ವನಜ ರಂಗಮನೆ ಪ್ರಶಸ್ತಿ ಪ್ರದಾನ
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ(ರಿ.)ಇದರ ಆಶ್ರಯದಲ್ಲಿ ಡಿ.11 ರಂದು,ಸಂಜೆ 5.00 ರಿಂದ ರಾತ್ರಿ 9.30 ರ ವರೆಗೆ ‘ ಯಕ್ಷಸಂಭ್ರಮ 2021’ ಮತ್ತು ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಇವರ ಅಧ್ಯಕ್ಷತೆಯಲ್ಲಿ ,ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಕೆ. ಸೀತಾರಾಮ ರೈಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರಸಿದ್ಧ ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೊ ಸಂಪಾಜೆ ಇವರಿಗೆ 2021 ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಯಕ್ಷಗಾನ ಕಲಾವಿದರಾದ ವೆಂಕಟರಾಮ ಭಟ್ ಸುಳ್ಯ ಅಭಿನಂದನಾ ನುಡಿಯನ್ನು ನುಡಿಯಲಿದ್ದಾರೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಉಪಸ್ಥಿತರಿರುತ್ತಾರೆ.
ಸಂಜೆ 5.00 ರಿಂದ 7.10 ರ ವರೆಗೆ ‘ *ಕೃಷ್ಣ- ಜಾಂಬವ’* *ಯಕ್ಷಗಾನ ತಾಳಮದ್ದಳೆ* ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ,ಮದ್ದಳೆ ಅಕ್ಷತ್ ರಾವ್ ವಿಟ್ಲ,ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಮುಮ್ಮೇಳದಲ್ಲಿ ಜಾಂಬವನಾಗಿ ಜಬ್ಬಾರ್ ಸಮೊ ಸಂಪಾಜೆ , ಕೃಷ್ಣನಾಗಿ
ಸದಾಶಿವ ಆಳ್ವ ತಲಪಾಡಿ,ಬಲರಾಮನಾಗಿ ವೆಂಕಟರಮಣ ಭಟ್ ಸುಳ್ಯ ಭಾಗವಹಿಸಲಿದ್ದಾರೆ.
ರಾತ್ರಿ 8.15 ರಿಂದ 9.30 ರ ವರೆಗೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಕಾಸರಗೋಡು ಇವರಿಂದ,ರಮೇಶ್ ಕಾಸರಗೋಡು ನಿರ್ದೇಶನದಲ್ಲಿ ‘ *ನರಕಾಸುರ ವಧೆ’* ತೆಂಕುತಿಟ್ಟು *ಯಕ್ಷಗಾನ ಬೊಂಬೆಯಾಟ* ಪ್ರದರ್ಶನಗೊಳ್ಳಲಿದೆ.
ಕೋವಿಡ್-19 ನಿಯಮ ಪಾಲನೆ ಕಡ್ಡಾಯವಾಗಿದ್ದು,ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.