ಮರಸಂಕ ಅಂಗನವಾಡಿ ಶಿಕ್ಷಕಿ ಬದಲಾವಣೆ ಕುರಿತಂತೆ ಸಿ.ಡಿ.ಪಿ.ಒ. ಸ್ಥಳಕ್ಕೆ ಬರುವಂತೆ ಗ್ರಾಮಸ್ಥರ ಪಟ್ಟು
ಜಾಲ್ಸೂರು ಗ್ರಾಮ ಪಂಚಾಯತ್ ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಪ್ರತೀ ಗ್ರಾಮ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದು, ಕೇವಲ ಭರವಸೆಯೇ ಹೊರತು ಇದುವರೆಗೆ ಯಾವುದೇ ಸಮಸ್ಯೆಗಳು ಇತ್ಯರ್ಥ ಆಗದೇ ಇರುವುದರಿಂದ ಜ.19ರಂದು ನಡೆದ ನಮ್ಮ ಗ್ರಾಮ ನಮ್ಮ ಯೋಜನೆಗೆ (ದೂರ ದೃಷ್ಟಿ ಯೋಜನೆಯಡಿ) ವಿಶೇಷ ಗ್ರಾಮಸಭೆಯನ್ನು ಬಹಿಷ್ಕರಿಸಿದ ಘಟನೆ ವರದಿಯಾಗಿದೆ.
ನಮ್ಮ ಗ್ರಾಮ ನಮ್ಮ ಯೋಜನೆ (ದೂರದೃಷ್ಟಿ ಯೋಜನೆಯಡಿ) ಗುಚ್ಚ ತಯಾರಿಕೆಯ ವಿಶೇಷ ಗ್ರಾಮಸಭೆಗೆ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ, ನೋಡೆಲ್ ಅಧಿಕಾರಿಗಳು ಹಾಗೂ ಪಂಚಾಯತಿ ಸದಸ್ಯರುಗಳು ಸೇರಿ ಗ್ರಾಮ ಪಂಚಾಯತಿಯಿಂದ ಸಭಾಭವನಕ್ಕೆ ತೆರಳುವ ಸಂದರ್ಭದಲ್ಲಿ ಗ್ರಾ.ಪಂ. ವಠಾರದಲ್ಲಿ ಸೇರಿದ ಗ್ರಾಮಸ್ಥರು ಮರಸಂಕ ಅಂಗನವಾಡಿ ಶಿಕ್ಷಕಿಯನ್ನು ಬದಲಾವಣೆ ಮಾಡುವಂತೆ ಕಳೆದ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಗ್ರಾಮಸಭೆ ಕಳೆದು ಸುಮಾರು ನಾಲ್ಕು ತಿಂಗಳು ಕಳೆದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ನಾಗರಿಕರಾದ ಸತ್ಯಶಾಂತಿ, ಕೃಷ್ಣಪ್ಪ ನಾಯ್ಕ ಮಹಾಬಲಡ್ಕ, ಸತೀಶ್ ಮರಸಂಕ ವಿನೋದ್ ಕುಮಾರ್ ಮಹಾಬಲಡ್ಕ ಮತ್ತಿತರರು ಹೇಳಿ ಇವತ್ತಿನ ವಿಶೇಷ ಗ್ರಾಮಸಭೆಗೆ ಮುಖ್ಯವಾಗಿ ಸಿ.ಡಿ.ಪಿ.ಒ. ಬರಲೇಬೇಕು. ಅವರನ್ನು ಕರೆಯಿಸಿ ಎಂದು ಒಕ್ಕೋರಲಾಗಿ ಹೇಳಿದರು. ಆಗ ಪಿ.ಡಿ.ಒ. ಸುಬ್ಬಯ್ಯ ಅವರು ಮಾತನಾಡಿ ಮರಸಂಕ ಅಂಗನವಾಡಿ ಶಿಕ್ಷಕಿ ಬದಲಾವಣೆ ಕುರಿತಂತೆ ಕಳೆದ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿ ಸುಳ್ಯ ಸಿ.ಡಿ.ಪಿ.ಒ. ಕಛೇರಿಗೆ ಕಳುಹಿಸಿಕೊಡಲಾಗಿದೆ. ಅವರು ಮೇಲಧಿಕಾರಿಗಳಿಗೆ ಕಳುಹಿಸಿದ್ದೇವೆ ಎಂದು ನಮಗೆ ಉತ್ತರಿಸಿದ್ದಾರೆ ಎಂದರಲ್ಲದೆ, ಈದಿನ ವಿಶೇಷ ಗ್ರಾಮಸಭೆ ಇರುವಂತದ್ದು, ರೆಗ್ಯುಲರ್ ಗ್ರಾಮಸಭೆ ಆದರೆ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಬಹುದಿತ್ತು ಎಂದು ಹೇಳಿದರು. ಆಗ ಮತ್ತೆ ಸತ್ಯಶಾಂತಿ, ಕೃಷ್ಣಪ್ಪ ನಾಯ್ಕ, ವಿನೋದ್ ಕುಮಾರ್ ಮಾತನಾಡಿ ಇವತ್ತಿನ ಗ್ರಾಮಸಭೆಗೆ ಸಿ.ಡಿ.ಪಿ.ಒ. ಬರುವಂತೆ ಫೋನ್ ಮಾಡಿ ತಿಳಿಸಿ, ಅವರೊಂದಿಗೆ ನಾವೇ ಕೇಳುತ್ತೇವೆ ಎಂದು ಹೇಳಿದರು.
ಅಧ್ಯಕ್ಷ ಕೆ.ಎಂ. ಬಾಬು ಅವರು ಸಿ.ಡಿ.ಪಿ.ಒ.ಅವರಿಗೆ ಫೋನ್ ಕರೆ ಮಾಡಿದರೂ ಕರೆ ಹೋಗುತ್ತಿರಲಿಲ್ಲ.
ಸತೀಶ್ ಮರಸಂಕ ಅವರು ಮರಸಂಕ ಒಂಭತ್ತು ಮನೆಗಳಿಗೆ ತೆರಳಲು ಸೇತುವೆ ನಿರ್ಮಾಣ ಮಾಡುವಂತೆ ತಿಂಗಳುಗಳ ಹಿಂದೆ ತಾಲೂಕು ಮಟ್ಟದ ಅಧಿಕಾರಿಗಳು ಬಂದಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ ಎಂದು ಹೇಳಿದರು. ಆಗ ಸತ್ಯಶಾಂತಿ ಅವರು ಜಾಲ್ಸೂರು ಗ್ರಾಮಸಭೆಗೆ ಮುಖ್ಯವಾಗಿ ಬರಬೇಕಾದ ಇಲಾಖೆಯ ಅಧಿಕಾರಿಗಳು ಬರುವುದಿಲ್ಲ. ಬದಲಾಗಿ ಅವರ ಕಛೇರಿ ಸಿಬ್ಬಂದಿಗಳನ್ನು ಕಳುಹಿಸುತ್ತಾರೆ. ನಾವು ಗ್ರಾಮಮಟ್ಟದಿಂದ ಕೇಳುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇರುವುದಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದರು. ಕೃಷ್ಣಪ್ಪ ನಾಯ್ಕ ಅವರು ಮಾತನಾಡಿ ಮಹಾಬಲಡ್ಕ ಮುದ್ದ ರಸ್ತೆಯಲ್ಲಿ ರಸ್ತೆಯನ್ನು ಬೇಲಿ ಹಾಕಿ ಬಂದ್ ಮಾಡಲಾಗಿತ್ತು. ಆದರೆ ಆ ಬಳಿಕ ಅದನ್ನು ತೆಗೆಯಲಾಗಿದೆ. ಅಲ್ಲಿ ಸಮರ್ಪಕವಾಗಿ ರಸ್ತೆ ನಿರ್ಮಾಣ ಯಾವಾಗ ಎಂದು ಪ್ರಶ್ನಿಸಿದರು. ಆಗ ಮತ್ತೆ ಪಿ.ಡಿ.ಒ. ಅವರು ಇವತ್ತು ಕೆಲವೊಂದು ವಿಚಾರಗಳನ್ನು ಮಾತ್ರ ಹೊಂದಿರುವ ವಿಶೇಷ ಗ್ರಾಮಸಭೆ ಹಾಗಾಗಿ ಈ ವಿಷಯಗಳನ್ನು ಮುಂದಿನ ಗ್ರಾಮಸಭೆಯಲ್ಲಿ ಮಾತನಾಡುವ ಎಂದು ಹೇಳಿದರು.
ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ಮಾತನಾಡಿ ಈ ಸಮಸ್ಯೆಗಳನ್ನು ಗ್ರಾಮ ಪಂಚಾಯತಿ ನ್ಯಾಯ ಸಮಿತಿ ಸಭೆ ಕರೆದು ಇತ್ಯರ್ಥಪಡಿಸಿ ಎಂದು ಹೇಳಿದಾಗ ಗ್ರಾಮಸ್ಥರು ನ್ಯಾಯ ಸಮಿತಿ ಸಭೆ ಕಳೆದ ಬಾರಿ ನಡೆದಿದೆ. ಆದರೆ ನ್ಯಾಯ ಸಮಿತಿಯ ನಿರ್ಣಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದರು. ಈ ಬಗ್ಗೆ ಮತ್ತೆ ಸಿ.ಡಿ.ಪಿ.ಒ. ಅವರಿಗೆ ತಿಳಿಸಿ, ಗ್ರಾಮಸ್ಥರ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ಹೇಳಿದರು.
ಆ ಬಳಿಕ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಪಿ.ಡಿ.ಒ. ಸುಬ್ಬಯ್ಯ, ಗ್ರಾ.ಪಂ. ಸದಸ್ಯರುಗಳು ಗ್ರಾಮಸಭೆಗಾಗಿ ಸಭಾಭವನಕ್ಕೆ ತೆರಳಿದರೆ. ಸತ್ಯಶಾಂತಿ, ಕೃಷ್ಣಪ್ಪ ನಾಯ್ಕ, ವಿನೋದ್ ಕುಮಾರ್, ಸತೀಶ್ ಸೇರಿದಂತೆ ಮತ್ತಿತರ ಗ್ರಾಮದ ಇಪ್ಪತ್ತಕ್ಕೂ ಅಧಿಕ ನಾಗರಿಕರು ಗ್ರಾಮಸಭೆಗೆ ಆಗಮಿಸದೇ ಹೊರನಡೆದರು.