ನುಡಿ ನಮನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

☄️ ಸಾರ್ಥಕ ಬದುಕು ಮುಗಿಸಿದ ಸಾತ್ವಿಕ ಶಕ್ತಿ

☄️ ಸಾಹಿತ್ಯ ಲೋಕದ ಸರ್ವಾಂಗೀಣ ಸಾಧಕ

☄️ ಟಿ.ಜಿ.ಮುಡೂರು ಸಾಗಿ ಬಂದ ಒಂಭತ್ತೂವರೆ ದಶಕದ ಹಾದಿ…

✍️ ದುರ್ಗಾಕುಮಾರ್ ನಾಯರ್ ಕೆರೆ

 

ಹಸಿರು ಪ್ರಕೃತಿಯ ಉಸಿರು, ಹಸಿರು ಸಂಸ್ಕೃತಿಯ ಬಸಿರು. ಹಾಗೆ ಹಸಿರನ್ನೇ ಉಸಿರಾಗಿಸಿ ಬಸಿರಿಗೆ ತುಂಬಿಕೊಂಡ ಮಲೆಯ ಹೆಸರು ಬಂಟಮಲೆ. ಅತ್ತ ಇತ್ತ ಸುತ್ತ ಮುತ್ತದ ಜನತೆಗಿದು ಜೀವ ಕಾರುಣ್ಯ. ಎತ್ತೆತ್ತಲೂ ತುಂಬಿ ತೊನೆಯುವ ಬಂಟಮಲೆಯ ಕಾಡ ಘಮ ಸೂಕ್ಮಜ್ಞರ ಪಾಲಿಗೆ ಜೀವದಾಯಿನಿ. ಪ್ರಕೃತಿಗೆ ಸಮೃದ್ಧ ಸಿರಿ ಬಂಟಮಲೆಯ ಕೊಡುಗೆಯಾದರೆ ಸಾಂಸ್ಕೃತಿಕ, ಸಾಹಿತ್ಯಿಕ ವಕ್ತಾರರಿಗೆ ಈ ಮಲೆ ಪ್ರೋತ್ಸಾಹದ ಸೆಲೆ, ಉತ್ತೇಜನದ ಬಲೆ. ಹಾಗೆ ಈ ಮಲೆಯ ತುಂಬೆಲ್ಲಾ ಅಲೆ ಅಲೆಯಾಗಿ ಹರಡಿದ್ದು ಸಾಹಿತ್ಯದ ಗಂಧ, ಸುಗಂಧ.
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಪಂಜದೊಂದಿಗೆ ಬೆಳೆದು, ಪಂಜವನ್ನು ಬೆಳೆಸಿ, ಬೆಳಗಿಸಿ ತಾನೂ ಬೆಳಗುವಂತೆ ಬೆಳೆದ ತಮ್ಮಯ್ಯ ಗೌಡ ಮುಡೂರು ಬಂಟಮಲೆಯ ತಟದಿಂದಲೇ ಸ್ಪೂರ್ತಿ ಪಡೆದು ಕೀರ್ತಿ ಗಳಿಸಿಕೊಂಡವರು. ಸಾಂಸ್ಕೃತಿಕ ದೌತ್ಯಕ್ಕೆ ಹೆಗಲು ಕೊಟ್ಟವರು.
ಇವರ ಸಂಘಟನೆ ಹಲವು. ಅಲ್ಲೆಲ್ಲಾ ಸಾರಥ್ಯವೇ ಇವರಿಗೆ ಒಲವು. ಇವರಿದ್ದರೆ ಅಲ್ಲಿ ಗೆಲುವಿನ ಹೊನಲು, ಎಲ್ಲೆಲ್ಲೂ ಸಂವೇದನಾ ಫಸಲು. ಹೀಗೆ ಕನ್ನಡದ ಮುನ್ನಡೆಗೆ ಮುನ್ನುಡಿ ಬರೆದವರು ಮುಡೂರು. ಶ್ವೇತ ಶುಭ್ರ ಧೋತಿ, ಅದಕ್ಕೊಪ್ಪುವ ಕದ್ದರ್ ಅಂಗಿ, ಕೈಯಲ್ಲೊಂದು ಪುಸ್ತಕ, ಕಿಸೆಯಲ್ಲೊಂದು ಪೆನ್ನು, ಮುಖದಲ್ಲಿ ಅಳಿಯದ ಮಂದಹಾಸ, ಮಧ್ಯಮ ವೇಗದ ನಡಿಗೆ…. ಹೌದು ಇವರೇ ಮುಡೂರು. ಅರಿಯದ ಪ್ರೀತಿ, ಅಳಿಸಲಾಗದ ಸ್ನೇಹ, ಮರೆಯಲಾಗದ ಮರೆಯಬಾರದ ನೆನಪುಗಳು, ಬಿಡಿಸಲಾಗದ ಬಂಧನ. ಇದಕ್ಕೆಲ್ಲಾ ಪ್ರತೀಕ ಮುಡೂರುರವರ ನಿಸ್ಪೃಹ ವ್ಯಕ್ತಿತ್ವ. ಸಾಹಿತಿಯಾಗಿ, ಸಂಘಟಕನಾಗಿ, ಶಿಕ್ಷಕನಾಗಿ, ಸಾಮಾಜಿಕ ಸೇವೆಯ ಹರಿಕಾರನಾಗಿ ಮೆರೆದ ಮುಡೂರು ಮುಡೂರಿನಿಂದ ಬಂದವರು. ಮುಡೂರರಾಗಿ ಬೆಳೆದವರು.


