗ್ಯಾಲರಿಯೊಂದಿಗಿನ ಆಟದ ಮೈದಾನದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿ ಬಿಟ್ಟಿರುತ್ತಾರೆ.

ಗ್ರಾಮ ವಿಕಾಸ ಯೋಜನೆಯ ಕ್ರಿಯಾಯೋಜನೆ ತಯಾರಿಸುವ ಸಂದರ್ಭದಲ್ಲಿ ಸರ್ಕಾರದ ಸುತ್ತೋಲೆಯಂತೆ, ಯುವಕ/ಯುವತಿ ಮಂಡಲಗಳ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ, ಜಿಮ್ / ಗರಡಿ ಮನೆ / ಹೊನಲು ಬೆಳಕಿನ ಆಟದ ಮೈದಾನ / ದೇಶೀ ಕ್ರೀಡೆ ಅಭಿವೃದ್ಧಿ ಚಟುವಟಿಕೆಗಳಿಗೆ ಈ ರೀತಿಯ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಬಹುದು ಎಂದು ಸರ್ಕಾರದ ನಿರ್ದೇಶನವಿತ್ತು. ಹಾಗಾಗಿ, ಕಲ್ಮಡ್ಕದ ಸಾರ್ವಜನಿಕ ಆಟದ ಮೈದಾನದ ಕಾಮಗಾರಿಗೆ ಸುತ್ತೋಲೆಯಂತೆ ಹೊನಲು ಬೆಳಕಿನ ಆಟದ ಮೈದಾನ ಎಂದು ನಾವು ಕ್ರಿಯಾಯೋಜನೆ ತಯಾರಿಸಿದ್ದಾಗಿರುತ್ತದೆ.

ನಾವು ಕ್ರಿಯಾ ಯೋಜನೆಯನ್ನು ತಯಾರಿಸಿ, ತಾಲೂಕು ಪಂಚಾಯತಿನ ಮುಖಾಂತರ ಜಿಲ್ಲಾ ಪಂಚಾಯತಿನಿಂದ ಅನುಮೋದನೆ ಪಡೆದುಕೊಂಡು KRIDL ಸಂಸ್ಥೆಗೆ ಈ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿರುತ್ತದೆ.

ಈ ಆಟದ ಮೈದಾನಕ್ಕೆ KRIDL ಅವರು ಮಣ್ಣಿನ ಕೆಲಸಕ್ಕೆ ಮಾತ್ರ ಅಂದಾಜು ಪಟ್ಟಿ (Estimate) ತಯಾರಿಸಿದ್ದು, ಹೊನಲು ಬೆಳಕು ಮತ್ತು ಗ್ಯಾಲರಿ ನಿರ್ಮಾಣದ ಕಾಮಗಾರಿಯ ಯೋಜನೆ ಈ ಅಂದಾಜು ಪಟ್ಟಿಯಲ್ಲಿ ಇರಲಿಲ್ಲ. ಈ ಎಲ್ಲಾ ಕಾಮಗಾರಿಗಳು 3rd ಪಾರ್ಟಿ ಇಂಜಿನಿಯರ್ ವಿಭಾಗದಿಂದ ಪರಿಶೀಲನೆ ಆಗಿ ಸರಿ ಇದೆ ಎಂದು ದೃಡೀಕರಿಸಿರುತ್ತಾರೆ. ಹಾಗಾಗಿ ಅಂದಾಜು ಪಟ್ಟಿ ಮತ್ತು ಅಳತೆ ಪುಸ್ತಕದಂತೆ ಕಾಮಗಾರಿಯು ಸರಿ ಇದ್ದುದರಿಂದ KRIDL ಯವರಿಂದ ನಾವು ಹಸ್ತಾಂತರ ಪಡ ಕೊಂಡಿರುತ್ತೇವೆ.

ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿರುವಂತೆ, ಯಾವುದೇ ಅವ್ಯವಹಾರ ನಡೆದಿರುವುದಿಲ್ಲ ಎಂದು ಅವರು ಹೇಳುತ್ತಾರೆ.

