ಜಾತಿ ಮತ ಪಂಥಗಳನ್ನು ಮೀರಿ ಸಮನ್ವಯ ಸಾಧಿಸುತ್ತಾ ಬಂದ ಯಕ್ಷಗಾನ ಕಲೆ ಕರಾವಳಿಯ ಸಾಂಸ್ಕೃತಿಕ ಹೆಗ್ಗುರುತಾಗಿ ವಿಜೃಂಭಿಸುತ್ತಿದ್ದು, ಕೇರಳಕ್ಕೆ ಕಥಕ್ಕಳಿ ಇದ್ದ ಹಾಗೆ ಕರ್ನಾಟಕಕ್ಕೆ ಯಕ್ಷಗಾನ ರಾಜ್ಯ ಕಲೆಯಾಗಿ ಮಾನ್ಯತೆ ಪಡೆಯಲಿ ಎಂದು ವಿಶ್ರಾಂತ ಪ್ರಾಂಶುಪಾಲ ಡಾ|ಪ್ರಭಾಕರ ಶಿಶಿಲ ಅವರು ಒತ್ತಾಯಿಸಿದರು. ಅವರು ಸುಳ್ಯದ ಶ್ರೀಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿಯ ಯಕ್ಷೋತ್ಸವದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಇಲ್ಲಿನ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಕಲಾ ಮಂಡಳಿಯ ನಾಟ್ಯ ತರಬೇತಿ ವಿದ್ಯಾರ್ಥಿಗಳಿಂದ 40ನೇ ವರ್ಷದ ಯಕ್ಷೋತ್ಸವವನ್ನು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಡಾ|ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿ, ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಯುವುದರಿಂದ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದು. ಯಕ್ಷಗಾನ ಕಾಲೆ ಜ್ಞಾನಮಟ್ಟವನ್ನು ವೃದ್ಧಿಸುತ್ತದೆ ಎಂದರು.
ಸುಳ್ಯ ಶಾರದಾ ಮಹಿಳಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅವರು ಶುಭ ಹಾರೈಸಿ,ಯಕ್ಷಗಾನ ಕಲೆಯು ಸಂಸ್ಕಾರ ನೀಡುವ ದಾರಿದೀಪವಾಗಿದೆ. ಈ ಕಲೆ ಈ ಭಾಗದ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ವಿದ್ಯಾರ್ಥಿಗಳಿಗೆ ಈ ಕಲೆಯ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆಯಲು ಅವಕಾಶವಿದೆ ಎಂದರು.
ಭುವನೇಶ್ವರಿ ಕಲಾ ಮಂಡಳಿಯ ನಿರ್ದೇಶಕ ಯಕ್ಷಗುರು ಕೋಡ್ಲ ಗಣಪತಿ ಭಟ್ ಸ್ವಾಗತಿಸಿ, ವಂದಿಸಿದರು. ಶಶಿಕಾಂತ್ ನಿರೂಪಿಸಿದರು. ಬಾಲಪ್ರತಿಭೆ ಸನಿಹ ಶೆಟ್ಟಿ ಅವರನ್ನು ಡಾ|ಶಿಶಿಲರು ಅಭಿನಂದಿಸಿದರು. ಬಳಿಕ ಕಲಿಕಾ ವಿದ್ಯಾರ್ಥಿಗಳಿಂದ ಮೂರು ಯಕ್ಷಗಾನ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.