Breaking News

ದ.ಕ., ಕೊಡಗಿನ ಸುಟ್ಟತ್ ಮಲೆ, ಕೂಜುಮಲೆ ದಟ್ಟಾರಣ್ಯದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಹರಳುಕಲ್ಲು ದಂಧೆ

Advt_Headding_Middle

ಕೋಟಿ ಕೋಟಿ ರೂಪಾಯಿಗಳ ಅರಣ್ಯದೊಳಗಿನ ಸಂಪತ್ತು ಪರರ ಪಾಲು

ಸಾಕ್ಷಾತ್ ವರದಿಗಾಗಿ ಸ್ಥಳಕ್ಕೆ ತೆರಳಿ ವರದಿ ಸಂಗ್ರಹಿಸಿದ ಸುದ್ದಿ ತಂಡ

ಸುಟ್ಟತ್ ಮಲೆ, ಕೂಜುಮಲೆ, ದಟ್ಟಾರಣ್ಯದ ಮಧ್ಯೆ ಅಕ್ರಮ ಹರಳುಕಲ್ಲು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಹಲವು ವರ್ಷಗಳ ಹಿಂದೆ ಸುದ್ದಿ ಮಾಡಿದ್ದ ಇದೇ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಹರಳುಕಲ್ಲು ದಂಧೆ ಈಗ ಮತ್ತೆ ಸುದ್ದಿಯಾಗಿದೆ. ಅದರ ಜೊತೆ ಮರ್ಕಂಜ, ಅಮರಪಡ್ನೂರು, ಪೆರಾಜೆ ಗ್ರಾಮದ ಅರಣ್ಯದಲ್ಲಿರುವ ಬೆಲೆ ಬಾಳುವ ಕಲ್ಲಿಗೂ ದಂಧೆಕೋರರ ದೃಷ್ಠಿ ಬೀಳತೊಡಗಿದೆ. ಈ ಬಗ್ಗೆ ಸುದ್ದಿ ತಂಡ ರಹಸ್ಯವಾಗಿ ಮಾಹಿತಿ ಸಂಗ್ರಹಿಸಿ ಸ್ಥಳಕ್ಕೆ ತೆರಳಿ ತಯಾರಿಸಿದ ಸಾಕ್ಷಾತ್ ವರದಿ ಇಲ್ಲಿದೆ.  

(ಹರಳುಕಲ್ಲುಗಾಗಿ ತ್ರಿಕೋನಾಕಾರದಲ್ಲಿ ಕಂದಕ ಕೊರೆದಿರುವುದು)

ರಾಜಾರೋಷವಾಗಿ  ನಡೆಯುತ್ತಿದೆ ದಂಧೆ : ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಸೇರಿದ ಸುಟ್ಟತ್‌ಮಲೆ, ಕೂಜುಮಲೆಗಳಲ್ಲಿ ಅಕ್ರಮವಾಗಿ ಹರಳುಕಲ್ಲು ದಂಧೆ ಅವ್ಯಾಹತವಾಗಿ ಹಲವು ವರ್ಷಗಳ ಹಿಂದಿನಿಂದಲೇ ನಡೆಯುತ್ತಲೇ ಇತ್ತು. ಹರಳುಕಲ್ಲು ತೆಗೆಯಲು ದಕ್ಷಿಣ ಕನ್ನಡ ಮತ್ತು ಕೊಡಗು ಕಡೆಗಳಿಂದ ಬರುತ್ತಿದ್ದ ತಂಡಗಳ ಮಧ್ಯೆ ವಾಗ್ವಾದಗಳು, ಜಗಳಗಳು ನಡೆಯುತ್ತಿದ್ದವು. ಸುರಂಗದೊಳಗೆ ಹರಲುಕಲ್ಲು ಅಗೆಯುವಾಗ ಮಣ್ಣು ಕುಸಿದು ಪ್ರಾಣ ಕಳೆದುಕೊಂಡ ಘಟನೆಗಳೂ ಇವೆ. ಆ ಬಳಿಕ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಬಿಗು ಕಾವಲು ಏರ್ಪಡಿಸಿದ್ದರಿಂದ ದಂಧೆ ಕಡಿಮೆಯಾಗಿತ್ತಾದರೂ ಈಗ ಮತ್ತೆ ರಾಜಾರೋಷವಾಗಿ ನಡೆಯುತ್ತಿದೆ. ಅರಣ್ಯದೊಳಗಿರುವ ಬೆಳೆಬಾಳುವ ಕೋಟಿ ಕೋಟಿ ಸಂಪತ್ತು ದಂಧೆಕೋರರ ಪಾಲಾಗುತ್ತಿದೆ.

ಪಶ್ಚಿಮಘಟ್ಟದ ದಟ್ಟ ಅರಣ್ಯದ  ಸುಟ್ಟತ್ ಮಲೆ, ಕೂಜುಮಲೆಗಳಲ್ಲಿ ಬೆಲೆ ಬಾಳುವ ಹರಳು ಕಲ್ಲು ತೆಗೆಯಲು ಖಾಸಗಿ ಜಾಗದಲ್ಲಿ ಬಾವಿ ತೆಗೆದ ರೀತಿಯಲ್ಲಿ ದಟ್ಟ ಕಾಡಿನ ಮಧ್ಯೆ ಬಾವಿಯಂತೆ ಕೊರೆದು ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಸುಮಾರು 10-30 ಜನರ ತಂಡ ಅಕ್ರಮವಾಗಿ ಕೆಲಸ ಮಾಡುತ್ತಿದ್ದಾರೆ. 