ಮುಡೂರು ತಮ್ಮ ಜೀವನದ ಬಹುಕಾಲ ಅಧ್ಯಾಪಕರಾಗಿದ್ದವರು. ನಿವೃತ್ತಿಯ ನಂತರ ಕೃಷಿಕರಾದವರು. ಈ ಎಲ್ಲ ವರ್ಷಗಳಲ್ಲಿ ಅವರು ವಾಸಿಸಿದ್ದ ಹಳ್ಳಿಗಳಲ್ಲಿ ಮುಖ್ಯವಾದದ್ದೆಂದರೆ ಅವರು ತಮ್ಮ ಚಟುವಟಿಕೆಗಳನ್ನು ಅಧ್ಯಾಪನಕ್ಕೆ ಮಾತ್ರ ಮೀಸಲಿರಿಸದೆ ತಾವು ವಾಸಿಸಿದ ಊರುಗಳಲ್ಲಿ ಸಂಸ್ಥೆಗಳನ್ನು ಕಟ್ಟಿ ಸಾಹಿತ್ಯಿಕ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಶ್ರಮಿಸಿದ್ದಾರೆ ಎನ್ನುವುದು. ಕೆಲವು ಸಲ ಒಂಟಿಯಾಗಿ, ಕೆಲವು ಸಲ ಸಮಾನ ಮನಸ್ಕರ ಜೊತೆಗೂಡಿ ಅವರು ಹೀಗೆ ಸಂಸ್ಥೆ ಕಟ್ಟಿದ್ದಾರೆ.
ಅನೇಕರನ್ನು ಅವರ ವೃತ್ತಿ ಜೀವನ ಜೊತೆಗೆ ತಾವು ಬದುಕುವ ಪರಿಸರ, ಅಲ್ಲಿನ ಸಣ್ಣಪುಟ್ಟ ರಾಜಕೀಯ ಮುಗಿಸಿಬಿಡುತ್ತದೆ. ಅವುಗಳನ್ನು ಮೀರಿ ತನ್ನ ಸುತ್ತಲಿನ ಸಮಾಜವನ್ನು ಸ್ವಲ್ಪವಾದರೂ ತಿದ್ದಲು ಅಲ್ಲಿ ಬದಲಾವಣೆ ತರುವ ಕೆಲಸ ಮಾಡುವುದು ಮುಖ್ಯ ಅನ್ನಿಸುತ್ತದೆ. ಅದೂ ಸಣ್ಣ ಊರುಗಳಲ್ಲಿ ಹೀಗೆ ಮಾಡುವುದು ಸಂಸ್ಕೃತಿ ಪ್ರಸಾರ ದೃಷ್ಟಿಯಿಂದ ವಿಶೇಷ ಪ್ರಾಮುಖ್ಯತೆ ಪಡೆಯುತ್ತದೆ. ಮುಡೂರು ತಮ್ಮ ಜೀವಮಾನದುದ್ದಕ್ಕೂ ಇಂಥ ಕೆಲಸ ಮಾಡಿದ್ದಾರೆ. ಇದು ಸಾಹಿತ್ಯದ ಮೇಲಿನ ಪ್ರೀತಿಯಿಂದ, ಅದರ ಪ್ರಾಮುಖ್ಯತೆಯ ಅರಿವಿನಿಂದ ಮಾಡಿದ ಕೆಲಸ.
ಅವರು ನಾಟಕ, ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ಜಾನಪದ ಲೇಖನ, ವ್ಯಕ್ತಿ ಪರಿಚಯ, ಕವಿತೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿಯೂ ಮುಕ್ತ ಛಂದಸ್ಸು, ಚೌಪದಿ, ಹಳೆಗನ್ನಡ, ಹೊಸಗನ್ನಡ, ಗೌಡ ಕನ್ನಡ, ಹವ್ಯಕ ಕನ್ನಡ, ತುಳು ಹೀಗೆ ಒಳ ವೈವಿಧ್ಯಗಳಿವೆ. ಕನ್ನಡದಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಪ್ರಚಲಿತವಿದ್ದ ಪ್ರಯೋಗಗಳಿಗೆ ಸ್ಪಂದಿಸುತ್ತ ಅವುಗಳನ್ನು ತನ್ನದಾಗಿ ಪ್ರಯತ್ನಿಸುತ್ತಾ ಕ್ರಿಯಾಶೀಲ ಮನಸ್ಸೊಂದು ಇಲ್ಲಿ ಕಾಣಿಸುತ್ತದೆ.
ಜಗತ್ತಿಗೆ ತೆರೆದುಕೊಂಡ ವ್ಯಕ್ತಿಗಳು ನಿಂತ ನೀರಲ್ಲ. ಕಾಲದೊಡನೆ ಸಾಗುತ್ತಾ ಹೋಗುತ್ತಾರೆ. ಅನುಭವಗಳು ಮತ್ತು ಸಂದರ್ಭಗಳು ಅವರನ್ನು ರೂಪಿಸುತ್ತಾ ಸಾಗುತ್ತವೆ. ಹಾಗೆಯೇ ಇದ್ದರು ಮುಡೂರು. ಹಾಗಾಗಿ ಅವರು ಪ್ರಜ್ಞೆಯ ಆಸ್ತಿ. ಯಥಾಸ್ಥಿತಿ ವಾದದಿಂದ ಸಂವೇದನಾಶೀಲತೆಯನ್ನು ದೂರೀಕರಿಸುವ ಪ್ರಯತ್ನಕ್ಕೆ ತಡೆಯೊಡ್ಡಿ ಗೊಡ್ಡು ವಾದಗಳಿಗೆ ನಾವೀನ್ಯತೆಯ ಕ್ರಿಯಾಶೀಲ ಸ್ಪರ್ಶ ಕೊಟ್ಟ ಮಾಯಾವಿ ಮುಡೂರು. ತನ್ಮೂಲಕ ಸಾಮಾಜಿಕ ಪ್ರತಿ ಬದ್ಧತೆಯ ಗಟ್ಟಿ ನಿಲುವನ್ನು ಕಾಪಿಟ್ಟವರು.
ಮುಡೂರು ಸಾಹಿತ್ಯ ಮತ್ತು ಸಮಾಜವನ್ನು ಬೇರೆ ಬೇರೆಯಾಗಿ ನೋಡಿದವರಲ್ಲ. ತನ್ನ ಸುತ್ತಲಿನ ಆಗು ಹೋಗುಗಳಿಗೆ ತಕ್ಷಣ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿದವರು. ಹಾಗಾಗಿ ಅವರ ಸಾಹಿತ್ಯದಲ್ಲಿ ಎಲ್ಲವೂ ಇತ್ತು, ವೈವಿಧ್ಯತೆ ಇತ್ತು. ಆದರ್ಶ ತತ್ವಗಳನ್ನು ಪ್ರದರ್ಶಿಸಿದ ನೇರ ನಡೆ ನುಡಿಯ ಮುಡೂರು ಅವರ ಜೀವನ ಸರಳ. ಸರಳತೆ ಇದ್ದಲ್ಲಿ ಸತ್ಯ ಪ್ರಾಮಾಣಿಕತೆ ಇದ್ದೇ ಇರುತ್ತದೆ. ಹೀಗಾಗಿ ಸವಕಲು ಎನಿಸದೇ ಎಲ್ಲರೊಡನೆ ಸಮಾನವಾಗಿ ಕಾಣಿಸಬಲ್ಲ ಚೈತನ್ಯ ಉತ್ಸಾಹ ಹೊಂದಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪುರಾಣ ಪ್ರಸಿದ್ಧ ತಾಣ ಅಡೂರು. ಇಲ್ಲಿಯ ಪುಣ್ಯತಮ ಕ್ಷೇತ್ರ ಅಡೂರು ಶ್ರೀ ಮಹಾಲಿಂಗೇಶ್ವರ ದೇವಾಲಯ. ಈ ಪುಣ್ಯಕ್ಷೇತ್ರದ ಸಮೀಪದಲ್ಲಿಯೇ ಇದೆ ಮುಡೂರು. ಅದೇ ಹೆಸರು ಈ ವಿದ್ವಾನ್ ಗೌಡರಿಗೆ ಉಪಲಬ್ಧ.
ಮುಡೂರು ತಮ್ಮಯ್ಯ ಗೌಡರ ತಂದೆಯ ಊರು. ತಾಯಿ ಬಾಲಕ್ಕನವರು ದೇಲಂಪಾಡಿಯ ಕುತ್ತಿಮುಂಡದವರು. ಈ ಮನೆತನಗಳೆರಡೂ ಕರ್ನಾಟಕ -ಕೇರಳ ಗಡಿಯಂಚಿನಲ್ಲಿದೆ. ಸುಬ್ಬಪ್ಪ ಗೌಡ, ಬಾಲಕಮ್ಮ ಇಬ್ಬರೂ ಸ್ವಾವಲಂಬನೆಯ ಹರಿಕಾರರು. ಪ್ರಾಮಾಣಿಕ ಬದುಕಿನ ಪ್ರತಿನಿಧಿಗಳು. ತಾಯಿ ಬಾಲಕಮ್ಮನವರು ಪ್ರಸಿದ್ಧ ಪ್ರಸೂತಿ ತಜ್ಞೆ. ಪ್ರಕೃತಿ ಚಿಕಿತ್ಸೆಯ ರೂವಾರಿ. ವೈದ್ಯಶಾಸ್ತ್ರವನ್ನು ಅವರು ಓದಿದವರಲ್ಲ. ಆದರೆ ಶಾಸ್ತ್ರಕ್ಕಿಂತ ಅನುಭವವೇ ಮುಖ್ಯ ಎನ್ನುವುದನ್ನು ನಿರೂಪಿಸಿದವರು. ತಂದೆ ಮತ್ತು ತಾಯಿಯ ಎಳವೆಯಲ್ಲಿಯೇ ಅವರ ಹಿರಿಯರು ತಮ್ಮ ಕೂಡುಕುಟುಂಬದಿಂದ ಕವಲಾಗಿ ಸುಳ್ಯ ತಾಲೂಕಿನ ಇಂದಿನ ಕಳಂಜದಲ್ಲಿ ನೆಲೆ ನಿಂತುದರಿಂದ ಅಲ್ಲೇ ಅವರ ವಿವಾಹವಾಯಿತು. ಕಳಂಜ ಗ್ರಾಮದ ಕೋಟೆ ದೇಗುಲ ಬಳಿ ವಾರಣಾಸಿ ಎಂಬಲ್ಲಿ ಮುಡೂರರ ಹುಟ್ಟು. ದಿನಾಂಕ 24-11-1927ಎಂದು ಅವರ ಪ್ರಾಥಮಿಕ ಶಾಲಾ ಅಧ್ಯಾಪಕರು ದಾಖಲಾತಿ ರಿಜಿಸ್ಟ್ರಿಯಲ್ಲಿ ಬರೆದಿಟ್ಟಿರುವ ದಾಖಲೆ ಇದಕ್ಕೆ ಆಧಾರ. ಹೆತ್ತವರು ಬರೆಸಿಟ್ಟ ಜನನ ಜಾತಕವಿಲ್ಲ.

ಮುಡೂರರ ತಾಯಿ ತಂದೆಯವರಿಗೆ ಐವರು ಮಕ್ಕಳು. ಇಬ್ಬರು ಅಕ್ಕಂದಿರು, ಅಣ್ಣ ಮತ್ತು ಒಬ್ಬಳು ತಂಗಿ. ಅಕ್ಕಂದಿರಿಗೆ ಓದುವ ಸೌಲಭ್ಯ ಒದಗಿರಲಿಲ್ಲ. ಅಣ್ಣ ತಂಗಿಯರು ಪ್ರಾಥಮಿಕ ಶಿಕ್ಷಣ ಪಡೆದವರು. ಮುಡೂರರಿಗೆ 2 ವರ್ಷವಾಗಿದ್ದಾಗ ಅವರ ಸಂಸಾರ ಕಳಂಜದಿಂದ ಕಲ್ಮಡ್ಕಕ್ಕೆ ಸ್ಥಳಾಂತರವಾಯಿತು. ಕಾರಣ ಅವರು ಒಕ್ಕಲಾಗಿದ್ದ ವಾರಣಾಸಿ ಮನೆತನದ ಒಂದು ಭೂಮಿ ಕಲ್ಮಡ್ಕ ಗ್ರಾಮದ ಉಡುವೆಕೋಡಿ ಎಂಬಲ್ಲಿತ್ತು. ಅಡಿಕೆ ತೋಟವಾಗಿದ್ದ ಅದನ್ನು ಗೇಣಿದಾರರಾಗಿ ನೋಡಿಕೊಳ್ಳಲು ವಾರಣಾಸಿಯವರು ಕಳುಹಿಸಿದ್ದರು. ಉಡುವೆಕೋಡಿಯಲ್ಲಿ ಕೆಳಗಿನ ಮತ್ತು ಮೇಲಿನ ಉಡುವೆಕೋಡಿ ಎಂದು ವಿಭಾಗವಿದ್ದು ಮೇಲಿನದು ವಾರಣಾಸಿಯವರ ಹತ್ತಿರದ ಸಂಬಂಧಿಕರದು. ಈ ಅನ್ಯೋನ್ಯತೆಯಿಂದ ಮೇಲಿನ ಉಡುವೆಕೋಡಿಯವರೇ ಮುಡೂರರಿಗೆ ಹತ್ತಿರದವರಾಗಿದ್ದರು. ಹೀಗೇ ಮುಡೂರರ ಬಾಲ್ಯ, ಕೌಮಾರ್ಯ, ತಾರುಣ್ಯ, ವೃತ್ತಿಜೀವನದ ಆರಂಭ, ಅಧ್ಯಯನ, ಸಾಹಿತ್ಯ ಸಂಘಟನೆ ಎಲ್ಲವೂ ಕಲ್ಮಡ್ಕದಲ್ಲೇ ನಡೆಯಿತು. ಅವರೇ ಹೇಳಿಕೊಳ್ಳುವಂತೆ ಕಲ್ಮಡ್ಕ ಬೇರು ಬಿಟ್ಟ, ಚಿಗುರಿಟ್ಟ ನೆಲ.
ಕಲ್ಮಡ್ಕ ಪಂಚಾಯತ್ ಪ್ರಾಥಮಿಕ ಶಾಲೆಯಲ್ಲಿ 1935 ರಿಂದ, ಬೆಳ್ಳಾರೆ ಪ್ರಾಥಮಿಕ ಶಾಲೆಯಲ್ಲಿ 1942ರವರೆಗೆ ಅಧ್ಯಯನ ಕೈಗೊಂಡ ಮುಡೂರು, ಶಿಕ್ಷಕ ಕ್ಷೇತ್ರಕ್ಕೆ ಕಾಲಿರಿಸಿದ್ದು 1943ರಲ್ಲಿ. ಅವರು ಶಿಕ್ಷಕ ವೃತ್ತಿಗೆ ಬಂದದ್ದು ಅಯಾಚಿತವಾಗಿಯೇ. ಹಾಸನಡ್ಕದ ಮನೆಯೊಂದರಲ್ಲಿ ಮನೆಪಾಠ ಹೇಳಿಕೊಡುವ ಅವರ ಹವ್ಯಾಸ ನಿಡುಗಾಲದ ಅಧ್ಯಾಪಕ ವೃತ್ತಿಗೆ ಕಾಲಿರಿಸಲು ನಾಂದಿಯಾಯಿತು.
ಬೆಳ್ಳಾರೆಯ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿದ್ದು, ಮೂರು ವರುಷಗಳ ಕಾಲ ಮುಡೂರುರವರಿಗೆ ತನ್ನಲ್ಲಿ ಆಶ್ರಯವನ್ನಿತ್ತಿದ್ದ ದಿ. ಶ್ರೀಧರ ಪೈಯವರ ಶಿಸ್ತಿನ ಪರಿಪಾಠಗಳು ಮುಡೂರುರವರನ್ನು ದಾರಿ ಕೆಡದಂತೆ ಮುನ್ನಡೆಸಿತ್ತು. ಸಮಾಜದ ಗೌರವಾದರಗಳನ್ನು ಪಡೆದಿದ್ದ ಆ ಗುರುಗಳ ಮಾದರಿ ಮುಡೂರರ ಅಧ್ಯಾಪನ ವೃತ್ತಿಗೆ ಆದರ್ಶನೀಯವಾಗಿತ್ತು. ‘ಹುಟ್ಟಬಾರದಿತ್ತು ನೋಡು ಹುಟ್ಟದಿರುವುದುತ್ತಮ ಹುಟ್ಟಿ ಬಂದ ಮೇಲೆ ಲೀಲೆ ತೋರಲದುವೆ ಉತ್ತಮ’ ಎಂಬಂತೆ ಬೆಳೆದರು ಮುಡೂರು.

ಆಗೆಲ್ಲಾ ಮುಡೂರರಿಗೆ ಪಂಜದ ನೆನಪು ಅಷ್ಟಕಷ್ಟೆ. ತಿಂಗಳಿಗೊಮ್ಮೆ ಒಂದು ಹೊತ್ತು ಅಧ್ಯಾಪಕ ಸಭೆಗಳಿಗೆ ಕಲ್ಮಡ್ಕದ ಮುಖ್ಯಗುರುಗಳೊಂದಿಗೆ ಬಂದು ಹೋಗುತ್ತಿದ್ದ ನೆನಪುಗಳು ಮಾತ್ರ. ಆಗ ಪಂಜದಲ್ಲಿ ಜಿಲ್ಲಾ ಬೋರ್ಡ್ ಆಡಳಿತದಲ್ಲಿದ್ದ ಮಾಧ್ಯಮಿಕ ಶಾಲೆ, ದೂರ ದೂರದಲ್ಲಿದ್ದ ನಾಲ್ಕೈದು ಹಂಚು ಛಾವಣಿ ಕಟ್ಟಡಗಳು ಮಾತ್ರ. 1946ರಲ್ಲಿ ಪಂಜ ಪರಿಸರದ ಯುವಕರು ಸಾಂಸ್ಕೃತಿಕ ಕೂಟವೊಂದನ್ನು ಕಟ್ಟಲು ತೊಡಗಿದ್ದರು. ಅದಕ್ಕೆ ಹೆಸರಿಡಲು ಮುಡೂರು ಅವರಲ್ಲಿ ಕೇಳಿಕೊಂಡಾಗ ಪ್ರಗತಿಕೂಟ ಎಂಬ ನಾಮಕರಣದೊಂದಿಗೆ ಕಲ್ಮಡ್ಕದಲ್ಲಿದ್ದ ಅವರೂ ಭಾಗಿಯಾದರು. ಪ್ರಗತಿಯ ಕರೆ ಎಂಬ ಗೀತೆಯನ್ನು ಬರೆದು ಹಾಡಿದರು. 1952ರಲ್ಲಿ ಪ್ರೌಢಶಾಲೆ ಆರಂಭವಾದಾಗ ಹೊಸ ಅಧ್ಯಾಪಕರ ಆಗಮನದಿಂದ ಪಂಜದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಶಾಲಾ ವಾರ್ಷಿಕೋತ್ಸವ ಹಾಗೂ ಇತರ ದಿನಾಚರಣೆಗಳಲ್ಲಿ ಅಧ್ಯಾಪಕ, ವಿದ್ಯಾರ್ಥಿ, ಹಳೆ ವಿದ್ಯಾರ್ಥಿಗಳ ಚಟುವಟಿಕೆಗಳು ಊರ ಜನತೆಯನ್ನು ಆಕರ್ಷಿಸಿದವು.
ಅಧ್ಯಾಪನದ ಫಸಲಿಗೆ ನೀರೆರೆದು ಹುಲುಸಾದ ಬೆಳೆ ಪಡೆದ ಮುಡೂರು ಕಲ್ಮಡ್ಕ ಶಾಲೆಯಲ್ಲಿ ವೃತ್ತಿ ಜೀವನವನ್ನಾರಂಭಿಸಿದರು. ತದನಂತರ ಮಂಗಳೂರಿನಲ್ಲಿ ಅಧ್ಯಾಪಕ ತರಬೇತಿ ಪಡೆದು ಮತ್ತೆ ಕಲ್ಮಡ್ಕ ಶಾಲೆಯಲ್ಲಿಯೇ ಮುಂದುವರಿದರು. ಕಲ್ಮಡ್ಕದಲ್ಲಿ ಉದ್ಯೋಗಕ್ಕೆ ಕೈ ಹಚ್ಚಿದಾಗ ಅಲ್ಲಿನ ಭಜನೆ, ಪುರಾಣವಾಚನ, ಹರಿಕಥೆ, ಯಕ್ಷಗಾನ ಕೂಟಗಳು, ಶಾಲೆಯಲ್ಲಿಯ ಪುಸ್ತಕ ಭಂಡಾರ ಮುಡೂರರ ಓದಿಗೆ ಸಾಹಿತ್ಯಾಸಕ್ತಿಗೆ ಪೂರಕವಾಗಿತ್ತು,

