ಶಾಲೆಯ ಸೊಬಗನ್ನು ಅಲಂಕರಿಸುವಿರಾ?

Advt_Headding_Middle

ಅಮ್ಮ ಬಾ, ಟಾಟಾ ನಾ ಶಾಲೆಗೆ ಹೋಗಿ ಬರ್ತೀನಿ ಎಂದು ಶಾಲೆಗೆ ಹಕ್ಕಿಯಂತೆ ಹಾರಾಡಿಕೊಂಡು ಬಂದು ಮಿಸ್ ಮಿಸ್ ಗುಡ್ ಮಾರ್ನಿಂಗ್ ಎನ್ನುವ ಮಾತುಗಳು ಶಿಕ್ಷಕರನ್ನು ಸುತ್ತುವರಿಯುತ್ತಿತ್ತು. ಮಕ್ಕಳು ಶಾಲೆಯ ಗೇಟು ತಲುಪಿದ ನಂತರ ಸ್ನೇಹಿತರೊಡನೆ ಸೇರಿದಾಗ ಮನೆಯ ನೆನಪು ಮರೆತು ಶಾಲಾ ಪ್ರಾರ್ಥನೆ,ತರಗತಿ ಇತ್ಯಾದಿಗಳಲ್ಲಿ ಮಗ್ನನಾಗಿರುತ್ತಿದ್ದರು. ಆದರೆ ಇಂದಿನ ಶಿಕ್ಷಣ ಹಾಗಿಲ್ಲ, ಶಿಕ್ಷಣ ಬೇಕು ಅಂದರೆ ಮಾಡುವ ರೀತಿಯಾದರೂ ಹೇಗೆ ಎನ್ನುವಾಗ ಆನ್ ಲೈನ್ ಶಿಕ್ಷಣ ಕಾಲಿಟ್ಟಿತು, ಛೇ… ಮಕ್ಕಳ ಮುದ್ದಾದ ಮುಖಗಳನ್ನು ವೀಡಿಯೋ ಮೂಲಕ ನೋಡಬೇಕೆ? ಕರಿಹಲಗೆ ಎದುರು ಸ್ನೇಹಿತರೊಡನೆ ಜೊತೆಯಲ್ಲಿ ಕುಳಿತು ಕೀಟಲೆ ಮಾಡುತ್ತಾ ಕಲಿಯುತ್ತಿದ್ದ ಕ್ಷಣ ಹೋಗಿ ಮೊಬೈಲ್ ಮುಂದೆ ಏಕಾಂಗಿಯಾಗಿ ಕುಳಿತು ನಿರುತ್ಸಾಹದಿಂದ ತರಗತಿ ಕೇಳುವ ಸಮಯ ಇದಾಗಿದೆ. ಆಗ ಎಷ್ಟೋ ಬಾರಿ ಅನಿಸೋದು, ಛೇ… ಶಾಲೆಯಲ್ಲಿ ಮಕ್ಕಳಿದ್ದರೆ ಎಷ್ಟು ಖುಷಿ ಇರುತ್ತಿತು, ಮಿಸ್ ನಿಮಗೆ ಹೂವು ತಂದಿದ್ದೇನೆ….. ಎಂದು ಮುದ್ದಾದ ಮುಖದ ನಗುವಿನಿಂದ ಹೂವನ್ನು ನೀಡಿ ಹಕ್ಕಿಯ ಕಲರವದಂತೆ ಕುಣಿದುಕೊಂಡು ಕುಪ್ಪಳಿಸುತ್ತಿದ್ದರು. ಶಾಲಾ ಹಳದಿ ಬಸ್ ಗಳು ರಸ್ತೆಗಿಳಿಯದೆ ಬಿಕೋ ಎನಿಸುತ್ತಿದೆ.
ಭೌತಿಕವಾಗಿ ನಡೆಯುತ್ತಿದ್ದ ತರಗತಿಯ ಬಿಡುವಿನ ಸಮಯದಲ್ಲಿ ಮಕ್ಕಳ ಗಲಾಟೆ, ಆಟ, ಪಾಠದ ಬಗೆಗಿನ ಡೌಟ್ ಗಳನ್ನು ಕೇಳುವ ರೀತಿ, ಮಳೆಯ ನೀರಲ್ಲಿ ಓಡಾಡಿಕೊಂಡು ಜಾರಿ ಬಿದ್ದು ಜೋರಾಗಿ ಕೂಗುವ ದೃಶ್ಯ, ಸ್ನೇಹಿತರೊಡನೆ ಸೇರಿ ಕೋಪ ಮಾಡಿಕೊಂಡು, ಆಟಕ್ಕೆ ಸೇರಿಸದೆ ಇರುವುದು, ಪಟಪಟ ಎಂದು ಜಗಲಿಯಲ್ಲಿ ಓಡಾಡುವ ಜೊತೆಗೆ ಮಕ್ಕಳ ಕಾಲಿನಲ್ಲಿರುವ ಗೆಜ್ಜೆಯ ಶಬ್ದ , ಒಂದು ಕಡೆ ಕುಳಿತುಕೊಳ್ಳದ ಪುಟಾಣಿ ಮಕ್ಕಳು, ಕರಿಹಲಗೆ ನೋಡಿಕೊಂಡು ನೋಟ್ಸ್ ಬರೆಯುವಿಕೆ ,ಶಿಕ್ಷಕರಿಗೆ ಸಾಕೆನಿಸುವಷ್ಟು