ಡಿಸೆಂಬರ್ 25 ಕ್ರಿಸ್ಮಸ್ ದಿನವನ್ನಾಗಿ ಕ್ರೈಸ್ತರು ಜಗತ್ತಿನಾದ್ಯಂತ ಆಚರಿಸಲ್ಪಡುವ ಸಡಗರ-ಸಂಭ್ರಮ, ಶಾಂತಿ ಪ್ರೀತಿಯನ್ನು ಪಸರಿಸುವ ಹಬ್ಬವಾಗಿದೆ. ಯೇಸುವಿನ ಜನನ ಇಸ್ರಾಯೇಲ್ ನ ಬೆತ್ಲೆಹೆಮ್ ಎಂಬಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಗೋದಲಿಯಲ್ಲಿ ಅಂದರೆ ದನದ ಕೊಟ್ಟಿಗೆಯಲ್ಲಿ ಯಾವುದೇ ಆಡಂಬರವಿಲ್ಲದೆ ದೇವ ಕುವರನ ಜನನವಾಗುತ್ತದೆ. ಈ ಜನನವೇ ಯೇಸುವಿನ ಪ್ರತೀಕತೆಯನ್ನು ಸಾರುತ್ತದೆ.
ಜೋಸೆಫ್ ಮತ್ತು ಮಾತೆ ಮರಿಯಳ ಪುತ್ರನಾಗಿ ದೇವಕುವರ ಭೂಮಿಯಲ್ಲಿ ಜನ್ಮ ತಾಳುತ್ತಾರೆ.
ಮಾತೆ ಮರಿಯ ಮತ್ತು ಜೋಸೆಫ್ ಇವರಿಗೆ ವಿವಾಹ ನಿಶ್ಚಿತಾರ್ಥ ವಾಗಿರುತ್ತದೆ. ಮಾತೆ ಮರಿಯಳು ದೈವಭಕ್ತಳು ದೇವ ಸ್ತುತಿ, ಪ್ರಾರ್ಥನೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿರುತ್ತಾರೆ. ಹಾಗಾಗಿ ಮಾತೆ ಮರಿಯಳಿಗೆ ದೇವದೂತನು ಒಂದು ಸಂದೇಶವನ್ನು ರವಾನಿಸುತ್ತಾರೆ. ನಿನ್ನ ಉದರದಲ್ಲಿ ದೇವಪುತ್ರ ಜನನವಾಗುತ್ತದೆ. ಇದನ್ನು ಕೇಳಿ ಒಮ್ಮೆ ದಿಗ್ಬ್ರಾಂತ್ರರಾಗಿ ತದನಂತರ ದೇವರ ಇಚ್ಛೆಯಂತೆ ಎಂದು ಉದ್ಗರಿಸುತ್ತಾರೆ.
ಈ ಮುಖಾಂತರ ಬಡ ಕುಟುಂಬದಲ್ಲಿ ಭೂಮಿಯಲ್ಲಿ ಸಾಮಾನ್ಯ ಮನುಷ್ಯರಾಗಿ ಜನ್ಮ ತಾಳುತ್ತಾರೆ. ಈ ಮೂಲಕ ಶಾಂತಿದೂತರಾದ ಕ್ರಿಸ್ತ ಯೇಸುವಿನ ಜನನದ ಹಬ್ಬವನ್ನು ಕ್ರಿಸ್ಮಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ದಿನದ ಮುನ್ನಾ ದಿನ ಡಿಸೆಂಬರ್ 24 ರ ರಾತ್ರಿಯಂದು ಎಲ್ಲಾ ಚರ್ಚುಗಳಲ್ಲಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ಸಂಭ್ರಮ-ಸಡಗರದಿಂದ ನಡೆಸಲಾಗುತ್ತದೆ. ಸಂತೋಷ ಪ್ರೀತಿ, ಶಾಂತಿಯ ಶುಭಾಶಯಗಳನ್ನು ಪರಸ್ಪರ ಕೋರುತ್ತಾರೆ. ಎಲ್ಲಾ ಹಬ್ಬಗಳಂತೆ ಈ ಹಬ್ಬದಲ್ಲಿ ಅನೇಕ ವಿಶೇಷತೆಗಳಿವೆ ಹಾಗೂ ಆ ಸಂಕೇತಗಳು ತನ್ನದೇ ಆದ ವಿಶಿಷ್ಟತೆ ಹೊಂದಿರುತ್ತದೆ.