ಹೇಳಿ ಕೇಳಿ ಬಂಟಮಲೆ ಸೂಕ್ಷ್ಮ ಸಂವೇದನೆಯ ನೆಲೆ. ಅದರ ತಟದಲ್ಲಿಯೇ ಅಧ್ಯಾಪನ ಕಾರ್ಯ, ಸಂವೇದನಾಶೀಲ ಕೈಂಕರ್ಯ. ಮಕ್ಕಳ ಮನಸ್ಸುಗಳಿಗೆ ಬೋಧಕನಾಗಿ ಬೌದ್ಧಿಕತೆಯನ್ನು ಧಾರೆಯೆರೆದ ಮುಡೂರು ತನ್ನ ಸ್ವಂತ ನೆಲೆಗೆ ಸಾಹಿತ್ಯ ಗೀಳಿನ ಬೆಳೆಯನ್ನೂ ತಗಲಿಸಿಕೊಂಡರು. ಸಚ್ಚಿದಾನಂದಯ್ಯ, ಕೆರೆಕ್ಕೋಡಿ ಗಣಪತಿ ಭಟ್, ಕೆ.ರಾಮಚಂದ್ರ ಮೊದಲಾದವರು ಇದಕ್ಕೆ ಸಾಥಿಯಾದರು.
ಕಲ್ಮಡ್ಕದ ಸಮಾನ ಮನಸ್ಕರಲ್ಲಿ ಢಾಳಾಗಿ ಕಾಣಿಸಿಕೊಂಡ ಸಾಹಿತ್ಯ ಗೀಳಿಗೆ ವ್ಯವಸ್ಥಿತ ಮತ್ತು ಸಾಂಸ್ಥಿಕ ರೂಪು ಕೊಟ್ಟವರೂ ಮುಡೂರುರವರೇ. ಅವರ ಮತ್ತು ಅವರ ಒಡಲ ಒಡನಾಡಿಗಳ ಸೃಜನಶೀಲತೆಯ ಪ್ರತೀಕವಾಗಿ ಸ್ಥಾಪನೆಗೊಂಡದ್ದು ಸಂಗಮ ಕಲಾ ಸಂಘ. ಅಂದು ಹಾಗೆ ಸ್ಥಾಪನೆಗೊಂಡ ಸಂಗಮ ಕಲಾಸಂಘದ ಕೀರ್ತಿ ಸಾಂಸ್ಕೃತಿಕ ಚೌಕಟ್ಟಿನಡಿ ನಾಲ್ದೆಸೆಗೂ ಪಸರಿಸಿತು. ಯಕ್ಷಗಾನ, ನಾಟಕಗಳ ಪಲ್ಲವಿ ಇಲ್ಲಿ ಪಲ್ಲವಿಸಿತು. ಹೆಸರು ಗಳಿಸಿತು. ಸಂಗಮದ ಸಾಹಿತ್ಯ ಮತ್ತು ರಂಗಭೂಮಿ ವಿಭಾಗಗಳು ಆ ಹೊತ್ತಿಗೆ ಐದಾರು ಹೊಸ ಲೇಖಕರ ಕೃತಿಗಳನ್ನು ಸಾಹಿತ್ಯ ಮಾಲೆಯಲ್ಲಿ ಹೊರತಂದರು. ರಂಗಭೂಮಿಯಲ್ಲಿ ಕೈಲಾಸಂ, ಕಾರಂತ, ಕುವೆಂಪು ಕೃತಿಗಳನ್ನಲ್ಲದೆ ಕೆಲ ಸಾಮಾಜಿಕ ಪ್ರಹಸನಗಳ ಪ್ರಯೋಗ ಸಂಗಮದ ಹೊಸ ಸಾಹಸವಾಯಿತು.
ಮುಡೂರು ಬದುಕಿನಲ್ಲಿ ಪ್ರಭಾವ ಬೀರಿದ ಯಸ್.ಬಿ. ಪಾದೆಕಲ್ ಅನಿರೀಕ್ಷಿತವಾಗಿ ಆಗಮಿಸಿ ನಾಲ್ಕೈದು ವರುಷಗಳ ಕಾಲ ಕಲ್ಮಡ್ಕದಲ್ಲಿ ಸಂಗಮದ ಸಾಹಿತ್ಯ ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೆ ಚಾಲನೆ ನೀಡಿದರು. ನಿರಂಜನರ ಸಹಪಾಠಿಯಾಗಿದ್ದ ಪಾದೆಕಲ್‌ರವರು ಮುಡೂರರು ಮದರಾಸು ವಿಶ್ವವಿದ್ಯಾಲಯದ ವಿದ್ವಾನ್ ಪದವಿ ಪಡೆಯಲು ಬೋಧಕರಾಗಿ ಕಾರಣರು.

