ಸಾಮಾನ್ಯ ಸಭೆಯಲ್ಲಿ ಪರ್ಸೆಂಟೇಜ್ ಲೆಕ್ಕಾಚಾರ
ಓಪನ್ ಮಾರುಕಟ್ಟೆ ಕುರಿತು ಚಿಂತನೆ ; ಸದಸ್ಯರಿಂದಲೂ ಸಲಹೆ
ಸುಳ್ಯ ನಗರ ಪಂಚಾಯತ್ನ ಮೀನು ಮಾರುಕಟ್ಟೆ ಏಲಂ ಆಗಿದ್ದರೂ ಮರು ಏಲಂಗೆ ನ.ಪಂ. ನಿರ್ಧರಿಸಿ ಮರು ಏಲಂ ನಡೆಸಲಾಗುವುದೆಂದು ಮೀನು ಮಾರುಕಟ್ಟೆ ಪಡೆದುಕೊಂಡ ಬಿಡ್ಡು ದಾರರಿಗೆ ನ.ಪಂ. ನೋಟೀಸ್ ನೀಡಿರುವ ಕುರಿತು ನ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಯಾದ ಹಾಗೂ ಮರು ಏಲಂ ಗೆ ನ.ಪಂ. ನಿರ್ಧರಿಸಿದ ಕುರಿತು ಅಧ್ಯಕ್ಷರು ಸಮರ್ಥನೆ ನೀಡಿದ ಘಟನೆ ವರದಿಯಾಗಿದೆ.
ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷ ವಿನಯ ಕಂದಡ್ಕರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ್ ಕುರುಂಜಿ, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ ಕೊಡೆಂಕಿರಿ, ರಿಯಾಜ್ ಕಟ್ಟೆಕಾರ್, ಶರೀಫ್ ಕಂಠಿ, ಉಮ್ಮರ್ ಕೆ.ಎಸ್., ಬುದ್ಧ ನಾಯ್ಕ ಜಿ, ನಾರಾಯಣ ಶಾಂತಿನಗರ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ ದುಗಲಡ್ಕ, ವಾಣಿಶ್ರೀ ಬೊಳಿಯಮಜಲು, ಪೂಜಿತಾ ಕೆ.ಯು., ಪ್ರವಿತಾ ಪ್ರಶಾಂತ್, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಸುಶೀಲ ಜಿನ್ನಪ್ಪ ಪೂಜಾರಿ, ನಾಮ ನಿರ್ದೇಶಿತ ಸದಸ್ಯರುಗಳಾದ ಬೂಡು ರಾಧಾಕೃಷ್ಣ ರೈ, ಯತೀಶ್ ಬೀರಮಂಗಲ, ರೋಹಿತ್ ಕೊಯಿಂಗೋಡಿ, ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಇಂಜಿನಿಯರ್ ಶಿವಕುಮಾರ್ ಹಾಗೂ ಸಿಬ್ಬಂದಿಗಳಿದ್ದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡರು, “ಸುಳ್ಯದ ಹೂವಿನ ಮಾರುಕಟ್ಟೆ, ಮಾಂಸದ ಮಾರ್ಕೆಟು, ಖಾಸಗಿ ಬಸ್ಸು ನಿಲ್ದಾಣ ಬಳಿಯ ವಾಹನ ನಿಲುಗಡೆ ಶುಲ್ಕ ವಸೂಲಿ ಏಲಂ ನಡೆಸಿರುವ ಕುರಿತು ಸಾಮಾನ್ಯ ಸಭೆಗೆ ಇಡಲಾಗಿದೆ. ಆದರೆ ನಗರ ಪಂಚಾಯತ್ ಮೀನು ಮಾರುಕಟ್ಟೆ ಏಲಂ ಆಗಿದ್ದರೂ ಅದನ್ನು ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಯಾಕೆ ಇಟ್ಟಿಲ್ಲ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ ಅವರ ಪ್ರಶ್ನೆಗೆ ಮುಖ್ಯಾಧಿಕಾರಿಗಳು ಉತ್ತರಿಸಲಿಲ್ಲ. ಬಳಿಕ ಮುಂದುವರಿದು ಮಾತನಾಡಿ “ಮುಖ್ಯಾಧಿಕಾರಿಗಳೇ ಇದಕ್ಕೆ ನೀವು ಉತ್ತರಿಸಬೇಕು. ಒಮ್ಮೆ ಏಲಂ ಆಗಿರುವ ಮೀನು ಮಾರುಕಟ್ಟೆಯನ್ನು ಮರು ಏಲಂಗೆ ಇಟ್ಟಿರುವ ಉದ್ದೇಶ ಏನು ? ನಿಮಗೇನಾದರೂ ಪರ್ಸೆಂಟೆಜ್ ಬರಬೇಕೆ?. ಕಳೆದ ಬಾರಿ ೮ ಲಕ್ಷದ ೫೦ ಸಾವಿರಕ್ಕೆ ಹರಾಜಾಗಿತ್ತು. ಈ ಬಾರಿ ನ.ಪಂ. ನಮೂದಿಸಿದ ಬೆಲೆಗಿಂತ ಹೆಚ್ಚು ಬೆಲೆಗೆ ಅಂದರೆ ಜಿ.ಎಸ್.ಟಿ. ಎಲ್ಲ ಸೇರಿ ೧೨ ಲಕ್ಷದ ೬೨ ಸಾವಿರಕ್ಕೆ ಹೋಗಿದ್ದರೂ ಈಗ ಮತ್ತೆ ಮರು ಏಲಂ ನ ನೋಟೀಸು ಮಾಡಿರುವುದರ ಕಾರಣ ಏನು ? ಅಲ್ಪ ಸಂಖ್ಯಾತರೆನ್ನುವ ಕಾರಣಕ್ಕೆ ಹೀಗೆ ಮಾಡುತ್ತಿರೋ? ಎಂದು ಪ್ರಶ್ನಿಸಿದರು. “ಮೀನು ಮಾರುಕಟ್ಟೆಯಲ್ಲಿ ಆದಾಯ ಹೆಚ್ಚು ಬರಬೇಕು ಎನ್ನುವ ಉದ್ದೇಶದಿಂದ ಮರು ಏಲಂ ಗೆ ಕರೆದಿರಬಹುದು” ಎಂದು ಬೂಡು ರಾಧಾಕೃಷ್ಣ ರೈಯವರು ಹೇಳಿದಾಗ, “ಬಡಪಾಯಿಯ ಮೇಲೆ ಯಾಕೆ ಈ ರೀತಿ ಮಾಡುತ್ತೀರಿ” ಎಂದು ವೆಂಕಪ್ಪ ಗೌಡರು ಮತ್ತೆ ಕೇಳಿದರು. ಆಗ ಉತ್ತರಿಸಿದ ಅಧ್ಯಕ್ಷ ವಿನಯ ಕಂದಡ್ಕರು, “ಈ ಹಿಂದೆ ಮೀನು ಮಾರುಕಟ್ಟೆ ೨೮ ಲಕ್ಷ, ೩೨ ಲಕ್ಷ, ೧೬ ಲಕ್ಷ, ೧೪ ಲಕ್ಷದ ೫೦ ಸಾವಿರ ಕ್ಕೆ ಹೋಗಿದೆ. ವರ್ಷದ ಹಿಂದೆ ೮ ಲಕ್ಷದ ೬೭ ಸಾವಿರಕ್ಕೆ ಅದರ ರೇಟ್ ಇಳಿಸಲಾಗಿದೆ. ಯಾರು ಮೀನು ವ್ಯಾಪಾರ ಮಾಡುತ್ತಾರೆಯೋ ಅವರೆಲ್ಲರೂ ಸೇರಿ ವ್ಯವಸ್ಥಿತವಾಗಿ ನ.ಪಂ. ಆದಾಯ ಇಳಿಸುವ ಪ್ರಯತ್ನಗಳು ನಡೆಯಿತು. ಕಳೆದ ವರ್ಷ ಇ.ಟೆಂಡರ್ ಮಾಡಬೆಂದು ಕೊಂಡೆವು ಆದರೆ ಆಗಿಲ್ಲ. ಈ ಬಾರಿ ಇ ಟೆಂಡರ್ ಹಾಕಿದೆವು. ನ.