ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಎಸ್.ಅಂಗಾರ ಪ್ರಮಾಣ ವಚನ ಸ್ವೀಕಾರ

Advt_Headding_Middle

ಸುಳ್ಯದ ಆರು ಬಾರಿಯ ಶಾಸಕ ರಾಜ್ಯದಲ್ಲಿ ಎರಡನೇ ಬಾರಿ ಮಂತ್ರಿ

ಅಂಗಾರರು ಕ್ರಮಿಸಿದ ರಾಜಕೀಯ ಹಾದಿ ಇಲ್ಲಿದೆ

ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆರು ಬಾರಿ ಗೆದ್ದಿರುವ ಶಾಸಕ ಎಸ್.ಅಂಗಾರರು ಎರಡನೇ ಬಾರಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಳೆದ ಬಾರಿ ಪ್ರಥಮವಾಗಿ ಬಿ.ಎಸ್.ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಅಂಗಾರರು ಈ ಬಾರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮಂತ್ರಿ ಪದವಿ ಅಲಂಕರಿಸಿದ್ದು, ಈಗಷ್ಟೇ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ತನ್ನ ಶಾಸಕತ್ವದ ಅವಧಿಯಲ್ಲಿ ಅವರು ಹಲವು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅನೇಕ ಯೋಜನೆಗಳನ್ನು ಅನುದಾನಗಳನ್ನು ಸ್ವ ಕ್ಷೇತ್ರಕ್ಕೆ ಮಂಜೂರುಗೊಳಿಸುವಲ್ಲಿ ಪರಿಶ್ರಮಿಸಿದ್ದಾರೆ. ವಿಧಾನ ಮಂಡಲದ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಹಿಂದುಳಿದ ವರ್ಗಗಳ ವಸತಿ ನಿಲಯ ಮಂಜೂರು, ಪಿ.ಡಬ್ಲುಡಿ ಉಪವಿಭಾಗ ಸ್ಥಾಪನೆ, ಸುಳ್ಯ ಹಾಗೂ ಸುಬ್ರಹಣ್ಯದಲ್ಲಿ ಬಸ್ ನಿಲ್ದಾಣ ಸ್ಥಾಪನೆ, ಬೆಳ್ಳಾರೆ, ಪಂಜ ಗುತ್ತಿಗಾರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಮಿನಿ ವಿಧಾನಸೌಧ, ಸುಳ್ಯದಲ್ಲಿ ಬಸ್ ಡಿಪೋ, ಅಕ್ರಮ-ಸಕ್ರಮ ಕಡತ ವಿಲೇವಾರಿ, ನಗರ ಪಂಚಾಯತ್ 17 ಕೋಟಿ ಅನುದಾನ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಸ್ಟರ್ ಪ್ಲಾನ್ ರಚನೆ, ಪ್ರಮುಖ ರಸ್ತೆಗಳ ಅಭಿವೃದ್ಧಿ ಸೇತುವೆ, ತೂಗುಸೇತುವೆಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. 25 ಕೋಟಿ ರೂ. ಮುಖ್ಯಮಂತ್ರಿಯವರ ವಿಶೇಷ ಅನುದಾನವನ್ನು ಸುಳ್ಯ ಕ್ಷೇತ್ರಕ್ಕೆ ಮಂಜೂರುಗೊಳಿಸಿ ಗ್ರಾಮಾಂತರ ಪ್ರದೇಶಗಳ ರಸ್ತೆ, ಸೇತುವೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಸುಮಾರು ೫೦ ಕೋಟಿ ರೂ.ಗಳನ್ನು ದೇವಸ್ಥಾನಗಳಿಗೆ ಅನುದಾನ ಮಂಜೂರುಗೊಳಿಸಿದ್ದಾರೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸುಳ್ಯದ ಜನತೆಯ ಸುದೀರ್ಘ ನಿರೀಕ್ಷೆಯ ಫಲವಾಗಿ ಕಳೆದ ಬಾರಿ ಅವರು ಬಂದರು, ಮೀನುಗಾರಿಕಾ ಮತ್ತು ಒಳನಾಡು ಸಾರಿಗೆ ಸಚಿವರಾದರು.
ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆಯ ಬಡ ಕುಟುಂಬದ ಚನಿಯ – ಹುಕ್ರು ದಂಪತಿಯ ಹಿರಿಯ ಪುತ್ರರಾಗಿ 1-7-1964 ರಂದು ಜನಿಸಿದ ಅಂಗಾರರು ನಾರ್ಣಕಜೆಯಲ್ಲಿ, ಸುಳ್ಯ ಸರಕಾರಿ ಪ್ರೌಢಶಾಲೆಯಲ್ಲಿ, ಕುಕ್ಕುಜಡ್ಕ ಪ್ರೌಢಶಾಲೆಯಲ್ಲಿ ಕಲಿತವರು. 9 ನೇ ತರಗತಿಯನ್ನು ಪೂರ್ಣಗೊಳಿಸಲಾಗದೆ ಅರ್ಧದಲ್ಲೆ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾಯಿತು.
