ನಗರ ಪಂಚಾಯತ್‌ನಲ್ಲಿ ಉದ್ದಿಮೆ ಪರವಾನಿಗೆ ನವೀಕರಣ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ಕುರಿತು ವರ್ತಕರೊಂದಿಗೆ ಚರ್ಚೆ

Advt_Headding_Middle

ಸುಳ್ಯ ನಗರ ಪಂಚಾಯತ್ ಸಭಾಭವನದಲ್ಲಿ ನ.ಪಂ. ವತಿಯಿಂದ ಇಂದು ವರ್ತಕರ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ನಗರವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಪಡೆಯುವ ಕುರಿತು, ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತಲ್ಲದೆ, ಪ್ರತಿ ಹೋಟೆಲ್‌ನವರು ಹಾಗೂ ಎಲ್ಲಾ ತರಹದ ಮಾಂಸ ಮಾರಾಟ ಮಾಡುವವರು ಕಡ್ಡಾಯವಾಗಿ ಇಂಗುಗುಂಡಿಯನ್ನು ರಚಿಸುವ ಕುರಿತು, ಘನತ್ಯಾಜ್ಯ ವಿಲೇವಾರಿ ಕುರಿತು, ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆಯುವ ಕುರಿತು ನಿರ್ಧರಿಸಲಾಯಿತು.


ಸಭೆಯ ಆರಂಭದಲ್ಲಿ ಮಾತನಾಡಿದ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಕಳೆದ ಎರಡು ವರ್ಷಗಳಿಂದ ಕೋವಿಡ್ – ೧೯ ರ ಹಿನ್ನೆಲೆಯಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದು, ಪ್ರಸ್ತುತ ಸಂದರ್ಭದಲ್ಲಿ ನಗರ ಪಂಚಾಯತ್ ವತಿಯಿಂದ ಕೋವಿಡ್ ನಿಯಂತ್ರಣಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದ್ದು ಇದರಿಂದ ಪ್ರಯೋಜನ ಕೂಡ ಕಂಡುಬಂದಿದೆ. ಇದಕ್ಕಾಗಿ ನಗರದ ಎಲ್ಲಾ ಜನತೆ ಪರಿಪೂರ್ಣ ಸಹಕಾರವನ್ನು ನೀಡಿದ್ದಾರೆ. ಇದೀಗ ವ್ಯಾಕ್ಸಿನ್ ಗಳ ಕೊರತೆಯೂ ಇಲ್ಲದಿರುವ ಕಾರಣ ವ್ಯಾಕ್ಸಿನ್ ಕೊಡುವುದರಲ್ಲಿ ಕೂಡ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ಹೇಳಿದರು.

ನಂತರ ಚರ್ಚೆ ಪ್ರಾರಂಭವಾದಾಗ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ್ ರೈ ಮಾತನಾಡಿ, “ನಗರ ಆಡಳಿತಕ್ಕೆ ಸುಳ್ಯದ ವರ್ತಕರು ಸದಾ ಸಹಕರಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಗರ ಆಡಳಿತ ವತಿಯಿಂದಲೂ ಸಹಕಾರ ಬೇಕಾಗಿದೆ ಎಂದು ಹೇಳಿದರು. ಪ್ರಸ್ತುತ ಲಾಕ್ ಡೌನ್ ನಿಂದಾಗಿ ಸಾರ್ವಜನಿಕರು ಹಾಗೂ ವರ್ತಕರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಿ ಇದೀಗ ವಾರಂತ್ಯದ ಕರ್ಫ್ಯೂ ನಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ವಾರಾಂತ್ಯದ ಕರ್ಫ್ಯೂ ವನ್ನು ಕೊನೆಗೊಳಿಸಿ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಸಹಕಾರ ನೀಡಬೇಕಾಗಿದೆ.

