ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭೆಯು ನವಂಬರ್ 25 ರಂದು ನಡೆದು ಆ ಸಭೆಯಲ್ಲಿ ವಿಸ್ತತವಾಗಿ ಚರ್ಚೆ ನಡೆದು ಡಿಸೆಂಬರ್ 5ರಂದು ಮಹಿಳಾ ಒಕ್ಕೂಟದ ಮಹಾಸಭೆಯನ್ನು ನಡೆಸುವುದಾಗಿ ದಿನಾಂಕವನ್ನು ಘೋಷಿಸಲಾಗಿತ್ತು. ಹಾಗೂ ಸಂಘದ ಸದಸ್ಯರುಗಳನ್ನು ಆಹ್ವಾನಿಸಲಾಗಿತ್ತು. ಆದರೆ ಪ್ರಸ್ತುತ ಒಕ್ಕೂಟದ ಅಧ್ಯಕ್ಷರು ಹಾಗೂ ಕೆಲವು ಪದಾಧಿಕಾರಿಗಳು ಸೇರಿಕೊಂಡು ಮಹಾಸಭೆಯ ದಿನಾಂಕವನ್ನು ಮುಂದೂಡಿದ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಈ ಮಹಾಸಭೆಯಲ್ಲಿ ಯಾವುದೇ ಮತದಾನ ಪ್ರಕ್ರಿಯೆಗಳು ಇರುವುದಿಲ್ಲ , ಮತ್ತು ಯಾರಿಗೂ ಲಾಭ ತರುವ ಉzಶ ಇರುವುದಿಲ್ಲ. ಆದರೂ ಚುನಾವಣಾ ನೀತಿಸಂಹಿತೆ ನೆಪ ಹೇಳಿ ಮಹಾಸಭೆಯನ್ನು ಮುಂದೂಡಿರುವುದನ್ನು ಖಂಡಿಸುವುದಾಗಿ ಒಕ್ಕೂಟದ ಮಾಜಿ ಅಧ್ಯಕ್ಷರುಗಳು ತಿಳಿಸಿದ್ದಾರೆ.
ಮಹಿಳಾ ಒಕ್ಕೂಟದ ಈಗಿನ ಅಧ್ಯಕ್ಷರು ಮತ್ತು ಗೌರವ ಸಲಹೆಗಾರರು ನಡೆದುಕೊಳ್ಳುವ ರೀತಿ ಪ್ರಜಾಪ್ರಭುತ್ವ ಮಾದರಿಯ ನಡೆಯಲ್ಲ ಎಂದು ಮಾಜಿ ಅಧ್ಯಕ್ಷರುಗಳಾದ ಮಹಾಲಕ್ಷ್ಮಿ ಕೊರಂಬಡ್ಕ, ಹರ್ಷಾ ಕರುಣಾಕರ, ಹರಿಣಿ ಸದಾಶಿವ, ಚಂದ್ರಾಕ್ಷ ಜೆ.ರೈ ಮತ್ತು ಪ್ರಫುಲ್ಲ ಪಿ. ರೈ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.