ಮದರಾಸು ವಿಶ್ವವಿದ್ಯಾನಿಲಯದಿಂದ ವಿದ್ವಾನ್ ಪದವಿಯನ್ನೂ ಗಳಿಸಿಕೊಂಡ ಮುಡೂರರು ಶೈಕ್ಷಣಿಕ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದರು. ಕಲ್ಮಡ್ಕದಲ್ಲಿದ್ದಷ್ಟೂ ಅವಧಿಯನ್ನು ಓರ್ವ ಸಾಂಸ್ಕೃತಿಕ ರಾಯಭಾರಿಯಾಗಿ ಕಳೆದ ಮುಡೂರುರವರ ವೃತ್ತಿ ಬದುಕಿನ ವರ್ಗಾವಣೆ ಪರ್ವವೂ ಆರಂಭಗೊಂಡಿತು. ಸಾಂಸ್ಕೃತಿಕ ಕ್ಷೇತ್ರದಿಂದ ಮುಡೂರುರ ಪಯಣ ಪುಣ್ಯಕ್ಷೇತ್ರಕ್ಕೆ. 1952 ರಿಂದ 53ರವರೆಗೆ ಸುಬ್ರಹ್ಮಣ್ಯದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1954ರಲ್ಲಿ ಪಂಬೆತ್ತಾಡಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದರು. 1955 ಮತ್ತು ೫೬ರಲ್ಲಿ ಅಜ್ಜಾವರದಲ್ಲಿ ಮಾಸ್ತರರಾದರು. ಹೋದಲೆಲ್ಲಾ ತನ್ನತನದ ಛಾಪೊತ್ತಿದರು. ಶಿಷ್ಯರನ್ನು ಬೌದ್ಧಿಕವಾಗಿಯೂ, ಸಾಹಿತ್ಯಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಮೇಲೆತ್ತಿದರು. ೧೯೫೭ರಲ್ಲಿ ಬೆಳ್ತಂಗಡಿ ಪ್ರೌಢಶಾಲಾ ಕನ್ನಡ ಅಧ್ಯಾಪಕರಾಗಿ ಕರ್ತವ್ಯ ಆರಂಭಿಸಿದ ಮುಡೂರು ಪಾಲಿಗೆ ಅದು ಸುವರ್ಣಮಯ ದಿನಗಳು. ಸಮಾನ ಅಭಿರುಚಿಯ ಒಂದಷ್ಟು ಶಿಕ್ಷಕರು ಅಲ್ಲಿ ಜತೆಯಾದರು.. ತನ್ನಲ್ಲಿರುವ ಅಷ್ಟೂ ವಿದ್ವತ್ ಹಾಗೂ ಸಾಹಿತ್ಯ ಪ್ರಖರತೆಯನ್ನು ನಿರಾಳವಾಗಿ ಶಿಷ್ಯ ಸಂದೋಹಕ್ಕೆ ದಾಟಿಸುತ್ತಿದ್ದ ಮುಡೂರು ಅವರನ್ನು ಶಿಷ್ಯಗಡಣ ನೆನಪಿಸುವುದೂ ಅದೇ ಕಾರಣಕ್ಕೆ.

 

ಬೆಳ್ತಂಗಡಿಯಿಂದ ಪುಂಜಾಲಕಟ್ಟೆಗೆ ವರ್ಗವಾದ ಅವರು ಅಲ್ಲೂ ನಾಟಕದ ಮೂಲಕ ಜನಮನದಲ್ಲಿ ಸ್ಥಾಯಿಯಾದರು. ಅಲ್ಲಿಂದ ಮುಂದೆ 1961ರಲ್ಲಿ ಪಂಜ ಪ್ರೌಢಶಾಲೆಗೆ ಬಂದರು. ಸುಳ್ಯ ಪ್ರೌಢಶಾಲೆಯಲ್ಲಿದ್ದು ನಿವೃತ್ತರಾದ ದಿ. ಕೊಳಂಬೆ ಪುಟ್ಟಣ್ಣ ಗೌಡರಿಂದ ತೆರವಾದ ಸ್ಥಾನಕ್ಕೆ ಮುಡೂರು ವರ್ಗಾವಣೆಯಾಗುವುದಿತ್ತು. ಪಂಜದ ಸಮೀಪದವರೇ ಆಗಿದ್ದ ಮುಡೂರುರನ್ನು ಅಂದಿನ ಶಾಲಾಭಿವೃದ್ಧಿ ಸಮಿತಿಯ ಸದಸ್ಯರೂ, ತಾಲೂಕು ಬೋರ್ಡಿನ ಅಧ್ಯಕ್ಷರೂ ಆಗಿದ್ದ ದಿ. ಜಾಕೆ ಪರಮೇಶ್ವರ ಗೌಡರ ಕೇಳಿಕೆ ಮೇರೆಗೆ ಅಂದು ಜಿಲ್ಲಾ ಬೋರ್ಡಿನ ಅಧೀನದಲ್ಲಿರುವ ಪಂಜ ಪ್ರೌಢಶಾಲೆಗೆ ವರ್ಗಾವಣೆಗೊಳಿಸಲಾಯಿತು. ಈ ಮಧ್ಯೆ ಉಡುವೆಕೋಡಿಯಿಂದ ಕಲ್ಮಡ್ಕ ಗ್ರಾಮದ ಮತ್ತೊಂದು ಭಾಗವಾದ ಕಲ್ಲುಗುಂಡಿಯಲ್ಲಿ ನೆಲೆಸಿದ್ದ ಮುಡೂರು ಕುಟುಂಬ ಬಳಿಕ ಪಂಜದಲ್ಲಿ ನೆಲೆನಿಂತಿತು. ಆ ಸಂದರ್ಭದಲ್ಲಿ ಇಲ್ಲಿನ ವಿದ್ಯಾರ್ಥಿ ಭವನದಲ್ಲಿ ಹೊರವೂರಿನ ಏಳೆಂಟು ಮಂದಿ ಅಧ್ಯಾಪಕರಲ್ಲದೆ ೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಾಸ್ತವ್ಯವಿದ್ದು, ಸಂಜೆ, ರಾತ್ರಿ ಹೊತ್ತು ಸಾಂಸ್ಕೃತಿಕ ರಂಗಪ್ರದರ್ಶನದ ಅಭ್ಯಾಸ ನಡೆಯುತ್ತಿತ್ತು. ಸಾಮಾಜಿಕ ನಾಟಕಗಳ ಜೊತೆ, ಯಕ್ಷಗಾನ, ಅರ್ಥಗಾರಿಕೆಯ ಅಭ್ಯಾಸದಲ್ಲಿ ಅಧ್ಯಾಪಕ, ವಿದ್ಯಾರ್ಥಿ, ಹಳೆ ವಿದ್ಯಾರ್ಥಿಗಳೊಂದಿಗೆ ನೆರೆ ಶಾಲೆಯ ಅಧ್ಯಾಪಕರೂ ಸೇರುತ್ತಿದ್ದರು. ಇದರೊಂದಿಗೆ ಮುಡೂರರ ಬರಹಗಳಿಗೆ ಹೆಚ್ಚು ಅವಕಾಶವಾಯಿತು. ಅಧ್ಯಾಪಕ, ವಿದ್ಯಾರ್ಥಿ, ಹಳೆ ವಿದ್ಯಾರ್ಥಿ, ಊರವರ ಬರಹಗಳನ್ನೊಳಗೊಂಡ ಮುಂಬೆಳಗು ಮುದ್ರಿತ ಸಂಚಿಕೆ ಮೊದಲಾಗಿ ಶಾಲೆಯಲ್ಲಿ ಪ್ರಕಟವಾಯಿತು. ಪ್ರತಿಮಾ ಪ್ರಕಾಶನ, ಪ್ರತಿಮಾ ಬಳಗ, ಪಂಚಲಿಂಗೇಶ್ವರ ಯಕ್ಷಗಾನ ಸಂಘಗಳು ಪ್ರತ್ಯೇಕವಾಗಿ ಪಂಜದಲ್ಲಿ ತಲೆ ಎತ್ತಿದವು. ಪಂಜ ಮಾತ್ರವಲ್ಲದೆ ನೆರೆಯ ಊರುಗಳಲ್ಲೂ ಕನ್ನಡ, ತುಳು ಯಕ್ಷಗಾನ, ನಾಟಕ ಪ್ರದರ್ಶನಗಳು ಮೆಚ್ಚುಗೆ ಗಳಿಸಿದವು. ಪ್ರಕಾಶನದಿಂದ ಕಣ್‌ಕನಸು ತೆರೆದಾಗ, ನವದಿಗಂತ ಕೃತಿಗಳು ಪ್ರಕಟವಾದವು.
ಪಂಜದಿಂದ ಬೆಳ್ಳಾರೆಗೆ ವರ್ಗವಾದ ವಿದ್ವಾನ್ ಮುಡೂರು ಮತ್ತೆ ಸುದೀರ್ಘ ಸೇವೆಗೆ ಪಂಜ ಜೂನಿಯರ್ ಕಾಲೇಜಿಗೇ ಮರಳಿದರು. ಅಲ್ಲಿ ಅವರ ಸೇವೆ ಸಂದಿದ್ದು 1982ರವರೆಗೆ. ಅಂದರೆ ಮುಡೂರುರವರ ವೃತ್ತಿ ಜೀವನದ ಅಂತ್ಯದವರೆಗೆ. ಆಗ ಪಂಜದಲ್ಲಿ ಸಾಮಾಜಿಕ ನಾಟಕಗಳ ಜತೆ ಯಕ್ಷಗಾನ ಅರ್ಥಗಾರಿಕೆಯ ಅಭ್ಯಾಸದಲ್ಲಿ ಅಧ್ಯಾಪಕ, ವಿದ್ಯಾರ್ಥಿ, ಹಳೆವಿದ್ಯಾರ್ಥಿಗಳೊಂದಿಗೆ ನೆರೆಶಾಲೆಗಳ ಅಧ್ಯಾಪಕರೂ ಒಡಸೇರುತ್ತಿದ್ದುದು. ಇದರೊಂದಿಗೆ ಮುಡೂರುರವರ ಬರಹಗಳಿಗೂ ಹೆಚ್ಚು ಅವಕಾಶವಾಯಿತು.

