ಮನೆ ನುಗ್ಗಿ ಮೊಬೈಲ್ ಮತ್ತು ನಗದು ಕದ್ದ ಕಳ್ಳನೊಬ್ಬನನ್ನು ಊರವರು ಬೆಂಬತ್ತಿ ಹುಡುಕಾಡಿ ಮುಂಜಾನೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಜಟ್ಟಿಪ್ಪಳ್ಳದಿಂದ ವರದಿಯಾಗಿದೆ. ಎ.17ರಂದು ರಾತ್ರಿ 12.30ರ ಸುಮಾರಿಗೆ ಜಟ್ಟಿಪ್ಪಳ್ಳದ ದಿ.ಬಲ್ಲು ಎಂಬರವರ ಮನೆಗೆ ನುಗ್ಗಿದ ಕಳ್ಳನೊಬ್ಬ ಅವರ ಸೊಸೆಯ ಮೊಬೈಲ್ ಮತ್ತು ಅದರೊಳಗಿದ್ದ ಹಣವನ್ನು ಎಗರಿಸಿದ. ಆ ವೇಳೆಗೆ ಸೊಸೆಗೆ ಎಚ್ಚರವಾಗಿ ಬೊಬ್ಬೆ ಹಾಕಿದಾಗ. ಕಳ್ಳ ಓಡಿದ. ಮನೆಯವರು ಎಚ್ಚರಗೊಂಡರು. ಅಕ್ಕಪಕ್ಕದವರನ್ನು ಎಬ್ಬಿಸಿ ಎಲ್ಲರೂ ಸೇರಿ ಜಟ್ಟಿಪ್ಪಳ್ಳವನ್ನು ಜಾಲಾಡಿದರು. ಆದರೆ ಕಳ್ಳನ ಪತ್ತೆಯಾಗಲಿಲ್ಲ. ಬಳಿಕ ಶಾಲಾ ಬಳಿಯ ಅಂಗಡಿಯೊಂದರ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಟಿ ಶರ್ಟ್ ಧರಿಸಿದ ಯುವಕನೊಬ್ಬ 12 ಗಂಟೆ ಸುಮಾರಿಗೆ ಜಟ್ಟಿಪ್ಪಳ್ಳಕ್ಕೆ ಬರುತ್ತಿರುವುದು ಮತ್ತು 12.30ರ ವೇಳೆಗೆ ಬರಿಗಾಲಲ್ಲಿ ಹಿಂತಿರುಗಿ ಓಡುತ್ತಿರುವುದು ಕಂಡು ಬಂತು.
ಜಟ್ಟಿಪ್ಪಳ್ಳವಿಡೀ ಹುಡುಕಾಡಿ ಮನೆ ಸೇರಿದ್ದ ಯುವಕರಲ್ಲಿ ಹುಸೈನ್ ಎಂಬ ಯುವಕ ಬೆಳಿಗ್ಗೆ 5.30ರ ವೇಳೆಗೆ ಹಾಲಿನ ಲೈನಿಗಾಗಿ ಪೇಟೆಗೆ ಬಂದಾಗ ಸಿಸಿ ಕ್ಯಾಮೆರಾದಲ್ಲಿ ಕಂಡಂತಹ ಉಡುಪಿನ ಯುವಕನೊಬ್ಬ ಬರಿಗಾಲಲ್ಲಿ ನಡೆದುಕೊಂಡು ಬರುವುದು ಕಂಡಿತು. ಹುಸೈನ್ ಅದನ್ನು ಜಟ್ಟಿಪ್ಪಳ್ಳದ ಯುವಕರಿಗೆ ಫೋನ್ ಮಾಡಿ ತಿಳಿಸಿದಾಗ ತಾವು ಬರುವವರೆಗೆ ಆ ಯುವಕನನ್ನು ದೂರದಿಂದ ಹಿಂಬಾಲಿಸುವಂತೆ ಶರೀಫ್ ಜಟ್ಟಿಪ್ಪಳ್ಳ ಸೂಚಿಸಿದರು.
https://youtube.com/shorts/7VH1GbOeSO8?feature=share
ಬಳಿಕ ಶರೀಫ್ ಕಳ್ಳತನವಾದ ಮನೆಯ ಯುವಕ ಪ್ರಸಾದ್ರನ್ನು ಕರೆದಕೊಂಡು ಬಂದರು. ಅನುಮಾನಾಸ್ಪದ ಯುವಕ ನಗರ ಪಂಚಾಯತ್ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇವರೆಲ್ಲರೂ ಬಂದು ಆತನನ್ನು ಹಿಡಿದುಕೊಂಡರು. ಬಳಿಕ ಆತನನ್ನು ಕಳವಾದ ಮನೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಆತ ಕದ್ದಿರುವುದನ್ನು ಒಪ್ಪಿಕೊಂಡು ಮೊಬೈಲ್ ಮತ್ತು ಹಣವನ್ನು ಹಿಂತಿರುಗಿಸಿದನೆನ್ನಲಾಗಿದೆ. ನಂತರ ಆತನನ್ನು ಸುಳ್ಯ ಪೊಲೀಸರ ಸುಪರ್ದಿಗೆ ಒಪ್ಪಿಸಲಾಯಿತು.
https://youtube.com/shorts/7VH1GbOeSO8
ಕಳ್ಳತನ ಮಾಡಿದ ಯುವಕ ಕೊಪ್ಪಳದ ಶರಣದಪ್ಪ ಎಂಬಾತನೆಂದು ತಿಳಿದು ಬಂದಿದ್ದು, ಕೂಲಿ ಕೆಲಸಕ್ಕೆ ಕೂಡಾ ಇತರರೊಂದಿಗೆ ಸೇರಿ ಹೋಗುತ್ತಿದ್ದನೆಂದು ತಿಳಿದು ಬಂದಿದೆ.
ರಾತ್ರಿ ಕಳ್ಳನಿಗಾಗಿ ಹುಡುಕಾಡಿದ ತಂಡದಲ್ಲಿ ಪ್ರಸಾದ್, ಪ್ರದೀಪ್ ಮತ್ತು ಶರೀಫ್ ಜಟ್ಟಿಪ್ಪಳ್ಳ ಅಲ್ಲದೇ ಹುಸೈನ್, ಸಿರಾಜ್, ಸಿದ್ಧೀಕ್, ನಾಸಿರ್, ಶಿಹಾಬ್, ಫೈಸಲ್, ಹಮೀದ್, ಸುಲೈಮಾನ್, ಇಬ್ರಾಹಿಂ, ಮಹೇಶ್, ರಕ್ಷಣ್ ಮತ್ತು ತನುದೀಪ್ ಪೆಲ್ತಡ್ಕರವರಿದ್ದರು ಎಂದು ತಿಳಿದು ಬಂದಿದೆ.