1. ಗೋದಲಿ
ದೇವಕುಮಾರನು ದನದ ಕೊಟ್ಟಿಗೆಯಲ್ಲಿ ಅಂದರೆ ಗೋದಲಿಯಲ್ಲಿ ಜನಿಸಿರುದರಿಂದ 2000 ವರ್ಷಗಳ ಹಿಂದೆ ಬೆತ್ಲೆಹೇಮಿನ ಚಿತ್ರಣ ಹೇಗಿತ್ತು ಎಂಬುವುದನ್ನು ಆಗಿನಕಾಲದ ಚಿತ್ರಣವನ್ನು ಸನ್ನಿವೇಶಗಳನ್ನು ಬಿಂಬಿಸಲಾಗುತ್ತದೆ ಚರ್ಚುಗಳಲ್ಲಿ ಮನೆಮನೆಗಳಲ್ಲಿ ಗೋದಲಿಯನ್ನು ಮಾಡುವುದರ ಮೂಲಕ ಜನನ ಸಂದೇಶದ ಸಾಂದರ್ಭಿಕತೆಯನ್ನು ಸಾರಲಾಗುತ್ತದೆ.
2.ನಕ್ಷತ್ರ
ಕ್ರಿಸ್ತ ಕುವರನ ಜನನವು ಮೂವರು ಜ್ಯೋತಿಷಿಗಳಿಗೆ ಪೂರ್ವದಿಕ್ಕಿನಲ್ಲಿ ನಕ್ಷತ್ರವು ಚಲಿಸುವುದರ ಮೂಲಕ ತಿಳಿಯುತ್ತದೆ. ನಕ್ಷತ್ರವು ಹೋಗುವ ದಿಕ್ಕಿನಲ್ಲಿ ಯೇಸುವಿನ ಜನನವಾಗಿದೆ ಎಂದು ತಿಳಿದು ಜ್ಯೋತಿಷಿಗಳು ನಕ್ಷತ್ರವನ್ನು ಹಿಂಬಾಲಿಸುತ್ತಾರೆ. ಆಕಾಶದಲ್ಲಿ ನಕ್ಷತ್ರವು ಬೆತ್ಲೆಹೆಮ್ ಗೋದಲಿಯ ಬಳಿ ನಿಂತು ಕಣ್ಮರೆಯಾಗುತ್ತದೆ. ಹೀಗೆ ಕ್ರಿಸ್ತನ ಜನನ ನಕ್ಷತ್ರದ ಮೂಲಕ ಗೋಚರಿಸುವುದರಿಂದ ನಕ್ಷತ್ರ ಯೇಸುವಿನ ಶುಭ ಸಂದೇಶವನ್ನು ಸಾರುವ ಪ್ರತಿಬಿಂಬ ಹಾಗೂ ಯೇಸುವಿನ ಜನನದ ಸಂಕೇತವಾಗಿರುವುದರಿಂದ ಹಬ್ಬದ ಮುನ್ನವೇ ಡಿಸೆಂಬರ್ ತಿಂಗಳ ಪ್ರಾರಂಭದಲ್ಲಿ ನಕ್ಷತ್ರವು ಪ್ರತೀ ಮನೆಮನೆಗಳಲ್ಲಿ ಗೋಚರಿಸುತ್ತದೆ.
3. ಸಾಂತಕ್ಲಾಸ್
ಕ್ರಿಸ್ಮಸ್ ಹಬ್ಬದ ಒಂದು ವಿಶೇಷ ಸಾಂತಕ್ಲಾಸ್ ಕ್ರಿಸ್ಮಸ್ ಅಜ್ಜ ಎಂದು ಕರೆಯಲ್ಪಡುವ ಈ ಸಾಂತಕ್ಲಾಸ್ ಮಕ್ಕಳಿಗೆ ಸಿಹಿತಿಂಡಿ ಉಡುಗೊರೆ ನೀಡುತ್ತಾರೆ. ಸುಮಾರು ನಾಲ್ಕನೇ ಶತಮಾನದಲ್ಲಿ ಇಟಲಿಯ ಬಾರಿ ಎಂಬಲ್ಲಿದ್ದ ಸಂತ ನಿಕೋಲಸರೇ ಈ ಸಾಂತಕ್ಲಾಸ್. ಅವರು ಇಟಲಿಯ ಮೈರಾ ಪ್ರಾಂತ್ಯದ ಬಿಷಪರಾಗಿದ್ದರು. ತೀರಾ ಬಡವರ ಮನೆಗಳಿಗೆ ಹೋಗಿ ಮನೆಯವರಿಗೆ ತಿಳಿಯದಂತೆ ಕಿಟಕಿಯ ಮೂಲಕ ಹಣ ಮತ್ತು ಉಡುಗೊರೆ ನೀಡುತ್ತಿದ್ದರು. ಅವರ ಮರಣಾನಂತರ ಅವರ ವೇಷ ಧರಿಸಿ ಕ್ರಿಸ್ಮಸ್ ಸಂದರ್ಭದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಸಿಹಿತಿಂಡಿ ಹಾಗೂ ಉಡುಗೊರೆ ನೀಡುವಂತಹ ಪರಿಪಾಠ ಆರಂಭವಾಯಿತು.