ಪಂ. ಮೂಲ ಬೆಲೆ ಇರುವುದು ೮ ಲಕ್ಷದ ೫೦ ಸಾವಿರ ರೂ. ಮೀನು ಮಾರುಕಟ್ಟೆಯನ್ನು ಏಲಂ ಪಡೆದವರೇ ಸ್ವಚ್ಛತೆ ಮಾಡಬೇಕೆನ್ನುವ ನಿಯಮ ಇದೆ. ಆದರೆ ಅವರು ಸ್ವಚ್ಛತೆ ಮಾಡುತ್ತಿಲ್ಲ. ಈ ಬಗ್ಗೆ ದೂರುಗಳು ಬಂದಿದೆ. ಅದಕ್ಕಾಗಿ ಒಬ್ಬ ಸ್ವಚ್ಚತೆಗಾರನನ್ನು ನೇಮಿಸುವುದೆಂದು ನಿರ್ಧರಿಸಿ ಅವನ ಸಂಬಳವೂ ಸೆರಿ ಒಟ್ಟು ೧೦ ಲಕ್ಷದ ೬೮ ಸಾವಿರ ನ.ಪಂ. ಮೂಲ ಬೆಲೆ ಎಂದು ಕಾಣಿಸಿದೆವು. ಟೆಂಡರ್ನಲ್ಲಿ ೬ ಜನ ಭಾಗವಹಿಸಿದರೂ ಅದರಲ್ಲಿ ಇಬ್ಬರಿಗೂ ತಾಂತ್ರಿಕ ಕಾರಣದಿಂದ ಭಾಗವಹಿಸಲು ಆಗಿಲ್ಲ. ಯಾಕೆ ಎನ್ನುವುದು ಇನ್ನೂ ಅವರಿಗೆ ಗೊತ್ತಾಗಿಲ್ಲ. ಮತ್ತೆ ೪ ಜನ ಹಾಕಿದ್ದರೂ ಅದರಲ್ಲಿ ಇಬ್ಬರಿಗೆ ಆ ದಿನ ಭಾಗವಹಿಸಲು ಆಗಿಲ್ಲ. ತಾಂತ್ರಿಕ ಕಾರಣ ನೀಡಿದ್ದಾರೆ. ಮತ್ತೆ ಇಬ್ಬರು ಭಾಗವಹಿಸಿದ್ದಾರೆ. ಟೆಂಡರ್ ನಡೆದ ತಕ್ಷಣವೇ ನಮಗೆ ಟೆಂಡರ್ ಹಾಕಿ ಭಾಗವಹಿಸಲು ಆಗದೇ ಇರುವವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರ ಜತೆಗೆ ನ.ಪಂ. ಮೀನು ಮಾರುಕಟ್ಟೆ ಏಲಂ ನಲ್ಲಿ ಅಧ್ಯಕ್ಷರು ಅಧಿಕಾರಿಗಳು ಭ್ರಷ್ಟಚಾರ ಮಾಡಿದ್ದಾರೆಂದು ಜಿಲ್ಲಾಧಿಕಾರಿಗಳಿಗೂ ನಮ್ಮ ಮೇಲೆಯೇ ದೂರು ಹೋಗಿದೆ ಎಂದು ಹೇಳಿದ ಅಧ್ಯಕ್ಷರು ಈ ಎಲ್ಲ ಕಾರಣಗಳಿಂದ ನಾವು ಮರು ಏಲಂಗೆ ನಿರ್ಧರಿಸಿದ್ದೇವೆ. ಮತ್ತು ಈಗ ಆಗಿರುವ ಟೆಂಡರ್ ಅಸೆಪ್ಟ್ ಮಾಡಿಲ್ಲ. ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ನಾವು ಗೌರವ ಕೊಡುತ್ತೇವೆ ಎಂದು ಹೇಳಿದರು. ಆದರೆ ಮೀನು ಮಾರುಕಟ್ಟೆ ಪಡೆದವರು ಕಷ್ಟದಲ್ಲಿರುವವರಲ್ಲ. ಅವರೂ ಕೂಡಾ ೧೭ ಕಡೆ ಸೈಟ್, ಬಿಲ್ಡಿಂಗ್ ಹಾಕಿದ್ದಾರೆ ಇದೆಲ್ಲ ಗೊತ್ತಿದೆ. ಈ ಹಿಂದೆ ಎಷ್ಟು ಪ್ರಾಮಾಣಿಕತೆಯಿಂದ ಇದ್ದರೆನ್ನೂವುದು ಗೊತ್ತಿದೆ. ಕಳೆದ ಬಾರಿ ನನಗೂ ಆಫರ್ಗಳು ಬಂದಿತ್ತು. ಆದರೆ ನಾನು ಅದಕ್ಕೆಲ್ಲ ಒಪ್ಪದೆ ನ.ಪಂ.ಗೆ ಆದಾಯ ಬರಬೇಕೆಂದು ಇ.ಟೆಂಡರ್ಗೆ ಹಾಕಿದ್ದೇವೆ ಎಂದು ಅಧ್ಯಕ್ಷರು ಹೇಳಿದರು.