ಆಡಳಿತ ವ್ಯವಸ್ಥೆಯಿಂದ ಎಲ್ಲಾ ರೀತಿಯ ಕಾನೂನುಗಳು ಕೇವಲ ವರ್ತಕರಿಗೆ ಮಾತ್ರ ಆಗುತ್ತಿದೆ. ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಮಂತ್ರಿಗಳು ರಾಜಕೀಯ ನೇತಾರರು ಮೆರವಣಿಗೆಗಳನ್ನು ಮಾಡುತ್ತಿದ್ದರೆ ಯಾರು ಕೂಡ ಕೇಳುವುದಿಲ್ಲ. ಅದೇ ಒಬ್ಬ ವ್ಯಾಪಾರಸ್ಥ ತನ್ನ ಅಂಗಡಿಯನ್ನು ತೆರೆದಿಟ್ಟರೆ ಎಲ್ಲಾ ನಿಯಮಗಳನ್ನು ವರ್ತಕರಿಗೆ ತಂದು ಅವರನ್ನು ಸಂಕಷ್ಟಕ್ಕೆ ತಳ್ಳುವ ಕೆಲಸ ಆಗುತ್ತಿದೆ” ಎಂದು ಹೇಳಿದರು.


ಸುಳ್ಯದಲ್ಲಿ ನಾಲ್ಕೂವರೆ ಕೋಟಿ ರೂಪಾಯಿಗಳನ್ನು ಒಳಚರಂಡಿ ಹೆಸರಿನಲ್ಲಿ ಮಣ್ಣಿನಡಿಯಲ್ಲಿ ಹಾಕಿ ಇದೀಗ ವರ್ತಕರು ತಮ್ಮ ತಮ್ಮ ವ್ಯಾಪಾರ ಕೇಂದ್ರದಲ್ಲಿ ಇಂಗುಗುಂಡಿ ಮಾಡಿ ಅಂದರೆ ಹೇಗೆ ಎಂದು ಅವರು ಕೇಳಿದರು. ನಾವು ಪಂಚಾಯತಿಯ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಹಾಕುತ್ತಿಲ್ಲ. ಆದರೆ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಸಮಸ್ಯೆ ಬರುವಾಗ ಅದರ ಬಗ್ಗೆ ನಾವು ಚರ್ಚಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ನಂತರ ಮಾತನಾಡಿದ ನ.ಪಂ. ಅಧ್ಯಕ್ಷ ವಿನಯ ಕಂದಡ್ಕರವರು “ತುಂಬಾ ಜನ ಲೈಸೆನ್ಸ್ ಬಗ್ಗೆ ಅಪ್ಲಿಕೇಶನನ್ನು ಕೂಡ ಕೊಡದೆ ಹೊಸ ಅಂಗಡಿಗಳನ್ನು ಪ್ರಾರಂಭಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಮಾಂಸ ಮೀನಿನ ಅಂಗಡಿಗಳು, ಹೋಟೆಲ್‌ಗಳು ಕಡ್ಡಾಯವಾಗಿ ನಗರ ಪಂಚಾಯಿತಿನಿಂದ ಅನುಮತಿ ಪಡೆದ ನಂತರವೇ ಕೆಲಸ ಕಾರ್ಯ ಆರಂಭಿಸಬೇಕಾಗಿದೆ. ಇಲ್ಲದಿದ್ದಲ್ಲಿ ಸ್ಥಳೀಯವಾಗಿರುವ ಜನರಿಗೆ ಇದರಿಂದ ತೊಡಕುಂಟಾದರೆ ಯಾರು ಜವಾಬ್ದಾರರು” ಎಂದು ಕೇಳಿದರು. “ಆದ್ದರಿಂದ ನಗರದ ಎಲ್ಲಾ ಉದ್ಯಮ ಕ್ಷೇತ್ರದವರು ತಮ್ಮ ತಮ್ಮ ಲೈಸನ್ಸು ಗಳನ್ನು ರಿನಿವಲ್ ಮಾಡಿಕೊಳ್ಳಬೇಕು. ಕೋವಿಡ್ ಹಿನ್ನೆಲೆಯಲ್ಲಿ ಇದಕ್ಕೆ ಸಹಕಾರ ವಾಗುವ ನಿಟ್ಟಿನಲ್ಲಿ ೨೦೨೧ – ೨೨ ನೇ ಸಾಲಿನ ಕಟ್ಟಡದ ತೆರಿಗೆಯಲ್ಲಿ ಕನ್ಸಿಷನ್ ನೀಡಲಾಗಿದ್ದು ಪರವಾನಿಗೆಯನ್ನು ರಿನಿವಲ್ ಮಾಡಲು ಅವಕಾಶವಿದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿ ಎಂ ಬಿ ಸದಾಶಿವ ಮಾತನಾಡಿ “ಸುಳ್ಯದ ಎಲ್ಲಾ ಉದ್ಯಮಿಗಳಿಗೆ ತಮ್ಮ ತಮ್ಮ ವ್ಯಾಪಾರ ಮಳಿಗೆಗಳು ಲೈಸೆನ್ಸ್ ಗಳನ್ನು ರಿನಿವಲ್ ಮಾಡಿಕೊಡಲು ನಗರಪಂಚಾಯತ್ ನವರ ಸಹಕಾರ ಬೇಕಾಗಿದೆ. ಕಟ್ಟಡ ತೆರಿಗೆಯಲ್ಲಿ ವಿನಾಯಿತಿ ನೀಡಿ ಎಲ್ಲರಿಗೂ ಪರವಾನಿಗೆ ರಿನೀವಲ್ ಮಾಡಲು ಅವಕಾಶ ನೀಡಿ ಎಂದು ಹೇಳಿದರು. ಸಾಧ್ಯವಾದರೆ ಕಳೆದ ಲಾಕ್ಡೌನ್ ಸಂದರ್ಭದ ತೆರಿಗೆ ಹಣವನ್ನು ಮನ್ನಾ ಮಾಡಿ ಎಂದು ಸಾಮಾಜಿಕ ಹೋರಾಟಗಾರ ಡಿ.ಎಂ.ಶಾರಿಕ್ ಧ್ವನಿಗೂಡಿಸಿದರು.
ಈ ಸಂದರ್ಭದಲ್ಲಿ ಸುಳ್ಯದ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ದೀರ್ಘ ಚರ್ಚೆಗಳು ನಡೆದು ಬೀದಿ ಬದಿ ವ್ಯಾಪಾರಗಳಿಂದಾಗಿ ಸುಳ್ಯದ ಅನೇಕ ವರ್ತಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ನಿಯಮಗಳನ್ನು ನಗರ ಪಂಚಾಯತ್ ವಿಧಿಸುವುದಿಲ್ಲ. ಎಲ್ಲಾ ನಿಯಮಗಳನ್ನು ವರ್ತಕರ ಮೇಲೆ ವಿಧಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ಸುಧಾಕರ್ ರೈ ಹೇಳಿದರು. ಬೀದಿಬದಿ ವ್ಯಾಪಾರಸ್ಥರ ಮೇಲೆ ಪಾಪದವರೆಂದು ಕರುಣೆ ತೋರಿಸುವ ಬದಲು ಅವರಿಗೆ ಕೆಲಸಗಳನ್ನು ನೀಡಿ ಅದರಿಂದ ಜೀವನ ನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಅವರು ಹೇಳಿದರು. ಇಲ್ಲದಿದ್ದರೆ ಅವರಿಗೆ ವ್ಯಾಪಾರ ಮಾಡಿ ಜೀವನ ನಡೆಸಬೇಕೆಂದು ಕಡ್ಡಾಯವಾಗಿ ಇದ್ದರೆ ಎಪಿಎಂಸಿ ಮಾರುಕಟ್ಟೆಯಲ್ಲಿ ದೈನಂದಿನ ವ್ಯಾಪಾರ ನಡೆಸಲು ಅನುವು ಮಾಡಿಕೊಡಿ ಎಂದು ಹೇಳಿದರು. ಇವರ ಬೀದಿಬದಿ ವ್ಯಾಪಾರದಿಂದ ಅನೇಕ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗಿದೆ ಎಂದು ಕೂಡ ಅವರು ಹೇಳಿದರು. ಇದನ್ನು ಸಿಎ ಗಣೇಶ್ ಭಟ್ ರವರು ಪ್ರತಿಪಾದಿಸಿದರು.