ಈ ಮೂಲಕ ಯೇಸುವಿನ ಜನನದ ಸಂದೇಶವನ್ನು ಮನೆ ಮನೆ ಮನೆಗಳಿಗೆ ಸಾರುತ್ತಾರೆ. ಡುಮ್ಮಗಿರುವ ಹೊಟ್ಟೆ, ಕೆಂಪು ಧೋತಿ, ಕೆಂಪು ಬಿಳಿ ಮಿಶ್ರಿತ ಟೋಪಿ ,ಕೈಯಲ್ಲಿ ಕೋಲು,ಬಿಳಿಗಡ್ಡದಾರಿಯ ಮುಖವಾಡವೇ ಈ ಸಾಂತಕ್ಲಾಸ್.
4. ಕ್ಯಾರಲ್ಸ್
ಯೇಸುವಿನ ಜನನದ ಸಂದೇಶವನ್ನು ಹಾಡುವುದರ ಮೂಲಕ ಸಾರಲಾಗುತ್ತದೆ ಇದನ್ನು ಕ್ಯಾರೆಲ್ಸ್ ಎಂದು ಕರೆಯುತ್ತಾರೆ. ಈ ಕ್ಯಾರಲ್ಸ್ ಎಂಬ ಹಾಡುವ ಗುಂಪು ಸಾಂತಕ್ಲಾಸ್ ಜೊತೆ ಮನೆ ಮನೆಗೆ ಬಂದು ಯೇಸುವಿನ ಸಂದೇಶವನ್ನು ಹಾಡುವುದರ
ಮೂಲಕ ಸಾರುತ್ತಾರೆ. ಮಾತ್ರವಲ್ಲದೆ ಹಬ್ಬದ ಆಚರಣೆಯಲ್ಲಿ ಕ್ಯಾರಲ್ಸ್
ಮುಖ್ಯಪಾತ್ರವನ್ನು ವಹಿಸುವುದು.
5. ಕುಸ್ವಾರ್ ( ಸಿಹಿತಿಂಡಿ)
ಹಬ್ಬದ ತಯಾರಿಯಾಗಿ ಮನೆಮನೆಗಳಲ್ಲಿ ಕುಸ್ವಾರ್ ತಯಾರಿಸುತ್ತಾರೆ (ಗುಳಿಯೋ, ಕಿಡಿಯೋ, ನಿವ್ರೊ) ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ. ಇವು ಕ್ರಿಸ್ಮಸ್ ಹಬ್ಬದ ವಿಶೇಷ ತಿಂಡಿಗಳು ಬಡವರಿಗೆ, ನೆರೆಹೊರೆಯವರಿಗೆ ಮುಂತಾದವರಿಗೆ ಹಂಚುವುದರ ಮೂಲಕ ಯೇಸುವಿನ ಜನನದ ಸಂದೇಶವನ್ನು ಸಾರಲಾಗುತ್ತದೆ.
5. ಕ್ರಿಸ್ಮಸ್ ಕೇಕ್
ಸಿಹಿಯು ಸಂತೋಷ ಮತ್ತು ಸಂಭ್ರಮದ ವಾತಾವರಣವನ್ನು ತಿಳಿಸುತ್ತದೆ. ಹಬ್ಬವೆಂದರೆ ಸಿಹಿ, ಸಿಹಿಯೆಂದರೆ ಕೇಕ್ ಅದರಲ್ಲೂ ಕ್ರಿಸ್ಮಸ್ ಹಬ್ಬದಲ್ಲಿ ಕ್ರಿಸ್ಮಸ್ ಕೇಕ್ ಇರುತ್ತದೆ. ದೇವ ಪುತ್ರನ ಜನನವನ್ನು ಕ್ರಿಸ್ಮಸ್ ಕೇಕನ್ನು ಹಂಚುವುದರ ಮೂಲಕ ಸಂಭ್ರಮಿಸುತ್ತಾರೆ ನೆರೆಹೊರೆಯವರಿಗೆ, ಹಿತೈಷಿಗಳಿಗೆ, ಗೆಳೆಯರ ಬಳಗಕ್ಕೆ ಹೀಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿಸುತ್ತಾರೆ.
