ಪೂವಪ್ಪ ಪೂಜಾರಿ ಮುಕ್ಕೂರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

Advt_Headding_Middle

 

ಪ್ರಾಮಾಣಿಕತೆ ವ್ಯಕ್ತಿತ್ವದಿಂದ ಸಮಾಜದಲ್ಲಿ ಮನ್ನಣೆ : ಸುಬ್ರಾಯ ಭಟ್ ನೀರ್ಕಜೆ

 ಮುಕ್ಕೂರು ಅಂಚೆ ಕಚೇರಿಯ ನಿವೃತ್ತ ಪೋಸ್ಟ್ ಮ್ಯಾನ್, ಪೆರುವೋಡಿ ಶ್ರೀ ಮಾಜಿ ವಿಷ್ಣುಮೂರ್ತಿ ದೇವಾಲಯದ ಆಡಳಿತ ಸಮಿತಿ ಮಾಜಿ ಸದಸ್ಯ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪೂವಪ್ಪ ಪೂಜಾರಿ ಮುಕ್ಕೂರು ಅವರಿಗೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನ.4 ರಂದು ನಡೆಯಿತು.

ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಜನಮನ್ನಣೆಗೆ ಪಾತ್ರರಾದ ವ್ಯಕ್ತಿ ಪೂವಪ್ಪ ಪೂಜಾರಿ ಅವರು. ಅವರ ವೃತ್ತಿ ಜೀವನ, ವ್ಯಕ್ತಿತ್ವವನ್ನು ಸ್ಮರಿಸುವ ಮೂಲಕ ಅವರು ಸದಾ ಕಾಲ ನಮ್ಮೊಂದಿಗೆ ಇರಲಿದ್ದಾರೆ ಎಂದರು.

ಮುಕ್ಕೂರು ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ನುಡಿನಮನ ಸಲ್ಲಿಸಿ, ಹುಟ್ಟಿದ ಮೇಲೆ ಸಾವು ನಿಶ್ಚಿತ. ಆ ನಡುವೆ ನಾವು ಸಾಧಿಸಿರುವುದು ಶಾಶ್ವತ. ವೃತ್ತಿ, ಧಾರ್ಮಿಕ, ಸಹಕಾರ ಸಂಘದ ಮೂಲಕ ಊರಿನ ಜನರ ಜತೆಗೆ ನಿಕಟ ಸಂಬಂಧ ಹೊಂದಿದ್ದ ಪೂವಪ್ಪ ಪೂಜಾರಿ ಅವರ ಜೀವನ ಸಾರ ಎಲ್ಲರಿಗೂ ಪ್ರೇರಕವಾಗಲಿ ಎಂದರು.

ಮಂಗಳೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ನಿರ್ದೇಶಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ಪ್ರತಿಯೊಬ್ಬರನ್ನು ಗೌರವಿಸುವ ಗುಣ ಪೂವಪ್ಪ ಪೂಜಾರಿ ಅವರದ್ದಾಗಿತ್ತು. ಜಾತಿ, ಮತ ಮೀರಿದ ಸಂಬಂಧ ಹೊಂದಿದ್ದ ಅವರ ಸೇವೆ, ಸ್ನೇಹದ ಬದುಕು ನಮಗೆಲ್ಲರಿಗೂ ಮಾದರಿ ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ನಂಬಿಕೆ, ಶ್ರದ್ಧೆಯಿಂದ ಬದುಕು ಕಟ್ಟಿಕೊಂಡು ಸರ್ವರ ಪ್ರೀತಿಗೆ ಪಾತ್ರರಾದವರು ಪೂವಪ್ಪ ಪೂಜಾರಿ ಅವರು. ಮುಕ್ಕೂರು ಪರಿಸರದಲ್ಲಿ ಅಂಚೆ ಉದ್ಯೋಗಿಯಾಗಿ ಮನೆ ಮನೆಯೊಂದಿಗೆ ಅನ್ಯೋನ್ಯ ಸಂಬಂಧ ಇರಿಸಿಕೊಂಡಿದ್ದ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿ ಪಾರದರ್ಶಕ ಕೆಲಸ ನಿರ್ವಹಿಸಿದ್ದರು. ತನಗೆ ಕೊಟ್ಟ ಜವಾಬ್ದಾರಿಯ ಜತೆಗೆ ಊರಿನ ಆಗುಹೋಗುಗಳಿಗೆ ಸ್ಪಂದಿಸುವ ಗುಣ ಹೊಂದಿದ್ದರು ಎಂದರು.

ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಮಾತನಾಡಿ, ಜೀವನದ ಪ್ರತಿ ಹಂತದಲ್ಲಿಯು ಆದರ್ಶಯುತ ಬದುಕು ಸಾಗಿಸಿದಾಗ ಸಮಾಜ ನಮ್ಮನ್ನು ಸ್ಮರಿಸುತ್ತದೆ. ಆ ಕಾರ್ಯವನ್ನು ಪೂವಪ್ಪ ಪೂಜಾರಿ ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದವರು ಎಂದರು.

ಪೂವಪ್ಪ ಪೂಜಾರಿ ಮುಕ್ಕೂರು ಅವರ ಕುಟುಂಬದ ಪರವಾಗಿ ಅವರ ಪುತ್ರ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಯತೀಶ್ ಕಾನಾವು ಜಾಲು, ಜನಾರ್ದನ ಗೌಡ ಕಂಡಿಪ್ಪಾಡಿ, ಜಯಂತ ಪೂಜಾರಿ ಕೊಡಂಗೆ, ನೇಸರ ಯುವಕ ಮಂಡಲದ ಅದ್ಯಕ್ಷ ರಮೇಶ್ ಕಾನಾವು ಮೊದಲಾದವರು ಉಪಸ್ಥಿತರಿದ್ದರು.

ನೇಸರ ಯುವಕ ಮಂಡಲ ಕಾರ್ಯದರ್ಶಿ, ಶಿಕ್ಷಕ ಶಶಿಕುಮಾರ್ ಬಿ.ಎನ್.ನಿರೂಪಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ರವಿ ಕುಂಡಡ್ಕ, ಪ್ರವೀಣ್ ಬೋಳಕುಮೇರ್, ರಾಮಚಂದ್ರ ಚೆನ್ನಾವರ ಸಹಕರಿಸಿದರು.  

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.