Breaking News

ಕೋಲ್ಚಾರು ಶಾಲೆಯಲ್ಲಿ ನಡೆದ ತಾಲಿಬಾನ್ ಪದ ಬಳಕೆ ಆರೋಪ ಪ್ರಕರಣ ಬಗ್ಗೆ ಪೋಷಕರ ಸಭೆ

Advt_Headding_Middle

 

 

ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಮಕ್ಷಮದಲ್ಲಿ ಪ್ರಕರಣ ಸುಖಾಂತ್ಯ

ಎಸ್.ಡಿ.ಎಂ.ಸಿ.ಅಧ್ಯಕ್ಷರಿಗೆ ಪೋಷಕರ ಬೆಂಬಲ- ರಾಜೀನಾಮೆ ಅಥವಾ ಕ್ಷಮೆ ಕೇಳಬೇಕಾದ ಅವಶ್ಯಕತೆಯಿಲ್ಲ

ಆಲೆಟ್ಟಿ ಗ್ರಾಮದ ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಫುಟ್ ಬಾಲ್ ಆಡುತ್ತಿದ್ದ ಯುವಕರ ಮತ್ತು ಎಸ್.ಡಿ.ಎಂ.ಸಿ.ಅಧ್ಯಕ್ಷ ಸುದರ್ಶನ ಪಾತಿಕಲ್ಲು ರವರ ಮಧ್ಯೆ ಸೆ.17 ರಂದು ನಡೆದ ಮಾತಿನ ಚಕಮಕಿ ಹಾಗೂ ತಾಲಿಬಾನಿ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಪ್ರಕರಣದ ಬಗ್ಗೆ ಪೋಲಿಸ್ ಠಾಣೆಯ ಮೆಟ್ಟಿಲೇರಿ ದೂರು ದಾಖಲಾಗಿ ಬಳಿಕ ಪರ ವಿರೋಧ ಪತ್ರಿಕಾಗೋಷ್ಠಿ ನಡೆದು ವಾಗ್ವಾದ ಉಂಟಾಗಿತ್ತು. ಈ ಘಟನೆ
ಕುರಿತು ಸೆ.30 ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ.ಮಹಾದೇವ ರವರ ಆದೇಶದಂತೆ ಶಾಲೆಯ ಪೋಷಕರ ಸಭೆಯನ್ನು ಕರೆದು ಎಸ್. ಡಿ.ಎಂ.ಸಿ.ಅಧ್ಯಕ್ಷರು ಮತ್ತು ಸದಸ್ಯರ ಸಮಕ್ಷಮದಲ್ಲಿ ಪೋಷಕರ ಜತೆ ಮಾತುಕತೆ ನಡೆಸಿ ಅಂತಿಮವಾಗಿ ಈಗ ಶಾಲೆಗೆ ಬಾರದೆ ಹೊರಗುಳಿದ ಮಕ್ಕಳನ್ನು ಮತ್ತೇ ಅದೇ ಶಾಲೆಗೆ ಕಳುಹಿಸುವಂತೆಯೂ ಹಾಗೂ ಇತ್ತಂಡದಿಂದ ನೀಡಲಾಗಿರುವ ದೂರುಗಳನ್ನು ಹಿಂಪಡೆದುಕೊಳ್ಳುವಂತೆ ಮತ್ತು ನಾಲ್ಕು ಮಂದಿ ಎಸ್. ಡಿ.ಎಂ.ಸಿ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಪೋಷಕರು ರಾಜೀನಾಮೆಯನ್ನು ಹಿಂತೆಗೆದುಕೊಳ್ಳಬೇಕು ಎಂಬ ತೀರ್ಮಾನದೊಂದಿಗೆ ಶಾಲೆಯಲ್ಲಿ ನಡೆದ ಘಟನೆಯು ಅಂತಿಮವಾಗಿ ಸುಖಾಂತ್ಯ ಕಂಡಿದೆ.
ಶಿಕ್ಷಣಾಧಿಕಾರಿಯವರ ಸೂಚನೆಯಂತೆ ಪೋಷಕರ ಕಡೆಯಿಂದ ಮಾತನಾಡಿದ ಅಬ್ದುಲ್ ರೆಹಮಾನ್ ಕೊಯಿಂಗಾಜೆ ಯವರು ನಮ್ಮ ಸಮುದಾಯದ ಹುಡುಗರನ್ನು ತಾಲಿಬಾನ್ ಪದ ಬಳಸಿ ಎಸ್.ಡಿ.ಎಂ.ಸಿ.ಅಧ್ಯಕ್ಷರು ಉಲ್ಲೇಖಿಸಿರುವ ವಿಚಾರವಾಗಿ ನಮಗೆ ನೋವು ತಂದಿದೆ. ಇದೀಗ
