ಜಯನಗರ : ರಸ್ತೆಗೆ ಸಂಬಂಧಿಸಿ ಮೂರು ಮನೆಯವರ ಕಲಹ – ಅಧಿಕಾರಿಗಳ ಮತ್ತು ಮುಖಂಡರ ಸಮ್ಮುಖದಲ್ಲಿ ಇತ್ಯರ್ಥ

Advt_Headding_Middle
Advt_Headding_Middle

 

 

ಆರು ತಿಂಗಳ ಹಿಂದೆ ಸುಳ್ಯದ ಜಯನಗರ ರುದ್ರಭೂಮಿ ಸಮೀಪ ಸತೀಶ ಪೂಜಾರಿ ಹಾಗೂ ಸ್ಥಳೀಯ ಎರಡು ಮನೆಯವರ ಮಧ್ಯೆ ರಸ್ತೆಗೆ ಸಂಬಂಧಿಸಿ ಗಲಾಟೆ ನಡೆದು ನಂತರ ಸುಳ್ಯ ಪೊಲೀಸರ ಮಧ್ಯಪ್ರವೇಶದಿಂದ ಇತ್ಯರ್ಥ ಗೊಂಡಿತ್ತು.
ಇದೀಗ ಅದೇ ರಸ್ತೆಗೆ ಸಂಬಂಧಿಸಿ ದ.4 ರಂದು ಬೆಳಗ್ಗಿನಿಂದ ಮತ್ತೆ ಮೂರು ಕುಟುಂಬಸ್ಥರ ನಡುವೆ ಕಲಹ ಉಂಟಾಗಿದ್ದು ಮತ್ತೆ ಪೊಲೀಸರು, ನಗರ ಪಂಚಾಯತ್ ಅಧಿಕಾರಿಗಳು, ತಾಲೂಕು ಆಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ಘಟನಾ ಸ್ಥಳಕ್ಕೆ ಬಂದು ಹರಸಾಹಸಪಟ್ಟು ಮತ್ತೆ ಕಲಹವನ್ನು ಇತ್ಯರ್ಥಪಡಿಸಿದ ಘಟನೆ ವರದಿಯಾಗಿದೆ.