ಅಗೆತದ ಸ್ಥಳಕ್ಕೆ ಸುದ್ದಿ ತಂಡ ಭೇಟಿ

ಹರಳುಕಲ್ಲು ಅಗೆಯುವ ಪ್ರಕರಣ ನಿರಂತರ ನಡೆಯುತ್ತಿರುವ ಸುದ್ದಿ ತಿಳಿದ ಸುದ್ದಿ ತಂಡ ಅದರ ಸಾಕ್ಷಾತ್ ವರದಿಗಾಗಿ ಜ.೫ರಂದು ಸುಟ್ಟತ್‌ಮಲೆ ಬೆಟ್ಟ ಹತ್ತಿತು. ಅಗೆತದ ಸ್ಥಳಕ್ಕೆ ಹೋಗುವ ದಾರಿಯನ್ನು ತೋರಿಸುವವರಿಲ್ಲದಿದ್ದರೂ ಊರಲ್ಲಿ ಸಂಗ್ರಹಿಸಿದ್ದ ಮಾಹಿತಿಯ ಆಧಾರದಲ್ಲಿ ಕಡಿದಾದ ಅರಣ್ಯ ದಾರಿಯಲ್ಲಿ ಮುನ್ನಡೆದ ತಂಡ ಐದಾರು ಕಿಲೋಮೀಟರ್ ಸಾಗಿ ಗಮ್ಯ ಸ್ಥಾನ ಸೇರಿತು. ಅಲ್ಲಿ ಹೋಗಿ ನೋಡಿದಾಗ ಸುಮಾರು 15 ರಿಂದ 20 ಜನ ಅಲ್ಲಿ ಕಾರ್ಯನಿರತರಾಗಿದ್ದುದು ಕಂಡು ಬಂತು. ಅಪರಿಚಿತರು ಬಂದರೆ ಅವರ ಮೇಲೆ ದಾಳಿ ನಡೆಯಬಹುದಾದ ಸಾಧ್ಯತೆಯ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಿದ್ದ ನಮ್ಮ ತಂಡ ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಂಡೇ ಹೋಗಿತ್ತು. ಸುದ್ದಿ ತಂಡವನ್ನು ನೋಡಿದ ಕೂಡಲೇ ಅಲ್ಲಿ ಕೆಲಸ ಮಾಡುತ್ತಿದ್ದವರು 

“ಯಾರು, ಯಾರು? ಏನು ಏನು?” ಎನ್ನುತ್ತಲೇ ಹಿಂಬದಿಯ ಗುಡ್ಡ ಹತ್ತಿ ಅವಿತುಕೊಂಡರು. ಹರಳುಕಲ್ಲು ಅಗೆಯಲು ಉಪಯೋಗಿಸುತ್ತಿರುವ ಪ್ಲಾಸ್ಟಿಕ್ ಬುಟ್ಟಿ, ಸ್ಟೀಲ್ ಬಾಲ್ದಿ, ಹತ್ತಿಪ್ಪತ್ತು ಮಂದಿಗೆ ಊಟ ತಿಂಡಿ ತಯಾರಿಸಲು ಪಾತ್ರೆಗಳು, ಅಡುಗೆ ಪರಿಕರಗಳು, ಅಡುಗೆ ತಯಾರಿಸಲು ಉರಿಯುತ್ತಿದ್ದ ಒಲೆ, ಉಪಯೋಗಿಸಿದ ಪರಿಕರಗಳು, ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಆಗ ತಾನೆ ತೆಗೆದ 5-6 ಕೆ.ಜಿಯಷ್ಟು ಕಲ್ಲುಗಳು ಸುದ್ದಿ ತಂಡದ ಕಣ್ಣಿಗೆ ಬಿದ್ದಿತು. ಸುದ್ದಿ ತಂಡ ಪರಿಸರವನ್ನೆಲ್ಲಾ ಚಿತ್ರೀಕರಿಸಿತು. 

ಅರಣ್ಯ ಇಲಾಖೆ ಶಾಮಿಲೇ?

ಬೆಲೆ ಬಾಳುವ ಹರಳು ಕಲ್ಲು ಅಕ್ರಮ ದಂದೆಯಲ್ಲಿ ಅರಣ್ಯ ಇಲಾಖೆ ಶಾಮೀಲಾಗಿದೆ ಎಂದು ಬಲವಾದ ಆರೋಪಗಳು ಕೇಳಿ ಬರುತ್ತಿದೆ. ದಂಧೆಕೋರರು ಮತ್ತು ಅರಣ್ಯ ಇಲಾಖೆಯವರ ಮಧ್ಯೆ ಮಾತುಕತೆ ನಡೆದೇ ಈ ದಂದೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಹರಳುಕಲ್ಲು ದಂಧೆ ನಡೆಯುವ ಸ್ಥಳದಿಂದ ಮೂರ್‍ನಾಲ್ಕು ಕಿಲೋಮೀಟರ್ ಅಂತರದಲ್ಲಿ ಅರಣ್ಯ ಇಲಾಖೆಯ ಕಾವಲು ಠಾಣೆ ಇದ್ದರೂ ಅವರ ಗಮನಕ್ಕೆ ಬಾರದಿರುವುದು ಈ ಆರೋಪಗಳಿಗೆ ಪುಷ್ಟಿ ನೀಡುವಂತಾಗಿದೆ. ಅಲ್ಲದೇ ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು, ಉಪ್ಪುಕಳ, ಗಾಳಿಬೀಡು ಕಡೆಗಳಲ್ಲಿಯೂ ದಂಧೆಕೋರರಿಗೆ ಮಾಹಿತಿ ನೀಡಲು ಮಾಹಿತಿದಾರರಿದ್ದಾರೆ. ಹೀಗಾಗಿಯೇ ದಂಧೆಕೋರರು ರಾಜಾರೋಷವಾಗಿ ಅರಣ್ಯದಿಂದ ಕೋಟಿ ಕೋಟಿ ಸಂಪತ್ತನ್ನು ಕೊಲ್ಲೆ ಹೊಡೆಯುತ್ತಿದ್ದಾರೆ. 

ಹರಳುಕಲ್ಲು ಅಗೆಯುವ ಸ್ಥಳ ಹೇಗಿದೆ? 

ದಂಧೆ ನಡೆಯುತ್ತಿರುವ ಸುಟ್ಟತ್ ಮಲೆಯ ಒಂದು ಜಾಗಕ್ಕೆ ಹೋದಾಗ ಅಲ್ಲಿ ಕೆಲವು ವರ್ಷಗಳ ಹಿಂದೆ ಪ್ರಕೃತಿ ವಿಕೋಪದಲ್ಲಿ ಸುಮಾರು 20 ರಿಂದ 30 ಅಡಿಯಷ್ಟು ಜರಿದು ಹೋದ ಜಾಗದಲ್ಲಿ ಈಗ ಮತ್ತೆ 20-30 ಅಡಿ ಕೊರೆಯಲಾಗಿದೆ. ಕಂದಕದ ಮೇಲ್ಬಾಗದವರೆಗೆ ನಡೆದುಕೊಂಡು ಹೋಗಲು ಕಾಡಿನಿಂದಲೇ ಕಡಿದ ಕಿಲಾರ್ ಬೋಗಿಯಂತಹ ಗಟ್ಟಿಮುಟ್ಟಾದ ಸುಮಾರು 20 ಅಡಿಯ 30-40 ಬಡಿಗೆಗಳನ್ನು ಜೋಡಿಸಿ, ಬಳ್ಳಿಯಿಂದ ಕಟ್ಟಲಾಗಿದೆ. ಕಂದಕದ ಒಳಗೆಯೂ ಮರದ ಬಡಿಗೆಗಳನ್ನು ಕಟ್ಟಿ ಒಳ ಹೋಗಲು ಮತ್ತು ಹೊರ ಬರಲು ಅನುಕೂಲವಾಗುವಂತೆ ಮಾಡಲಾಗಿದೆ. ಅಲ್ಲದೇ ಬಾವಿಯೊಳಗೆ ಸುಮಾರು 10 ಅಡಿಯಷ್ಟು ಕೆಳಗೆ ಇಳಿಯಲು ಮೆಟ್ಟಿಲಿನಂತೆ ಮಾಡಲಾಗಿದೆ. ಕೆಳಗಿನಿಂದ ಮಣ್ಣು ಸಮೇತ ಹರಳು ಕಲ್ಲು ತೆಗೆಯಲು ಬಾವಿಯಿಂದ ನೀರು ಸೇದುವಂತೆ ರಾಟೆ ಕಟ್ಟಿ ದಪ್ಪವಿರುವ ಉದ್ದದ ಹಗ್ಗಯನ್ನು ಇಳಿಸಲಾಗಿದೆ. ಹರಳು ಕಲ್ಲು ತೊಳೆಯುವುದಕ್ಕಾಗಿ ನೀರು ತುಂಬಿಸಲು ತೊಟ್ಟಿ ಮಾಡಲಾಗಿದೆ. ಈ ತೊಟ್ಟಿಗೆ ದಂಧೆಕೋರರು ಕಂದಕದಿಂದ ತೆಗೆದ ನೀರನ್ನು ತುಂಬಿಸಲಾಗುತ್ತದೆ.

(ಕಂದಕದಿಂದ ಹರಳು ಕಲ್ಲು ತೆಗೆಯಲು ಮರದ ಬಡಿಗೆಗಳನ್ನು ಪೋಣಿಸಿ ಕಟ್ಟಿರುವುದು)

ಹರಳು ಕಲ್ಲು ಹೀಗೆ ದೊರೆಯುತ್ತದೆ : ದಂಧೆಕೋರರು ಕಾಡಿಗೆ ಹೋಗಿ ಕಲ್ಲು ಮತ್ತು ಮಣ್ಣಿನ ರೂಪ ನೋಡಿ ಭೂಮಿಯನ್ನು ಅಗೆಯುತ್ತಾರೆ. ಅಗೆದು ಸ್ವಲ್ಪ ಆಳಕ್ಕೆ ಹೋದಂತೆ ಕಲ್ಲು ಬಂಡೆಗಳ ಎಡೆಯಲ್ಲಿ ಮಣ್ಣಿನಲ್ಲಿ ಸರಪಳಿಯಂತೆ ಹರಳುಕಲ್ಲು ದೊರೆಯುತ್ತದೆ. ಇದನ್ನು ಮೇಲೆ ತಂದು ತೊಳೆದು ಬೇರ್ಪಡಿಸಲಾಗುತ್ತದೆ. ಇದು ಆಳಕ್ಕೆ ಹೋಗಿ ಅಲ್ಲಿಂದ ಮತ್ತೆ ಅಡ್ಡವಾಗಿ ಹೋಗಲೂಬಹುದು ಅಥವಾ ಹೆಚ್ಚು ಹೆಚ್ಚು ದೊರೆಯಲೂಬಹುದು. ಇನ್ನು 7ರಿಂದ 8 ಅಡಿಗಳಷ್ಟು ಅಗೆದು ಹರಲುಕಲ್ಲು ಸಿಗದೇ ಮುಚ್ಚಲ್ಪಟ್ಟ ಘಟನೆಗಳು ನಡೆದಿದೆ. 

