ಬಳ್ಪ ಕೇನ್ಯ ಗ್ರಾಮಗಳ ಗ್ರಾಮದೈವ ಶ್ರೀ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ರಾಜನ್ ದೈವ ನೇರ್ಪು, ಮಾಲ್ಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಜ. 16ರಿಂದ ಜ. 20ರ ವರೆಗೆ ಪುನರ್ ಪ್ರತಿಷ್ಠಾ ಮಹೋತ್ಸವ ವಿಜೃಂಭಣೆಯಿಂದ ಜರಗಲಿದೆ.
ದೈವಜ್ಞ ಶಶಿ ನಾಯರ್ ಕುತ್ತಿಕೋಲು ಮತ್ತು ಶಶಿ ಬಲ್ಯಾಯ ಅರಂತೋಡು ಇವರಿಂದ 2018 ಮೇ. 28ರಿಂದ ಆರಂಭವಾಗಿ ಸತತ 8 ದಿನಗಳ ಕಾಲ ಪ್ರಶ್ನಾಚಿಂತನೆ ನಡೆಸಿ ಬಳಿಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಬಂದಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಆಗಿನ ಅರಸರ ಕಾಲದಲ್ಲಿ ಗ್ರಾಮದೈವವಾಗಿ ನೆಲೆನಿಂತ ದೈವಗಳಾಗಿವೆ ಎಂಬುದು ದೈವಜ್ಞರ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿರುವುದಾಗಿದೆ. ಮಕರ ಮಾಸ ಹುಣ್ಣಿಮೆಯ ಸಮಯ ಹಿಂದಿನ ಕಾಲದಿಂದಲೂ ಮೂರು ದಿವಸ ಇಲ್ಲಿ ಜಾತ್ರೆ ನಡೆಯುತ್ತಾ ಬರುತ್ತಿದ್ದು, ಆಗ ಕಾರ್ಜ, ಗೆಜ್ಜೆ, ಕಣ್ಕಲ್, ಪೋಲೆ, ಬಡ್ಡಕೋಟಿ ಮತ್ತು ನೇರ್ಪು ಮನೆತನದವರು ಈ ದೈವಗಳ ಚಾಕರಿ ಮಾಡಲು ಹಕ್ಕುಳ್ಳವರಾಗಿದ್ದರೆನ್ನಲಾಗಿದೆ. ಅಲ್ಲದೆ ವಿಶ್ವಕರ್ಮರು, ಮಡಿವಾಳರು, ಅಜಲಾಯರು, ಪರವರು, ಮುಗೇರರು, ಗಾಣಿಗರು ಮೊದಲಾದ ಸಮುದಾಯದವರು ನಡೆಸಿಕೊಂಡು ಬರುತ್ತಿದ್ದರೆಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿರುವುದಾಗಿದೆ. ಸುಮಾರು 45 ಲಕ್ಷ ಅಂದಾಜು ಯೋಜನೆಯಲ್ಲಿ 2020 ರ ಏಪ್ರಿಲ್ 8ರಂದು ಶಿಲಾನ್ಯಾಸಗೊಂಡು ಬಳಿಕ ವಿವಿಧ ಕಾಮಗಾರಿಗಳು ನಡೆದು ಬಂದಿರುತ್ತದೆ.ಪ್ರಸ್ತುತ ಕಿಶೋರ್ ರೈ ಕಂಡೆಬಾಯಿಯವರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ರವಿ ಅಮ್ಮಣ್ಣಾಯ ಕಣ್ಕಲ್ ಬೀಡು ಗೌರವಾಧ್ಯಕ್ಷರಾಗಿ ಅರುಣ್ ರೈ ಗೆಜ್ಜೆ ಪ್ರಧಾನ ಕಾರ್ಯದರ್ಶಿ, ವೆಂಕಪ್ಪ ಗೌಡ ಕಾರ್ಯದರ್ಶಿ ಹಾಗೂ ಆನಂದ ಗೌಡ ಕಣ್ಕಲ್ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದಲ್ಲದೆ ಊರ ಪರವೂರ ಅನೇಕ ಮಂದಿಯನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.