ಶ್ರೀ ಉಳ್ಳಾಕುಲು ಉಳ್ಳಾಲ್ತಿ ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಅಳ್ಪೆ-ಚಿಂಗಾಣಿಗುಡ್ಡೆ ಪಂಜ ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ. 23 ರಿಂದ ಎ.25 ತನಕ ಜರಗಲಿರುವುದು.
ಎ. 23ರಂದು ಸಂಜೆ 7.00ಕ್ಕೆ ದೇವತಾ ಪ್ರಾರ್ಥನೆ ಆಚಾರ್ಯ ವರಣ ,ಸ್ವಸ್ತಿ ಪುಣ್ಯಾಹವಾಚನ , ಸ್ಥಳಶುದ್ಧಿ ,ಪ್ರಾಸಾದ ಶುದ್ಧಿ, ಮಹಾಸುದರ್ಶನ ಹೋಮ, ಆವಾಹನೆ , ಉಚ್ಛಾಟನೆ, ರಾಕ್ಷೋಘ್ನ ಹೋಮ , ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬಗಳ ಜಲಾಧಿವಾಸ, ಪ್ರಕಾರ ಬಲಿ, ಪ್ರಸಾದ ವಿತರಣೆ , ಅನ್ನಸಂತರ್ಪಣೆ.
ಎ. 24ರಂದು ಬೆಳಿಗ್ಗೆ ಗಂಟೆ 6 ಕ್ಕೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪೂ.ಗಂಟೆ 9:32 ನಂತರ ಮಿಥುನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಉಳ್ಳಾಕುಲು ಉಳ್ಳಾಲ್ತಿ, ರುದ್ರಚಾಮುಂಡಿ ಪಂಜುರ್ಲಿ ಹಾಗೂ ಪರಿವಾರ ದೈವ ಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ತಂಬಿಲ ಸೇವೆ, ಮಂಗಳಾರತಿ , ನೈಮಿತ್ತಿಕ ನಿಯಮಗಳ ಪ್ರಾರ್ಥನೆ, ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 4 ರಿಂದ ಸಭಾ ಕಾರ್ಯಕ್ರಮ ಜರುಗಲಿದೆ. ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ವಹಿಸಲಿದ್ದಾರೆ. .ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರ ಮಾನ್ಯ ಉಸ್ತುವಾರಿ ಮತ್ತು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ಉಪಸ್ಥಿತರಿರುವರು. ಅದೇ ಸಂಜೆ ಗಂಟೆ 6.45ರಿಂದ ಬಂಡಾರ ತೆಗೆಯುವುದು, ರಾತ್ರಿ ಗಂಟೆ 9 ಕ್ಕೆ ಶ್ರೀ ದೈವಂಕುಲು ಮಹಿಷಂತಾಯ, ಮಣಿಪಾನ, ಪಂಜುರ್ಲಿ ಮತ್ತು ಉಳ್ಳಾಲ್ತಿ ಅಮ್ಮನವರ ನೇಮೋತ್ಸವ ಜರುಗಲಿದೆ. ಎ. 25 ರಂದು ಬೆಳಿಗ್ಗೆ ಗಂಟೆ 9 ಕ್ಕೆ ಶ್ರೀ ಉಳ್ಳಾಕುಲು ಮತ್ತು ವರ್ಣಾರ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ, ರಾತ್ರಿ ಗಂಟೆ 9ರಿಂದ ಶ್ರೀ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರುಗಲಿರುವುದು.ಎ.22 ರಂದು ಹಸಿರು ಕಾಣಿಕೆ ಸಮರ್ಪಣೆ ನಡೆಯಲಿದೆ.
