Breaking News

ನೆನಪು ಮರುಕಳಿಸಿದಾಗ

Advt_Headding_Middle

 

ಮಗುವಿನ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಮುಖ್ಯ ಗುರಿಯಾಗಿರುವಾಗ ಮಹಾಮಾರಿಯಾದ ಕೊರೋನವು ಅಡ್ಡಗೋಡೆಯಾಗಿ ಬಂದಿರುವುದು ನಮ್ಮೆಲ್ಲರ ಬೇಸರದ ವಿಷಯ. ಹೀಗೆ ನೆನಪು ಮರುಕಳಿಸಿದಾಗ ಮಕ್ಕಳೊಂದಿಗೇ ಕಳೆದ ಆ ಸುಂದರ ಕ್ಷಣಗಳು ದಿನಗಳು.
ಬೆಳಗಾಗುವುದೇ ತಡ ಎಲ್ಲಾ ಕೆಲಸಗಳನ್ನು ತರಾತುರಿಯಲ್ಲಿ ಮುಗಿಸಿ ಚುರ್ರೆನ್ನುವ ಹೊಟ್ಟೆಗೂ ಕೊಟ್ಟು ಗೇಟಿನ ಬಳಿ ಬಂದು ನಿಲ್ಲುವುದೇ ತಡ, ಕೆಲವೇ ಕ್ಷಣಗಳಲ್ಲಿ ಬಂದು ನಿಲ್ಲುವುದು ಶಾಲಾ ಬಸ್ಸು. ಹತ್ತಿದೊಡನೆಯೇ ಮಕ್ಕಳ ಮುದ್ದು ಮುಖಗಳನ್ನು ಕಂಡಾಗ ಆಗುವ ಸವಿ ಆನಂದ ಒಂದೂವರೆ ವರ್ಷದಿಂದ ಇಲ್ಲದಂತಾಗಿ ನೋವನ್ನು ತಂದಿದೆ. ಹಾಗೆಯೇ 9.30ಆದೊಡನೆಯೇ ತರಗತಿಗಳಿಗೆ ತೆರಳಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಪಾಠ ಹೇಳುವುದರಲ್ಲಿಯೇ ದಿನದ ಖುಷಿಯನ್ನು ಕಳೆಯುವುದರ ಜೊತೆ-ಜೊತೆಗೆ ಅವರ ಆಟ-ಪಾಠಗಳನ್ನು ತಪ್ಪು ಸರಿಗಳನ್ನು ಗಮನಿಸಿ ತಿದ್ದಿತೀಡಿ ನಲಿಯುವ ಜೀವನದುತ್ಸಾಹವೇ ಮತ್ತೆ ಮನಪಟಲದಲ್ಲಿ ಅಚ್ಚಳಿಯದೆ ಉಳಿದು ಮನವನ್ನು ಕಾಡುತ್ತಿದೆ. ಪಠ್ಯ ಚಟುವಟಿಕೆಯ ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಕ್ಕಳ ತಯಾರಿ, ಅವರೊಂದಿಗೆ ನಾವು ಮಕ್ಕಳಂತೆ ವರ್ತಿಸಿ ತೋರುವ ರೀತಿ, ಶೈಕ್ಷಣಿಕ ವರ್ಷದ ಪ್ರವಾಸದಲ್ಲಿ ಮಕ್ಕಳೊಂದಿಗೆ ಹೋಗಿ ಬೆರತು ನೀರಿನಲ್ಲಿ ಜೊತೆಗೆ ಕುಣಿದಾಡಿ ಒದ್ದೆಯಾಗಿ ಕಳೆದ ದಿನಗಳಂತೂ ನೆನಪಾಗಿ ಕಾಡುವ ದಿನವಾಗಿದೆ. ಮೈದಾನದಲ್ಲಿ ಮಕ್ಕಳೊಂದಿಗೆ ಇದ್ದು ನಾವು ಆಟವಾಡಿದ ದಿನಗಳು, ಮಕ್ಕಳ ದಿನಾಚರಣೆಗೆ ನಾವು ನೃತ್ಯ ಮಾಡಿದ ದಿನಗಳು, ಶಿಕ್ಷಕರ ದಿನಾಚರಣೆಗೆ ಮಕ್ಕಳು ನಡೆಸುವ ತಯಾರಿ ನಮ್ಮ ಮೋಜಿನಾಟ ಇವೆಲ್ಲವೂ ಈಗ ಬರೀ ನೆನಪಾಗಿ ಉಳಿದಿದೆ .

ಆದರೂ ಮಕ್ಕಳ ಉಜ್ವಲ ಭವಿಷ್ಯಕೋಸ್ಕರ ಶ್ರಮಿಸುವ ನಾವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಶಾಲಾ ದಿನವನ್ನು ಇದೀಗ ಕಳೆದ ವರ್ಷದಿಂದಲೇ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದರೂ, ತರಗತಿಯಲ್ಲಿ ಮಗುವಿನ ಮುಖ ನೋಡಿ ಪಾಠ ಮಾಡಿದ ದಿನಗಳು ಮತ್ತೆ ಮತ್ತೆ ಮರುಕಳಿಸುವಂತಾಗಿದೆ. ಮಕ್ಕಳೊಂದಿಗೆ ಬೆರೆತು ಮಾಡುವ ಪಾಠ, ಅದರಲ್ಲಿ ಪಡುವ ಖುಷಿ ಮಕ್ಕಳ ಅನುಭವ, ಇವೆಲ್ಲದರ ಖುಷಿಯಲ್ಲಿ ಮುಗ್ಧ ಹೃದಯಗಳ ಮಧ್ಯದಲ್ಲಿ ನಮ್ಮ ಹೃದಯವು ತೇಲಿಬಿಟ್ಟಾಗ ಸಿಗುವ ತೃಪ್ತಿ ನಮ್ಮ ಆರೋಗ್ಯ ರಕ್ಷಣೆಗೂ ಸಹಕಾರಿ ಎಂಬ ಸತ್ಯ, ಆ ಭಾಗ್ಯ ಆನ್‌ಲೈನ್ನಲ್ಲಿ ಸಿಗಲಾರದು. ಸದ್ಯದಲ್ಲೇ ಕೊರೋನ ನಾಶವಾಗಿ ಮೊದಲಿನಂತೆಯೇ ಉತ್ಸಾಹಭರಿತ ಪಾಠಕ್ಕೆ ಮಕ್ಕಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯ, ಭಾವನಾತ್ಮಕ ಬೆಳವಣಿಗೆಗೆ ಶಾಲಾ ತರಗತಿಗಳು ಪ್ರಾರಂಭವಾಗಿ ಮಕ್ಕಳ ಬೇಡಿಕೆಯೊಂದಿಗೆ ಇರಲು ಹಾತೊರೆವ ಮನಸ್ಸು ಪ್ರಫುಲ್ಲತೆಗೊಳ್ಳುವುದು ಸವಿನೆನಪು ಮರುಕಳಿಸಿದಾಗ.

-ಶ್ರೀಮತಿ ಲಲಿತಾ ಎನ್. ಎಸ್. ಭಟ್
ಶಿಕ್ಷಕಿ, ಕೆ.ವಿ.ಜಿ. ಐ.ಪಿ.ಎಸ್. ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.