1957ರಿಂದಲೇ ಪುಸ್ತಕ ಪ್ರಕಾಶನದ ಸಾಹಸಕಾಲ. ಮುಡೂರು ಅಲ್ಲಿಂದ ಇಲ್ಲಿಯವರೆಗೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ಮತ್ತೆ ಕೆಲವು ಹಸ್ತ ಪ್ರತಿಗಳನ್ನು ಕೂಡಾ.
ಕಾಡುಮಲ್ಲಿಗೆ, ಹೊಸತುಕಟ್ಟು, ಕುಡಿಮಿಂಚು, ಪ್ರಗತಿಯ ಕರೆ ಎಂಬ ಕವನಸಂಕಲನಗಳು, ಅಬ್ಬಿಯ ಮಡಿಲು, ಕಣ್‌ಕನಸು ತೆರೆದಾಗ ಎಂಬ ಕಾದಂಬರಿ ಕಥಾ ಸಂಕಲನ, ಜೀವದಯಾಷ್ಟಮಿ ಎಂಬ ಗದ್ಯಾನುವಾದ, ಧಾರಾ ಪಯಸ್ವಿನಿ ಎಂಬ ಪ್ರಬಂಧ ಲೇಖನ, ಹೊಸಕೆರೆಯ ಹೊನ್ನಮ್ಮ ಜಾನಪದ ಗೀತಾ ರೂಪಕ, ನಂದಾದೀಪ, ಶ್ರೀಮತಿ, ಶಿವಕುಮಾರಿ, ಕೇರಳ ಕುಮಾರಿ, ಸಖ, ಅಚ್ಚರಿಯ ಅರಳೆಲೆ, ಮಧ್ಯಮಾ ಎಂಬ ನಾಟಕಗಳು, ಇನ್ಸೂರಳಿಯ ಎಂಬ ಪ್ರಹಸನ, ಹುತ್ತದಲ್ಲಿ ಹೂ, ದಯೆಯ ದಾಂಗುಡಿ, ಅಮರ ಕಲ್ಯಾಣ ಕ್ರಾಂತಿ ಎಂಬಿತ್ಯಾದಿ ಬಾನುಲಿ ರೂಪಕಗಳು, ಮಕುಟೋರು ಭಂಗ, ಸಾವೊಲಿದ ಸಾವಿತ್ರಿ ಎಂಬ ಛಂದೋನಾಟಕಗಳು, ಗುರುವನ ಗುಡಿ, ಸೊನ್ನೆಯಿಂದ ಸೊನ್ನೆಗೆ, ಗೀತಾ ರೂಪಕಗಳು, ಹೃದಯ ರೂಪಕ ಎಂಬ ಆಂಗ್ಲ ನಾಟಕದ ರೂಪಾಂತರ, ಸಿಡಿಲಮರಿ ಅಶ್ವತ್ಥಾಮನ್, ಮೋಹನ ಮುರಲಿ ಎಂಬ ಖಂಡಕಾವ್ಯಗಳು. ಪ್ರಥಮ ಸ್ವಾತಂತ್ರ್ಯ ಸಮರ ಎಂಬ ಯಕ್ಷಗಾನ ಪ್ರಸಂಗ ಸಾರಸ್ವತ ಜಗತ್ತಿಗೆ ಮುಡೂರು ಕೊಡುಗೆ.
ಮುಡೂರು ಕೃತಿಗಳ ಬಗ್ಗೆ ನಾಡಿನ ವಿಮರ್ಶಕರು, ಪ್ರಾಜ್ಞರು ಸೂಕ್ಷ್ಮವಾಗಿ ಗಮನಿಸಿದ್ದರಾದರೂ ಪ್ರಸಿದ್ಧಿಯ ಲಾಭಿಗೆ ಅವು ಒಳಪಟ್ಟಿಲ್ಲ. ಹಾಗಾಗಿ ಅವುಗಳ ಶ್ರೇಷ್ಠತೆಗೆ ತಕ್ಕ ಸ್ಥಾನಮಾನ ಲಭಿಸಿಲ್ಲ. ಅಸಹಾಯಕರ ಎದೆಗೂಡೊಳಗಿನ ಹಕ್ಕಿಯ ಹಾಡು ಕುವೆಂಪು ಕತೆಗಳಲ್ಲಿ ಮಾರ್ದನಿಗೊಂಡಿರುವುದನ್ನು ಮುಡೂರುರವರ ಕಾಡಮಲ್ಲಿಗೆ ಕೇಳಿಸಿಕೊಂಡಿದೆ. ಅವರ ಸಿಡಿಲಮರಿ ಅಶ್ವತ್ಥಾಮನ್ ವಿದ್ವಾನ್ ಪ್ರತಿಭೆಯ ಹೊಸ ಅರ್ಥಶೋಧ. ಅವರ ಹೊಸಕೆರೆಯ ಹೊನ್ನಮ್ಮ ನವೋದಯ ಮನೋಧರ್ಮದ ಅದಮ್ಯ ಸಂಸ್ಕೃತಿ ಪ್ರೀತಿಯ ಕೃತಿ. ಕಣ್ಣಿಗೆ ಕಟ್ಟುವಂತೆ ಬರೆಯಬಲ್ಲ, ವಿಸ್ತಾರವಾಗಿ ಹೇಳಬಲ್ಲ, ತೀಕ್ಷ್ಣ ಅರ್ಥ ಹೊಮ್ಮಿಸಬಲ್ಲ ಶಕ್ತಿ ಅವರ ಕಥಾಕೃತಿಗಳಿಗಿದೆ. ಕಥಾ ನಿರೂಪಣೆಯಲ್ಲಿ ವರ್ಣನೆಗಳ ಮೆರುಗು ಪಡೆದು ಸಹಜ ಸರಳ ಭಾಷೆಯ ಸ್ವಂತದ ಛಂದದಲ್ಲಿ ಕಥನಾತ್ಮಕ ಓದು ಕೊಡುವುದು ಅವರ ಮೋಹನ ಮುರಲಿ.
ಬರವಣಿಗೆಯಷ್ಟೇ ಆದ್ಯತೆ ಓದಿಗೆ ನೀಡುವ ವಿಶಿಷ್ಟ ಗುಣ ಮುಡೂರುರವರದ್ದು. ಕಾರಂತರ ಚೋಮನದುಡಿ, ಕುವೆಂಪುರವರ ಮಲೆಗಳಲ್ಲಿ ಮದುಮಗಳು, ರಕ್ತಾಕ್ಷಿ, ಚಿತ್ರಾಂಗದ, ಕೊಳಲು, ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ, ಬೇಂದ್ರೆಯವರ ಸಖಿಗೀತ, ಅಡಿಗರ ನಡೆದುಬಂದ ದಾರಿ ಕೃತಿಗಳನ್ನು ಮುಡೂರು ಮೆಚ್ಚಿ ನೆಚ್ಚಿಕೊಂಡರು. ವೃತ್ತಿಯ ನೊಗ ಝಾಡಿಸಿಕೊಂಡಾಗ ವ್ಯಕ್ತಿಯೊಡನಿದ್ದ ಪ್ರವೃತ್ತಿಗೆ ಹೆಚ್ಚು ಅವಕಾಶ ಎಂಬ ಅಭಿಮತ ಅವರದು. ಹಾಗಾಗಿಯೇ ನಿವೃತ್ತಿ ಜೀವನ ಮುಡೂರುರವರ ಪಾಲಿಗೆ ಪ್ರವೃತ್ತಿಯಲ್ಲಿ ವೃತ್ತಿಯಾಯಿತು.

