ಖಾಸಗಿ ನೊಂದಣಿ ಹೊಂದಿರುವ ವೈಟ್ ಬೋರ್ಡ್ ವಾಹನಗಳು ಕಾನೂನುಬಾಹಿರವಾಗಿ ಬಾಡಿಗೆ ನಡೆಸುತ್ತಿದ್ದು ಇದರಿಂದಾಗಿ ಸರಕಾರಕ್ಕೆ ಸರಿಯಾಗಿ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಿ ಟ್ಯಾಕ್ಸಿ ನಡೆಸುತ್ತಿರುವ ಟ್ಯಾಕ್ಸಿ ಚಾಲಕರಿಗೆ ಹಾಗೂ ಮಾಲಕರಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಟ್ಯಾಕ್ಸಿ ವಾಹನಗಳ ಚಾಲಕ ಮಾಲಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಸುಳ್ಯ ತಾಲೂಕು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಷನ್ ಸಮಿತಿ ಇಂದು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರಿಗೆ ಮನವಿಯನ್ನು ನೀಡಿದರು.
ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ನಡೆಸುವವರು ಕಾನೂನಿನ ಚೌಕಟ್ಟನ್ನು ಮೀರಿ ರಾಜ ರೋಷದಿಂದ ವ್ಯವಹರಿಸುತ್ತಿರುವ ಬಗ್ಗೆ ಹಲವು ಬಾರಿ ಸರ್ಕಾರದ ಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ದಿವ್ಯ ಮೌನ ವಹಿಸಿರುವುದು ಖೇದಕರ. ಇವರು ರಾಜ್ಯ ಸರ್ಕಾರದ ಖಜಾನೆಗೆ ತೆರಿಗೆ ಸಂದಾಯ ಮಾಡದೆ ಬೊಕ್ಕಸಕ್ಕೆ ಭಾರೀ ನಷ್ಟವನ್ನು ಉಂಟು ಮಾಡುತ್ತಿದೆ ಅಲ್ಲದೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ವಿಮಾ ಸೌಲಭ್ಯವಿಲ್ಲದಿರುವ ವಿಷಯವನ್ನು ತಿಳಿಸಿದೆ ಪ್ರಯಾಣಿಕರ ಜೀವದೊಡನೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಸುಳ್ಯದಲ್ಲಿ ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ನಡೆಸುತ್ತಿರುವವರ ಸುಮಾರು ಐವತ್ತಕ್ಕೂ ಹೆಚ್ಚು ವಾಹನಗಳ ಸಂಖ್ಯೆಯನ್ನು ನಮೂದಿಸಲಾಗಿದೆ.
ಮನವಿಯನ್ನು ಸ್ವೀಕರಿಸಿರುವ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರು ಈ ವಿಷಯದ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಟ್ಯಾಕ್ಸಿ ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಜಯಂತರ ಹರ್ಲಡ್ಕ, ಕಾರ್ಯದರ್ಶಿ ಗಣೇಶ್ ಪ್ರಸಾದ್ , ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.