Breaking News

ಖ್ಯಾತ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಇನ್ನಿಲ್ಲ

Advt_Headding_Middle

ಖ್ಯಾತ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈರವರು ಇಂದು ಬೆಳಿಗ್ಗೆ ಸುರತ್ಕಲ್‌ನ ಅವರ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು.


ಪ್ರಾಥಮಿಕ ಶಿಕ್ಷಣ ಹಂತದಲ್ಲೇ ತಂದೆಯ ಸಹಕಾರದೊಂದಿಗೆ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿ ಬಣ್ಣದ ಪ್ರಪಂಚಕ್ಕೆ ಹೊಸ ಮೆರಗು ಕೊಟ್ಟ ಇವರು, ಭರತನಾಟ್ಯ ಹಾಗೂ ಯಕ್ಷಗಾನ ನಾಟ್ಯದ ಪ್ರಾವೀಣ್ಯದೊಂದಿಗೆ ಸೋಮನಾಥೇಶ್ವರ, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಕಟೀಲು, ಎಡನೀರು ಹಾಗೂ ಹೊಸನಗರ ಮೇಳಗಳಲ್ಲಿ ಸುಮಾರು ೫೯ ವರ್ಷಗಳ ಕಲಾ ಸೇವೆಗೈದಿದ್ದಾರೆ.


ಮೃತರು ಪತ್ನಿ ಶ್ರೀಮತಿ ಗಿರಿಜಾವತಿ, ಪುತ್ರ ಜಯರಾಮ ರೈ, ಪುತ್ರಿಯರಾದ ರೇವತಿ ಶೆಟ್ಟಿ, ರಜನಿ ರೈ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಕಿರೀಟ ವೇಷಗಳಿಗೆ ತನ್ನದೇ ಆದ ವಿಶಿಷ್ಟ ಆಯಾಮವನ್ನು ಒದಗಿಸಿದ ಅನೇಕರಲ್ಲಿ ಸಂಪಾಜೆ ಶೀನಪ್ಪ ರೈಗಳೂ ಒಬ್ಬರು. 4ನೇ ತರಗತಿ ಮಾತ್ರವೇ ಓದಿದ್ದರೂ ಕೂಡ ಅತ್ಯುತ್ತಮವಾದ, ಯಕ್ಷಗಾನ ಬಯಲಾಟಗಳಿಗೆ ಎಷ್ಟು ಬೇಕೋ ಅಷ್ಟರ, ಹಿತ-ಮಿತವಾದ, ಯಾವುದೇ ವ್ಯಾಕರಣ ದೋಷಗಳಿಲ್ಲದ, ಸರಳ ಹಾಗೂ ಸ್ವಚ್ಛ ಭಾಷೆಯ ಬಳಕೆಯೂ ಕೂಡ ಗಮನಾರ್ಹ.

ಯಕ್ಷಗಾನ ಕಲಾಕ್ಷೇತ್ರದಲ್ಲಿ ಹೆಸರು ಗಳಿಸಿ, ಉತ್ತಮ ಕಲಾಕಾರರೆನ್ನುವ ಖ್ಯಾತಿಯನ್ನು ಗಳಿಸಿರುವ ಗಂಡುಗತ್ತಿನ ಕಿರೀಟ ವೇಷಧಾರಿ ಸಂಪಾಜೆ ಶೀನಪ್ಪ ರೈಗಳು.
1943 ಜೂನ್ 7 ರಂದು ದಿ. ರಾಮಣ್ಣ ರೈ ಹಾಗೂ ದಿ. ಕಾವೇರಿ ರೈ ದಂಪತಿಗಳ ಪುತ್ರನಾಗಿ ಜನಿಸಿದ ಇವರು ನಾಲ್ಕನೇ ತರಗತಿಯ ವರೆಗಿನ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಯಕ್ಷಗಾನ ಅರ್ಥಗಾರಿಕೆಯನ್ನು ತಮ್ಮ ತಂದೆಯವರಾದ ರಾಮಣ್ಣ ರೈಯವರಿಂದಲೇ ಕಲಿತರು. ಯಕ್ಷಗಾನ ನಾಟ್ಯಾಭ್ಯಾಸವನ್ನು ನಾಟ್ಯಾಚಾರ್ಯ ಕಾವು ಕಣ್ಣನ್ ಅವರಿಂದಲೂ, ಭರತನಾಟ್ಯವನ್ನು ನಾಟ್ಯಾಚಾರ್ಯ ಮಾಸ್ತರ್ ಕೇಶವರಿಂದಲೂ, ಯಕ್ಷಗಾನ ಬಣ್ಣಗಾರಿಕೆ (ಮುಖವರ್ಣಿಕೆ) ಯನ್ನು ಬಣ್ಣದ ಕುಟ್ಯಪ್ಪು ಅವರಿಂದಲೂ ಕಲಿತರು.

