ಬೆಳ್ಳಾರೆ ಗ್ರಾಮದ ಪಾಟಾಜೆ ಶಾಲೆಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಅನ್ನು ಮಹಾಲಿಂಗ ಭಟ್ ಕುರುಂಬುಡೇಲು ಇವರ ಪುತ್ರ ಬೆಂಗಳೂರಿನ ಐಟಿ ಉದ್ಯೋಗಿಯಾಗಿರುವ ಪ್ರಶಾಂತ್ ರಾಮ ಇವರು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಕಸ್ಟಮ್ಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಆರ್ ಕೆ ಭಟ್ ಕುರುಂಬುಡೇಲು ಮಾತನಾಡಿ ಮಹಾಲಿಂಗ ಭಟ್ ಇವರು ವೇದ ಪರಿಣತರು, ಸಮಾಜದ ಎಲ್ಲಾ ವರ್ಗದ ಜನರಿಗೂ ಸನಾತನದ ಸಂಸೃತ, ಶ್ಲೋಕ ತಿಳಿಯುವಂತೆ ಆಗಬೇಕು ಅನ್ನುವ ಉದ್ದೇಶದಿಂದ ಆನ್ಲೈನ್ ಹಾಗೂ ಆಫ್ಲೈನ್ ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ.ಇಂದು ಅವರ ಮಗ ದೂರದ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದರೂ ಗ್ರಾಮೀಣ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಂಪ್ಯೂಟರ್ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಎಂದರು. ಮಹಾಲಿಂಗ ಭಟ್ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಕಾರಣಕ್ಕೂ ಕಲಿಕೆಯಿಂದ ವಂಚಿತರಾಗಬಾರದು, ನೀವು ಕಲಿತು ಶಾಲೆಗೆ ಊರಿಗೆ ಒಳ್ಳೆಯ ಹೆಸರು ತರುವಂತಾಗಲೆಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಪನ್ನೆ ಶಿಕ್ಷಣವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಹಾಲಿಂಗ ಭಟ್ ಕುಟುಂಬ ಇಂದು ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದಾರೆ. ಇವರು ಇತ್ತೀಚೆಗೆ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಾಗ ಖರೀದಿಗಾಗಿ ರೂಪಾಯಿ ನಾಲ್ಕು ಲಕ್ಷವನ್ನು ಸಹಾಯಧನವಾಗಿ ನೀಡಿರುವುದನ್ನು ಸ್ಮರಿಸುತ್ತಾ, ಓರ್ವ ಸಮಾಜದ ಬೆಳ್ಳಾರೆಯ ಕೊಡುಗೈ ದಾನಿಯಾಗಿದ್ದಾರೆ ಅಂದರು. ಪ್ರಶಾಂತ್ ರಾಮ ಕುರುಂಬುಡೇಲು ಗಣಕಯಂತ್ರದ ಸದುಪಯೋಗ ಪಡೆದುಕೊಂಡು ಮಕ್ಕಳು ಚಿಕ್ಕಂದನಿಂದಲೆ ಬೆಳೆಯಲೆಂದು ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸ್ವರ್ಣಲತಾ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ಅವಶ್ಯಕತೆ ಬಗ್ಗೆ ಶೈಲೇಶ್ ಇವರಲ್ಲಿ ಹೇಳಿಕೊಂಡಿದ್ದೆವು. ಇದಕ್ಕೆ ಕೂಡಲೇ ಸ್ಪಂದಿಸಿದ ಅವರು ಸಾಮಾಜಿಕ ಕಾರ್ಯಕರ್ತರಾದ ಆರ್ ಕೆ ಭಟ್ ಇವರನ್ನು ಸಂಪರ್ಕಿಸಿ ಕೂಡಲೇ ಕೊಡಿಸುವ ಮಾತನ್ನು ಹೇಳಿದ್ದರು. ಇದಕ್ಕಾಗಿ ಸಹಕರಿಸಿದ ಆರ್ ಕೆ ಭಟ್ ಮತ್ತು ಶೈಲೇಶ್ ನೆಟ್ಟಾರು ಇವರಿಗೆ ಅಭಿನಂದನೆಗಳು ಎಂದರು. ಕೊಡುಗೆ ನೀಡಿದ ಮಹಾಲಿಂಗ ಭಟ್ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಸುಮತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು,ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಹಳೇ ವಿಧ್ಯಾರ್ಥಿಗಳು, ಊರವರು ಹಾಜರಿದ್ದರು. ಶಾಲಾ ಮುಖ್ಯಗುರುಗಳು ಸ್ವಾಗತಿಸಿ ವಂದಿಸಿದರು.