ನಮ್ಮ ಮಕ್ಕಳು ಶಾಲೆಗೆ ಬರಲು ಭಯ ಪಡುವಂತಾಗಿದೆ. ಈ ಕಾರಣದಿಂದ ನೈತಿಕ ಹೊಣೆ ಹೊತ್ತು ಎಸ್. ಡಿ.ಎಂ.ಸಿ.ಅಧ್ಯಕ್ಷರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ನಮ್ಮಲ್ಲಿ ತಾಲಿಬಾನ್ ಪದ ಬಳಕೆ ಮಾಡಿರುವುದಕ್ಕೆ ಕ್ಷಮೆ ಯಾಚಿಸಬೇಕೆಂದು ಕೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಎಸ್.ಡಿ.ಎಂ.ಸಿ.ಅಧ್ಯಕ್ಷ ಸುದರ್ಶನ ಪಾತಿಕಲ್ಲು ರವರು ಸೆ.17 ರಂದು ನಡೆದ ಘಟನೆಯ ವಿವರ ನೀಡಿ ವೈಯುಕ್ತಿಕ ನೆಲೆಯಲ್ಲಿ ನಾನು ಕ್ಷಮೆ ಕೇಳಲು ಸಿದ್ಧನಿಲ್ಲ. ಇಲ್ಲಿ ಸೇರಿದ ಎಲ್ಲಾ ಪೋಷಕರು ರಾಜೀನಾಮೆ ಅಥವಾ ಕ್ಷಮೆ ಕೇಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರೆ ನಾನು ಅದಕ್ಕೆ ಬದ್ಧನಾಗಿದ್ದೇನೆ. ರಾಜಕೀಯ ಪಿತೂರಿಯ ನೆಪದಲ್ಲಿ ವೈಯುಕ್ತಿಕವಾಗಿ ನನ್ನ ತೇಜೋವಧೆ ಮಾಡಬೇಕೆಂಬ ದುರುದ್ದೇಶದಿಂದ ಇಷ್ಟೆಲ್ಲಾ ಬೆಳವಣಿಗೆ ನಡೆದಿದೆ.
ಎಂದು ಹೇಳಿದರು.
ಈ ಸಂದರ್ಭ ಪೋಷಕರ ಪರವಾಗಿ ಮಾತನಾಡಿದ ಪಂಚಾಯತ್ ಮಾಜಿ ಸದಸ್ಯೆ ಶ್ರೀವಾಣಿ ಕೋಲ್ಚಾರು ರವರು ಎಸ್. ಡಿ.ಎಂ.ಸಿ.ಅಧ್ಯಕ್ಷರು ಶಾಲಾ ಹಿತದೃಷ್ಟಿಯಿಂದ ಅವರ ಜವಾಬ್ದಾರಿಯುತ ಸ್ಥಾನದಲ್ಲಿರುವ ವೇಳೆ ಕರ್ತವ್ಯ ಪಾಲಿಸಿದ್ದಾರೆ. ತಾಲಿಬಾನ್ ಸಂಸ್ಕೃತಿ ನಮ್ಮದಲ್ಲ ಎಂಬ ಪದ ಬಳಕೆ ಮಾಡಿದ್ದಾರೆ ಎಂಬುದಕ್ಕೆ ಅವರ ರಾಜೀನಾಮೆ ಅಥವಾ ಕ್ಷಮೆ ಕೇಳಬೇಕೆಂದು ಹೇಳಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಇದಕ್ಕೆ ನಾವು ಒಪ್ಪುವುದಿಲ್ಲ. ಎಂದು ಅಧ್ಯಕ್ಷರ ಪರ ಬೆಂಬಲ ಸೂಚಿಸಿದರು. ಇದಕ್ಕೆ ಪೂರಕವಾಗಿ ಕರುಣಾಕರ ಹಾಸ್ಪಾರೆಯವರು ಮಾತನಾಡಿ ನೇರವಾಗಿ ಪೋಲಿಸ್ ದೂರು ನೀಡಿ ವಿಷಯವನ್ನು ದೊಡ್ಡದು ಮಾಡಿರುವುದು ಸರಿಯಲ್ಲ. ಶಾಲೆಗೆ ಬರುವ ಮಕ್ಕಳನ್ನು ತಡೆದಿದ್ದಾರೆ. ಬಂದ ಮಕ್ಕಳನ್ನು ಮತ್ತೆ ಮನೆಗೆ ವಾಪಾಸು ಕರೆದುಕೊಂಡು ಹೋಗಿದ್ದಾರೆ. ಮಕ್ಕಳ ಭಾವನೆಯ ಮೇಲೆ ವಿಷ ಬೀಜ ಬಿತ್ತುವ ಕೆಲಸ ಮಾಡಿರುವುದು ಆಕ್ಷೇಪಾರ್ಹ. ಏಕಾಏಕಿ ಸದಸ್ಯತನಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲ. ಅಧ್ಯಕ್ಷರು ಕರ್ತವ್ಯ ನಿರ್ವಹಿಸಿರುವುದರಿಂದ ರಾಜೀನಾಮೆ ಕೊಡಬೇಕಾದ ಅವಶ್ಯವಿಲ್ಲ.