ಅಕಾಡೆಮಿಕ್ ಸಂಸ್ಥೆಯೊಂದರ ಮೂಲಕ ಮುಡೂರು ಸಂಘಟನಾ ಚತುರತೆ ಬೆಳೆದದ್ದು ಕನ್ನಡ ಸಾಹಿತ್ಯ ಪರಿಷತ್‌ನ ಮೂಲಕ. ರಾಜಧಾನಿಯಲ್ಲಿ ಕೇಂದ್ರೀಕೃತವಾದ ಕನ್ನಡ ಸಾಹಿತ್ಯ ಪರಿಷತ್ ವಿಕೇಂದ್ರೀಕರಣಗೊಂಡು ಜಿಲ್ಲಾ ಘಟಕಗಳು ತೆರೆದುಕೊಂಡಾಗ ಆರಂಭದ ಒಂದೆರಡು ದಶಕಗಳ ಕಾಲ ಮುಡೂರು ಅವರು ಸುಳ್ಯ ತಾಲೂಕು ಪ್ರತಿನಿಧಿಯಾದರು. ಹಾಗೆ ಅವರು ಕಯ್ಯಾರ ಕಿಂಞಣ್ಣ ರೈ, ಅಮೃತ ಸೋಮೇಶ್ವರ, ಕೀಕಾನ ರಾಮಚಂದ್ರ, ರಾಮಚಂದ್ರ ಕಾರ್ಕಳ, ಬಿ.ಎಂ.ಇದಿನಬ್ಬ ಮೊದಲಾದವರ ಮೆಚ್ಚುಗೆ ಗಳಿಸಿಕೊಂಡರು.
ಸಾಹಿತಿಗಳೆಲ್ಲಾ ಸಂಘಟಕರಲ್ಲ, ಸಂಘಟಕರೆಲ್ಲಾ ಸಾಹಿತಿಗಳೂ ಅಲ್ಲ. ಆದರೆ ಮುಡೂರು ಈ ಎರಡೂ ಹೌದು. ೧೯೮೫ರಿಂದ ಅವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾಗಿ ಮಾಡಿದ ಚಟುವಟಿಕೆಗಳೇ ಇದಕ್ಕೆ ಸಾಕ್ಷಿ. ಕವಿ-ಕಾವ್ಯಗಳ ಕುರಿತು ಗೋಷ್ಠಿ, ದಿನಾಚರಣೆ, ವರ್ಷಾಚರಣೆ, ನಾಡಹಬ್ಬಗಳು, ವಿವಿಧ ಸ್ಪರ್ಧೆಗಳು ನಡೆದಿವೆ. ಉಪಯುಕ್ತ ಹೊತ್ತಗೆಗಳು ಪ್ರಕಟಗೊಂಡಿವೆ. ನಾಟಕ ಸ್ಪರ್ಧೆಗಳಲ್ಲಿ ಸುಳ್ಯ ತಾಲೂಕು ಮುನ್ನಡೆದು ಮಿಂಚಿದೆ. ಅಲ್ಲದೆ ಸುಬ್ರಹ್ಮಣ್ಯ, ಪಂಜ, ಅಡ್ಕಾರುಗಳಲ್ಲಿ ಯಶಸ್ವೀ ಸಮ್ಮೇಳನಗಳು ನಡೆದಿವೆ.
ಸಾಹಿತ್ಯ ಪರಿಷತ್‌ನಲ್ಲಿ ಮುಡೂರು ಸಕ್ರಿಯರಾಗಿದ್ದ ಹೊತ್ತು ಜಿಲ್ಲಾ ಮತ್ತು ರಾಜ್ಯ ಘಟಕಗಳ ಕೆಲವು ನೀತಿ ಧೋರಣೆಗಳನ್ನು ಕೆಲವೊಮ್ಮೆ ಪ್ರಶ್ನಿಸಿ ಪ್ರತಿಭಟಿಸಿದ್ದೂ ಇದೆ.
ಸಾಹಿತ್ಯ ಸಮ್ಮೇಳನಗಳು ಔಚಿತ್ಯ ಮೀರಿದ ಆತುರ ಆಡಂಬರದ ಪ್ರಚಾರ ಗದ್ದಲಗಳ ಖರ್ಚುವೆಚ್ಚಗಳಲ್ಲಿ ಮುಗಿದುಹೋಗಬಾರದು. ಪರಿಷತ್ತು ಜಾತಿಯ, ಪ್ರಾದೇಶಿಕ, ಸಂಕುಚಿತ ವರ್ತುಲಗಳಲ್ಲಿ ಸಿಲುಕಿ ನಲುಗಬಾರದು ಎನ್ನುವ ಖಡಾಖಂಡಿತ ನಿಲುವು ಮುಡೂರುರವರದು.
ಮುಡೂರುರವರ ನಂತರ ಕೋಟೆ ವಸಂತಕುಮಾರ್ ಕ.ಸಾ.ಪ. ಅಧ್ಯಕ್ಷರಾದರು. ಅವರ ಎಲ್ಲಾ ಸಾಹಿತ್ಯಿಕ ಚಟುವಟಿಕೆಗಳಿಗೆ ಮುಡೂರು ತುಂಬು ಪ್ರೋತ್ಸಾಹ ಕೊಟ್ಟರು. ಕನ್ನಡ ಅನುಷ್ಠಾನ ಸಮಿತಿ ಸದಸ್ಯರೂ ಆದರು.
ಹಾಗೆ ನೋಡಿದರೆ ಪಂಜವೂ ಸಾಂಸ್ಕೃತಿಕ ತವರು. ಇಲ್ಲಿ ನಡೆಯುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಡೂರು ಸ್ಪರ್ಶ ಎಲ್ಲರಿಗೂ ಆದರ್ಶ, ಅವಶ್ಯಕ ಮತ್ತು ಅಪ್ಯಾಯಮಾನ. ಪ್ರಗತಿಕೂಟದಿಂದ ಮೊದಲ್ಗೊಂಡು ಪ್ರತಿಮಾ ಬಳಗದವರೆಗೆ…. ಆರಾಧನಾ ಸಮಿತಿಯಿಂದ ಹಿಡಿದು ಅಪ್ನಾ ದೇಶ್ ಸಂಘಟನೆಯವರೆಗೆ….
. ಸಾಕ್ಷರತಾ ಆಂದೋಲನ ಕೈಗೊಂಡು ನಿರಂತರ ಕಲಿಕೆಯ ಅನೌಪಚಾರಿಕ ಶಿಕ್ಷಣದಲ್ಲಿ ತೊಡಗಿಕೊಂಡಾಗ ಪಂಜದಲ್ಲಿ ಮಹಾತ್ಮಾಗಾಂಧಿ ವಿದ್ಯಾಪೀಠ ಆರಂಭವಾಗಿ ಮುಂದೆ ಅದು ಬಾಪೂಜಿ ಸೇವಾಶ್ರಮವಾಗಿ ನೋಂದಾಯಿತ ಸಂಸ್ಥೆಯಾಯಿತು. ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಿದ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶಿಕ್ಷಣಗಳಿಗೆ ಹೋಗಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಲ್ಲದೆ, ಪಂಜ ಪರಿಸರದ ಬಾಪೂಜಿ ಸ್ವಸಹಾಯ ಸಂಘಗಳಿಗೆ ಮಾಹಿತಿ ಗೋಷ್ಠಿಗಳೂ ನಡೆದವು. ಸಾರ್ವಜನಿಕ ಆರಾಧನಾ ಸಮಿತಿಯು ದೇವತಾರಾಧನೆಯೊಂದಿಗೆ ಸಾಹಿತ್ಯ, ಸಾಂಸ್ಕೃತಿಕ ಕಲಾರಾಧನೆಯ ಉದ್ಧೇಶವನ್ನಿಟ್ಟುಕೊಂಡು ಆರಂಭಗೊಂಡು ಮುಡೂರು ಅದರ ಅಧ್ಯಕ್ಷರಾದರು. ಇದರ ನೇತೃತ್ವದಲ್ಲಿಯೇ ಪ್ರತಿವರ್ಷ ಗಣೇಶೋತ್ಸವ ಸಮಿತಿ ರಚನೆಗೊಂಡು ಉತ್ಸವಗಳು ನಡೆಯುತ್ತಿದೆ. ಧಾರ್ಮಿಕ ಉತ್ಸವಕ್ಕೆ ಸಾಂಸ್ಕೃತಿಕ ಮುಖವನ್ನು ನೀಡಿದ ಹೆಚ್ಚುಗಾರಿಕೆ ಮುಡೂರು ಅವರದು. ಪಂಜದಲ್ಲಿ ಕ್ರಿಯಾಶೀಲವಾಗಿರುವ ಪಂಚಶ್ರೀ ಜೇಸಿಐ ಯ ಚಟುವಟಿಕೆಗಳಿಗೂ ಮುಡೂರು ಅವರ ಮಾರ್ಗದರ್ಶನಗಳಿವೆ. ಸ್ಥಳೀಯ ವಿದ್ಯಾಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ಸಭೆ ಸಮಾರಂಭಗಳಲ್ಲೂ ಮುಡೂರು ಸ್ಪರ್ಶವಿದೆ.
ತಮಗಿಂತಲೂ ಕಿರಿಯರಿಂದ ಸ್ಪೂರ್ತಿ ಪಡೆಯುವ ವಿಶಿಷ್ಟ ವ್ಯಕ್ತಿತ್ವ ಮುಡೂರುರವರಿಗೆ ಸಿದ್ಧಿಸಿದೆ. ಹಾಗಾಗಿಯೇ ಅವರು ಬೆರೆಯುವುದು ಯುವ ಜನತೆಯ ಜತೆಗೆಯೇ.

