ಮುಡೂರು ಮಾಸ್ಟ್ರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಡಾ. ಪುರುಷೋತ್ತಮ ಬಿಳಿಮಲೆ ನೆನಪುಗಳು…

 

ಅಷ್ಟೇನೂ ಹಿತಕರವಾಗಿರದ ನನ್ನ ಬದುಕಿನ ಉತ್ಕೃಷ್ಟ ಕ್ಷಣಗಳೆಂದರೆ ನಾನು ನನ್ನ ಅಧ್ಯಾಪಕರೊಡನೆ ಕಳೆದ ಕ್ಷಣಗಳು. ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸಿದ ಸಣ್ಣಣ್ಣ ಮಾಸ್ತರರು ಅಗಲೇ ತೀರಿಕೊಂಡು 1೦ ವರ್ಷಕ್ಕೂ ಮೇಲಾಯಿತು. ಇವತ್ತು ಪ್ರೌಢ ಶಾಲೆಯಲ್ಲಿ ಕನ್ನಡ ಕಲಿಸಿದ ಟಿ ಜಿ ಮುಡೂರು ಮಾಸ್ಟ್ರು ಇನ್ನಿಲ್ಲವಾದರು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಅವರನ್ನು ನೋಡಲಾಗಿರಲಿಲ್ಲ. ಮೇ ೧೧ಕ್ಕೆ ಸಾಯಂಕಾಲ ಅವರನ್ನು ಪುತ್ತೂರಿನಲ್ಲಿ ಭೇಟಿಮಾಡುವ ಯೋಜನೆ ಹಾಕಿಕೊಂಡಿದ್ದೆ. ಆದರೆ ಇನ್ನೆಲ್ಲಿ? ಯಾಕೋ ಅನಾಥ ಭಾವ ಕಾಡುತ್ತಿದೆ.
ಯಾವ ಕಾರಣಕ್ಕೋ ಏನೋ ಕನ್ನಡ ಪಂಡಿತರಾಗಿದ್ದ ಶ್ರೀ ಟಿ ಜಿ ಮುಡೂರು ಅವರು ಉದ್ದಕ್ಕೂ ನನ್ನ ಬದುಕಿಗೆ ಹತ್ತಿರವಾಗಿದ್ದರು. 2009 ನವಂಬರ ತಿಂಗಳಲ್ಲಿ ಬಿಳಿಮಲೆವರೆಗೆ ಬಂದು ನನ್ನ ಪುಸ್ತಕ ಬಿಡುಗಡೆ ಮಾಡಿದ್ದರು. ಆಗ ಅವರಿಗೆ 93 ವರ್ಷ. ಸುಮಾರು ಮುಕ್ಕಾಲು ಗಂಟೆಗಳ ಕಾಲ ಇನ್ನೂ ಆಗಬೇಕಾಗಿರುವ ಸಂಶೋಧನೆಗಳ ಬಗ್ಗೆ ಮಾತಾಡಿದ್ದರು. ಅವರು ಸಂಪಾದಿಸಿದ ಕಣ್ ಕನಸು ತೆರೆದಾಗ ಎಂಬ ಒಂದು ಪುಸ್ತಕ ಬಿಳಿಮಲೆಯಲ್ಲಿ ಇದ್ದುದರಿಂದ ಅವರ ಬಗ್ಗೆ ನನಗೆ ಸಣ್ಣ ಪ್ರಾಯದಿಂದಲೂ ಏನೋ ಮೋಹ ಮತ್ತು ಗೌರವ. ಜೊತೆಗೆ ಅಮ್ಮನೂ ಅವರ ಬಗ್ಗೆ ಮನೆಯಲ್ಲಿ ಆಗಾಗ ಹೇಳುತ್ತಿದ್ದರು, ಹೈಸ್ಕೂಲಿಂದ ವಾರಾಂತ್ಯದಲ್ಲಿ ಬಿಳಿಮಲೆಗೆ ಹೋಗುತ್ತಿದ್ದಾಗ ? ಮುಡೂರು ಅವರನ್ನು ಕೇಳಿ, ಒಂದು ಕಾದಂಬರಿ ತೆಗೆದುಕೊಂಡು ಬಾ? ಎಂದು ಅಮ್ಮ ಹೇಳಿದರೆ ನಾನೂ ಹಾಗೆಯೇ ಮಾಡುತ್ತಿದ್ದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಮುಡೂರರು ಮುಂದೆ ಅ ನ ಕೃಷ್ಣರಾಯ, ತರಾಸು, ತ್ರಿವೇಣಿ, ಬಸವರಾಜ ಕಟ್ಟೀಮನಿ, ನಿರಂಜನ ಮೊದಲಾದವರ ಕಾದಂಬರಿಗಳನ್ನು ಓದುವಂತೆ ನನಗೂ ಹೇಳಿದರು. ಇದು ಕಾರಣವಾಗಿ ಹೈಸ್ಕೂಲು ಮುಗಿಯುವಷ್ಟರಲ್ಲಿ ನಾನು ಅನೇಕ ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ಮುಡೂರು ಮಾಸ್ತರರಿಗೆ ಸಾಹಿತ್ಯದ ಹಾಗೆ ಜಾನಪದ ಕ್ಷೇತ್ರದಲ್ಲೂ ವಿಶೇಷ ಆಸಕ್ತಿ ಇತ್ತು. ಹೊಸಕೆರೆ ಹೊನ್ನಮ್ಮ ಎನ್ನುವ ಒಂದು ನೇಜಿ ಹಾಡನ್ನು ಅವರು ಒಂಬತ್ತನೇ ತರಗತಿಯಲ್ಲಿದ್ದಾಗ ನಮಗಾಗಿ ಓದಿದ್ದರು.
ಮುಡೂರು ಮಾಸ್ತರರು ಕೆಲಸ ಮಾಡುತ್ತಿದ್ದ ಸಣ್ಣ ಊರು ಪಂಜ .ಆದರೆ ಅವರ ಯೋಚನೆ ಮತ್ತು ಬರವಣಿಗೆ ಆ ಊರಿಗಿಂತ ತುಂಬಾ ವಿಸ್ತಾರವಾಗಿತ್ತು. 197೦ನೇ ಇಸವಿಯ ಫೆಬ್ರವರಿ ತಿಂಗಳು. ನಾನಾಗ ಹತ್ತನೇ ತರಗತಿಯಲ್ಲಿದ್ದೆ. ಮುಡೂರು ಅವರು ಶಾಲಾ ವಾರ್ಷಿಕೋತ್ಸವಕ್ಕಾಗಿ ಧರ್ಮಾಧಿಕಾರಿಯ ದೀಪಸ್ತಂಭಗಳು ಎಂಬ ನಾಟಕವನ್ನು ಆರಿಸಿಕೊಂಡರು. ವಿಕ್ಟರ್ ಹ್ಯೂಗೋನ ಲಾ ಮಿಸರೇಬಲ್ ಎಂಬ ಕಾದಂಬರಿಯ ಆರಂಭದ ಒಂದು ಪ್ರಸಂಗವನ್ನು ಆಧರಿಸಿ ರಚಿತವಾದ ನಾಟಕವದು. ಕಪ್ಪಗೆ ಕುಳ್ಳಗಾಗಿದ್ದ ನನ್ನ ಗುಂಗುರು ಕೂದಲನ್ನು ಕಂಡ ಮುಡೂರು ನನಗೆ ಕಳ್ಳನ ಪಾತ್ರ ಕೊಟ್ಟಿದ್ದರು. ಕಳ್ಳನು ಕದಿಯಲು ಬಂದಾಗ ಧರ್ಮಾಧಿಕಾರಿಯೊಬ್ಬ ಅವನನ್ನು ಕ್ಷಮಿಸಿ, ಆದರಿಸಿ, ರಕ್ಷಿಸುವ ಪುಟ್ಟ ಘಟನೆಯದು. ಆ ಧರ್ಮಾಧಿಕಾರಿಯ ಮತ್ತು ಕಳ್ಳನ ವ್ಯಕ್ತಿತ್ವಗಳು ನನ್ನ ಮನಸ್ಸಿನಲ್ಲಿ ಒಟ್ಟೊಟ್ಟಿಗೆ ಆಳವಾಗಿ ಉಳಿದುಬಿಟ್ಟಿತು. ನನ್ನ ಅಭಿನಯಕ್ಕೆ ಬಹುಮಾನ ಬಂತು. ?ಆಗ ನಾನು ಮನುಷ್ಯನಾಗಿದ್ದೆ.. ಈಗ ಮನುಷ್ಯನಲ್ಲ .. ಮೃಗ.. ಮರಣಾವಸ್ಥೆಯಲ್ಲಿದ್ದ ಹೆಂಡತಿಯನ್ನು ಉಳಿಸಲೆಂದು ಕಳ್ಳತನ ಮಾಡಿ ಕಳ್ಳನಾದೆ.. ಈಗ ನನಗೆ ಹೆಸರೂ ಇಲ್ಲ.. ಬರೇ ನಂಬರು.. ಎಂದು ಹೇಳುವ ಕಳ್ಳನ ಮಾತುಗಳನ್ನು ನಾನಿವತ್ತಿಗೂ ಮರೆತಿಲ್ಲ. ಪ್ಯಾರಿಸ್ನಿಂದ ಸುಮಾರು ೩೦ ಕಿ.ಮೀ. ದೂರದ ಹಳ್ಳಿಯೊಂದರಲ್ಲಿ ನಡೆದ ಘಟನೆಯನ್ನು ಬಂಟಮಲೆಯ ಬುಡದ ಪಂಜದಲ್ಲಿ ಪುನರ್ ಸೃಷ್ಟಿಸಿದ ಮುಡೂರು ಅವರು ಒಂದು ಸೋಜಿಗವಾಗಿ ನನ್ನಲ್ಲಿ ಶಾಶ್ವತವಾಗಿ ಉಳಿದುಬಿಟ್ಟರು. ಅವರೆಂದೂ ನನ್ನಲ್ಲಿಂದ ಕಳೆದುಹೋಗಲಾರರು.
ಹ್ಯೂಗೋನ ಲಾ ಮಿಸರೇಬಲ್ ಕಾದಂಬರಿಯನ್ನು ದು:ಖಾರ್ತರು ಹೆಸರಿನಲ್ಲಿ ಎ ಪಿ ಸುಬ್ಬಯ್ಯನವರು 1951 ರಷ್ಟು ಹಿಂದೆಯೇ ಅನುವಾದಿಸಿದ್ದರು. ಮತ್ತೆ ಅದನ್ನು ಜಿಟಿ ನಾರಾಯಣ ರಾಯರೂ ಅಶೋಕ ವರ್ಧನರೂ ಮರು ಮುದ್ರಿಸಿದರು. ಮುಡೂರರ ಮೂಲಕ ಅವೆಲ್ಲವೂ ನನ್ನೊಳಗೆ ಸೇರಿಕೊಂಡು ಭದ್ರವಾಗಿ ಉಳಿದಿದೆ.
ನಮಸ್ಕಾರ ಸಾರ್. ಹೋಗಿ ಬನ್ನಿ. ಇನ್ನೊಮ್ಮೆ ನನಗೆ ನೀವೇ ಕನ್ನಡ ಪಂಡಿತರಾಗಿ ಬಂದು ಪಾಠ ಮಾಡಿ.

– ಪುರುಷೋತ್ತಮ ಬಿಳಿಮಲೆ

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.