6. ಕ್ರಿಸ್ಮಸ್ ಟ್ರೀ
ಈ ಹಬ್ಬದ ವಿಶೇಷಗಳಲ್ಲಿ ಒಂದು ಕ್ರಿಸ್ಮಸ್ ಟ್ರೀ ಇದು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಯೇಸುವಿನ ಜನನದ ವೇಳೆ ಒಂದು ವಿಶಿಷ್ಟ ಶೈಲಿಯ ಮರವನ್ನು ಸಿಂಗರಿಸಲಾಗಿತ್ತು. ಬಳಿಕ ಈ ಮರಕ್ಕೆ ಕ್ರಿಸ್ಮಸ್ ಟ್ರೀ ಎಂದು ಕರೆಯಲಾಯಿತು. ಹಬ್ಬದ ವೇಳೆ ಈ ಮರಕ್ಕೆ ನಕ್ಷತ್ರಗಳನ್ನು, ಬಣ್ಣಬಣ್ಣದ ದೀಪಗಳನ್ನು, ಹಾಗೂ ಚಿಕ್ಕ ಚಿಕ್ಕ ಚಿಕ್ಕ ಗಿಫ್ಟ್, ಹೊಳೆಯುತ್ತಿರುವ ನಕ್ಷತ್ರಗಳ ಮೂಲಕ ಸಿಂಗರಿಸಲಾಗುತ್ತದೆ.
6. ಗ್ರೀಟಿಂಗ್ ಕಾರ್ಡ್
ಮೊದಲೆಲ್ಲಾ ಈ ಗ್ರೀಟಿಂಗ್ ಕಾರ್ಡುಗಳ ಅಬ್ಬರ ಜೋರಾಗಿತ್ತು. ಕ್ರಿಸ್ಮಸ್ ಬಂತೆಂದರೆ ಕ್ರಿಸ್ಮಸ್ ಗ್ರೀಟಿಂಗ್ ಕಾರ್ಡುಗಳನ್ನು ಕಳುಹಿಸಲಾಗುತ್ತಿತ್ತು ಕುಟುಂಬದವರಿಗೆ, ಗೆಳೆಯರ ಬಳಗಕ್ಕೆ, ಹೆಚ್ಚಾಗಿ ವ್ಯವಹರಿಸು ತಿತ್ತು. ಆದರೆ ಕಾಲಕ್ರಮೇಣ ಸಾಮಾಜಿಕ ಮಾಧ್ಯಮಗಳು ಇದನ್ನು ಮರೆಮಾಚಿವೆ ಈಗ ಈ ಮಾಧ್ಯಮಗಳ ಮೂಲಕವೇ ಶುಭಾಶಯಗಳನ್ನು ವಿನಿಮಯ ಮಾಡಲಾಗುತ್ತಿದೆ.
ಕ್ರಿಸ್ಮಸ್ ಹಬ್ಬವು ಎಲ್ಲರಿಗೂ ಪ್ರೀತಿ ಸಂತೋಷವನ್ನು ಪಸರಿಸುವ ಹಬ್ಬ. ಯೇಸುವಿನ ಜನನ ಆಡಂಬರ ವೈಭವದಿಂದ ಕೂಡಿಲ್ಲ ಬದಲಾಗಿ ದೇವ ಕುವರ ಸಾಮಾನ್ಯ ಮಾನವನಾಗಿ ದನದ ಕೊಟ್ಟಿಗೆಯಲ್ಲಿ ಜನಿಸುದರ ಮೂಲಕ ನಮಗೂ ಸಾಮಾನ್ಯರಾಗಿ ಜೀವಿಸುವಲ್ಲಿ ಸಂತೋಷವಿದೆ ಎಂದು ತಿಳಿಸುತ್ತದೆ
ಬಡವರಿಗೆ ನಿರಾಶ್ರಿತರಿಗೆ ನಿರ್ಗತಿಕರಿಗೆ ರೋಗಿಗಳಿಗೆ ಸಹಾಯ ಹಸ್ತರಾಗಿ ಎಂದು ಯೇಸುವಿನ ಜನನ ಸಂದೇಶವು ಸಾರಿಹೇಳುತ್ತದೆ. ಶಾಂತಿ, ಪ್ರೀತಿ, ಸಂತೋಷ, ತ್ಯಾಗ, ಬಲಿದಾನದ ಸಂಕೇತ ಕ್ರಿಸ್ಮಸ್ ಹಬ್ಬ ಸೌಹಾರ್ದತೆ ಯಿಂದ ಬಾಳಲು ಕರೆಯನ್ನು ಕೊಡುತ್ತದೆ.
ಸಂತೋಷ, ನೆಮ್ಮದಿ, ಶಾಂತಿಯನ್ನು ಎಲ್ಲರಿಗೂ ಕರುಣಿಸುವ ಹಬ್ಬವಾಗಲಿ ಎಂದು ಆಶಿಸುತ್ತಾ ಎಲ್ಲರಿಗೂ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಶುಭಾಶಯಗಳು.
-ರೇಶ್ಮ ವೀರ ಕ್ರಾಸ್ತ
ತಡಗಜೆ, ಬೆಳ್ಳಾರೆ