ಅತ್ಯಂತ ಪುರಾತನವಾದ ಸಂಪಾಜೆ ಗ್ರಾಮದ ಕಡೆಪಾಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಭಕ್ತಾದಿಗಳ ನಿರಂತರ ಹಗಲುರಾತ್ರಿ ಶ್ರಮದಾನದ ಫಲವಾಗಿ ಮೊಗೇರರು,ತನ್ನಿಮಾನಿಗ,ಕ್ಷೇತ್ರಪಾಲಕ ಗುಳಿಗ, ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜ ಮತ್ತು ನಾಗಬ್ರಹ್ಮ ದೈವಗಳ ಪುನ:ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ಬಾಲಕೃಷ್ಣ ಆಚಾರ್ಯ ತಂತ್ರಿಗಳ ನೇತೃತ್ವದಲ್ಲಿ ಎ.21ರಿಂದ 25ರವರೆಗೆ ನೆರವೇರಲಿದೆ.
ಸಚಿವ ಎಸ್. ಅಂಗಾರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ, ದೈವಸ್ಥಾನದ ಶಿಲ್ಪಿ ಪದ್ಮನಾಭ ಆಚಾರ್ಯ ಕಡೆಪಾಲ ಅವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಹೇಮನಾಥ ಕಡೆಪಾಲ ಕಾರ್ಯದರ್ಶಿಯಾಗಿ, ರವಿಚಂದ್ರ ಬಿಳಿಯಾರು ಉಪಾಧ್ಯಕ್ಷರಾಗಿ, ಪ್ರೇಮ್ ಕುಮಾರ್ ಕೀಲಾರು ಜತೆಕಾರ್ಯದರ್ಶಿಯಾಗಿ, ನಿತ್ಯಾನಂದ ಕಲ್ಮಕ್ಕಾರು , ಹೊನ್ನಪ್ಪ ಆಚಾರ್ಯ ದಂಡೆಕಜೆ ಕೋಶಾಧಿಕಾರಿಯಾಗಿ, ಯಶೋಧರ ಎನ್.ಹೆಚ್. ಉಪಕೋಶಾಧಿಕಾರಿಯಾಗಿ ಊರ ಭಕ್ತಾದಿಗಳ ಸಹಕಾರದಲ್ಲಿ ದುಡಿಯುತ್ತಿದ್ದಾರೆ.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮನಾಭ ಆಚಾರ್ಯ ಅವರ ಮುಂದಾಳತ್ವದಲ್ಲಿ ತೇಜಸ್ ಬಿ.ವೈ. ಬಂಟೋಡಿ, ಈಶ್ವರ ಕಡೆಪಾಲ, ಬಾಲಕೃಷ್ಣ ಕಡೆಪಾಲ, ಹರ್ಷಿತ್ ದೊಡ್ಡಡ್ಕ, ರಾಜೇಶ್ ಬಂಟೋಡಿ, ಜಿತೇಶ್ ಕಡೆಪಾಲ ನೇತೃತ್ವದ ಯುವಕರ ತಂಡ ಜೀರ್ಣೋದ್ಧಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಊರ ಹಾಗೂ ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಪುನ:ಪ್ರತಿಷ್ಠಾ ಕಲಶೋತ್ಸವವು ಜರುಗಲಿದೆ.
ಎ. 21ರಂದು ಸಂಜೆ ಕುಟ್ಟಿಪೂಜೆ, ಬಳಿಕ ಅನ್ನಸಂತರ್ಪಣೆ, ಎ. 22ರಂದು ಸಂಜೆ ತಂತ್ರಿಗಳ ಆಗಮನ, ರಾತ್ರಿ ಆಲಯ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ ಮತ್ತು ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ದುರ್ಗಾಪೂಜೆ, ಪ್ರಾಸಾದಬಲಿ, ವಾಸ್ತುಪೂಜೆ, ವಾಸ್ತುಬಲಿ, ದಿಕ್ಪಾಲಬಲಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಎ. 23ರಂದು ಬೆಳಿಗ್ಗೆ ಅಧ್ಯ ಗಣಯಾಗ, ಪ್ರಾಯಶ್ಚಿತ ಹೋಮ, ನವಗ್ರಹ ಶಾಂತಿ ಹೋಮ, ಭೂ ವರಹ ಶಾಂತಿ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಬಿಂಬಶುದ್ಧಿ, ಬಿಂಬಾಧಿವಾಸ , ಶೈಯಾದಿವಾಸ, ಬ್ರಹ್ಮಕಲಶ ಆರಾಧನೆ, ಅಧಿವಾಸ ಹೋಮ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಎ. 24ರಂದು ಬೆಳಿಗ್ಗೆ ಆಧ್ಯ ಗಣಯಾಗ, ಪ್ರತಿಷ್ಠಾ ಹೋಮ, ಪ್ರಧಾನ ಹೋಮ ನಡೆದು ಬೆಳಿಗ್ಗೆ ಗಂಟೆ 9.33ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶಿಬರ, ಪ್ರತಿಷ್ಠಾಪೂರ್ವಕ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರುಗಲಿದೆ.
ಎ.17ರಂದು ಬೆಳಿಗ್ಗೆ ಗೊನೆ ಕಡಿಯುವುದು., ಎ.24ರಂದು ಸಂಜೆ ಗುಳಿಗ ದೈವದ ನೇಮ, ಪ್ರಸಾದ ವಿತರಣೆ, ಸಂಜೆ ದೀಪಾರಾಧನೆ, ಅನ್ನಸಂತರ್ಪಣೆ ಜರುಗಲಿದೆ.
ಬಳಿಕ ಶ್ರೀ ಮೊಗೇರ್ಕಳ ದೈವಗಳ ಗರಡಿ ಇಳಿಯುವುದು, ಪಾತ್ರಿಗಳ ದರ್ಶನ ನಡೆಯಲಿದೆ.
ಎ. 25ರಂದು ಪ್ರಾತ:ಕಾಲ ಪ್ರಸಾದ ವಿತರಣೆ, ಬೆಳಿಗ್ಗೆ ಕಾರಣಿಕ ದೈವ ಸ್ವಾಮಿ ಕೊರಗಜ್ಜ ದೈವದ ನೇಮ, ಪೂರ್ವಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.
ಎ. 22ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಈ ಸಮಾರಂಭದಲ್ಲಿ ಹಲವು ಜನಪ್ರತಿನಿಧಿಗಳು ಸೇರಿದಂತೆ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.