Breaking News

ಎನ್.ಎಸ್. ದೇವಿಪ್ರಸಾದ್ ವಿಧಿವಶ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮರೆಯಾದದ್ದು ಸಾರ್ವಜನಿಕ ರಂಗದ ಸವ್ಯಸಾಚಿ

ಸಾಂಸ್ಕೃತಿಕ ರಂಗದ ದಿಗ್ಗಜನಿಗೆ ಸುದ್ದಿಯ ನುಡಿನಮನ

– ದುರ್ಗಾಕುಮಾರ್ ನಾಯರ್‌ಕೆರೆ

ನಾಡಿನ ಖ್ಯಾತ ಚಿತ್ರ ನಿರ್ಮಾಪಕ, ರಂಗ ನಿರ್ದೇಶಕ, ಸಾಹಿತಿ, ಸಾಮಾಜಿಕ ಧುರೀಣ ಎನ್.ಎಸ್.ದೇವಿಪ್ರಸಾದ್ ಇನ್ನಿಲ್ಲ.


ದೇವಿಪ್ರಸಾದ್ ಅವರ ಅಗಲಿಕೆಯೊಂದಿಗೆ ನಾಡಿನ ಸಾಂಸ್ಕೃತಿಕ ಕೊಂಡಿಯೊಂದು ಕಳಚಿದಂತಾಗಿದೆ. ಸಾರ್ವಜನಿಕ ರಂಗದ ಸವ್ಯಸಾಚಿ ನಮ್ಮನ್ನು ಬಿಟ್ಟಗಲಿದ್ದಾರೆ. ಅಮರ ಸುಳ್ಯದ ಸ್ವಾತಂತ್ರ್ಯ ಸಮರ, ಭಾಷಾ ಸಾಂಸ್ಕೃತಿಕ ಸಾಮರಸ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ದಿಗ್ಗಜ ದೂರವಾಗಿದ್ದಾರೆ.
ಆಕರ್ಷಕ ವಿಚಾರ, ವೈಚಾರಿಕ ನಿಲುವುಗಳಿಂದ ಮಾಗಿದ ವ್ಯಕ್ತಿತ್ವ ಎನ್.ಎಸ್.ಡಿ. ಅವರದ್ದು. ಶ್ರೀಮಂತ ಮನೆತನದ ಸದಸ್ಯನಾದರೂ ಸಾಮಾಜಿಕ ಪ್ರಜ್ಞೆಯೊಂದಿಗೆ ಸಮಾಜದೊಂದಿಗೆ ಕೈಜೋಡಿಸಿ ಬೆಳೆದ ದೇವಿಪ್ರಸಾದ್ ಇಳಿವಯಸ್ಸಿನವರೆಗೂ ತಾನು ನಂಬಿದ ಸಿದ್ಧಾಂತದೊಂದಿಗೆ ಬದುಕಿ ಸಾಧಿಸಿ ತೋರಿಸಿದವರು.
ಕಲೆ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕೀಯ, ಸಾಮಾಜಿಕ, ಶಿಕ್ಷಣ, ಸಹಕಾರ ಹೀಗೆ ಎಲ್ಲಾ ಎಲ್ಲೆಗಳನ್ನು ಮೀರಿ ಸಮಾಜಮುಖಿಯಾಗಿ ಬೆಳೆದು ಹಲವು ದಶಕಗಳ ಕಾಲ ಚೈತನ್ಯದ ಚಿಲುಮೆಯಾಗಿ ಪ್ರಭಾವ ಬೀರಿದವರು ಎನ್.ಎಸ್.ದೇವಿಪ್ರಸಾದ್.