ಕೇಳುವ ಮಗ್ಗಿಯ ಪದಗಳು, ರಾಗದಿಂದ ಬರುವ ಪದ್ಯಗಳು, ಹುಟ್ಟು ಹಬ್ಬ ಆಚರಣೆಗಳು, ಕೆಂಪು ಶಾಯಿಯ ಬಳಕೆ, ಎಲ್ಲವು ಈ ಹಿಂದೆ ಕಳೆದ ನೆನಪುಗಳಷ್ಟೇ…. ಊಟಕ್ಕೆ ಟೈಮ್ ಆಯ್ತಾ ಮಿಸ್? ಎನ್ನುವ ಪ್ರಶ್ನೆಗಳು, ಆಟದ ಸಮಯಕ್ಕೆ ಗಂಟೆಯನ್ನೇ ನೋಡಿ ಕಾದು ಕುಳಿತಿರುವ ಮಕ್ಕಳ ನೋಟ, ಆಟವಾಡಿ ಸುಸ್ತಿನಲ್ಲೂ ಬ್ಯಾಗ್ ಗೆ ಪುಸ್ತಕಗಳನ್ನು ತುಂಬಿಸಿ, ಮನೆಗೆ ಹೊರಡುವ ಸಂಭ್ರಮ, ಸ್ನೇಹಿತರೊಡನೆ ,ಶಿಕ್ಷಕರೊಡನೆ ನಡೆದ ಎಲ್ಲಾ ಒಡನಾಟಗಳು ನೆನಪಿನ ಚಿಪ್ಪಿನಲ್ಲಿ ಬಂಧಿಯಾಗಿಬಿಟ್ಟಿದೆ.ಪುಸ್ತಕದ ಪುಟಗಳ ತಿರುವಿನಂತೆ ಒಂದು ವರ್ಷವು ಮೊಬೈಲ್ ನಲ್ಲಿಯೇ ಮುಗಿದು ಹೋದವು… ಆನ್ ಲೈನ್ ಶಿಕ್ಷಣವು ಪರಿಸ್ಥಿತಿಯ ಕೈಗೊಂಬೆಯಾಗಿ ನಿಂತಿದೆ . ಶಿಕ್ಷಕ ಮತ್ತು ಮಕ್ಕಳ ಬೆಸುಗೆಯು ಶಿಕ್ಷಣದಲ್ಲಿ ಅಡಗಿತ್ತು, ಇದೀಗ ಪರದೆಯ ಮುಂದೆ ನೀಡುವ ಶಿಕ್ಷಣವಾದರೂ ,ಶಾಲಾ ಕಟ್ಟಡ ಖಾಲಿಯಾದಂತೆ ನಮ್ಮ ಮತ್ತು ಮಕ್ಕಳ ಮನವು ಖಾಲಿ ಖಾಲಿಯಾಗಿ ಉತ್ಸಾಹದ ಚಿಗುರು ಮರೆ ಮಾಚಿದೆ…. ಕಳೆದ ಮಾರ್ಚ್ ನಲ್ಲಿ ಟಾಟಾ ಬಾ ಮಿಸ್ ಎಂದು ಹೊರಟೋದವರು ಈ ವರೆಗೂ ಸಣ್ಣ ಮಕ್ಕಳನ್ನು ಶಾಲೆಯಲ್ಲಿ ನೋಡುವ ಭಾಗ್ಯ ಬರದೇ ಹೋಯಿತು, ಕೆಲವು ಮಕ್ಕಳಂತು ಕಾರಣಾಂತರಗಳಿಂದ ಬೇರೊಂದು ಶಾಲೆಗೆ ಹೆಜ್ಜೆ ಹಾಕಿ ನಮ್ಮಿಂದ ಕಣ್ಮರೆಯಾಗಿ ದುಖಿಃತರನ್ನಾಗಿಸಿಬಿಟ್ಟರು. ಶಾಲೆಯ ಸೊಬಗನ್ನು ಅಲಂಕರಿಸಲು ನಿಮ್ಮಂತಹ ಮುದ್ದಾದ ಮಕ್ಕಳಿಂದಲೇ ಸಾಧ್ಯವಲ್ಲವೇ…!!!!…
ಕುಳಿತಲ್ಲಿಯೇ ಕೈಲಾಸ ತೋರಿಸುವ ಈ ಸ್ಮಾರ್ಟ್ ಫೋನ್ ಚೆಲುವೆಯಿಂದ ಮುಕ್ತಿ ಪಡೆಯಲಿ, ಬನ್ನಿ ಮಕ್ಕಳೇ ಕಲರ್ ಪುಲ್ ಆಗಿ ಶಾಲಾ ದಿನಗಳನ್ನು ನಮ್ಮದಾಗಿಸೋಣಾ…. ಹಲವು ತಿಂಗಳಿನಿಂದ ಬಂಧಿಯಾಗಿರುವ ಮಕ್ಕಳ ಬದುಕು ಶಿಕ್ಷಕರ ಮಡಿಲ ಸೇರುವ ಕ್ಷಣ ಒಂದುಗೂಡಲಿ,ಮರಳಿ ಶಾಲೆಯ ಗೂಡಿಗೆ ಸೇರುವಂತಾಗಲಿ.

-ಪೂರ್ಣಿಮಾ ಪಂಜ
ಮುಖ್ಯ ಶಿಕ್ಷಕಿ, ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.