ಸುಟ್ಟತ್ ಮಲೆ ಕಾಡಿನ 4 ಕಡೆಗಳಲ್ಲಿ ಹರಲುಕಲ್ಲು ದಂಧೆ ನಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಹರಳುಕಲ್ಲು ಅಗೆಯುವ ಸಂದರ್ಭ ಮಣ್ಣಿನಡಿಗೆ ಸಿಲುಕಿ ಇಬ್ಬರು ಮೃತ ಪಟ್ಟಿದ್ದು ಅದರಲ್ಲಿ ಒಬ್ಬರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದುದರಿಂದ ಆ ಸ್ಥಳಕ್ಕೆ ಬಟ್ರಪಾಯ ಎಂದು ಹೆಸರು ಬಂದಿದೆ. ಬಾಂಬ್ ಅಳವಡಿಸಿ ಕಲ್ಲುಗಳನ್ನು ಬೇರ್ಪಡಿಸಿ ಹರಳುಕಲ್ಲು ತೆಗೆದ ಸ್ಥಳಕ್ಕೆ ಬಾಂಬ್ ಪಾಯ ಎಂದೂ, ಬೋಲ್ಟ್ ರೀತಿಯಾಗಿ ಹರಳುಕಲ್ಲು ಸಿಗುವ ಸ್ಥಳಕ್ಕೆ ಬೋಲ್ಟು ಗುಡ್ಡೆ ಮತ್ತು ನೀರಿನೊಂದಿಗೆ ಹರಲುಕಲ್ಲು ಸಿಗುವ ಜಾಗಕ್ಕೆ ನೀರು ಪಾಯವೆಂದು ಹೆಸರು ಬಂದಿದ್ದು, ಸುಟ್ಟತ್ ಮಲೆಯ ಈ ನಾಲ್ಕು ಕಡೆಗಳಿಂದ ಹರಳುಕಲ್ಲು ತೆಗೆಯಲಾಗುತ್ತದೆ ಅಲ್ಲದೇ ಕೂಜುಮಲೆಯಲ್ಲಿಯೂ ಹರಳುಕಲ್ಲು ತೆಗೆಯಲಾಗುತ್ತಿದೆ. 

ಹರಳುಕಲ್ಲು ತೆಗೆಯಲು ಬಾವಿಯಂತೆ ಕೊರೆಯುತ್ತಾ ಹೋದಂತೆ ಕೆಳಭಾಗದಲ್ಲಿ ಕತ್ತಲೆ ಆವರಿಸುತ್ತದೆ. ಹೀಗಾಗಿ ಟಾರ್ಚ್ ಸಹಾಯ ಪಡೆದು ಕಂದಕದ ಒಳಗೆ ಇಳಿಯಬೇಕಾಗುತ್ತದೆ. ಕಂದಕವು 2 ರಿಂದ 3 ಅಡಿ ತ್ರೀಕೋನಾಕಾರದಲ್ಲಿ ಇದ್ದು, ಮಣ್ಣು ಕುಸಿಯದಂತೆ ಸುತ್ತಲೂ ಮರದ ಬಡಿಗೆಗಳನ್ನು ಪೋಣಿಸಿ ಕಟ್ಟಲಾಗಿದೆ. 

(ಹರಳುಕಲ್ಲು ತೊಳೆಯುವ ನೀರಿನ ತೊಟ್ಟಿ ಮತ್ತು ಪರಿಕರಗಳು)

ಹಣದಾಸೆಗಾಗಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಕಾರ್ಮಿಕರು

ಹರಳುಕಲ್ಲು ದಂಧೆಯಲ್ಲಿ ತೊಡಗಿರುವ ಕಾರ್ಮಿಕರು ತಮ್ಮ ಬದುಕು ಸಾಗಿಸುವುದರೊಂದಿಗೆ ಹೆಚ್ಚಿನ ಹಣದಾಸೆಗೆ ಬಲಿಬಿದ್ದು ದುಡಿಯುತ್ತಿದ್ದಾರೆ. ಮನೆಮಂದಿಯನ್ನು ಬಿಟ್ಟು ಬಂದು, ವಾರನುಗಟ್ಟಲೆ ಇಲ್ಲೇ ಬೀಡು ಬಿಟ್ಟು ತಮ್ಮ ಪ್ರಾಣವನ್ನು ಲೆಕ್ಕಿಸದೆ ದುಡಿಯುತ್ತಿದ್ದಾರೆ. ಮಾಟೆಯಂತೆ ಕೊರೆದು ಹರಲುಕಲ್ಲು ಅಗೆಯುತ್ತಾ ಹೋದಂತೆ ಉಸಿರಾಡಲು ಆಕ್ಸಿಜನ್ ತೊಂದರೆ ಸಂಭವಿಸುತ್ತದೆ. ಆಗ ಪೂರೈಕೆಗೆ ಪ್ಲಾಸ್ಟಿಕ್ ಮತ್ತು ಪೈಪ್ ಅಳವಡಿಸಿ ಉಸಿರಾಟಕ್ಕೆ ವ್ಯವಸ್ಥೆ ಮಾಡಿಕ್ಳೊತ್ತಾರೆ. ಆಕ್ಸಿಜನ್ ಕೊರತೆ ಉಂಟಾದರೆ ಕಾರ್ಮಿಕನ ಸಾವಿಗೂ ಕಾರಣವಾಗಬಹುದು. ಮಣ್ಣು ಕುಸಿತಗೊಂಡರೆ ಕಾರ್ಮಿಕನ ಬದುಕೇ ಅಂತ್ಯವಾಗುತ್ತದೆ.  

