ಗರಿಗೆದರಿದ ಕುತೂಹಲ
ವಿದ್ಯುತ್ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನಾಯಿಸಿ ಬೈದರೆಂಬ ಕಾರಣಕ್ಕಾಗಿ ಕೇಸಿಗೊಳಗಾಗಿದ್ದ ಬೆಳ್ಳಾರೆಯ ಗಿರಿಧರ್ ರೈ ಪ್ರಕರಣದ ತೀರ್ಪು ಇಂದು ಸುಳ್ಯ ನ್ಯಾಯಾಲಯದಲ್ಲಿ ಪ್ರಕಟವಾಗಲಿದೆ.
ಸುಳ್ಯದ ಅನಿಯಮಿತ ವಿದ್ಯುತ್ ಕಡಿತದ ಪರಿಸ್ಥಿತಿಯಿಂದ ರೋಷಗೊಂಡಿದ್ದ ಬೆಳ್ಳಾರೆಯ ವಿದ್ಯುತ್ ಬಳಕೆದಾರ ಗಿರಿಧರ ರೈಯವರು 2016 ಫೆಬ್ರವರಿ 28 ರಂದು ಆಗಿನ ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಫೋನಾಯಿಸಿ ಸುಳ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಹೇಳುವುದರ ಜತೆಗೆ ಸಚಿವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆಂದು ಶಿವಕುಮಾರ್ ಪರವಾಗಿ ಮೆಸ್ಕಾಂ ಹಿರಿಯ ಅಧಿಕಾರಿಗಳು ಗಿರಿಧರ ರೈಯವರ ಮೇಲೆ ಕೇಸ್ ನೀಡಿದ್ದರು.
ಈ ಪ್ರಕರಣದ ವಿಚಾರಣೆಗೆ ಸ್ವತಃ ಡಿ ಕೆ ಶಿವಕುಮಾರ್ ಹಾಜರಾಗಬೇಕೆಂದು ವಾರಂಟ್ ಹೊರಟ ಹಿನ್ನಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 5 ರಂದು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಸುಳ್ಯಕ್ಕೆ ಬಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದಿದ್ದರು. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಇಂದು ಸುಳ್ಯ ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ಎ. ಸೋಮಶೇಖರ್ ರವರು ತೀರ್ಪು ಪ್ರಕಟಿಸಲಿದ್ದಾರೆ.
ರಾಜ್ಯದ ಪ್ರಮುಖ ಮುಖಂಡರಲ್ಲೊಬ್ಬರಾದ ಡಿ.ಕೆ.ಶಿವಕುಮಾರ್ ರವರಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಯಾವ ರೀತಿ ತೀರ್ಪು ಹೊರಬರಬಹುದು ಎಂಬ ಕುತೂಹಲ ಸಾರ್ವಜನಿಕರಲ್ಲಿ ಗರಿಗೆದರಿದೆ.