ಈ ವೈರಲ್ ಆಗಿರುವ ಪ್ರಕರಣದ ಬಗ್ಗೆ ಪ್ರತ್ಯಕ್ಷ ನೋಡಲೆಂದು ಸುದ್ದಿ ವರದಿಗಾರರು ಕಲ್ಮಡ್ಕಕ್ಕೆ ಹೋಗಿ ನೋಡುವಾಗ ಸುಮಾರು 50 ಸೆಂಟ್ಸ್ ವಿಸ್ತೀರ್ಣದ ಮೈದಾನ ನಿರ್ಮಿಸಲಾಗಿರುವುದು ಕಂಡುಬರುತ್ತದೆ. ಆದರೆ ಆ ಮೈದಾನ ಕೂಡ ಹಿಂದೆ ಇದ್ದ ಮೈದಾನವನ್ನು ವಿಸ್ತರಿಸಿರುವುದು ಎಂದು ತಿಳಿದು ಬಂತು.
ಈ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ಆ ವಾರ್ಡಿನ ಗ್ರಾ.ಪಂ.ಸದಸ್ಯರಾಗಿದ್ದ ಶಿವರಾಮ ಭಟ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ ” ಇಲ್ಲಿ 1998 ರಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಒಂದೂವರೆ ಲಕ್ಷ ರೂ.ಗಳಲ್ಲಿ ನಾವು ಮೈದಾನ ನಿರ್ಮಿಸಿದ್ದೆವು. ಗ್ರಾಮ ವಿಕಾಸ ಯೋಜನೆಯಲ್ಲಿ ಹಣ ಬಂದು ಮೈದಾನದ ಕೆಲಸಕ್ಕೆ 9 ಲಕ್ಷ ರೂ. ಇರಿಸುವಾಗ ಶಾಲೆಯವರನ್ನು ಮತ್ತು ಊರವರನ್ನು ಸೇರಿಸಿ ಸಮಾಲೋಚಿಸಿ ಒಂದು ಕಮಿಟಿ ಮಾಡೋಣ ಎಂದು ನಾನು ಹೇಳಿದ್ದೆ. ಆದರೆ ನನ್ನ ಸಲಹೆಯನ್ನು ಪರಿಗಣಿಸದೆಯೇ ಅವರು ಮುಂದುವರಿದರು. ಆ ಕಾಮಗಾರಿಯ ಎಷ್ಟಿಮೇಟಿನಲ್ಲಿ ಮೈದಾನ ವಿಸ್ತರಣೆಯ ವಿಚಾರ ಮಾತ್ರವಿರುವುದೆಂದೂ ನನಗೆ ಗೊತ್ತಿಲ್ಲ. ಪಂಚಾಯತ್ ಆಡಳಿತದವರು ನನ್ನನ್ನು ಯಾವುದಕ್ಕು ಸೇರಿಸಿಕೊಳ್ಳುತ್ತಿರಲಿಲ್ಲ. ನಾನು ಒಬ್ಬನೇ ವಿಪಕ್ಷದಲ್ಲಿದ್ದುದು. ಫೈಟ್ ಮಾಡುವ ಎಂದರೆ ನಮ್ಮ ಪಕ್ಷದವರೂ ಸಹಕಾರ ಕೊಡಲು ಮುಂದೆ ಬರುತ್ತಿರಲಿಲ್ಲ. ಆದ್ದರಿಂದ ನಾನು ಆ ಕಾಮಗಾರಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹೋಗಿಲ್ಲ. ಮೈದಾನದ ಕೆಲಸ ಮಾತ್ರ ಹಿಂದೆಯೇ 70 ಶೇಕಡಾದಷ್ಟು ಆಗಿತ್ತು. 30 ಶೇಕಡಾ ಮಾತ್ರ ಗ್ರಾಮ ವಿಕಾಸದ ಅನುದಾನದಲ್ಲಿ ಆಗಿದೆ ” ಎಂದು ಹೇಳಿದರು.