ಓರೆಕೋರೆಯಾಗಿ ಸಾಗುವ ಮಾಟೆಗಳ ಒಳಭಾಗದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡು ಪ್ರಾಣಾಪಾಯವಾಗುವ ಸಾಧ್ಯತೆ ಇದೆ. ಅಥವಾ ಒಂದೊಮ್ಮೆಲೆ ಮಣ್ಣು ಕುಸಿತಗೊಂಡು ಒಳಭಾಗದಲ್ಲಿರುವ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆಯೂ ಇದೆ. ಮದ್ಯ ಸೇವಿಸಿ, ಪ್ರಾಣದ ಹಂಗು ತೊರೆದು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮನ್ನು ತಾವೇ ಅಪಾಯಕ್ಕೆ ಒಡ್ಡಿಕೊಂಡು ಹರಳು ಕಲ್ಲು ತೆಗೆಯುವ ಕೆಲಸ ಮಾಡುತ್ತಿದ್ದಾರೆ. 

ಹೇಗೆ ನಡೆಯುತ್ತಿದೆ :  ಹರಳುಕಲ್ಲು ಅಕ್ರಮ ದಂಧೆಯಲ್ಲಿ ದೊಡ್ಡದೊಂದು ತಂಡವೇ ಕೆಲಸ ಮಾಡುತ್ತಿದೆ. ಸೋಮವಾರಪೇಟೆ, ಗಾಳಿಬೀಡು ಮತ್ತಿತರ ಕಡೆಗಳ ಕೆಲ ಯುವಕರು ಇಲ್ಲಿ ಕೆಲಸದಲ್ಲಿ ತೊಡಗಿದ್ದು, ಹರಳುಕಲ್ಲು ತೆಗೆದು ತೊಳೆದು ಸಂಗ್ರಹಿಸುವ ಕೆಲಸ ಇವರು ಮಾಡಿದರೆ, ಇದನ್ನು ಸಾಗಿಸುವ ಕೆಲಸ ಇನ್ನೊಂದು ತಂಡ ಮಾಡುತ್ತಿದೆ. ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು ಪರಿಸರದ ಕೆಲವರೂ ಈ ದಂಧೆಯಲ್ಲಿ ಸೇರಿಕೊಂಡಿದ್ದಾರೆ.

ಪ್ರಕೃತಿಯ ಮಡಿಲಿನಿಂದ ಬಗೆದು ತೆಗೆದು ಮಾರಾಟವಾಗುತ್ತಿದ್ದ ಹರಳುಕಲ್ಲು ಕೆ.ಜಿ.ಗೆ  20000ದಿಂದ 40000 ದವರೆಗೆ ಮಾರಾಟವಾಗುತ್ತಿದೆ. ಒಂದು ದಿನದಲ್ಲಿ 10 ಕೆ.ಜಿಯಿಂದ 100 ಕೆ.ಜಿ.ಯವರೆಗೆ ಹರಲುಕಲ್ಲು ಸಂಗ್ರಹ ಮಾಡಲಾಗುತ್ತದೆ.

ಸುಟ್ಟತ್ ಮಲೆಯಲ್ಲಿ ಇಬ್ಬರು ಮಣ್ಣಿನಡಿಗೆ ಸಿಲುಕಿದ್ದರು: ಸುಟ್ಟತ್ ಮಲೆ ಮತ್ತು ಕೂಜುಮಲೆಯಲ್ಲಿ ಹಲವು ವರ್ಷಗಳ ಹಿಂದೆ ಹರಳುಕಲ್ಲು ಅಗೆಯಲು ಹೋದ ವ್ಯಕ್ತಿಗಳಿಬ್ಬರು ಮಣ್ಣಿನಡಿಗೆ ಸಿಲುಕಿ ಮೃತಟ್ಟಿದ್ದರು. 

(ಅರಣ್ಯದೊಳಗೆ ಅಡುಗೆ ಮಾಡುತ್ತಿದ್ದ ಒಲೆ)

ಹರಳು ಕಲ್ಲು ಮೊದಲು ಕಾಣಿಸಿಕೊಂಡಿದ್ದು ಮತ್ತು ಎಲ್ಲರ ಜೇಬಲ್ಲಿ ಹಣ ಓಡತೊಡಗಿದ್ದು ಹೇಗೆ?

