ಆರೋಗ್ಯದ ದೃಷ್ಟಿಯಿಂದ ಯುಗಾದಿ ಹಬ್ಬದ ಮಹತ್ವವೇನು?
ಡಾ. ಗ್ರೀಷ್ಮಾ ಗೌಡ, ಆರ್ನೋಜಿ
ಇಂಗ್ಲೀಷ್ ಕ್ಯಾಲೆಂಡರ್ ನ ಪ್ರಕಾರ ಜನವರಿ 1 ನ್ನು ಹೊಸವರ್ಷವನ್ನಾಗಿ ಆಚರಿಸುತ್ತೇವೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹೊಸವರ್ಷದ ಆರಂಭ. ಯುಗಾದಿ ಬರಿ ಕ್ಯಾಲೆಂಡರ್ ಬದಲಾವಣೆಗೆ ಸೀಮಿತವಲ್ಲದೆ ಇಡೀ ನಾಡಿಗೆ, ನಾಡಿನ ಜನತೆಗೆ ಹೊಸವರ್ಷದ ಹೊಸ ಸಂಭ್ರಮವನ್ನು ತರುತ್ತದೆ. ಈ ಸಮಯ ಹೊಸ ಎಲೆಗಳು ಹಸಿರಸಿರಾಗಿ ಬೆಳೆದು ಹೂವು-ಹಣ್ಣುಗಳು ಮೊಗ್ಗು ಬಿಡುವ ಭವ್ಯ ಕಾಲ. ನಾಡಿನ ಜನರ ಜೊತೆಗೆ ಪ್ರಕೃತಿಯೂ ಹೊಸವರ್ಷವನ್ನು ಆಚರಿಸುವ ಭಾರತೀಯರ ಆಚರಣೆಗೊಂದು ದೊಡ್ಡ ಸಲಾಮ್.
*ಹೊಸ ವರ್ಷ ಯುಗಾದಿ:*
ಋತುಗಳಲ್ಲಿ ವಸಂತ ಋತು ಎಷ್ಟು ಶ್ರೇಷ್ಟವೋ ಹಾಗೆ ಹಬ್ಬಗಳಲ್ಲಿ ಯುಗಾದಿ ಹಬ್ಬ ಅಷ್ಟು ಶ್ರೇಷ್ಟ. ಚೈತ್ರಮಾಸದ ಶುಕ್ಲ ಪಕ್ಷದ ಪಾಡ್ಯದಂದು ಆಚರಿಸುವ ಯುಗಾದಿ ಭಾರತೀಯರ ಒಂದು ಪ್ರಮುಖ ಹಬ್ಬವಾಗಿದೆ. ಯುಗಾದಿ ಎಂದರೆ ಸೃಷ್ಟಿಯ ಕಾಲಮಾನ ಅಥವಾ ಯುಗದ ಆರಂಭ ಎಂದರ್ಥ. ಈ ದಿನ ಬ್ರಹ್ಮದೇವನು ಬ್ರಹ್ಮಾಂಡ ಸೃಷ್ಟಿಯನ್ನು ಮಾಡಿದ್ದಾನೆ ಎಂಬ ನಂಬಿಕೆ ಇದೆ. ಭಾರತೀಯ ಪಂಚಾಂಗದ ಪ್ರಕಾರ ಸೌರಮಾನ ಹಾಗೂ ಚಾಂದ್ರಮಾನ ಯುಗಾದಿಯ ಆಚರಣೆ ಚಾಲ್ತಿಯಲ್ಲಿದೆ.
ಚಂದ್ರನ ಚಲನೆಯ ಆಧಾರದ ಮೇಲೆ ವರ್ಷದಲ್ಲಿನ ದಿನಗಳನ್ನು ಲೆಕ್ಕ ಮಾಡುವುದಕ್ಕೆ ಚಾಂದ್ರಮಾನ ಎನ್ನುತ್ತಾರೆ. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಪ್ರದೇಶಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ.
ಸೂರ್ಯ ಮೇಷರಾಶಿಗೆ ಬಂದ ಮೊದಲ ದಿನವನ್ನು ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಕರ್ನಾಟಕದ ಕರಾವಳಿ ಭಾಗದಲ್ಲಿ ‘ಬಿಸು’ ಅಥವಾ ‘ವಿಷು’ ಹಬ್ಬವನ್ನಾಗಿ ಆಚರಿಸುತ್ತಾರೆ. ಕೇರಳ, ತಮಿಳುನಾಡು ಮತ್ತು ಉತ್ತರಭಾರತದ
ಕೆಲವೆಡೆ ಇದೇ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ.
*ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳು ಮತ್ತು ಅವುಗಳ ವೈಜ್ಞಾನಿಕ ಹಿನ್ನೆಲೆ:*
ಯುಗಾದಿ ಹಬ್ಬ ಆರಂಭವಾಗುವುದು ಚೈತ್ರ ಮಾಸದ ಮೊದಲ ದಿನದ ಬ್ರಹ್ಮ ಮುಹೂರ್ತದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ದಿನಚರ್ಯವನ್ನು ಮುಗಿಸಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಯುತ್ತದೆ.