 

ವ್ಯಕ್ತಿಗತ ಬದುಕಿನಲ್ಲಿ ಒಂಟಿಯಾಗಿದ್ದ ಟಿ.ಜಿ.ಮುಡೂರುರವರು ಚತುರ್ಭುಜರಾದುದು 1965ರಲ್ಲಿ. ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ವಳಂಬ್ರ ಮನೆತನದ ಕಮಲ ಮುಡೂರು ಬದುಕಿನ ಅರ್ಧಾಂಗಿಯಾಗಿ ಮನೆ -ಮನ ತುಂಬಿದವರು.

ಟಿ.ಜಿ.ಮುಡೂರು ಅವರದು ಸಂತೃಪ್ತ ಕುಟುಂಬ. ಮೂವರು ಪುತ್ರಿಯರು, ಓರ್ವ ಪುತ್ರ ಅವರ ಕುಟುಂಬದ ಸದಸ್ಯರು. ಹಿರಿಯ ಪುತ್ರಿ ಶೋಭಾರವರು ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕಿಯಾಗಿದ್ದು, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ. ಯು.ಪಿ.ಶಿವಾನಂದರ ಧರ್ಮಪತ್ನಿ. ಎರಡನೇ ಪುತ್ರಿ ಗೀತಾ ಉಪನ್ಯಾಸಕಿಯಾಗಿದ್ದು, ನಿವೃತ್ತ ಪ್ರೊಫೆಸರ್ ಡಾ. ಪುಂಡರೀಕ ಅಡ್ಪಂಗಾಯರ ಬಾಳಸಂಗಾತಿ. ಕೊನೆಯಾಕೆ ಡಾ. ಮಮತಾ ಉಳುವಾರು ಮೈಸೂರಿನಲ್ಲಿ ದಂತವೈದ್ಯೆಯಾಗಿದ್ದು, ಇಂಜಿನಯರ್ ಕಿರಣರ ಪತ್ನಿ. ಟಿ.ಜಿ. ಮುಡೂರರ ಮಗ, ಸಮಾಜಮುಖಿ ವ್ಯಕ್ತಿತ್ವದ ಸವಿತಾರ ಮುಡೂರು ತಂದೆಯಂತೆ ಊರಿನ ಎಲ್ಲಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡವರು. ಪಂಜದ ಮುಡೂರು ಇನ್ಪೊಟೆಕ್ ಮಾಲಕ, ಜೇಸಿಸ್‌ನ ತರಬೇತುದಾರ.
ಈ ಬಹುಶ್ರುತ ಸಾಧ್ಯತೆಗಳ, ಬಹುಶ್ರುತ ಸಾಧನೆಗಳ ಸರದಾರನಿಗೆ ದೊರೆತ ಸನ್ಮಾನ, ಅಭಿದಾನಗಳು ಹಲವು. ಎಲ್ಲರ ಪ್ರೀತಿ ಗೌರವಗಳನ್ನು ಪ್ರಿತಿಯಿಂದಲೇ ಸ್ವೀಕರಿಸುವವರು ಅವರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಅರೆಭಾಷೆ ಅಕಡೆಮಿ ಪ್ರಶಸ್ತಿ ,ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಕ.ಸಾ.ಪ. ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳಲ್ಲಿ ಪ್ರಶಸ್ತಿ, ಗುರುದೇವ ಲಲಿತ ಕಲಾಮಂಡಲ ಪ್ರಶಸ್ತಿ ಇವುಗಳಲ್ಲಿ ಮುಖ್ಯವಾದವುಗಳು.
1995ರಲ್ಲಿ ಟಿ.ಜಿ. ಮುಡೂರುರವರ ಬದುಕಿನ 75ನೇ ವರ್ಷದ ಸಂಭ್ರಮವನ್ನು ಅಮೃತ ಮಹೋತ್ಸವವನ್ನಾಗಿ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ನಂದಾದೀಪ ಎಂಬ ಬೃಹತ್ ಅಭಿನಂದನಾ ಗ್ರಂಥವೊಂದು ಪ್ರಕಟವಾಗಿತ್ತಲ್ಲದೆ ಮುಡೂರಿನಿಂದ ಮುಡೂರರವರೆಗೆ ಎಂಬ ಸಾಕ್ಷ್ಯಚಿತ್ರವು ಬಿಡುಗಡೆಯಾಗಿತ್ತು. 3 ವರ್ಷದ ಹಿಂದೆಯಷ್ಟೇ ಕಾಂತಾವರ ಕನ್ನಡ ಸಂಘದಿಂದ ಟಿ.ಜಿ. ಮುಡೂರುರವರ ಕುರಿತಾದ ಪುಸ್ತಕ ಪ್ರಕಟವಾಗಿತ್ತು.
ಸುದ್ದಿ ಬಿಡುಗಡೆ ಪತ್ರಿಕೆಯ ಬೆಳವಣಿಗೆಯಲ್ಲಿ ಟಿ.ಜಿ. ಮುಡೂರುರವರ ಸಲಹೆ, ಮಾರ್ಗದರ್ಶನಗಳೂ ಗಮನಾರ್ಹ. ಪತ್ರಿಕೆಯ ಆರಂಭದ ದಿನಗಳಲ್ಲಿ ಪತ್ರಿಕೆಯ ಬೆಳವಣಿಗೆಗಾಗಿ ಡಾ. ಯು.ಪಿ. ಶಿವಾನಂದರೊಂದಿಗೆ ಟಿ.ಜಿ.ಮುಡೂರುರವರೂ ಹೆಗಲು ಕೊಟ್ಟಿದ್ದರು. ಸುದ್ದಿ ಬಿಡುಗಡೆ ಹಾಗೂ ಡಾ. ಯು.ಪಿ.ಶಿವಾನಂದರ ಆಶಯ ಮತ್ತು ಜನಾಂದೋಲನಗಳಿಗೆ ಪ್ರೇರಣೆ ನೀಡುತ್ತಾ ಜೊತೆಯಾಗಿದ್ದವರು. ಸುದ್ದಿ ಬಿಡುಗಡೆಗಾಗಿ ಅನೇಕ ಬರಹಗಳನ್ನು ಕಾಜಾಣ ಕಾವ್ಯನಾಮದಲ್ಲಿ ಚುಟುಕುಗಳನ್ನು ಬರೆದವರು.
ಬದುಕಿನ ಅಂತ್ಯಕಾಲದವರೆಗೂ ಸಮಾಜಮುಖಿಯಾಗಿ ಮತ್ತು ಕ್ರಿಯಾಶೀಲವಾಗಿ ಬದುಕಿದ ಟಿ.ಜಿ. ಮುಡೂರುವರವರಿಗೆ ನಾಡಿನ ನಮಸ್ಕಾರ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.