ಘಟನೆಯ ವಿವರ :
ಜಯನಗರ ರುದ್ರಭೂಮಿ ಸಮೀಪದ ನಿವಾಸಿ ಸತೀಶ ಪೂಜಾರಿಯವರು ಕಳೆದ ಐದಾರು ವರ್ಷಗಳ ಹಿಂದೆ ತಮ್ಮ ಸ್ವಾಧೀನದಲ್ಲಿದ್ದ ಜಾಗದ ಸುಮಾರು 10 ಸೆಂಟ್ಸ್ ಸ್ಥಳವನ್ನು ಮಾಧವ ಮತ್ತು ಯೋಗೇಶ್ ಎಂಬುವರಿಗೆ 5,5 ಸೆಂಟ್ಸ್ ನಂತೆ ಮಾರಾಟ ಮಾಡಿದ್ದರು.
ಮೊದಲಿಗೆ ಎರಡು ಮನೆಗಳಿಗೆ ಒಂದೇ ದಿಕ್ಕಿನಿಂದ ರಸ್ತೆ ಇತ್ತು. ನಂತರ ಎರಡನೆಯ ಮನೆಗೆ ಸಂಪರ್ಕಿಸಲು ರಸ್ತೆಯನ್ನು ಸತೀಶ ಪೂಜಾರಿಯವರ ಮನೆಗೆ ಸಂಪರ್ಕಿಸುವ ರಸ್ತೆಯಿಂದ ತಕ್ಕಮಟ್ಟಿಗೆ ತೆಗೆಯಲಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಈ ಮೂವರಲ್ಲಿ ಆಗಾಗ ತಕರಾರು ನಡೆಯುತ್ತಿತ್ತು.
ಆರು ತಿಂಗಳ ಹಿಂದೆ ಇದೇ ರಸ್ತೆಗೆ ಅಡ್ಡಲಾಗಿ ಸತೀಶ ಪೂಜಾರಿಯವರು ಬೇಲಿ ನಿರ್ಮಿಸಿ ರಸ್ತೆಯನ್ನು ಮುಚ್ಚಿದ್ದರು. ಆ ಸಂದರ್ಭದಲ್ಲಿ ಗಲಾಟೆ ಉಂಟಾಗಿ ಪೊಲೀಸ್ ಠಾಣೆಗೆ ಪರ-ವಿರೋಧ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ವಿವಾದವನ್ನು ಸರಿಪಡಿಸಿ ಕೊಟ್ಟಿದ್ದರು.
ದ.4 ರಂದು ಬೆಳಿಗ್ಗೆ ಸತೀಶ ಪೂಜಾರಿಯವರು ಜೆಸಿಬಿ ತರಿಸಿ ಮತ್ತೆ ತಮ್ಮ ಜಾಗವನ್ನು ಸಮತಟ್ಟು ಮಾಡಲು ಮುಂದಾದಾಗ, ಯೋಗೀಶ್ ರವರ ಮನೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ತುಂಡರಿಸಲ್ಪಟ್ಟು ದೊಡ್ಡ ಮಣ್ಣಿನ ಬರೆಯ ಮೇಲೆ ನಿಂತಂತೆ ಗೋಚರಿಸುತ್ತಿತ್ತು. ಇದರಿಂದ ಕೋಪಗೊಂಡ ಯೋಗೀಶರು ಜೆಸಿಬಿ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಮತ್ತೆ ಮಾತಿನ ಚಕಮಕಿ ಆರಂಭಗೊಂಡು ರಾದ್ಧಾಂತವೇ ಸೃಷ್ಟಿಯಾಯಿತು.
ಮೊದಲಿಗೆ ಪೊಲೀಸರು ಬಂದು ಪರಸ್ಪರ ಮಾತುಕತೆ ಮೂಲಕ ಸರಿಪಡಿಸಿಕೊಳ್ಳುವಂತೆ ಹೇಳಿ ಹೋದರು. ಮತ್ತೆ ಹೆಚ್ಚಾದ ಕಲಹದಿಂದಾಗಿ ನಗರ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು, ತಾಲೂಕು ಆಡಳಿತ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬರುವಂತೆ ಆಯಿತು.
ಸತೀಶ್ ಪೂಜಾರಿಯವರ ಫೋನ್ ಕರೆಯ ಮೂಲಕ ಸ್ಥಳಕ್ಕೆ ಬಂದ ರಂಜಿತ್ ಪೂಜಾರಿ ಎರಡು ಕಡೆಗೆ ತೊಂದರೆಯಾಗದ ರೀತಿಯಲ್ಲಿ ಮಣ್ಣನ್ನು ತೆರವುಗೊಳಿಸಿ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು ಎನ್ನಲಾಗಿದೆ. ಅವರು ಸಲಹೆಯನ್ನು ನೀಡಿ ಹೋದ ಬಳಿಕ ಮತ್ತೆ ಸತೀಶ್ ಪೂಜಾರಿಯವರು ಸುಮಾರು ಐದು ಅಡಿ ಯಷ್ಟು ಮಣ್ಣನ್ನು ತೆಗೆದು ಯೋಗೀಶ್ವರ್ ಅವರ ಮನೆಗೆ ರಸ್ತೆ ಇಲ್ಲದಂತೆ ಮಾಡಿದರು ಎನ್ನಲಾಗಿದೆ. ಈ ವೇಳೆ ಯೋಗೀಶರು ಬಿ.ಜೆ.ಪಿ. ಮುಖಂಡರುಗಳಿಗೆ ವಿಷಯ ತಿಳಿಸಿದರು. ನಾಯಕರುಗಳಾದ ಹರೀಶ್ ಕಂಜಿಪಿಲಿ, ಮಹೇಶ್ ರೈ ಮೇನಾಲ, ಸುದರ್ಶನ ಪಾತಿ ಕಲ್ಲು, ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್, ಸುನಿಲ್ ಕುಮಾರ್ ಕೇರ್ಪಳ ರವರುಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದರು. ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಎರಡೂ ಕಡೆಯವರಿಗೆ ತಿಳಿಹೇಳಿ ಯಥಾಸ್ಥಿತಿಯಂತೆ ಅಗೆದು ಹಾಕಿದ್ದ ಸ್ಥಳಕ್ಕೆ ಜೆಸಿಬಿ ಮೂಲಕ ಮಣ್ಣನ್ನು ಹಾಕಿಸಿ ಮೂರು ಮನೆಯವರಿಗೆ ರಸ್ತೆ ಉಪಯೋಗಿಸಿಕೊಳ್ಳುವಂತೆ ಮಾಡಿಸಿ ಘಟನೆಯನ್ನು ಇತ್ಯರ್ಥ ಪಡಿಸಿದರು. ಒಟ್ಟಿನಲ್ಲಿ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಹರಸಾಹಸ ಪಡುವಂತಾಯಿತು.
ನಗರ ಪಂಚಾಯಿತಿ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ಆರೋಗ್ಯ ನಿರೀಕ್ಷಕ ಲಿಂಗರಾಜು, ಸುಳ್ಯ ವಿ ಎ ತಿಪ್ಪೇಶ್, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಿಲಿಟರಿ ಗ್ರೌಂಡ್ ನ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡು ವಿನಾಕಾರಣ ಪರಸ್ಪರ ಗಲಾಟೆ ಮಾಡಿಕೊಂಡು ನೀವು ಇರುವ ಮನೆಯನ್ನು ಕೂಡ ಕಳೆದುಕೊಳ್ಳಬೇಡಿ ಎಂದು ತಿಳಿಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.