೧೯೯೦ರ ವೇಳೆ ಮೊದಲ ಬಾರಿ ಕೂಜುಮಲೆಯಲ್ಲಿ ಈ ಹರಳು ಕಾಣಿಸಿಕೊಂಡಿತ್ತು. ಆದರೆ ಇಲ್ಲಿನ ಜನಕ್ಕೆ ಇದು ಸಾವಿರಾರು ರೂ. ಬೆಲೆಬಾಳುವ ವಸ್ತು ಎಂಬುದು ಗೊತ್ತೇ ಇರಲಿಲ್ಲ,  ಸುಬ್ರಹ್ಮಣ್ಯ ಮತ್ತು ಕೊಡಗು ಗಡಿಭಾಗಕ್ಕೆ ಹೊಂದಿಕೊಂಡಿರುವ ಕಡಮಕಲ್ ರಬ್ಬರ್ ಎಸ್ಟೇಟ್‌ಗೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರೊಬ್ಬರಿಗೆ ಹರಳು ಕಲ್ಲಿನ ವಿಚಾರ ತಿಳಿಯಿತು. ಆ ಕಾರ್ಮಿಕ ಅದನ್ನು ಸಂಗ್ರಹಿಸಿ ತಂದು ಹೊರಗಡೆ ಮಾರತೊಡಗಿದನು. ಇದರಿಂದ ಆತ ದಿನ ಕಳೆದಂತೆ ಶ್ರೀಮಂತನಾಗತೊಡಗಿದ. ಕೆಲಸಕ್ಕೆಂದು ಬಂದ ಕಾರ್ಮಿಕ ದಿಢೀರ್ ಶ್ರೀಮಂತನಾದ ಬಗ್ಗೆ ಕುತೂಹಲ ಇಲ್ಲಿಯ ಗ್ರಾಮಸ್ಥರನ್ನು ಕಾಡಿತ್ತಲ್ಲದೆ, ಆತನನ್ನು ಹಿಂಬಾಲಿಸತೊಡಗಿದರು. ಆಗ ಹರಳು ಕಲ್ಲಿನ ನಿಜಮುಖ ಗೋಚರಿಸಿತ್ತು. ಹೀಗಾಗಿ ಇಲ್ಲಿಯವರು ಹರಳು ಕಲ್ಲು ದಂಧೆಯ ಬೆನ್ನು ಬಿದ್ದರು. ಆಗ ತಂಡಗಳನ್ನು ಮಾಡಿ, ಹರಳು ಕಲ್ಲು ಅಗೆಯಲು ರಾತ್ರಿ ವೇಳೆ ಹೋಗುತ್ತಿದ್ದ ಜನ ಟಾರ್ಚ್ ಬೆಳಕಿನಲ್ಲಿಯೇ ಗುಡ್ಡ ಅಗೆದು ಕಲ್ಲು ತೆಗೆದು ಅದನ್ನು ಹೊತ್ತು ತಂದು ನದಿ ತೀರದಲ್ಲಿ ತೊಳೆದು ಕಲ್ಲನ್ನು ಆಯ್ದು ಮಾರಾಟ ಮಾಡುತ್ತಿದ್ದರು. ಇದನ್ನು ಖರೀದಿಸಲೆಂದೇ ರಾಜಸ್ಥಾನ, ಕೇರಳ, ಮೈಸೂರು ಮತ್ತಿತರ ಕಡೆಗಳಿಂದ ವ್ಯಾಪಾರಿಗಳು ಬರುತ್ತಿದ್ದರು. ಈ ಹರಳು ಕಲ್ಲುಗಳನ್ನು ಆಭರಣಕ್ಕಾಗಿ ಉಪಯೋಗಿಸಲಾಗುತ್ತದೆ.

ಹರಳು ಕಲ್ಲಿಗೆ ಹಣ ಸಿಗುತ್ತಿದ್ದರಿಂದ ಜನ ಇದರತ್ತ ಆಸಕ್ತಿ ವಹಿಸತೊಡಗಿದ್ದರು. ಆಗ ಎಲ್ಲರ ಜೇಬಲ್ಲೂ ಹಣ ಓಡತೊಡಗಿತ್ತು. ಈ ವಿಚಾರ ಆಗ ಮಾಧ್ಯಮಗಳಲ್ಲಿ ಸುದ್ದಿಯಾಗತೊಡಗಿತ್ತು. ಬಳಿಕ ಅರಣ್ಯ ಇಲಾಖೆ ತಪಾಸಣಾ ಠಾಣೆಗಳನ್ನು ನಿರ್ಮಿಸಿ , ಕಾವಲಿಗೆ ಸಿಬ್ಬಂದಿ ನಿಯೋಜಿಸಿತ್ತು. ಆಗಿನ ಕಾಲದಲ್ಲಿ ಕೆ.ಜಿ.ಗೆ ೨೦೦೦ ರೂಪಾಯಿಗಳಿಂದ ದಿಂದ ೮೦೦೦ ರೂ.ಗಳವರೆಗೆ ದೊರೆಯುತ್ತಿದೆಂದು ಹೇಳಲಾಗುತ್ತಿತ್ತು. ಈ ಕಾಲಘಟ್ಟದಲ್ಲಿ ಕಲ್ಮಕಾರಿನ ಸಂತೆಡ್ಕ ಪ್ರದೇಶ ಜನಸಂದಣಿ ಹೆಚ್ಚಾಗಿ ಪಟ್ಟಣದ ಸ್ವರೂಪ ಪಡೆದಿತ್ತು. ಹರಳುಕಲ್ಲು ಖರೀದಿಸಲು ಮಡಿಕೇರಿ, ಮೈಸೂರು ಕಡೆಯ ವ್ಯಾಪಾರಸ್ಥರು ಬರುತ್ತಿದ್ದರು. ಹಣದಾಸೆಗೆ ಬಲಿಬಿದ್ದ ಜನ ಊರವರು-ಪರವೂರವರೆಂಬ ಭೇದವಿಲ್ಲದೇ ಗುಡ್ಡ ಹತ್ತಲು ಕಲ್ಮಕಾರು ಕಡೆಗೆ ಧಾವಿಸುತ್ತಿದ್ದರು.  ಅಂತಹ ಸಂದರ್ಭದಲ್ಲಿ ಕೂಜುಮಲೆ ಮತ್ತು ಸುಟ್ಟತ್‌ಮಲೆಯಲ್ಲಿ ಸಂಭವಿಸಿದ ಎರಡು ಸಾವು ಜನರಲ್ಲಿ ಆತಂಕ, ಕಾನೂನುಪಾಲಕರಲ್ಲಿ ಒತ್ತಡ ಸೃಷ್ಠಿಸಿ, ಹೊರಗಿನಿಂದ ಜನ ಬಾರದಂತಹ ವಾತಾವರಣ ನಿರ್ಮಿಸಿತ್ತು. 