ಹಿನ್ನೆಲೆ :ಶಿವನ ಆದೇಶದ ಪ್ರಕಾರ ಶ್ರೀ ಉಳ್ಳಾಕುಲು ಉಳ್ಳಾಳ್ತಿ ಮತ್ತು ಮಹಿಷಂತಾಯ ಹಾಗೂ ಪರಿವಾರ ದೈವಗಳು ಕಂಚಿ ದೇಶದಿಂದ ತುಳುನಾಡಿನಲ್ಲಿ ಧರ್ಮ ನೆಲೆಗೊಳಿಸಲು ಬಂದವರು ಎಂಬ ಪ್ರತೀತಿ .ಏಳ್ವರ್ ಉಳ್ಳಾಕುಲು ಎಂದು ಕರೆಯಲ್ಪಡುವ ಈ ದೈವಗಳು ಕಂಚಿ ದೇಶದಿಂದ ಹೊರಟು ದಾರಿಯಲ್ಲಿ ಸಾಗುತ್ತಾ ಕೆಮ್ಮಟೆಗುಡ್ಡೆ ಎಂಬಲ್ಲಿ ನಿಂತು ಇನ್ನು ಮುಂದೆ ನಡೆದು ಹೋಗಲು ಸಾಧ್ಯವಿಲ್ಲ ,ನೀರಿನಲ್ಲಿ ಹೋಗುವ ಎಂದು ನಿರ್ಧರಿಸಿ ಹರಿಯುತ್ತಿರುವ ಗಂಗೆಯ ನೀರನ್ನು ಸ್ತಬ್ಧವಾಗಿಸಿ ದೋಣಿ ಮುಖಾಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಸೇರಿದರು. ಇಲ್ಲಿ ಕುಕ್ಕಙಶ್ರೀ ದೇವರ ಸನ್ನಿಧಾನದಲ್ಲಿ ನೆಲೆನಿಂತು ದೇವರ ಸೇವೆ ಮತ್ತು ಉತ್ಸವ ನಡೆಸಿ ನಂತರ ತಮ್ಮ ಪಯಣವನ್ನು ಪಂಜ ಸಾವಿರ ಸೀಮೆಯ ಒಡೆಯನಾದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿ ಸೇರಿ ಶ್ರೀದೇವರ ಸೇವೆ ಮತ್ತು ಉತ್ಸವವನ್ನು ನಡೆಸಿ ಅಲ್ಲಿಂದ ಮುಂದೆ ಸಾಗಿ ಅಳ್ಪೆ ಕೋಡಿ ಮನೆಯ ಮುರುಂಕಲ್ಲು ಚಾವಡಿಯಲ್ಲಿ ನೆಲೆ ನಿಂತು, ತನ್ನ ಪರಿವಾರ ದೈವಗಳಿಗೆ ಮೂಲೆಯಲ್ಲಿ(ರಾಮತೋಟ) ಮಾಳ್ಯ ಸ್ಥಾಪಿಸಿಕೊಂಡರು. ಆದರೆ ವರ್ಷಾವಧಿ ನೇಮಕ್ಕಾಗಿ ವಿಶಾಲ ಜಾಗವಿರುವ ಚಿಂಗಾಣಿ ಗುಡ್ಡೆಯಲ್ಲಿ ಬದಿ ಮಾಡವನ್ನು ಸ್ಥಾಪಿಸಿಕೊಂಡು ನೇಮನಡಾವಳಿಗಳನ್ನು ಸ್ವೀಕರಿಸುತ್ತಿದ್ದಾರೆ . ಪರಿವಾರ ದೈವಗಳು ಎದುರಿಗಿರುವ ಬನದಲ್ಲಿ ನೇಮ ಸೇವೆ ಸ್ವೀಕರಿಸುತ್ತಿದ್ದರು. ಶ್ರೀ ಉಳ್ಳಾಕುಲು ಉಳ್ಳಾಲ್ತಿಯ (ಬಂಟನಾಗಿ)ಪ್ರಧಾನ ದೈವನಾಗಿ ಮಹಿಷಂತಾಯ ಕಂರ್ಬು ದೊಡ್ಡ ಮನೆಯ ಚಾವಡಿಯಲ್ಲಿ ನೆಲೆ ನಿಂತು , ಶ್ರೀ ಉಳ್ಳಾಕುಲು ಉಳ್ಳಾಲ್ತಿ ನೇಮ ನಡಾವಳಿಯಂದು ಅಲ್ಲಿಂದ ಭಂಡಾರ ಚಿಂಗಾಣಿ ಗುಡ್ಡೆಗೆ ಬಂದು ಇಲ್ಲಿ ನೇಮೋತ್ಸವ ನಡೆಯುತ್ತಿತು. ಹಲವಾರು ವರ್ಷಗಳ ನಂತರ ಕೆಲವೊಂದು ಅಡಚಣೆಗಳಿಂದಾಗಿ ಮಹಿಷಂತಾಯ ದೈವದ ಭಂಡಾರ ಬರುವುದು ನಿಂತು ಹೋಯಿತು. ಆದರೆ ಸ್ಥಳದಲ್ಲಿ ದೈವಜ್ಞರ ಮುಖಾಂತರ ನಡೆಸಿದ ಪ್ರಶ್ನೆ ಚಿಂತನೆ ಪ್ರಕಾರ ಮಹಿಷಂತಾಯ ದೈವಕ್ಕೆ ನೇಮೋತ್ಸವ ಆಗಲೇಬೇಕು ಎನ್ನುವ ದೈವ ಸಂಕಲ್ಪದಿಂದಾಗಿ ಇಲ್ಲಿಯೇ ಚಾವಡಿ ಸ್ಥಾಪಿಸಿ ನೇಮೋತ್ಸವ ನಡೆಸಿಕೊಂಡು ಬರುತ್ತಿದೆ. ಮಹಿಷಂತಾಯ ದೈವದ ಚಾವಡಿಯ ಹತ್ತಿರದಲ್ಲಿ ಹಿಂದಿನ ಬದಿ ಮಾಡವೂ ಇದೆ. ಆದರೆ ಜೀರ್ಣೋದ್ಧಾರದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಹಿಂದೆ ಮಾಡುತ್ತಿದ್ದ ಕ್ರಮದಲ್ಲೇ ನಡೆಯಬೇಕೆಂದು ಕಂಡುಬಂದಿರುತ್ತದೆ. ಈ ಚಾವಡಿಗಳು ಸುಮಾರು 40 ವರ್ಷಗಳ ಹಿಂದೆ ಜೀರ್ಣೋದ್ಧಾರ ಗೊಂಡಿದ್ದು ಈಗ ಶಿಥಿಲಾವಸ್ಥೆಗೆ ತಲುಪಿದೆ. ಆದುದರಿಂದ ಶ್ರೀ ದೈವಗಳ ಜೀರ್ಣೋದ್ಧಾರ ನಡೆಸಬೇಕೆಂದು ನಿರ್ಧರಿಸಿ , ಆಡಳಿತ ಮಂಡಳಿಯು ಟ್ರಸ್ಟನ್ನು ರಚಿಸಿ ಜೀರ್ಣೋದ್ಧಾರ ಸಮಿತಿಯನ್ನು ಆಯ್ಕೆ ಮಾಡಿ, 2017 -18 ನೇ ಸಾಲಿನಲ್ಲಿ ದೈವಜ್ಞರ ಮುಖಾಂತರ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು ನಡೆಸಲಾಗಿದೆ. ಈ ಚಿಂತನೆ ಮೂಲಕ ಶ್ರೀ ಉಳ್ಳಾಕುಲುಗೆ ಮಾಡ, ಶ್ರೀ ಉಳ್ಳಾಲ್ತಿಗೆ ಚಾವಡಿ, ಮಹಿಷಂತಾಯ ದೈವಕ್ಕೆ ಕಲ್ಲ ಮಾಡ, ಪರಿವಾರ ದೈವಗಳಿಗೆ ಕಟ್ಟೆಗಳು, ಕೋಡಿಯಲ್ಲಿ ಉಳ್ಳಾಕುಲು ಉಳ್ಳಾಲ್ತಿ ದೈವಗಳ ಭಂಡಾರ ಸ್ಥಾನ, ರಾಮ ತೋಟದಲ್ಲಿ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಭಂಡಾರ ಸ್ಥಾನ,ಮೋದಲಾದ ಕಾರ್ಯಕ್ರಮಗಳು ಆಗಿದ್ದು. ಈಗ ಬ್ರಹ್ಮಕಲಶೋತ್ಸವ ಸಮಿತಿ ರಚಿಸಿ ಸಂಚಾಲಕರು, ಸದಸ್ಯರ ಆಯ್ಕೆ ಗೊಂಡಿದ್ದು, ನೂರಾರು ಭಕ್ತರು ಹಗಲಿರುಳು ಸೇವೆ ಸಲ್ಲಿಸಿಸುತ್ತಿದ್ದಾರೆ. ಈಗ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಸಿದ್ಧತೆ ಭರದಿಂದ ನಡೆಯುತ್ತಿದೆ.