1942 ರ ಎಪ್ರಿಲ್ 27 ರಂದು ಸಂಪಾಜೆಯ ಸಣ್ಣಯ್ಯ ಪಟೇಲ್ ಮತ್ತು ಪೂವಮ್ಮ ದಂಪತಿಯ ಏಕಮಾತ್ರ ಪುತ್ರನಾಗಿ ಜನಿಸಿದ ಎನ್.ಎಸ್. ದೇವಿಪ್ರಸಾದ್ ತಂದೆಯ ಪಟೇಲ್‌ಗಿರಿಯ ಜಮೀನ್ದಾರ ಕುಟುಂಬದ ಅಡಿಪಾಯ ಇದ್ದರೂ ಸಾಮಾಜಿಕ, ಸಾಂಸ್ಕೃತಿಕ , ಸಾಹಿತ್ಯದ ಮಜಲಿನಲ್ಲಿ ಸಂಚರಿಸಿದವರು.
ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಮುಗಿಸಿದ ಮೇಲೆ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೋಮಾ ಪಡೆದುಕೊಂಡ ಎನ್.ಎಸ್.ದೇವಿಪ್ರಸಾದ್ ತನ್ನ ಕಾಲೇಜು ದಿನಗಳಲ್ಲಿಯೇ ಚರಿತ್ರೆ ಅಧ್ಯಯನದ ಹೊಸ ಸಾಧ್ಯತೆ ಕಂಡುಕೊಂಡವರು.
ಸಂಪಾಜೆ ಪರಿಸರದಲ್ಲಿ ರಂಗ ಚಟುವಟಿಕೆಗೆ ಮುಹೂರ್ತವಿಟ್ಟರು. ಅಕ್ಕಪಕ್ಕದ ರಂಗಾಸಕ್ತರನ್ನು ಸೇರಿಸಿ ನಿಸರ್ಗ ರಂಗ ಮಂಚ ಕಟ್ಟಿ ಅದರಲ್ಲಿ ಸಾಂಸ್ಕೃತಿಕ ಕಂಪು ಮೂಡಿಸಿದರು. ಅವರೇ ರಚನೆ ಮಾಡಿದ ಶಿರಾಡಿ ಭೂತ ನಾಟಕ ಪರಿಣಾಮಕಾರಿ ಪ್ರದರ್ಶನ ಕಂಡಿತು. ಬಿ.ವಿ.ಕಾರಂತ, ಚಂದ್ರಶೇಖರ ಕಂಬಾರ, ಆರ್.ನಾಗೇಶ್, ಅಕ್ಷರ ಕೆ.ವಿ. ಮೊದಲಾದವರನ್ನು ಇಲ್ಲಿಗೆ ಕರೆಸಿದ್ದರು. ಸಂಚಾರಿ ನಾಟಕ ತಂಡಗಳಿಗೆ ಆಶ್ರಯ ಕಲ್ಪಿಸಿದ ದೇವಿಪ್ರಸಾದ್ ರಾಷ್ಟ್ರೀಯ ನಾಟಕ ರಂಗದ ಹೊಸ ಮತ್ತು ಹಳೆ ಸಾಂಪ್ರದಾಯಿಕ ನಾಟಕಗಳ ಪರಿಚಯ ಮಾಡಿಕೊಟ್ಟರು.
ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ದೇವಿಪ್ರಸಾದ್ ನಿರ್ಮಿಸಿದ “ಮೂರು ದಾರಿಗಳು’ ಚಲನಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತ್ತು. “ಅಪಹರಣ’ ಎಂಬ ಟೆಲಿಫಿಲಂ ಕೂಡಾ ಪ್ರಶಸ್ತಿಗೆ ಭಾಜನವಾಗಿತ್ತು.
ಯಕ್ಷಗಾನದ ಮೂಲ ಸ್ವರೂಪವನ್ನು ರಕ್ಷಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಗೂ ಪ್ರೋತ್ಸಾಹ ಕೊಟ್ಟು ಬೆಳೆಸಿದವರು ಎನ್.ಎಸ್.ಡಿ.