ಇದಕ್ಕೆ ಪೂರಕವಾಗಿ ಹಮೀದ್ ಕುಂಭಕೋಡು ರವರು ಮಾತನಾಡಿ ಸುದರ್ಶನ ಪಾತಿಕಲ್ಲು ರವರು ನಿಯಮ ಪಾಲಿಸಿ ಹುಡುಗರಲ್ಲಿ ವಿಚಾರಿಸಿದ್ದಾರೆ.ಶಾಲೆಯ ಕಾಳಜಿಯಿಂದ ಕೆಲಸ ಮಾಡಿದ್ದಾರೆ. ಅವರು ಮಾಡಿರುವುದು ತಪ್ಪಲ್ಲ. ಪದ ಬಳಕೆಯ ವಿಚಾರವಾಗಿ ರಾಜೀನಾಮೆ ,ಕ್ಷಮೆ ಕೇಳಬೇಕೆಂದು ಒತ್ತಾಯಿಸುವುದು ಸರಿಯಲ್ಲ. ಹಾಗೂ ಒಂದು ವೇಳೆ ಸುದರ್ಶನ ಕ್ಷಮೆ ಕೇಳಬೇಕೆನ್ನುವುದಾದರೆ ಅವರ ಪರವಾಗಿ ನಾನು ನಮ್ಮ ಸಮುದಾಯದವರಲ್ಲಿ ಕ್ಷಮೆ ಕೇಳುತ್ತೇನೆಂದು ಹೇಳಿದರು.
ಶಾಲೆಯಲ್ಲಿ ಯಾವುದೇ ರಾಜಕೀಯ ಮೇಲಾಟ ನಡೆಸಲು ಅವಕಾಶವಿಲ್ಲ. ಇಲ್ಲಿಗೆ ಬರುವ ಎಲ್ಲಾ ವಿದ್ಯಾರ್ಥಿಗಳು ಸಮಾನರು.ಶಾಲೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಮಿತಿ ರಚಿಸಿ ಜವಾಬ್ದಾರಿ ನೀಡಲಾಗುತ್ತದೆ. ಸಣ್ಣಪುಟ್ಟ ವಿಚಾರಗಳು ಬಂದಾಗ ಊರಿನ ಹಿರಿಯರ ಗಣ್ಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪರಿಹರಿಸಿಕೊಂಡರೆ ಶಾಲೆಯ ಮತ್ತು ಊರಿನ ಹೆಸರು ಉಳಿಯುತ್ತದೆ. ಇಂತಹ ಕ್ಷುಲ್ಲಕ ಕಾರಣದಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಮತ್ತೆ ಪೋಷಕರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆಯಾಗಬೇಕು. ಇಲ್ಲಿ ಯಾವುದೇ ರೀತಿಯ ಭಯದ ವಾತಾವರಣ ಇರುವುದಿಲ್ಲ ಎಂದು ಶಿಕ್ಷಣಾಧಿಕಾರಿಯವರು ಉಲ್ಲೇಖಿಸಿದರು.
ಘಟನೆ ಕುರಿತು ಶಾಲಾ ಮುಖ್ಯ ಶಿಕ್ಷಕಿ ಯಶೋಧ ಗುಂಡ್ಯ ರವರು ಮಾತನಾಡಿ ನಿಗದಿಯಾಗಿದ್ದ ಎಸ್.ಡಿ.ಎಂ.ಸಿ. ಸಭೆಯನ್ನು ಶಿಕ್ಷಣಾಧಿಕಾರಿಯವರ ಆದೇಶದ ಮೇರೆಗೆ ರದ್ದುಗೊಳಿಸಲಾಗಿದೆ. ಸೆ.19 ರಂದು ನಾಲ್ಕು ಮಂದಿ ಸದಸ್ಯರು ರಾಜೀನಾಮೆ ಪತ್ರ ನೀಡಿರುತ್ತಾರೆ. ಈ ಸಂದರ್ಭ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ ಎಂದು ಮನವೊಲಿಸುವ ಪ್ರಯತ್ನ ಮಾಡಿರುತ್ತೇವೆ. ಸೆ.20 ರಿಂದ ಮಕ್ಕಳು ಶಾಲೆಗೆ ಬರಲಿಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಪಿ.ಡಿ.ಒ ಕೀರ್ತಿಪ್ರಸಾದ್, ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಸಿ.ಆರ್. ಪಿ.ಭವಾನಿಶಂಕರ , ಚಂದ್ರಶೇಖರ, ಪೋಲೀಸ್ ಸಂತೋಷ್ ನಾಯ್ಕ್, ಕಾರ್ಯದರ್ಶಿ ಸೃಜನ್ ಎಂ.ಜಿ, ದೈಹಿಕ ಶಿಕ್ಷಕ ಸತೀಶ್ ಕೊಯಿಂಗಾಜೆ, ಮುಖ್ಯ ಶಿಕ್ಷಕಿ ಯಶೋಧ ಗುಂಡ್ಯ ಉಪಸ್ಥಿತರಿದ್ದರು.ಈ ಸಂದರ್ಭ ಪೋಷಕರು, ಎಸ್.ಡಿ.ಎಂ.ಸಿ.ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.