ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ಇನ್ನಿಲ್ಲ. ವಯೋಸಹಜ ಅಸೌಖ್ಯದಿಂದ ಬಳಲುತ್ತಿದ್ದ ಅವರು ಇಂದು ಸಂಜೆ ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ತಮ್ಮ ಪಂಜದ ಮನೆಯಿಂದ ಪುತ್ತೂರಿನಲ್ಲಿರುವ ಪುತ್ರಿ, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದರ ಪತ್ನಿ ಶೋಭಾ ಶಿವಾನಂದ್ ಅವರ ಮನೆಗೆ ಎ. 19ರಂದು ಬಂದಿದ್ದ ಟಿ.ಜಿ.ಮುಡೂರು ಆರೋಗ್ಯವಾಗಿಯೇ ಇದ್ದರು. ಇಂದು ಮಧ್ಯಾಹ್ನ ದಿಢೀರ್ ಅಸ್ವಸ್ಥರಾದ ಅವರನ್ನು ಕೂಡಲೇ ಚೇತನಾ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ 7 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದರು.
ನಾಡಿನ ಅಗ್ರಮಾನ್ಯ ಸಾಹಿತಿಯಾಗಿದ್ದ ತಮ್ಮಯ್ಯ ಗೌಡ ಮುಡೂರು ಇಳಿ ವಯಸ್ಸಿನವೆಗೂ ಅತ್ಯಂತ ಕ್ರಿಯಾಶೀಲರಾಗಿದ್ದರು. ಸುದೀರ್ಘ ಕಾಲ ಅಧ್ಯಾಪನ ವೃತ್ತಿ ನಡೆಸಿದ್ದ ಮುಡೂರು ಸಾಹಿತ್ಯ ಸಂಘಟಕರಾಗಿಯೂ ಮುಂಚೂಣಿಯಲ್ಲಿದ್ದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಸಾಹಿತ್ಯ ಸಂಘಟನೆಯ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸಂಘ ಸಂಸ್ಥೆಗಳಲ್ಲೂ ಕ್ರಿಯಾಶೀಲರಾಗಿದ್ದರು. ಹಲವಾರು ಮೌಲಿಕ ಕೃತಿಗಳನ್ನು ಹೊರತಂದಿರುವ ಮುಡೂರು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಅರೆಭಾಷೆ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ.
ಮೃತರು ಪತ್ನಿ ಕಮಲ, ಪುತ್ರಿಯರಾದ ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕಿ ಶೋಭಾ ಶಿವಾನಂದ, ಪ್ರಾಧ್ಯಾಪಕಿ ಗೀತಾ ಪುಂಡರೀಕ, ಮೈಸೂರಿನಲ್ಲಿ ದಂತ ವೈದ್ಯರಾಗಿರುವ ಡಾ. ಮಮತಾ ಕಿರಣ್, ಪುತ್ರ ಪಂಜದ ಮುಡೂರು ಇನ್ಫೋಟೆಕ್ ಮಾಲಕ ಸವಿತಾರ ಮುಡೂರು, ಅಳಿಯಂದಿರಾದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ, ನಿವೃತ್ತ ಪ್ರೊಫೆಸರ್, ಪುಂಡರೀಕ ಅಡ್ಪಂಗಾಯ, ಇಂಜಿನಿಯರ್ ಕಿರಣ್ ಉಳುವಾರು, ಸೊಸೆ ಲತಾ, ಮೊಮ್ಮಕ್ಕಳು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.