1837 ರಲ್ಲಿ ಕೆನರಾ ಮತ್ತು ಕೊಡಗು ರೈತಾಪಿ ಜನರ ತಂಡ ಸುಳ್ಯದಲ್ಲಿ ಸಂಘಟಿತರಾಗಿ ಮಂಗಳೂರಿನಿಂದ ಬ್ರಿಟೀಷರನ್ನು ಓಡಿಸಿ 2 ವಾರಗಳ ಕಾಲ ಕೆನರಾ ಜಿಲ್ಲೆಯನ್ನು ಆಳಿದ್ದರು. ಸ್ವಾತಂತ್ರ್ಯ ಸಮರಕ್ಕೂ ಎಷ್ಟೋ ವರ್ಷಗಳ ಹಿಂದೆ ನಡೆದ ಈ ಸಂಗ್ರಾಮಕ್ಕೆ ಇತಿಹಾಸದಲ್ಲಿ ಬಹಳ ದೊಡ್ಡ ಸ್ಥಾನ ಇದೆ. ರೈತರ ಈ ಹೋರಾಟದ ಕಥೆಯನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದು ಅಪಮಾನ ಮಾಡಿದ್ದರು. ಈ ಅವಮಾನವನ್ನು ತೊಡೆದು ಹಾಕುವುದಕ್ಕಾಗಿ ಸುಳ್ಯದಲ್ಲಿ ಅಮರಕ್ರಾಂತಿ ಉತ್ಸವ ಸಮಿತಿ ಹುಟ್ಟುಹಾಕಿ 1998 ರಲ್ಲಿ ಸುಳ್ಯದಿಂದ ಮಂಗಳೂರುವರೆಗೆ ಜಾಥಾ ಸಂಘಟನೆ ಮಾಡಿ ಜನಗಳಿಗೆ ಸತ್ಯ ಮನದಟ್ಟು ಮಾಡಿದ್ದರು. 1837 ರ ಬಂಡಾಯಕ್ಕೆ ಸಂಬಂಧಿಸಿದ ಅವರ ಸಂಶೋಧನಾ ಕೃತಿ ಅಮರ ಸುಳ್ಯ ಸ್ವಾತಂತ್ರ್ಯ- ಅಮರ ಕರ್ನಾಟಕ ಇತಿಹಾಸ ಸಂಶೋಧನೆಯಲ್ಲೊಂದು ಮೈಲುಗಲ್ಲು.
ಹಿಂದೊಮ್ಮೆ ಕೊಡಗಿನಲ್ಲಿ ಪ್ರತ್ಯೇಕ ರಾಜ್ಯದ ಸ್ವರ ಎದ್ದಾಗ ಅದನ್ನು ಅಡಗಿಸಲು ಕೊಡಗು ಪ್ರಜಾವೇದಿಕೆಯನ್ನು ಸಮಾನ ಮನಸ್ಕರೊಂದಿಗೆ ಕಟ್ಟಿ ಅನೇಕ ಸವಾಲುಗಳನ್ನು ಎದುರಿಸಿ ಬೆಳೆಸಿದವರು. ಇಂದು ಕೊಡಗು ಪ್ರತ್ಯೇಕ ರಾಜ್ಯದ ಸೊಲ್ಲಡಗಿದ್ದರೆ ಅದಕ್ಕೆ ಕೊಡಗು ಪ್ರಜಾ ವೇದಿಕೆಯ ಅಹಿಂಸಾತ್ಮಕ ಮತ್ತು ಪ್ರಜಾಸತ್ತಾತ್ಮಕ ಹೋರಾಟವೇ ಕಾರಣ.
ಆರಂಭದಲ್ಲಿ ಎನ್.ಎಸ್.ದೇವಿಪ್ರಸಾದ್ ಅವರು ರಾಜಕೀಯದ ಕಡೆ ಹೆಜ್ಜೆ ಇರಿಸಿದ್ದರಾದರೂ ಬಳಿಕ ನನ್ನಂತವರಿಗೆ ರಾಜಕೀಯ ಲಾಯಕ್ಕಲ್ಲ ಎಂದು ಮಾರುದೂರ ಸರಿದರು. ಸಹಕಾರ ಕ್ಷೇತ್ರದಲ್ಲೂ ದೇವಿಪ್ರಸಾದ್ ಸೇವೆ ಸಲ್ಲಿಸಿದ್ದಾರೆ. 1968 ರಿಂದ 1985 ರವರೆಗೆ ಬೇರೆ ಬೇರೆ ಸಹಕಾರಿ ಸಂಸ್ಥೆಗಳ ಪದಾಧಿಕಾರಿಯಾಗಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಸ್ನೇಹ ಸಂಪಾದಿಸಿದ್ದರು.