ಹರಳುಕಲ್ಲು ದಂಧೆ ಬೆಳಕಿಗೆ ಬರಲು ಕಾರಣವೇನು : ಹಲವು ವರ್ಷಗಳ ಹಿಂದೆ ಸುದ್ದಿ ಮಾಡಿದ್ದ ಹರಳುಕಲ್ಲು ದಂಧೆಗೆ ಅರಣ್ಯ ಇಲಾಖೆ ಕಡಿವಾಣ ಹಾಕಿದ್ದರೂ, ಆ ಬಳಿಕ ಮತ್ತೆ ಕೆಲವು ವರ್ಷಗಳ ಹಿಂದೆಯೇ ಆರಂಭಗೊಂಡಿತ್ತು. ಆದರೆ ಇದು ಪ್ರಚಾರಕ್ಕೆ ಬಂದಿರಲಿಲ್ಲ. ಕೆಲವು ಸಮಯಗಳ ಹಿಂದೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ದೊರೆತು ಹರಳುಕಲ್ಲು ಸಮೇತ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇದು ರಾಜಕೀಯ ತಿರುವು ಪಡೆದುಕೊಂಡಿತ್ತಲ್ಲದೇ, ಸ್ಥಳೀಯ ಕೆಲವರ ನೇತೃತ್ವದಲ್ಲಿ ಆ ಅಧಿಕಾರಿಯ ವರ್ಗಾವಣೆಗೂ ಕಾರಣವಾಯಿತು. ಇದೇ ಪ್ರಕರಣ ಹಲವು ತಿರುವುಗಳನ್ನು ಪಡೆದು, ಅಕ್ರಮ ಹರಳುಕಲ್ಲು ದಂಧೆ ನಡೆಯುತ್ತಿರುವ ಬಗ್ಗೆ ಪ್ರಚಾರ ಪಡೆಯತೊಡಗಿತು.   

ಪ್ರಕೃತಿ ವಿಕೋಪದ ನಡುವೆ ಅಕ್ರಮ ದಂಧೆ : ಕೆಲವು ವರ್ಷಗಳ ಹಿಂದೆ ಕೊಡಗು, ಬೆಳ್ತಂಗಡಿ, ಕೇರಳಗಳಲ್ಲಿ ಪ್ರಕೃತಿ ದುರಂತಗಳು ಸಂಭವಿಸಿ ಭೂ ಕುಸಿತಗಳು ಉಂಟಾಗಿದೆ. ಕಲ್ಮಕಾರಿನ ಕೆಲವು ಕಡೆಗಳಲ್ಲಿಯೂ ಪ್ರಕೃತಿ ದುರಂತಗಳು ಸಂಭವಿಸಿದೆ. ಅಲ್ಲದೇ ಕಂದಕ, ಸುರಂಗಗಳು ನಿರ್ಮಾಣವಾಗಿ ಅದೆಷ್ಟೋ ಮರಗಳು ಧರೆಗುರುಳಿದ್ದವು. ಆದರೆ ಈಗ ಅದೇ ಪ್ರಕೃತಿಯ ಮಡಿಲಿನಲ್ಲಿ ಮತ್ತೆ ಇಂಥಹ ಅಕ್ರಮಗಳು ನಡೆದು, ಭಾರೀ ಗಾತ್ರದ ಕೊಳವೆಗಳನ್ನು ಕೊರೆದರೆ ಮತ್ತೆ ಹೆಚ್ಚಿನ ಪ್ರಮಾಣದ ಪ್ರಕೃತಿ ವಿಕೋಪಗಳು ನಡೆಯದಿದ್ದಿತೇ ಎಂಬ ಪ್ರಶ್ನೆ ಮೂಡುತ್ತಿದೆ. 

(ಕಂದಕಕ್ಕೆ ರಾಟೆ ಮತ್ತು ಬಳ್ಳಿ ಅಳವಡಿಸಿರುವುದು)

ಅರಣ್ಯ ಇಲಾಖೆಗೆ ಸವಾಲಾಗಿತ್ತು 

ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ಹೊತ್ತಿನ ದಾಳಿ ಮಾಡುವ ಯೋಜನೆ ರೂಪಿಸಿದ್ದರೂ ಪ್ರಯೋಜನವಾಗುತ್ತಿರಲಿಲ್ಲ. ಯಾಕೆಂದರೆ ಹರಳು ಕಲ್ಲು ತೆಗೆಯುವ ತಂಡದ ಸದಸ್ಯರು ಆಯಕಟ್ಟಿನಲ್ಲಿ ಕುಳಿತು ಅರಣ್ಯ ಸಿಬ್ಬಂದಿ ಬರುತ್ತಿzರಾ ಎಂದು ಕಾವಲು ಕಾಯುತ್ತಿದ್ದರು. ಅರಣ್ಯ ಇಲಾಖೆ ಅಥವಾ ಪೊಲೀಸರು ಬರುತ್ತಿzರೆ ಎಂಬುದು ಗೊತ್ತಾಗುತ್ತಿದ್ದಂತೆ ಪಟಾಕಿ ಸಿಡಿಸುತ್ತಿದ್ದರು. ದಂಧೆಕೋರರು ಮೇಲ್ಭಾಗದಲ್ಲಿರುವ ಕಾರಣದಿಂದ ಕೆಳಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟದತ್ತ ಬರುತ್ತಿzರೆ ಎಂಬುದರ ಸಂಕೇತವಾಗಿ ಪಟಾಕಿ ಶಬ್ದ ಕೇಳುತ್ತಿದ್ದಂತೆ ಹರಳು ಕಲ್ಲು ತೆಗೆಯುತ್ತಿದ್ದವರು ಅಲ್ಲಿಂದ ಪರಾರಿಯಾಗುತ್ತಿದ್ದರು. ಹೀಗಾಗಿ ಹರಳು ಕಲ್ಲು ತೆಗೆಯುವವರನ್ನು ಹಿಡಿದು ಬಂಧಿಸುವುದು ಆಗ ಅರಣ್ಯ ಇಲಾಖೆಗೆ ಸವಲಾಗಿಯೂ ಪರಿಣಮಿಸಿತ್ತು.