ನಂತರ ಸಭೆಯ ಎರಡನೆಯ ಅಜೆಂಡಾ ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಚರ್ಚೆಗಳು ಆರಂಭವಾಗಿ ನಗರ ಪಂಚಾಯತ್ ಅಧ್ಯಕ್ಷರು, ಸುಳ್ಯದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ಕೇಳಿಕೊಂಡರು. ಯಾರು ಕೂಡ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದು. ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದಾದರೆ ನೂರು ಮೈಕ್ರೋಫಿನ್ ಗುಣಮಟ್ಟದ ಪ್ಲಾಸ್ಟಿಕ್ಕನ್ನು ಬಳಸಬೇಕಾಗಿದೆ. ಅತ್ಯಂತ ಕೆಳಮಟ್ಟದ ಪ್ಲಾಸ್ಟಿಕ್ಕು ಗಳನ್ನು ಬಳಸಿ ಇಂದು ನಗರ ಮತ್ತು ಪರಿಸರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು. ಪ್ಲಾಸ್ಟಿಕ್ ನಿರ್ಮೂಲನೆ ಆಗಬೇಕಾದರೆ ಸುಳ್ಯದಲ್ಲಿ ವರ್ತಕರ ಸಹಕಾರ ಅಗತ್ಯ ಎಂದು ಹೇಳಿದಾಗ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ ಮಾತನಾಡಿ ಪ್ಲಾಸ್ಟಿಕನ್ನು ನಿಲ್ಲಿಸುವುದಾದರೆ ಅದನ್ನು ತಯಾರಿಸುವ ಕಂಪನಿಯನ್ನೇ ಬಂದು ಮಾಡಿಸಿ ಎಂದು ಹೇಳಿದರು. ನೀವು ಮೇಲಿನಿಂದಲೇ ಇದನ್ನು ತಡೆಯುವುದು ಒಳ್ಳೆಯದು. ಅದು ಬಿಟ್ಟು ಅಂಗಡಿಯವರು ಪ್ಲಾಸ್ಟಿಕ್ ಚೀಲವನ್ನು ಕೊಡಬಾರದು ಎಂದು ಹೇಳಿದರೆ ಸರಿಯಾಗುವುದಿಲ್ಲ ಎಂದು ಹೇಳಿದರು.
ಇಂಗು ಗುಂಡಿ ಕಡ್ಡಾಯ ಎಂಬ ವಿಷಯಕ್ಕೆ ಪ್ರಶ್ನಿಸಿದ ಸುಧಾಕರ ರೈ ಸಣ್ಣಪುಟ್ಟ ವ್ಯಾಪಾರ ವ್ಯಾಪಾರಸ್ಥರು ಅವರವರ ವ್ಯಾಪಾರ ಮಳಿಗೆಗಳಲ್ಲಿ ಇಂಗು ಗುಂಡಿ ರಚಿಸುವುದಾದರೆ ಹೇಗೆ ಎಂದು ಕೇಳಿದರು. ಸ್ಥಳಾವಕಾಶ ವಿಲ್ಲದಿದ್ದಲ್ಲಿ ಇಂಗುಗುಂಡಿಯನ್ನು ನಿರ್ಮಾಣ ಮಾಡುವುದು ಅಸಾಧ್ಯ ಎಂದಾಗ ಇದಕ್ಕೆ ಉತ್ತರಿಸಿದ ನಗರ ಪಂಚಾಯತ್ ಅಧ್ಯಕ್ಷರು ಸುಳ್ಯದಲ್ಲಿ ದೊಡ್ಡ ದೊಡ್ಡ ಹೋಟೆಲ್‌ಗಳು, ಮಾಂಸದ ಅಂಗಡಿಗಳು ಕಡ್ಡಾಯವಾಗಿ ಇಂಗುಗುಂಡಿಯನ್ನು ಮಾಡಲೇಬೇಕು ಎಂದು ಹೇಳಿದರು. ಇಲ್ಲದಿದ್ದಲ್ಲಿ ಕೊಳಚೆ ನೀರು ಗಳು ಸುಳ್ಯದ ೪ ಬದಿಗಳಿಂದ ಪಯಸ್ವಿನಿ ನದಿಗೆ ಸೇರುತ್ತಿದ್ದು ನದಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಹೇಳಿದರು.
