ಭಾರತ ಸರಕಾರವು 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆರೋಗ್ಯ ಮೇಳ ಆಯೋಜಿಸಲು ನೀಡಿರುವ ನಿರ್ದೇಶನದಂತೆ
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುಳ್ಯತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಸ್ಪತ್ರೆ, ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳ ಏ. 22ರಂದು ಪೂ. 9-00ರಿಂದ ಸಂಜೆ 4-00 ಗಂಟೆಯ ತನಕ ಸುಳ್ಯದ ಕೆ.ವಿ.ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಯಲಿದೆ. ಆರೋಗ್ಯ ಮೇಳದಲ್ಲಿ ಎಲ್ಲಾ ಕಾಯಿಲೆಗಳಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ, ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿ ವಿತರಣೆ, ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವಿಕೆ, ಪ್ರಚಾರ, ಆರೋಗ್ಯ ಮಾಹಿತಿ ಮತ್ತು ಶಿಕ್ಷಣ ಹಾಗೂ ಅಗತ್ಯವಿರುವವರಿಗೆ ಪ್ರಯೋಗಾಲಯದ ತಪಾಸಣೆಗಳು ಲಭ್ಯವಿರುತ್ತದೆ.
ಮೇಳದಲ್ಲಿ ವೈದ್ಯಕೀಯ ತಜ್ಞರು, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಹೆಚ್.ಐ.ವಿ. ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ, ಎಲುಬು-ಕೀಲು- ತಜ್ಞರು, ಚರ್ಮ-ಲೈಂಗಿಕ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಕಣ್ಣಿನ ಪರೀಕ್ಷಾ ಕೇಂದ್ರ, ದಂತ ಚಿಕಿತ್ಸಾ ಕೇಂದ್ರ, ಉಚಿತ ಔಷಧಿ ಮತ್ತು ಪ್ರಯೋಗಾಲಯ ಸೇವೆ ಆಯುಷ್ ಕ್ಲಿನಿಕ್, ಆಯುರ್ವೇದಿಕ್, ಅಸಾಂಕ್ರಾಮಿಕ ರೋಗ ತಪಾಸಣೆ (ಎನ್.ಸಿ.ಡಿ. ಕ್ಲಿನಿಕ್), ಆಪ್ತ ಸಮಲೋಚನೆ (ಹದಿಹರೆಯದ ಮಕ್ಕಳಿಗೆ) ಪೌಷ್ಠಿಕ ಆಹಾರ ತಯಾರಿ ಪ್ರಾತ್ಯಕ್ಷಿಕತೆ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಅರಿವು ಮೂಡಿಸುವಿಕೆ, ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ, ಇ – ಸಂಜೀವಿನಿ ಸೌಲಭ್ಯಗಳ ಮಾಹಿತಿ, ಕೋವಿಡ್-19 ಲಸಿಕಾಕರಣ, ಕ್ಷಯರೋಗ, ಮಲೇರಿಯಾ, ಹೀಮೋಗ್ಲೋಬಿನ್ ಪರೀಕ್ಷೆ ಮಾಡಿಸಲಾಗುವುದು. ಸ್ಥಳದಲ್ಲೇ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಕೊಡಲಾಗುವುದು. ಸಾರ್ವಜನಿಕರು ಆಧಾರ್ ಕಾರ್ಡನ್ನು ಖಡ್ಡಾಯವಾಗಿ ತರಬೇಕು. ಆರೋಗ್ಯ ಮೇಳವನ್ನು ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಮೊದಲು ಕೆವಿಜಿ ವೃತ್ತದಿಂದ ಜಾಥಾ ಏರ್ಪಡಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತಾಲೂಕು ಆರೋಗ್ಯಾಧಿಕಾರಿ
ಡಾ. ನಂದಕುಮಾರ್ ಪ್ರಕಟಣೆ ತಿಳಿಸಿರುತ್ತಾರೆ.