ಸುಳ್ಯದಲ್ಲಿ ನಡೆಯಲಿರುವ ಶೌರ್ಯ ಸಂಚಲನ ಕಾರ್ಯಕ್ರಮದ ಅಂಗವಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

Advt_Headding_Middle

 

ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾ ವಾಹಿನಿ ಸುಳ್ಯ ಪ್ರಖಂಡ ಇದರ ಆಶ್ರಯದಲ್ಲಿ ಡಿಸೆಂಬರ್ 13ರಂದು ಗೀತಾ ಜಯಂತಿ ಅಂಗವಾಗಿ ಸುಳ್ಯದಲ್ಲಿ ನಡೆಯಲಿರುವ ಶೌರ್ಯ ಸಂಚಲನ ಕಾರ್ಯಕ್ರಮದ ಕುರಿತು ಇಂದು ಸುಳ್ಯ ಪೊಲೀಸ್ ಠಾಣಾ ಸಭಾಭವನದಲ್ಲಿ ಶಾಂತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ವಹಿಸಿ ಮಾತನಾಡಿ ಶೌರ್ಯ ಸಂಚಲನ ದಿನದ ಕಾರ್ಯಕ್ರಮದಂದು ಶಾಂತಿಯನ್ನು ಕಾಪಾಡಿಕೊಳ್ಳುವಂತೆ, ಹಾಗೂ ಯಾವುದೇ ಪಂಗಡದವರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿಕೊಂಡರು.

ಸಭೆಯಲ್ಲಿ ಹಿಂದೂ ಸಂಘಟನೆ, ಮುಸ್ಲಿಂ ಸಂಘಟನೆ, ವಿವಿಧ ಸಂಘಸಂಸ್ಥೆಗಳ ಮುಖಂಡರುಗಳು ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಕಾನೂನು ಪಾಲನೆ ಪ್ರತಿಯೊಬ್ಬ ಸಾರ್ವಜನಿಕರ ಕರ್ತವ್ಯವಾಗಿದೆ. ಆಯಾಯ ಧರ್ಮದವರಿಗೆ ಅವರವರ ಧರ್ಮ, ಆಚರಣೆ, ಶ್ರೇಷ್ಠವಾಗಿದೆ. ಆದರೆ ಧರ್ಮದ ಕಾರ್ಯಕ್ರಮಗಳ ಆಚರಣೆ ಸಂದರ್ಭ ಸಮಾಜದಲ್ಲಿ ಇನ್ನೊಬ್ಬರಿಗೆ ನೋವುಂಟು ಮಾಡುವ ರೀತಿಯಲ್ಲಿ ಆಗಬಾರದು. ಸುಳ್ಯದ ಜನತೆ ಉತ್ತಮ ಗುಣ ಉಳ್ಳವರಾಗಿದ್ದಾರೆ. ನಾವು ನಮ್ಮ ಊರಿನಲ್ಲಿ ಮಾಡುವ ಈ ರೀತಿಯ ಕಾರ್ಯಕ್ರಮಗಳು ಬೇರೆಯವರಿಗೆ ಮಾದರಿ ಕಾರ್ಯಕ್ರಮ ವಾಗಬೇಕು. ಯಾವುದೇ ರೀತಿಯ ಶಾಂತಿ ಕದಡುವ ಕೆಲಸ ಕಾರ್ಯಗಳು ನಮ್ಮಿಂದ ಆಗದ ರೀತಿಯಲ್ಲಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಾರ್ವಜನಿಕರ ವಲಯದಲ್ಲಿ ಏನಾದರೂ ತೊಂದರೆಯಾದಲ್ಲಿ ಅದನ್ನು ನೋಡಿಕೊಳ್ಳಲು ಕಾನೂನು ಇದೆ. ಅದಕ್ಕಾಗಿ ಹಗಲಿರುಳು ಕಾನೂನು ಪಾಲಕರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಆದ್ದರಿಂದ ಸರ್ವರು ಶಾಂತಿಯುತ ಜೀವನ ನಡೆಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮುಂದಾಗಬೇಕು ಎಂದು ಹೇಳಿದರು.

ಸುಳ್ಯದಲ್ಲಿ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಇದ್ದು ಶೌರ್ಯ ಸಂಚಲನ ದಿನದಂದು ಸುಳ್ಯದ ವರ್ತಕರು ಮಧ್ಯಾಹ್ನ 2:30 ರಿಂದ ಸಂಜೆ 4 ಗಂಟೆಯವರೆಗೆ ಮುಖ್ಯ ರಸ್ತೆಯಲ್ಲಿ ಗ್ರಾಹಕರು ವಾಹನ ನಿಲ್ಲಿಸುವ ಸಂದರ್ಭ ರಸ್ತೆಯ ಒಂದೇ ಬದಿಯಲ್ಲಿ ನಿಲ್ಲಿಸಿ ಸಹಕರಿಸುವಂತೆ ಕೇಳಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರುಗಳಾದ ಸೋಮಶೇಖರ್ ಪೈಕ, ಸಂದೀಪ್ ಎಂ ಹಿಂದೂ ಧರ್ಮದ ಜಾಗೃತಿ, ಮತ್ತು ಒಗ್ಗಟ್ಟು ಪ್ರದರ್ಶನ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಜಗತ್ತಿಗೆ ಮಾರ್ಗದರ್ಶನ ನೀಡುವ ಪವಿತ್ರ ಭಗವದ್ಗೀತೆಯನ್ನು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ದಿನವನ್ನು ಗೀತಾ ಜಯಂತಿ ಆಚರಿಸಲಾಗುತ್ತಿದ್ದು ಇದರ ಅಂಗವಾಗಿ ಶೌರ್ಯ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಬೇಕಾದ ಅನುಮತಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಂಡಿದ್ದು ಈ ಕಾರ್ಯಕ್ರಮವು ಸಮಾವೇಶವಲ್ಲ ಸಂಚಲನ ಮಾತ್ರವಾಗಿದೆ ಎಂದು ಹೇಳಿದರು. ನಾವು ಸಮಾಜವನ್ನು ಗೌರವದಿಂದ ಕಾಣುತ್ತೇವೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡುವುದಿಲ್ಲ ಎಂದು ಅವರು ಹೇಳಿದರು.
ಹಿರಿಯರಾದ ಕೆ ಪ್ರಭಾಕರ್ ನಾಯರ್ ಮಾತನಾಡಿ ಡಿ.13 ನೇ ತಾರೀಕಿಗೆ ನಡೆಯುವ ಶೌರ್ಯ ಸಂಚಲನ ಕಾರ್ಯಕ್ರಮ ಯಾವುದೇ ಜಾತಿ ಅಥವಾ ಪಂಗಡದ ವಿರುದ್ಧವಲ್ಲ. ಜನರಲ್ಲಿ ಭಗವದ್ಗೀತೆಯ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶವಾಗಿದೆ. ನಾವು ಹಿಂದಿನಿಂದಲೂ ಎಲ್ಲರೊಂದಿಗೆ ಸೌಹಾರ್ದಯುತ ಜೀವನವನ್ನು ನಡೆಸುತ್ತಾ ಬಂದಿದ್ದೇವೆ. ಅಶಾಂತಿ ಉಂಟು ಮಾಡುವ ಯಾವುದೇ ಕೆಲಸ-ಕಾರ್ಯ ನಮ್ಮಿಂದ ಆಗದು ಎಂದು ಹೇಳಿದರು.
ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಸಂಚಾಲಕಇಕ್ಬಾಲ್ ಎಲಿಮಲೆ, ಸಹಸಂಚಾಲಕ ಕೆಎಸ್ ಉಮ್ಮರ್, ವಕೀಲರಾದ ಅಬೂಬಕ್ಕರ್ ಅಡ್ಕಾರ್ ಮಾತನಾಡಿ ಪ್ರತಿಯೊಂದು ಧರ್ಮ ಮತ್ತು ಪಂಗಡಗಳಿಗೆ ಅವರವರ ಧಾರ್ಮಿಕ ಆಚರಣೆ ಮತ್ತು ಕಾರ್ಯಕ್ರಮಗಳನ್ನು ಮಾಡುವ ಸಂಪೂರ್ಣ ಹಕ್ಕಿದೆ. ಕಾರ್ಯಕ್ರಮವನ್ನು ಮಾಡುವ ಸಂಘಟಕರು ಎಲ್ಲಿಯೂ ಕೂಡ ನಾವು ಮಾಡುವ ಕಾರ್ಯಕ್ರಮ ತೊಂದರೆ ಉಂಟು ಮಾಡಬೇಕು ಎಂದು ಬಯಸುವುದಿಲ್ಲ. ಆದರೆ ಬೇರೆ ಊರುಗಳಿಂದ ಬಂದವರಲ್ಲಿ ಯಾರಾದರೂ ಒಬ್ಬರು ಏನಾದರೂ ಅಶಾಂತಿ ಉಂಟು ಮಾಡುವ ಕೆಲಸ ಮಾಡಿದರೆ ಅದು ಇಡೀ ಸಮಾಜಕ್ಕೆ ಮಾರಕವಾಗುತ್ತದೆ. ಅಶಾಂತಿ ಉಂಟು ಮಾಡುವ ಯಾವುದೇ ಕೆಲಸ ನಮ್ಮಿಂದ ಆಗಬಾರದು. ನಾವೆಲ್ಲರೂ ಸಹೋದರತ್ವ ಬಾಳ್ವೆಯಿಂದ ಸಮಾಜದಲ್ಲಿ ಶಾಂತಿಯನ್ನು ಮೂಡಿಸಬೇಕು. ಯಾವುದೇ ಧರ್ಮದ ಕಾರ್ಯಕ್ರಮಗಳಿಂದ ಇತರ ಧರ್ಮದವರಿಗೆ ನೋವು ಉಂಟು ಮಾಡುವ ಕೆಲಸ ಕಾರ್ಯಗಳು ಆಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ,ಜೆಡಿಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ಎಂಬಿ ಸದಾಶಿವ ಮಾತನಾಡಿ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲಿ. ಸಂಘ ದಿಂದ ಮತ್ತು ನಮ್ಮಿಂದ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಹಿಂದೂ ಸಂಘಟನೆಯ ಮುಖಂಡರುಗಳಾದ ಭಾನುಪ್ರಕಾಶ್, ವರ್ಷಿತ್ ಚೊಕ್ಕಾಡಿ, ಪ್ರಕಾಶ್, ನವೀನ, ವರ್ತಕರ ಸಂಘದ ಕಾರ್ಯದರ್ಶಿ ಡಿ ಎಸ್ ಗಿರೀಶ್, ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಮುಖಂಡರುಗಳಾದ ಹಾಜಿ ಕೆಎಂ ಮುಸ್ತಫ, ಅಬ್ದುಲ್ ಮಜೀದ್ ಕೆಬಿ, ಆರ್ ಕೆ ಮಹಮ್ಮದ್, ಉವೈಸ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.