*-ತೈಲ ಅಭ್ಯಂಜನ:*
ಹರಳೆಣ್ಣೆ, ತೆಂಗಿನಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಯಿಂದ ಪಾದದವರೆಗೆ ಹಚ್ಚಬೇಕು. ಮೂವತ್ತು ನಿಮಿಷದಿಂದ ಒಂದು ಗಂಟೆಯ ಕಾಲ ಸೂರ್ಯ ಕಿರಣಗಳಿಗೆ ಮೈಯೊಡ್ಡಿನಿಲ್ಲಬೇಕು. ತದನಂತರ, ಬೇವು ಮಿಶ್ರಿತ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು. ಈ ಸಮಯದಲ್ಲಿ ಸೂರ್ಯನ ತಾಪ ಹೆಚ್ಚಾಗಿದ್ದು, ಎಣ್ಣೆ ಸ್ನಾನ ಮಾಡುವುದರಿಂದ ದೇಹವನ್ನು ತಂಪಾಗಿಡುತ್ತದೆ. ಜೊತೆಗೆ ಬೇಸಿಗೆಯಲ್ಲಿ ಬರುವ ಬೆವರುಸಾಲೆಯಂತ ಚರ್ಮವ್ಯಾದಿಯಿಂದ ದೂರವಿರಿಸುತ್ತದೆ. ಬೆಳಗಿನ ಜಾವದ ಸೂರ್ಯಕಿರಣ ದೇಹಕ್ಕೆ ತಾಗಿದರೆ ಕೆಲವೊಂದು ಜೀವಸತ್ವದ ಪೂರೈಕೆ ಆಗುತ್ತದೆ. ಬೇವಿನಲ್ಲಿರುವ ರೋಗನಿರೋಧಕ ಶಕ್ತಿಯು ರೋಗದ ವಿರುದ್ಧ ಹೋರಾಡುತ್ತದೆ.
*-ಬೇವು ಬೆಲ್ಲದ ಸೇವನೆ*:
ಆಯುರ್ವೇದ ಶಾಸ್ತ್ರದ ಪ್ರಕಾರ ಬೇವಿನ ಮಹತ್ವವನ್ನು ಹೀಗೆ ವರ್ಣಿಸಲಾಗಿದೆ, ‘ಶತಾಯುರ್ವಜೃದೇಹಾಯ ಸರ್ವಸಂಪತ್ಕರಾಯಚ॥ಸರ್ವಾರಿಷ್ಠವಿನಾಶಾಯ ನಿಂಬಕಂ ದಳ ಭಕ್ಷಣಂ’. ಎಂದರೆ, ನೂರುವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅನಿಷ್ಟಗಳೆಲ್ಲ ನಿವಾರಣೆಯಾಗಿ ಜೀವನವು ಸಂಪದ್ಭರಿತವಾಗಿರಲು ಬೇವು ಬೆಲ್ಲದ ಸೇವನೆಯನ್ನು ಮಾಡಬೇಕೆಂದು ವಿವರಿಸಲಾಗಿದೆ. ಬೇವಿನ ಜೊತೆಗೆ ಬೆಲ್ಲದ ಸೇವನೆಯಿಂದ ದೇಹಕ್ಕೆ ಬೇಕಾದ ಗ್ಯಾಸ್ಟ್ರೋ ಪ್ರೊಟೆಕ್ಟಿವ್ ಅಂಶ ದೊರೆಯುತ್ತದೆ.
*-ಯುಗಾದಿ ಪಚಡಿ:*
ಎಣ್ಣೆ ಸ್ನಾನ, ದೇವರ ಪೂಜೆ, ಹಿರಿಯರಿಂದ ಆಶೀರ್ವಾದ ಪಡೆದ ಮೇಲೆ ಬೇವು ಬೆಲ್ಲದ ಸೇವನೆ ಮಾಡಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ತದನಂತರ, ಹಬ್ಬದೂಟ. ಇದರಲ್ಲಿ ಬೇವಿನ ಚಿಗುರು, ಬೆಲ್ಲ,ಮಾವಿನಕಾಯಿ, ಹುಣಸೆಹಣ್ಣು, ಕಾಯಿ ಮೆನಸನ್ನು ಬೆರೆಸಿ ಮಾಡಿರುವ ಯುಗಾದಿ ಪಚಡಿ ಗಮನ ಸೆಳೆಯುತ್ತದೆ. ಈ ಖಾದ್ಯ ಉಪ್ಪು, ಸಿಹಿ, ಕಹಿ, ಒಗರು, ಹುಳಿ, ಖಾರ ಹೀಗೆ ಆರು ರುಚಿಗಳನ್ನು ಹೊಂದಿದ್ದು, ದೇಹದಲ್ಲಿ ಷಡ್ರಸವನ್ನು ಸಮತೋಲನದಲ್ಲಿರಿಸುತ್ತದೆ.ಹಾಗೂ ಇದರಲ್ಲಿರುವ ಪೌಷ್ಟಿಕಾಂಶವೂ ದೇಹಕ್ಕೆ ಸಮಪ್ರಮಾಣದಲ್ಲಿ ದೊರೆಯುತ್ತದೆ.
ಈ ರೀತಿಯಾಗಿ ಯುಗಾದಿ ಹಬ್ಬವು ಬರೀ ಸಂಭ್ರಮದ ಆಚರಣೆ ಅಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ವಿಶೇಷವಾದ ಹಬ್ಬ. ‘ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕೆ ಹೊಸ ಹರುಷದ ಹೊಸತು ಹೊಸತು ತರುತ್ತಿದೆ’ ಎಂದು ಹೇಳುತ್ತ ನಮ್ಮ ಆಚರಣೆಗಳ ಮುಖ್ಯ ಉದ್ದೇಶವನ್ನರಿತು ಆಚರಿಸೋಣ.
ಡಾ. ಗ್ರೀಷ್ಮಾ ಗೌಡ ಆರ್ನೋಜಿ
ವೈದ್ಯರು,
ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