ಹಿಂದೆ ಅಷ್ಟು ರೇಟ್ಗೆ ಹೋಗಿದ್ದರೆ ಈಗ ೧೦ ಲಕ್ಷದ ೬೮ ಸಾವಿರ ನಿಗದಿ ಪಡಿಸಿದ್ದು ಯಾಕೆ. ಎಷ್ಟು ಆದಾಯ ಬೇಕಿತ್ತೋ ಅಷ್ಟೆ ಮಾಡಬಹುದಿತ್ತಲ್ಲವೇ?. ಈಗ ಏಲೆಂ ಆದ ಮೇಲೆ ಈ ರೀತಿ ಮಾಡುವ ಕ್ರಮ ಸರಿಯಲ್ಲ. ಅವರು ಕಾನೂನು ರೀತಿಯ ಹೋರಾಟ ಮಾಡುತ್ತಾರೆ ಎಂದು ವೆಂಕಪ್ಪ ಗೌಡರು ಹೇಳಿ ಸಭೆಯಿಂದ ಹೊರ ಹೋದರು. ಬಳಿಕ ಈ ಕುರಿತು ಸಭೆಯಲ್ಲಿ ಅಭಿಪ್ರಾಯ ಹೇಳಿದಾಗ “ರೀ ಟೆಂಡರ್ ಮಾಡಿ” ಎಂದು ಶರೀಫ್ ಕಂಠಿ ಸಲಹೆ ನೀಡಿದರೆ, “ಓಪನ್ ಮಾರುಕಟ್ಟೆ ಮಾಡೋಣವೇ?” ಎಂದು ಅಧ್ಯಕ್ಷರು ಸಲಹೆ ನಿಡಿದರು. “ಓಪನ್ ಮಾರುಕಟ್ಟೆ ಆಗಬಹುದು. ಬಡವರಿಗೆ ಕಡಿಮೆಗೆ ಮೀನು ಸಿಗಬಹುದು ಎಂದು ಶರೀಫ್ ಹಾಗೂ ರಿಯಾಜ್ ಸಲಹೆ ನೀಡಿದರು. “ಕಾನೂನು ಪ್ರಕಾರ ಹೇಗಿದೆಯೋ ನೋಡಿ ಮಾಡಿ. ನ.ಪಂ. ಗೆ ಆದಾಯ ಕುಂಠಿತ ಆಗಬಾರದು ಎಂದು ಉಮ್ಮರ್ ಹೇಳಿದರು.
ಮೀನು ಮಾರುಕಟ್ಟೆ ವಿಚಾರದಲ್ಲಿ ವೆಂಕಪ್ಪ ಗೌಡರು ಮಾಜಿ ಸಚಿವ ಈಶ್ವರಪ್ಪರ ವಿರುದ್ಧ ಬಂದಿರುವ ಪರ್ಸೆಂಟೇಜ್ ಆರೊಪ ಪ್ರಸ್ತಾಪಿಸಿದರೆ, ಬೂಡು ರಾಧಾಕೃಷ್ಣ ರೈ ಮತ್ತಿತರ ಬಿಜೆಪಿ ಬೆಂಬಲಿರು ಮಾಜಿ ಸಿ.ಎಂ. ಸಿದ್ಧರಾಮಯ್ಯರ ವಿರುದ್ಧ ಬಂದಿರುವ ಪರ್ಸೆಂಟೇಜ್ ಲೆಕ್ಕವನ್ನು ಪ್ರಸ್ತಾಪಿಸಿದರು.