ಸಿಸಿ ಕ್ಯಾಮರ : ಸುಟ್ಟತ್ ಮಲೆ, ಕೂಜುಮಲೆ ಕಾಡಿಗೆ ತೆರಳುವ ಬಾಳುಗೋಡಿನ ಉಪ್ಪುಕಳ, ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆಯ ಕಡೆಯಿಂದ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಇದು ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದು ಪ್ರಶ್ನಾರ್ಥಕವಾಗಿದೆ.  ಒಟ್ಟಾಗಿ ಕೈತುಂಬಾ ಹಣ ಸಿಗುತ್ತದೆ ಎಂಬ ಕಾರಣಕ್ಕೆ ರಿಸ್ಕ ತೆಗೆದುಕೊಂಡು ಗುಡ್ಡದಲ್ಲಿ ಕಂದಕ, ಸುರಂಗಗಳನ್ನು ತೆಗೆದು ಹರಳು ಹುಡುಕುತ್ತಿದ್ದಾರೆ. ಜತೆಗೆ ಸಾವು-ನೋವು ಸಂಂಭವಿಸುತ್ತಿದೆ. ಅರಣ್ಯದೊಳಗಿನಿಂದ ಕೋಟಿ ಕೋಟಿ ಬೆಳೆ ಬಾಳುವ ಸಂಪತ್ತು ದಂಧೆಕೋರರ ಪಾಲುಗುವುದಕ್ಕೆ ಕಡಿವಾಣ ಬೀಳಲೇ ಬೇಕಾಗಿದೆ. 

ಅರಣ್ಯ ಇಲಾಖೆ, ಪೋಲೀಸ್ ಇಲಾಖೆ, ಗಣಿ ಇಲಾಖೆಗಳು  ಮಾತ್ರ ವಲ್ಲದೆ, ಎರಡು ಜಿಗಳ ಜಿಡಳಿತ ಇತ್ತ ಗಮನಹರಿಸಿ ಸುಟ್ಟತ್‌ಮಲೆ ಮತ್ತು ಕೂಜುಮಲೆಗೆ ಬಿಗಿ ಬಂದೋಬಸ್ತ ಏರ್ಪಡಿಸಿ, ರಕ್ಷಿಸಬೇಕಿದೆ. ಅಲ್ಲದೇ ದಂಧೆ ನಡೆಸುವವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕಾಗಿದೆ. ಇಲ್ಲದೆ ಹೋದರೆ ಪಶ್ಚಿಮ ಘಟ್ಟದ ಅರಣ್ಯದೊಳಗಿನ ಸಂಪತ್ತು ದಂಧೆಕೋರರ ಕೈಗೆ ಸಿಕ್ಕಿ ನಾಶವಾಗುವುದರಲ್ಲಿ ಸಂಶಯವೇ ಇಲ್ಲ.

ಮರ್ಕಂಜದ ಮೈರಾಜೆ ಕಲ್ಲಿಗೂ ಕಣ್ಣು 

(ಮೈರಾಜೆ ಕಾಡಿನಲ್ಲಿ ಕಲ್ಲು ಅಗೆದ ದೃಶ್ಯ)

ಮರ್ಕಂಜ ಗ್ರಾಮದ ಮೈರಾಜೆ ಕಾಡಿನಿಂದ ಕೆಲವು ತಿಂಗಳ ಹಿಂದೆ ಅಕ್ರಮವಾಗಿ ಕಲ್ಲುಗಳನ್ನು ತೆಗೆದು ಸಾಗಿಸಲಾಗಿತ್ತು. ಆದರೆ ಸುಟ್ಟತ್‌ಮಲೆ, ಕೂಜುಮಲೆಯಲ್ಲಿ ಕೊರೆದಂತೆ ಆಳವಾದ ಕಂದಕ ಕೊರೆಯದೆ ಭೂಮಿಯ ಮೇಲ್ಭಾಗದಲ್ಲಿ ವಿವಿಧ ಬಣ್ಣಗಳಿಂದ ಕೂಡಿದ ಕಲ್ಲುಗಳನ್ನು ಗುಡ್ಡದಿಂದ ಕೆಳಭಾಗದ ರಸ್ತೆಗೆ ಉರುಳಿಸಿ ಅಲ್ಲಿಂದ ಪಿಕಪ್, ಟಿಪ್ಪರ್, ಕಾರು, ರಿಕ್ಷಾಗಳಲ್ಲಿ ಕೊಂಡೊಯ್ಯಲಾಗುತ್ತಿತ್ತು. ಇಲ್ಲಿಯೂ ಅರಣ್ಯಾ ಇಲಾಖೆಯ ಸಿಬ್ಬಂದಿಗಳು ದಂಧೆಕೋರನ್ನು ಹಿಡಿದಾಗ ಅವರೊಳಗೆ ಹೊಕೈಗಳಾಗಿ ಕೊನೆಗೆ ಪ್ರಕರಣ ಇತ್ಯರ್ಥ ಕಂಡಿತ್ತು. ಆದರೆ ಇಲ್ಲಿ ದೊರೆಯುವ ಕಲ್ಲುಗಳು ಅಷ್ಟೊಂದು ಬೆಲೆ ಬಾಳದೇ ಇರುವ ಕಾರಣದಿಂದ ದಂಧೆಕೋರರು ಈ ಜಾಗ ಕೈ ಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.