ಮಕ್ಕಳಿಲ್ಲದ ಶಾಲೆಯನ್ನು ಕಲ್ಪಿಸುವುದೇ ಕಷ್ಟ

Advt_Headding_Middle

ಶಾಲೆ ಎಂದಾಕ್ಷಣ ನೆನಪಾಗುವುದು ಮಕ್ಕಳು. ಮಕ್ಕಳಿಲ್ಲದ ಶಾಲೆಯನ್ನು ಕಲ್ಪಿಸುವುದೇ ಕಷ್ಟ. ಆದರೀಗ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿರುವ ಶಾಲೆಯ ವಾತಾವರಣವನ್ನು ಒಂದು ವರ್ಷಕ್ಕೂ ಮಿಕ್ಕಿ ಅನುಭವಿಸುತ್ತಿದ್ದೇವೆ. ಮಕ್ಕಳಿಲ್ಲದ ಶಾಲೆ ಹೂವುಗಳಿಲ್ಲದ ಹೂದೋಟ ದಂತೆ. ಶಿಕ್ಷಕವೃತ್ತಿ ಬಹು ಜವಾಬ್ದಾರಿಯುತವಾಗಿದ್ದರೂ, ಅದರಲ್ಲಿ ಸಿಗುವ ತೃಪ್ತಿ ಅಷ್ಟಿಷ್ಟಲ್ಲ. ಬೆಳಗಿನ 9 ಗಂಟೆಯಿಂದ, ಸಾಯಂಕಾಲ 4:30 ಅವರಿಗೆ ಸದಾ ಚಟುವಟಿಕೆಯ ಕೇಂದ್ರವಾಗಿದ್ದ ನಮ್ಮ ಶಾಲೆಯಲ್ಲೀಗ ಮೌನವೇ ಮಾತಾದಂತಿದೆ. ನಮ್ಮ ಹೆಮ್ಮೆಯ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜೊತೆಜೊತೆಗೆ ಜೀವನ ಕೌಶಲ್ಯವನ್ನು ನಾಜೂಕಾಗಿ ಕಲಿತುಕೊಳ್ಳುತ್ತಾರೆ. ಶಾಲೆಯ ವರಾಂಡದಲ್ಲಿಯೇ ಒಪ್ಪ-ಓರಣವಾಗಿ ಚಪ್ಪಲಿಗಳನ್ನು ಬಿಟ್ಟು, ಒಳಪ್ರವೇಶಿಸುವ ಮಕ್ಕಳು ಶಾಲಾ ಸ್ವಚ್ಛತೆಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.
ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಶಿಸ್ತು ಬದ್ಧವಾಗಿ ನಿಲ್ಲುವ ವಿದ್ಯಾರ್ಥಿಗಳು ನಾಡಗೀತೆ, ರಾಷ್ಟ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವುದು, ಈ ಸಂದರ್ಭದಲ್ಲಿ ಶಾಲಾ ಆವರಣದ ಪಕ್ಕದಲ್ಲಿ ನಡೆದು ಹೋಗುವವರೂ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿ ಮುಂದೆ ತೆರಳುವುದು ಇದೆಲ್ಲಾ ರೋಮಾಂಚನಗೊಳಿಸುವ ಅನುಭವಗಳು. ವಿದ್ಯಾರ್ಥಿ ಕೇಂದ್ರಿತ ಕಲಿಕಾ ಪದ್ಧತಿಯಿಂದಾಗಿ ಭಯ ಮುಕ್ತ ವಾತಾವರಣದಲ್ಲಿ ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂಜೆಯಾಗುವುದೇ ತಿಳಿಯುತ್ತಿರಲಿಲ್ಲ.
ಮಧ್ಯಾಹ್ನದ ಊಟದ ಗಂಟೆ ಬಾರಿಸುತ್ತಲೇ, ಟೀಚರ್ ಇವತ್ತು ಜನರಲ್ ನಾಲೆಡ್ಜ್ ಪ್ರಶ್ನೆಗಳು ಬೇಡ, ಕಥೆ ಬೇಕು ಎಂದು ಪ್ರೀತಿಯಿಂದಲೇ ಒತ್ತಾಯಿಸುವ, ಕಥೆಯನ್ನು ಏಕಾಗ್ರ ಚಿತ್ತದಿಂದ ಆಲಿಸಿ ಒಟ್ಟಾಗಿ ಪ್ರಾರ್ಥನೆ ಮಾಡಿ ನಾ ಮುಂದು, ತಾಮುಂದು ಎಂಬಂತೆ ಊಟ ಮಾಡಿ ಕೈತೊಳೆದು ತರಗತಿಗಳಿಗೆ ಓಡುವ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಅದರಲ್ಲೂ ಕೆಲವು ಮಕ್ಕಳು ಕೈತೊಳೆದು ಬಟ್ಟಲನ್ನು ಬಿಸಿಲಿಗೆ ಹಿಡಿದು, ಸೂರ್ಯನ ಬೆಳಕನ್ನು ಇನ್ನೊಬ್ಬರ ಮೇಲೆ ಪ್ರತಿಫಲಿಸುವಂತೆ ಮಾಡಿ ರೇಗಿಸುವುದು ಛೇ ಇದಾವುದೂ ಈಗಿಲ್ಲ.