ನಗರ ಬೀದಿಗಳಲ್ಲಿ ಚರಂಡಿ ವ್ಯವಸ್ಥೆಗಳು, ಫುಟ್ಪಾತ್ ಗಳು ಅವೈಜ್ಞಾನಿಕ ದಿಂದ ಕೂಡಿದ್ದು ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ ಎಂದು ರೂಪ ಬಾರ್ ಮಾಲಕ ಸುಂದರ ರಾವ್ ಹೇಳಿದರು. ಮೊದಲು ಅದನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಘನತ್ಯಾಜ್ಯ ವಿಲೇವಾರಿ ಕುರಿತು ಮಾತು ಆರಂಭಿಸಿದ ಅಧ್ಯಕ್ಷರು ಈಗಾಗಲೇ ಕಸದಿಂದ ಗೊಬ್ಬರ ಮಾಡುವ ಯಂತ್ರವನ್ನು ತರಿಸಲಾಗಿದೆ. ಆದರೆ ಅದರ ಕೆಪಾಸಿಟಿ ಕಡಿಮೆ ಇರುವ ಕಾರಣ ಅಲ್ಪಮಟ್ಟದ ತೊಂದರೆಯಾಗಿದೆ ಎಂದು ಹೇಳಿದರು. ಕಲ್ಚರ್ಪೆ ಯಲ್ಲಿ ಕಸವನ್ನು ಬರ್ನಿಂಗ್ ಮಾಡುವ ಕಾರ್ಯ ಮಳೆಗಾಲ ಕಳೆದ ಕೂಡಲೇ ಆರಂಭಿಸುತ್ತೇವೆ. ನಗರದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಮಯ ಕಸ ಸಂಗ್ರಹದ ವಾಹನ ಬರುತ್ತಿದ್ದರೂ ಕೆಲವು ಅಂಗಡಿಯವರು ಅದಕ್ಕೆ ಸ್ಪಂದಿಸುತ್ತಿಲ್ಲ. ಕಸದ ವಾಹನಕ್ಕೆ ಕಸವನ್ನು ಸುರಿಯದೆ ರಾತ್ರಿ ಸಮಯ ರಸ್ತೆ ಬದಿಯಲ್ಲಿ ಇಡುವ ದೃಶ್ಯ ಸಿಸಿಟಿವಿ ಇಂದ ಸಂಗ್ರಹಿಸಿದ್ದು ಮುಂದಿನ ದಿನಗಳಲ್ಲಿ ಭಾರಿ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಆರೋಗ್ಯ ನಿರೀಕ್ಷಕ ಲಿಂಗರಾಜು ಸರಕಾರದಿಂದ ಈಗಾಗಲೇ ಸುತ್ತೋಲೆ ಬಂದಿದ್ದು ಮೂರು ಬಾರಿ ದಂಡ ವಿಧಿಸಿದ ನಂತರ ಅವರ ಮೇಲೆ ಕೇಸು ದಾಖಲಿಸುವಂತೆ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಹೇಳಿದರು.