ಆಗಿನ ಗ್ರಾ.ಪಂ.ಅಧ್ಯಕ್ಷ ಧರ್ಮಣ್ಣ ಗರಡಿಯವರನ್ನು ಸಂಪರ್ಕಿಸಿ ವಿಚಾರಿಸಿದಾಗ ” ಗ್ರಾಮ ವಿಕಾಸ ಯೋಜನೆಯಲ್ಲಿ ಬಂದ ಅನುದಾನವನ್ನು ನಾವು ಪಂಚಾಯತಲ್ಲಿ ನಿರ್ಣಯ ಮಾಡಿ ಕೆ.ಆರ್.ಐ.ಡಿ.ಎಲ್. ನವರಿಗೆ ಕೊಟ್ಟಿದ್ದೇವೆ. ಸರಕಾರದ ಮಾರ್ಗಸೂಚಿಯಲ್ಲಿ ಹೊನಲು ಬೆಳಕಿನ ಕ್ರೀಡಾಂಗಣ ನಿರ್ಮಿಸಬಹುದೆಂದು ಇದ್ದುದರಿಂದ ಕ್ರಿಯಾಯೋಜನೆಯಲ್ಲಿ ಕಾಮಗಾರಿಯ ಹೆಸರನ್ನು ಹಾಗೆಯೇ ಕೊಟ್ಟಿದ್ದೇವೆ ಹೊರತು ಎಸ್ಟಿಮೇಟಿನಲ್ಲಿ ಅದು ಇಲ್ಲ. ಮೈದಾನ ವಿಸ್ತರಣೆ ಮಾಡಿ ದೊಡ್ಡದುಗೊಳಿಸುವುದೆಂದೇ ಮಾಡಲಾಗಿದೆ. ಕೆಲಸ ಆದನಂತರ ಕಾಮಗಾರಿಯ ಬಗ್ಗೆ ಕೆ.ಆರ್.ಐ.ಡಿ.ಎಲ್. ಇಂಜಿನಿಯರ್ ಗಳು ಲೆಕ್ಕಪತ್ರಗಳನ್ನು ನೀಡಿದ್ದಾರೆ. ಅದರ ಬಿಲ್ ಪೇಮೆಂಟ್ ಕೂಡ ನಾವು ಪಂಚಾಯತ್ ನಿಂದ ಮಾಡುವುದಲ್ಲ. ಯಾಕೆಂದರೆ ಸರಕಾರದಿಂದ ಬಂದ ಹಣವನ್ನು ನಾವು ಮೊದಲೇ ಆ ಸಂಸ್ಥೆಗೆ ಕಟ್ಟಬೇಕಿತ್ತು. ಅದರಂತೆ ಕಟ್ಟಿದ್ದೆವು. ನೇರವಾಗಿ ಆ ಸಂಸ್ಥೆಯೇ ಕಾಮಗಾರಿ ಮಾಡುವುದಾದ್ದರಿಂದ ಅವರಿಗೆ ಮತ್ತೆ ಪೇಮೆಂಟ್ ಮಾಡುವುದೆಂದಿಲ್ಲ ” ಎಂದು ಹೇಳಿದರು.
ಈ ವಿಷಯ ಬೆಳಕಿಗೆ ಬರಲು ಕಾರಣರಾದ ರಾಜಾರಾಂ ಭಟ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ ” ಅಲ್ಲಿ 9 ಲಕ್ಷ ರೂ. ಖರ್ಚಾಗಿಲ್ಲವೆಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಹೆಚ್ಚೆಂದರೆ 2 ಲಕ್ಷ ಖರ್ಚಾಗಿರಬಹುದು. ಉಳಿದ 7 ಲಕ್ಷ ರೂ.ಗಳಷ್ಟು ನುಂಗಿ ನೀರು ಕುಡಿದಿದ್ದಾರೆಂದರೆ ಯಾರೂ ಪ್ರಶ್ನಿಸುವವರಿಲ್ಲವೆಂದು ಅರ್ಥವೇ ? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಏನು ಅವ್ಯವಹಾರ ವಾಗಿದೆಯೋ ಅದು ಬೆಳಕಿಗೆ ಬಂದು ಅಲ್ಲಿ ಗ್ಯಾಲರಿ ಮತ್ತು ಹೊನಲು ಬೆಳಕಿನ ವ್ಯವಸ್ಥೆ ಆಗಬೇಕು. ಅದಕ್ಕಾಗಿ ನಮ್ಮ ಹೋರಾಟವಿರುತ್ತದೆ. ಇದು ಮಾತ್ರವಲ್ಲ. ಇನ್ನಷ್ಟು ಭ್ರಷ್ಟಾಚಾರದ ಪ್ರಕರಣಗಳಿವೆ. ಅವುಗಳ ಬಗ್ಗೆಯೂ ಬೆಳಕು ಚೆಲ್ಲುತ್ತೇನೆ ” ಎಂದು ಹೇಳಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.