ಮಕ್ಕಳೆಂದ ಮೇಲೆ ಸಣ್ಣ ಪುಟ್ಟ ಜಗಳಗಳು, ದೂರುಗಳು ಇವೆಲ್ಲಕ್ಕಿಂತ ಮುಖ್ಯವಾಗಿ ಪರಸ್ಪರ ಸಹಕಾರ ಮನೋಭಾವ, ಪರಸ್ಪರರ ನಡುವಿನ ಪ್ರೀತಿ ಎಷ್ಟೊಂದು ಚೆನ್ನಾಗಿತ್ತು. ಇನ್ನು ಮಕ್ಕಳ ಜನುಮ ದಿನದಂದು ಬಣ್ಣಬಣ್ಣದ ಬಟ್ಟೆ ಧರಿಸಿ ಬಂದಾಗ ಅವರನ್ನೊಮ್ಮೆ ಹತ್ತಿರ ಕರೆದು ಶುಭಾಶಯ ಕೋರಿ, ಬಟ್ಟೆ ತುಂಬಾ ಚೆನ್ನಾಗಿದೆ, ತುಂಬಾ ಚೆನ್ನಾಗಿ ಕಾಣುತ್ತೆ ಎಂದಾಗ ಆ ಮಕ್ಕಳ ಮುಖ ಅರಳುವುದನ್ನು ನೋಡುವುದೇ ಖುಷಿ. ಅದೆಷ್ಟೋ ಸಂದರ್ಭಗಳಲ್ಲಿ ಮನೆಯವರೊಂದಿಗೆ ಹೇಳಿಕೊಳ್ಳದ ಸಮಸ್ಯೆಗಳನ್ನು ನಮ್ಮೊಂದಿಗೆ ಹೇಳಿಕೊಳ್ಳುವಷ್ಟು ಪ್ರೀತಿ, ವಿಶ್ವಾಸ ಇಟ್ಟಿರುವ ಮಕ್ಕಳು ಈಗ ಶಾಲೆಯ ಮೈದಾನಕ್ಕೇ ಕಾಲಿಡದಂತಾಗಿದೆ.
ಶಾಲೆಯಲ್ಲಿ ನಡೆಯುವ ಎಲ್ಲಾ ರಾಷ್ಟ್ರೀಯ ಹಬ್ಬಗಳು, ಇತರೆಲ್ಲಾ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆಯ ಹುರುಪು ಕಾಣದಂತಾಗಿದೆ. ಮಕ್ಕಳ ಮನೋವಿಕಾಸಕ್ಕೆ ಕಾರಣವಾದ ಸಹಪಠ್ಯ ಚಟುವಟಿಕೆಗಳು, ವಾರ್ಷಿಕೋತ್ಸವ, ಕ್ರೀಡೆಗಳು ಹೀಗೆ ಎಲ್ಲವೂ ಸ್ಥಬ್ದ. ಬೆರೆತು ಬಾಳಬೇಕಾದ ಮಕ್ಕಳು ಅಂತರ ಕಾಪಾಡುವಂತಾಗಿದೆ. ಮನೆಯೊಳಗೇ ಇರಬೇಕಾದ ಮಕ್ಕಳು ಸಹಜವಾಗಿಯೇ ಮೊಬೈಲ್, ಟಿವಿಗಳ ಮೊರೆ ಹೋಗುವಂತಾಗಿದೆ. ಮಕ್ಕಳಲ್ಲಿರುವ ಅದಮ್ಯ ಚೈತನ್ಯ, ಸೃಜನಶೀಲತೆ ಮಾಂಕಾಗುತ್ತಿರಬಹುದೇ ಅನ್ನುವ ಭಯ ಕಾಡಲಾರಂಭಿಸಿದೆ. ಆನ್ಲೈನ್ ಅಥವಾ ಇನ್ನಿತರ ಮಾಧ್ಯಮಗಳ ಮೂಲಕ ಕೊಡುವ ಶಿಕ್ಷಣ ಶಾಲೆಯಲ್ಲಿ ಚಟುವಟಿಕೆ ಯುಕ್ತವಾಗಿ ಕಲಿಯುವುದಕ್ಕೆ ಸಮನಾಗಲಾರದು. ಆದರೆ ಆನ್ಲೈನ್ ಶಿಕ್ಷಣ ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ.
2020ರ ಜನವರಿಯಿಂದ ನಿಧಾನವಾಗಿ ಮಕ್ಕಳು ಹಂತಹಂತವಾಗಿ ಶಾಲೆಗೆ ಬರಲಾರಂಭಿಸಿದರೂ ಮತ್ತೆ ತರಗತಿ ಕೋಣೆಗಳಿಗೆ ಬೀಗ ಜಡಿಯುವಂತಯಿತು.
ಆದರೆ ಈಗ ಇನ್ನೊಂದು ಶೈಕ್ಷಣಿಕ ವರ್ಷ ಆರಂಭವಾಗಿದೆ. ಕೋವಿಡ್ ಎರಡನೇ ಅಲೆ ನಿಧಾನಗತಿಯಲ್ಲಿ ಇಳಿಮುಖವಾಗುತ್ತಿದೆ. ಅದು ಇನ್ನೊಮ್ಮೆ ಏರುಗತಿಯತ್ತ ಸಾಗದಂತೆ ಪ್ರತಿಯೊಬ್ಬ ನಾಗರಿಕನು ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಅತಿ ಶೀಘ್ರದಲ್ಲಿಯೇ ನಮ್ಮ ಹೆಮ್ಮೆಯ ಜ್ಞಾನ ದೇಗುಲದಲ್ಲಿ ಮಕ್ಕಳ ಕಲರವ ಆರಂಭವಾಗಲಿ. ಶಾಲಾ ವಾತಾವರಣಕ್ಕೆ ಜೀವಕಳೆ ತುಂಬಲಿ ಎಂಬುದೇ ನನ್ನ ಆಶಯ.
ಶ್ರೀಮತಿ ಮಮತಾ ಎಸ್. ಕೆ.
ಪ್ರೌಢಶಾಲಾ ಸಹಶಿಕ್ಷಕಿ
ಸ. ಉ. ಪ್ರಾಥಮಿಕ ಶಾಲೆ ಜಯನಗರ, ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.