ಕಸದ ವಾಹನಕ್ಕೆ ಕಸವನ್ನು ನೀಡುವ ಸಂದರ್ಭ ಒಣ ಕಸ ಮತ್ತು ಹಸಿ ಕಸವನ್ನು ವಿಂಗಡಿಸಿ ಕೊಡುವಂತೆ ಅವರು ಕೇಳಿಕೊಂಡರು. ಈ ರೀತಿ ಸಹಕರಿಸಿ ದಿದ್ದಲ್ಲಿ ಸಿಬ್ಬಂದಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಸಮಯ ಕೂಡ ವ್ಯರ್ಥವಾಗುತ್ತದೆ ಎಂದು ಹೇಳಿದರು. ಈ ವೇಳೆ ಬಾರ್ಬರ್ ಅಸೋಸಿಯೇಷನ್ ಕಾರ್ಯದರ್ಶಿ ಅವಿನಾಶ್ ಮಾತನಾಡಿ, ನಮ್ಮ ಸೆಲೂನ್‌ಗಳಿಂದ ವಾರ್ಷಿಕ ೫೦೦ ರಿಂದ ೬೦೦ ರೂ. ಕಸ ವಿಲೇವಾರಿ ಶುಲ್ಕ ಪಡೆಯುತ್ತೀರಿ. ಆದರೆ ಸಂಸ್ಥೆಗಳಿಂದ ಕೂದಲುಗಳನ್ನು ಮತ್ತು ಕಸಗಳನ್ನು ೧೫ ದಿನಕ್ಕೊಮ್ಮೆಯಾದರೂ ಕೊಂಡೊಯ್ಯಬೇಕು. ಇದೀಗ ನಾವು ಹೇರ್ ಕಟಿಂಗ್ ಮಾಡುವ ಸಂದರ್ಭ ಬಳಸುವ ಬಟ್ಟೆಗಳ ರಾಶಿ ಹೆಚ್ಚಾಗಿದ್ದು ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ” ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ನಿರೀಕ್ಷಕರು “ಇನ್ನು ಮುಂದೆ ವಾರ ವಾರ ಬಂದು ಸಂಗ್ರಹಿಸುವುದಾಗಿ” ಭರವಸೆ ನೀಡಿದರು.
ಸಭೆಯಲ್ಲಿ ಕೊನೆಯ ಅಜೆಂಡಾ ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆಯುವ ಕುರಿತು ಚರ್ಚೆಗಳು ನಡೆದಾಗ ಎಂ.ಬಿ.ಸದಾಶಿವರು ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡುವ ಬಗ್ಗೆ ಮುತುವರ್ಜಿ ವಹಿಸಬೇಕು. ಗ್ರಾಹಕರೊಂದಿಗೆ ಹೆಚ್ಚಾಗಿ ಇವರುಗಳು ಬೆರೆಯುತ್ತಿದ್ದು ನಗರ ಪಂಚಾಯತ್ ವತಿಯಿಂದ ವ್ಯಾಪಾರ ಮಳಿಗೆಗಳು ಸಿಬ್ಬಂದಿಗಳಿಗೆ ಸುಳ್ಯ ನಗರದಲ್ಲಿ ಲಯನ್ಸ್ ಸಭಾಭವನ, ಹಾಸ್ಟೆಲ್ಗಳು , ಎಪಿಎಂಸಿ ಸಭಾಭವನ ಮುಂತಾದ ಕಡೆಗಳಲ್ಲಿ ಅವರಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕೇಳಿಕೊಂಡರು.
ಸಭೆಯಲ್ಲಿ ಸುಳ್ಯದ ಹೋಟೆಲ್ ವರ್ತಕರು, ಮಾಂಸದ ಅಂಗಡಿ ಮಾಲಕರು, ವ್ಯಾಪಾರಿಗಳು, ರೆಡಿಮೇಡ್ ಮತ್ತು ಟೆಕ್ಸ್ಟೈಲ್ಸ್ ವ್ಯಾಪಾರಿಗಳು, ಫುಟ್ವೇರ್ ಅಂಗಡಿ ಮಾಲಕರು, ಸೆಲೂನ್ ಅಂಗಡಿ ಮಾಲಕರು, ತರಕಾರಿ ಅಂಗಡಿಗಳ ಮಾಲಕರು ಉಪಸ್ಥಿತರಿದ್ದರು. ಗ್ಯಾರೇಜ್ ವ್ಯಾಪಾರಸ್ಥರು ಸಭೆಯಲ್ಲಿ ಗೈರು ಹಾಜರಾಗಿದ್ದರು. ವೇದಿಕೆಯಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ್ ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಕ ಲಿಂಗರಾಜು ಸ್ವಾಗತಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.