ತಮ್ಮ 12-13 ನೆಯ ವಯಸ್ಸಿನಲ್ಲಿ ಯಕ್ಷಗಾನ ಕಲಾಕ್ಷೇತ್ರ ಪ್ರವೇಶಿಸಿದ ಇವರು ಪುಂಡು ವೇಷ, ಕಿರೀಟ ವೇಷಗಳನ್ನು ನಿರ್ವಹಿಸುತ್ತ ಬಂದು ಕಿರೀಟ ವೇಷಗಳಲ್ಲಿ ಖ್ಯಾತಿಯ ಉತ್ತುಂಗತೆಯನ್ನು ಪಡೆದರು. ಕುಂಡಾವು ಮೇಳ, ವೇಣೂರು ಮೇಳ, ಇರುವೈಲು ಮೇಳ, ಸೌಕೂರು ಮೇಳ, ಚೌಡೇಶ್ವರೀ ಮೇಳ, ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಹನುಮಗಿರಿ ಮೇಳ ಮೊದಲಾದ ಮೇಳಗಳಲ್ಲಿ ಕಳೆದ 61 ಕ್ಕೂ ಹೆಚ್ಚು ವರ್ಷಗಳ ಕಾಲ ತಿರುಗಾಟ ಮಾಡುತ್ತ ಬಂದಿರುವವರು. ಕಟೀಲು ಮೇಳವೊಂದರಲ್ಲಿಯೇ ಸುಧೀರ್ಘವಾದ 33 ವರ್ಷಗಳನ್ನು ಕಳೆದಿದ್ದಾರೆ.

ಇಂದ್ರಜಿತು, ರಕ್ತಬೀಜ, ಕೌಂಡ್ಲಿಕ, ಹಿರಣ್ಯಾಕ್ಷ, ತಾಮ್ರಧ್ವಜ, ಶಿಶುಪಾಲ, ವೀರವರ್ಮ ಮೊದಲಾದ ಖಳಪಾತ್ರಗಳಲ್ಲದೆ ದೇವೇಂದ್ರ, ಅರ್ಜುನ ಮುಂತಾದ ಸೌಮ್ಯ ಪಾತ್ರಗಳಲ್ಲಿಯೂ ತಮ್ಮ ಪಾತ್ರಪ್ರಸ್ತುತಿಯಿಂದ ಶ್ರೀಮಂತಗೊಳಿಸಿದವರು.

ಬಹಳ ಸರಳ ಹಾಗೂ ಹಿತ-ಮಿತ ಮಾತುಗಳ ಸಜ್ಜನ. ಇವರ ಜತೆ ತಿರುಗಾಟ ಮಾಡಿದ ಸಹ-ಕಲಾವಿದರುಗಳು ಹೇಳುವಂತೆ ಇವರು ಯಾರೊಂದಿಗೂ ಕೋಪಿಸಿಕೊಂಡು ಗದರಿಸಿದ ಉದಾಹರಣೆಯೇ ಇಲ್ಲ. ಬಹಳ ತಾಳ್ಮೆಯ ವ್ಯಕ್ತಿ.

