ಹೆಣ್ಣುಮಕ್ಕಳ ಮೇಲೆ ಯಾವುದೇ ರೀತಿಯ ತಾತ್ಸಾರ ಮನೋಭಾವನೆ ಮಾಡಬಾರದು, ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಸಮಾನತೆಯಿಂದ ಕಾಣಬೇಕು, ಸಂವಿಧಾನದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ನಾನ ರೀತಿಯ ಕಾಯ್ದೆ ಕಾನೂನುಗಳು ಸಿದ್ಧಗೊಂಡಿದೆ. ಅವುಗಳ ಪಾಲನೆ ನಮ್ಮ ಕರ್ತವ್ಯವಾಗಿದೆ ಎಂದು ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ಪೊಲೀಸ್ ಇಲಾಖೆ, ಸುದ್ದಿ ಸಮೂಹ ಮಾಧ್ಯಮ, ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯ, ಭಾರತೀಯ ವೈದ್ಯಕೀಯ ಸಂಘ ಸುಳ್ಯ ಇದರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಳ್ಯದ ಕಿರಿಯ ಸಿವಿಲ್ ನ್ಯಾಯಾಧೀಶ ಯಶವಂತ್ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಮಾತನಾಡಿ ಹೆಣ್ಣು ಅಬಲೆಯಲ್ಲ. ಅವಳು ಶಾಂತಿ ಮತ್ತು ತ್ಯಾಗದ ಮೂರ್ತಿ ಆಗಿರುತ್ತಾಳೆ. ಪುಟ್ಟ ಮಗುವಾಗಿ ಜನಿಸಿದ ಒಂದು ಹೆಣ್ಣು ಮಗು ತನ್ನ ಪುಟ್ಟ ಪುಟ್ಟ ಹೆಜ್ಜೆಗಳಿಂದ ತಾನಿರುವ ಮನೆಯಲ್ಲಿ ಎಲ್ಲರಿಗೂ ಸಂತೋಷವನ್ನು ನೀಡಿ, ತನ್ನ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿ ಇನ್ನೊಬ್ಬರ ಮಡದಿಯಾಗಿ, ನಂತರ ಒಬ್ಬ ತಾಯಿಯಾಗಿ ಸಂಪೂರ್ಣ ತನ್ನ ಜವಾಬ್ದಾರಿಯನ್ನು ಮಾಡುತ್ತಿರುತ್ತಾಳೆ. ಅಂತಹ ಹೆಣ್ಣಿನ ಗೌರವವನ್ನು ಕಾಪಾಡಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾರತೀಯ ವೈದ್ಯಕೀಯ ಸಂಘ ಸುಳ್ಯ ಇದರ ಅಧ್ಯಕ್ಷೆ ಡಾ. ವೀಣಾ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ ಸ್ವಾಗತಿಸಿ ಪೂರ್ಣಿಮಾ ಟಿ ವಂದಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹೆಣ್ಣು ಮಗುವಿನ ದಿನಾಚರಣೆಯ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಡಾ.ವೀಣಾ ಬಹುಮಾನವನ್ನು ವಿತರಿಸಿದರು.