ಸ್ವಾವಲಂಬಿ ಬದುಕಿನ ಸರದಾರ ನಮ್ಮಪ್ಪ

Advt_Headding_Middle

ನಮ್ಮಪ್ಪ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರು ವೃತ್ತಿಯಲ್ಲಿ ಪುರೋಹಿತರು. ಸುಮಾರು 5೦ ವರ್ಷಗಳ ಕಾಲ ಪೌರೋಹಿತ್ಯ ವೃತ್ತಿಯನ್ನು ನಡೆಸಿ ಇದೀಗ ಮಂಗಳೂರಿನ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಮೊನ್ನೆ ತಾನೇ ತನ್ನ ೮೦ನೇ ಹುಟ್ಟುಹಬ್ಬವನ್ನು ಮಾರ್ಚ್ ಒಂದರಂದು ಮಕ್ಕಳು, ಮೊಮ್ಮಕ್ಕಳು, ಶಿಷ್ಯವರ್ಗದವರು ಮತ್ತು ಕುಟುಂಬದವರ ಜೊತೆಗೆ ಆಚರಿಸಿಕೊಂಡು ಸಂಭ್ರಮಿಸಿದ್ದರು. ವಯೋ ಸಹಜವಾದ ಕಾರಣದಿಂದ ಮತ್ತು ಪಾರ್ಕಿನ್‌ಸನ್ಸ್ ಎಂಬ ನರಸಂಬಂಧಿ ರೋಗದ ಕಾರಣದಿಂದ ಇದೀಗ ಒಂದಷ್ಟು ಮರೆವಿನ ಸಮಸ್ಯೆಯಿಂದಲೂ ಬಳಲುತ್ತಿದ್ದರೂ, ದೈನಂದಿನ ಚಟುವಟಿಕೆಗಳನ್ನು ತಾವೇ ಮಾಡಿಕೊಳ್ಳುವಷ್ಟು ಶಕ್ತರಾಗಿದ್ದಾರೆ. ಪೌರೋಹಿತ್ಯದ ಜೊತೆಗೆ ಕೃಷಿ ಹೈನುಗಾರಿಕೆ ಜೊತೆಜೊತೆಗೆ ಮಾಡಿಕೊಳ್ಳುತ್ತಾ ತಾವೂ ಮಾಡುವುದರ ಜೊತೆಗೆ ಮಕ್ಕಳಿಗೂ ಕಲಿಸಿ ‘ಸ್ವಾವಲಂಬಿ’ ಬದುಕನ್ನು ಎಂಬತ್ತರ ದಶಕದಲ್ಲಿಯೇ ರೂಢಿಸಿಕೊಂಡಿದ್ದಾರೆ ಎಂದರೂ ತಪ್ಪಾಗಲಾರದು. ಬಾಲ್ಯದಿಂದಲೂ ಕಠಿಣ ಪರಿಶ್ರಮದ ದೈಹಿಕ ಪರಿಶ್ರಮದ ಕೆಲಸದ ಕಾರಣದಿಂದ ಈಗಲೂ ಆರೋಗ್ಯವನ್ನು ಕಾಪಾಡಿಕೊಂಡಿರುತ್ತಾರೆ. ಕಡುಬಡತನದಲ್ಲಿ ಹುಟ್ಟಿ ಬೆಳೆದು ಈಗ ಸುಖವನ್ನು ಅನುಭವಿಸುತ್ತಿದ್ದರೂ ಸವೆದು ಬಂದ ದಾರಿಯನ್ನು ಮರೆಯದೆ ‘ಸ್ಮಿತಪ್ರಜ್ಞ’ ರಾಗಿಯೇ ಬದುಕಿದ್ದಾರೆ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ, ಆರಕ್ಕೇಳದ, ಮೂರಕ್ಕೆ ಇಳಿಯದ ಸ್ಮಿತಪ್ರಜ್ಞ ನಮ್ಮಪ್ಪ. ನಮ್ಮಪ್ಪ ಮೊದಲಿನಿಂದಲೂ ಎಲ್ಲ ಅಪ್ಪಂದಿರಂತೆ ಸಿಡುಕು ಸ್ವಭಾವ. ನಿಷ್ಠುರವಾದಿ. ಯಾವುದೇ ವಿಚಾರವನ್ನು ಮುಲಾಜಿಲ್ಲದೆ, ನಮ್ಮೆದುರಿಗೇ ಹೇಳಿ ತಿದ್ದಿ ಬಿಡುತ್ತಿದ್ದರು. ತಪ್ಪಾಗಿ ಮಾಡಿದಾಗ ಬೈದು, ಹೊಡೆದು ತಕ್ಷಣವೇ ತಿದ್ದಿ ಬಿಡುವ ಜಾಯಮಾನ. ಈ ಕಾರಣದಿಂದಲೇ ನಮಗೇ ಅಪ್ಪನಿಗಿಂತಲೂ ಅಮ್ಮನೇ ಹೆಚ್ಚು ಅಪ್ಯಾಯಮಾನವಾಗಿರುತ್ತಿದ್ದರು. ಆದರೆ ಇತ್ತೀಚೆಗೆ ನಮ್ಮಪ್ಪ ಬಹಳ ಬದಲಾಗಿದ್ದರು. ಅಮ್ಮನ ಸಾವಿನ ಬಳಿಕ ಹೆಚ್ಚು ಮೌನಕ್ಕೆ ಜಾರುತ್ತಿದ್ದರು. ಎಷ್ಟು ಬೇಕೋ ಅಷ್ಟೇ ಎಂಬಂತೆ ತಮ್ಮ ಪಾಡಿಗೆ ತಾವಿರುತ್ತಿದ್ದರು. ಕೋವಿಡ್-೧೯ ರೋಗದ ಆರ್ಭಟ ಹೆಚ್ಚಿದಂತೆ ದೃಶ್ಯ ಮಾದ್ಯಮಗಳಲ್ಲಿ ಬರುವ ನ್ಯೂಸ್‌ಗಳನ್ನು ಕೇಳಿ ಕೇಳಿ ಬಹಳ ಬೆದರಿಬಿಟ್ಟಿದ್ದರು. ಕೊನೆಗೆ ಅವರು ಮಾನಸಿಕವಾಗಿ ಜರ್ಜರಿತರಾಗುವುದು ಬೇಡ ಎಂದು ಟೀವಿ ನೋಡುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ತಮಗೆ ಅತ್ಯಂತ ಇಷ್ಟವಾದ ಕ್ರಿಕೆಟನ್ನು ನೋಡುವುದನ್ನು ಬಿಟ್ಟಿದ್ದರು. ಟೀವಿ ಮಾದ್ಯಮಗಳ ಅರಚಾಟ ಕಿರುಚಾಟಗಳಿಂದಲೇ ಬಹಳ ಖಿನ್ನರಾಗಿದ್ದರು. ಆದರೂ ಹೊರಗಿನ ಆಗುಹೋಗುಗಳ ಬಗ್ಗೆ ವಿಮುಕ್ತರಾಗಿರಲಿಲ್ಲ. ಮನೋವೈದ್ಯರ ಬಳಿ ತೋರಿಸಿ ಖಿನ್ನತೆಗೆ ಬೇಕಾದ ಔಷಧಿ ನೀಡಿದ ಬಳಿಕ ಸ್ವಲ್ಪ ಸುಧಾರಿಸಿದ್ದು. ನಮ್ಮಪ್ಪನಿಗೆ ಔಷಧಿ ತಿನ್ನುವುದು ಎಂದರೆ ವಿಶೇಷ ಮುತುವರ್ಜಿ. ಊಟವನ್ನಾದರೂ ಬಿಡಬಹುದು, ಔಷಧಿಯನ್ನು ತಿನ್ನದೆ ಇರಲಿಕ್ಕಿಲ್ಲ. ದಿನವೊಂದರಲ್ಲಿ ಕನಿಷ್ಟ ಹತ್ತಾರು ಮಾತ್ರೆ ತಿನ್ನದಿದ್ದಲ್ಲಿ ನಿದ್ದೆಯೇ ಬರದು. ಮೊದಲನೇ ಅಲೆಯ ಕೋವಿಡ್-೧೯ ಲಾಕ್‌ಡೌನ್ ಸಮಯದಲ್ಲಿ ಒಂದೆರಡು ತಿಂಗಳು ಕ್ಲಿನಿಕ್ ಬಂದ್ ಮಾಡಿ ಮನೆಯಲ್ಲಿಯೇ ಇರುತ್ತಿದ್ದೆ. ಅದೊಂದು ದಿನ ಸಂಜೆ ಹೊತ್ತು ಆಸ್ಪತ್ರೆಯಿಂದ ತುರ್ತು ಕರೆಯ ನಿಮಿತ್ತ ಹೊರಗೆ ಹೋಗಿದ್ದೆ. ತಾನು ಹೊರಟು ನಿಂತಾಗ ‘ಔಷಧಿ’ ತರಲು ನೆನಪಿಸಿದ್ದರು. ನಾನಾದರೂ ಆಪರೇಷನ್ ತಡವಾಗಿ ಮುಗಿದ ಕಾರಣ ತಡರಾತ್ರಿ ಔಷಧಿ ತರದೆ ಮನೆಗೆ ಬಂದಿದ್ದೆ. ಬಂದ ಕೂಡಲೇ ‘ಔಷಧಿ ತಂದಿದ್ದೀಯಾ’ ಎಂದು ಕೇಳಿದಾಗ ಮೊದಲೇ ಸುಸ್ತಾಗಿದ್ದ ನಾನು ಅಪ್ಪನ ಮೇಲೆ ರೇಗಾಡಿದ್ದೆ. ನಾನು ಬಾಗಿಲು ದಢಾರನೆ ಹಾಕಿ ಮನೆಯೊಳಗೆ ಸೇರಿ ಸ್ನಾನ ಮುಗಿಸಿ ಹೊರಬಂದಾಗ ಮತ್ತೆ ನಮ್ಮಪ್ಪ ಪ್ರತ್ಯಕ್ಷರಾಗಿದ್ದರು. ಇನ್ನು ‘ಔಷಧಿ’ ತಂದು ಕೊಡದೆ ಇವರು ನನ್ನ ಬೆನ್ನು ಬಿಡುವುದಿಲ್ಲ ಅಂದುಕೊಳ್ಳುತ್ತಿರುವಾಗಲೇ ನಮ್ಮಪ್ಪ ‘ಊಟ ಆಗಿದೆಯಾ ಮಗನೇ’ ಎಂದು ಕೇಳಿದಾಗ ನಾನು ಒಂದು ಕ್ಷಣ ಅವಾಕ್ಕಾಗಿದ್ದೆ. ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿ ಗಂಡಸರು ರಾತ್ರಿ ಮನೆಗೆ ಬಂದಾಗ ಊಟ ಆಗಿದೆಯಾ ಎಂದು ವಿಚಾರಿಸುವುದು ಅಮ್ಮಂದಿರ ಕೆಲಸ. ಅಮ್ಮ ಇಲ್ಲದಿದ್ದರೆ ಹೆಂಡತಿಯರು ಮಾಡುತ್ತಾರೆ. ಆದರೆ ಇಲ್ಲಿ ನಮ್ಮಪ್ಪ ‘ಅಮ್ಮನಿಲ್ಲದ’ ನನಗೆ ಅಪ್ಪ-ಅಮ್ಮ ಎರಡೂ ಆಗಿದ್ದರು. ನಾನು ಔಷಧಿ ತರದೇ ರೇಗಾಡಿದ್ದರೂ, ಕಿಂಚಿತ್ತೂ ಬೇಜಾರುಪಟ್ಟುಕೊಳ್ಳದೆ ‘ತನ್ನೊಳಗಿನ ಪಿತೃಪ್ರಜ್ಞೆ’ಯನ್ನು ಜಾಗೃತಗೊಳಿಸಿ ‘ಮಾತೃಹೃದಯ’ವನ್ನು ನನಗೆ ತೆರೆದು ತೋರಿಸಿ ನನ್ನ ಕಣ್ಣುಗಳನ್ನು ತೆರೆಸಿದ್ದರು ಮತ್ತು ತೋಯಿಸಿದ್ದರು. ನನಗರಿವಿಲ್ಲದೆ ನನ್ನ ಕಣ್ಣಂಚಿನಿಂದ ಒಂದೆರಡು ಹನಿ ಕಣ್ಣೀರು ಜಾರಿ ನೆಲ ಸೇರಿತ್ತು. ಅಪರ ರಾತ್ರಿಯಲ್ಲಿಯೂ ಇಳಿ ವಯಸ್ಸಿನ ನಮ್ಮಪ್ಪ ನನಗೆ ಬದುಕಿನ ಪಾಠವೊಂದನ್ನು ಕಲಿಸಿದ್ದರು.
ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು
ಮೊ: ೯೮೪೫೧೩೫೭೮೭

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.