ಅಂಗಾರರಿಗೆ ಇಬ್ಬರು ತಮ್ಮಂದಿರು. ಒಬ್ಬರು ತಂಗಿ ಇದ್ದಾರೆ. ಓರ್ವ ತಮ್ಮ ಬಾಬುರವರು ಅಂಚೆ ಇಲಾಖೆಯಲ್ಲಿ ಮೇಲ್ವಿಚಾರಕರಾಗಿದ್ದು, ದಾಸನಕಜೆಯ ಮನೆಯಲ್ಲಿ ನೆಲೆಸಿದ್ದಾರೆ. 2ನೇ ತಮ್ಮ ಸಂಜೀವರವರು ಕಡಬದಲ್ಲಿದ್ದಾರೆ.
ಅಂಗಾರರ ಪತ್ನಿ ವೇದಾವತಿ ಉಡುಪಿಯ ಕಟಪಾಡಿಯವರು. ಅಂಗಾರರು ಶಾಸಕರಾಗಿರುವಾಗ ಅವರ ಮದುವೆಯಾಯಿತು. ದಂಪತಿಗೆ ಇಬ್ಬರು ಮಕ್ಕಳು. ಪುತ್ರ ಗೌತಮ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿದ್ದಾರೆ. ಪುತ್ರಿ ಪೂಜಾಶ್ರೀ ಆಯುರ್ವೇದ ಮೆಡಿಕಲ್ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.
ಆರೆಸ್ಸೆಸ್ ಗರಡಿಯಲ್ಲಿ ಪಳಗಿ, ಅದರ ವಿಚಾರಗಳಿಗೆ ಬದ್ಧರಾಗಿರುವವರೇ ಅಭ್ಯರ್ಥಿಯಾಗಬೇಕೆಂಬ ಚಿಂತನೆ ನಡೆಸಿದ ಬಿಜೆಪಿ ಪರಿವಾರ 1989 ರ ವೇಳೆಗಾಗಲೇ ಆರೆಸ್ಸೆಸ್ ಸ್ವಯಂ ಸೇವಕ ನೆಲ್ಲೂರು ಕೆಮ್ರಾಜೆ ಗ್ರಾಮದ ಎಸ್.ಅಂಗಾರರನ್ನು ಅಭ್ಯರ್ಥಿಯನ್ನಾಗಿ ರೂಪಿಸಿ ಆಗಿತ್ತು. 1979 ರಿಂದಲೇ ಆರೆಸ್ಸೆಸ್ ಶಾಖೆಗೆ ಹೋಗತೊಡಗಿದ್ದ ಅಂಗಾರರು ಪ್ರಾಥಮಿಕ ಶಿಕ್ಷಾ ವರ್ಗ ಪೂರೈಸಿದರು. 1987 ರಲ್ಲಿ ಮಂಡಲ ಪಂಚಾಯತ್ ಚುನಾವಣೆ ನಡೆದಾಗ ನೆಲ್ಲೂರು ಕೆಮ್ರಾಜೆ ಮಂಡಲ ಪಂಚಾಯತ್‌ನ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡರು.
ಆರೆಸ್ಸೆಸ್‌ನ ಸ್ವಯಂ ಸೇವಕನಾಗಿ ಸಕ್ರಿಯರಾಗಿದ್ದರು.
1989 ರ ಚುನಾವಣೆಗೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಯಿತು. ಅದರಲ್ಲಿ ಕಾಂಗ್ರೆಸ್ ನ ಕೆ. ಕುಶಲರ ಎದುರು 5840 ಮತಗಳ ಅಂತರದಿಂದ ಅಂಗಾರರು ಪರಾಭವಗೊಂಡರು. ಆ ಬಳಿಕ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ಪೂಣಾವಧಿ ಕಾರ್ಯಕರ್ತನಾಗಿ ದುಡಿಯಲು ಆರಂಭಿಸಿದ ಅಂಗಾರರು ಇಡೀ ಕ್ಷೇತ್ರದ ಪ್ರತೀ ಬೂತ್‌ಗೆ ಪ್ರವಾಸ ಹಾಗೂ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಂಡರು.
ಮುಂದೆ 1994 ರಲ್ಲಿ ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ಸ್ಪರ್ಧಿಸಿ ಕಾಂಗ್ರೆಸ್‌ನ ಎರಡು ಅವಧಿಯ ಶಾಸಕ ಕೆ.ಕುಶಲರನ್ನು 15044  ಮತಗಳ ಅಂತರದಿಂದ ಮಣಿಸಿ ಪ್ರಥಮ ಬಾರಿಗೆ ಶಾಸಕರಾಗುವಲ್ಲಿ ಯಶಸ್ವಿಯಾದರು.
ಅನಂತರ 1999 ರಲ್ಲಿ, 2004ರಲ್ಲಿ, 2009 ರಲ್ಲಿ, 2013 ರಲ್ಲಿ ಮತ್ತು 2014 ರಲ್ಲಿ ಹೀಗೆ 6 ಬಾರಿ ಸತತವಾಗಿ ಗೆದ್ದರು. ಅದರಲ್ಲೂ 2013 ರಲ್ಲಿ ದ.ಕ. ಜಿಲ್ಲೆಯ 8 ವಿಧಾನಸಭಾ ಸ್ಥಾನಗಳಲ್ಲಿ 7 ನ್ನು ಕಾಂಗ್ರೆಸ್ ಗೆದ್ದು, ಸುಳ್ಯವನ್ನು ಮಾತ್ರ ಬಿಜೆಪಿ ಗೆದ್ದುಕೊಂಡಾಗ ಇಡೀ ರಾಜ್ಯ ಅಂಗಾರರತ್ತ ತಿರುಗಿ ನೋಡಿತು. 2018 ರಲ್ಲಿ ಗೆದ್ದ ಜಿಲ್ಲಾ ಬಿಜೆಪಿಯ 7 ಶಾಸಕರಲ್ಲಿ 6 ಮಂದಿ ಪ್ರಥಮ ಬಾರಿ ಶಾಸಕರಾದವರು.
ಸುಳ್ಯದ ಬಂಗಾರ ಎಂದೇ ಕರೆಯಲ್ಪಡುವ ಅಂಗಾರರು ಮತ್ತೊಮ್ಮೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವುದು ಕ್ಷೇತ್ರದ ಜನತೆಗೂ ಹರ್ಷ ತಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.