ವಿದ್ಯಾಕ್ಷೇತ್ರಕ್ಕೂ ದೇವಿಪ್ರಸಾದ್‌ರ ಕೊಡುಗೆ ಸಂದಿದೆ. ತನ್ನೂರಿನ ಮಕ್ಕಳಿಗೆ ಪ್ರೌಢಶಾಲಾ ಶಿಕ್ಷಣದ ಅಧ್ಯಯನಕ್ಕೆ ಅನುಕೂಲವಾಗಲು ಸಂಪಾಜೆಯಲ್ಲಿ ಪ್ರೌಢಶಾಲಾ ಸ್ಥಾಪನೆಗೆ ದುಡಿದರು. ಸಂಪಾಜೆ ಪ್ರೌಢಶಾಲೆಯ ಸ್ಥಾಪಕ ಸದಸ್ಯ ಮಂಡಳಿಯ ಅಧ್ಯಕ್ಷನಾಗಿ, ಸಂಪಾಜೆ ವಿದ್ಯಾಸಂಘದ ಅಧ್ಯಕ್ಷನಾಗಿ, ಸಂಪಾಜೆ ಜೂನಿಯರ್ ಕಾಲೇಜು ಸ್ಥಾಪನೆಗೆ ಪ್ರಮುಖ ಮುಂದಾಳತ್ವ ವಹಿಸಿಕೊಂಡ ದೇವಿಪ್ರಸಾದ್ ಆದಿಚುಂಚನಗಿರಿ ಮೆಡೆಕಲ್ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಆದಿಚುಂಚನಗಿರಿ ಮಠದೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ ದೇವಿಪ್ರಸಾದ್ ಆ ಮೂಲಕ ಧಾರ್ಮಿಕ ಕ್ಷೇತ್ರದಲ್ಲೂ ಕ್ರಿಯಾಶೀಲರಾಗಿದ್ದರಲ್ಲದೆ ಕೊಡಗು ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಒಕ್ತೇಸರರಾಗಿಯೂ ಸುದೀರ್ಘ ಕಾಲ ಸೇವೆ ಸಲ್ಲಿಸಿ ದೇವಸ್ಥಾನದ ಅಭಿವೃದ್ಧಿಗೆ ಕಾರಣರಾಗಿದ್ದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದಾಗ ಅದರ ಆರಂಭಿಕ ಅಧ್ಯಕ್ಷರಾದವರು ದೇವಿಪ್ರಸಾದ್. ಎಲ್ಲಾ ಆರಂಭಿಕ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸಿ ಅಧ್ಯಕ್ಷತೆಯ ಹುದ್ದೆಗೆ ನ್ಯಾಯ ಒದಗಿಸಿಕೊಟ್ಟವರು.
ಎನ್.ಎಸ್.ದೇವಿಪ್ರಸಾದ್‌ರವರ ಪತ್ನಿ ಶ್ರೀಮತಿ ಇಂದಿರಾ. ಮಗ ದಿ. ದೇವಿಚರಣ್, ಪುತ್ರಿಯರಾದ ಸಹನಾ ಅಮೇರಿಕಾದಲ್ಲೂ, ಪ್ರಜ್ಞಾ ಆಸ್ಟ್ರೇಲಿಯಾದಲ್ಲೂ ನೆಲೆಸಿದ್ದಾರೆ.
ತನ್ನ ವಿಶಿಷ್ಟ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಜನಜನಿತರಾಗಿ ನೆಲೆ ನಿಂತ ಈ ಸವ್ಯಸಾಚಿ ಸಾಧಕನಿಗೆ ಸುದ್ದಿಯ ಶ್ರದ್ದಾಂಜಲಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.