ಕಲಾವಿದರುಗಳು ರಂಗದಲ್ಲಿ ಮೆರೆದರಷ್ಟೇ ಸಾಲದು ತನ್ನ ನಡವಳಿಕೆಯನ್ನು ಒಪ್ಪವಾಗಿ ಇಟ್ಟುಕೊಳ್ಳಬೇಕು. ಉತ್ತಮ ನಡವಳಿಕೆಯನ್ನು ರಂಗದಲ್ಲೂ ಹಾಗೂ ರಂಗದ ಹೊರಗೂ ಕಾಪಿಟ್ಟುಕೊಳ್ಳಬೇಕು ಎನ್ನುತ್ತಾರೆ. ಮೊದಲೆಲ್ಲಾ ಕಲಾವಿದರಿಗೆ ’ಆಟದಾಯೆ’ ಎಂದು ಲಘುವಾಗಿ ಪರಿಗಣಿಸುತ್ತಿದ್ದ ಕಾಲ. ಇಂದೀಗ ಯಕ್ಷಗಾನ ಕಲಾವಿದ ಎಂದು ಗೌರವದಿಂದ ಕರೆಯುತ್ತಾರೆ, ಒಳ್ಳೆಯ ಮರ್ಯಾದೆಯೂ ಇದೆ. ಅಂತಹ ಸಮಯ ಕಲಾವಿದರುಗಳೂ ಕೂಡ ಸಮಾಜ ಕೊಡುವ ಮರ್ಯಾದೆಯನ್ನು ಉಳಿಸಿಕೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಸಂಪಾಜೆ ಶೀನಪ್ಪ ರೈಗಳು ಹೊಂದಿದ್ದರು.

ತನ್ನ ಗುರುಗಳಾದ ಕಾವು ಕಣ್ಣನ್, ಮಾಸ್ತರ್ ಕೇಶವ, ಅವರ ತಂದೆಯವರಾದ ರಾಮಣ್ಣ ರೈ, ಬಣ್ಣದ ಕುಟ್ಯಪ್ಪು, ಕಲ್ಲಾಡಿ ಕೊರಗ ಶೆಟ್ಟಿ, ಕೇದಗಡಿ ಗುಡ್ಡಪ್ಪ ಗೌಡ, ಕಲ್ಲಡ್ಕ ಮಾಧವ ಶೆಟ್ಟಿ, ಸೂರಿಕುಮೇರು ಗೋವಿಂದ ಭಟ್ಟ, ಅಗರಿ ಶ್ರೀನಿವಾಸ ಭಾಗವತರು, ಇರಾ ಗೋಪಾಲಕೃಷ್ಣ ಭಾಗವತರು, ಬಲಿಪ ನಾರಾಯಣ ಭಾಗವತರು, ನಿಡ್ಲೆ ನರಸಿಂಹ ಭಟ್ಟ, ಕಾಸರಗೋಡು ವೆಂಕಟರಮಣ ಇವರೆಲ್ಲರ ಸಹಕಾರ ಪ್ರೋತ್ಸಾಹವನ್ನು ನಿರಂತರ ಕೃತಜ್ಞತೆಯಿಂದ ನೆನೆಯುತ್ತಿದ್ದರು. ಬಹಳ ವಿಶೇಷವಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯನರನ್ನು ಧಣಿಗಳು ಎಂಬ ಗೌರವಾದರಗಳಿಂದ ನೆನೆಯುತ್ತಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಗೌರವ ಪ್ರಶಸ್ತಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಮಂಗಳ ಪ್ರಶಸ್ತಿ ಮುಂತಾಗಿ ಅಸಂಖ್ಯ ಪ್ರಶಸ್ತಿ ಗೌರವಗಳಿಗೆ ಶೀನಪ್ಪ ರೈಯವರು ಪಾತ್ರರಾಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.