ಆದರ್ಶದ ಅನುಭವ ಹಂಚಿದ ಮುಡೂರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

– ಡಾ. ಸುಂದರ್ ಕೇನಾಜೆ

ಟಿ.ಜಿ ಮುಡೂರವರನ್ನು ಕಳುಹಿಸಿಕೊಟ್ಟಿದ್ದೇವೆ. ತನ್ನ ಸಾತ್ವಿಕ ಸಿಟ್ಟು ಹಾಗೂ‌ ನಿಷ್ಠುರ ನಿಲುವು ಎನ್ನುವ ಕಾರಣಕ್ಕೆ ನೀಡಬೇಕಾದದ್ದನ್ನು ನೀಡದೇ ನೀಡಬಾರದ್ದರಿಂದ ಸಂತೃಪ್ತವಾಗಿಸಿಯೇ ಕಳುಹಿಸಿಬಿಟ್ಟಿದ್ದೇವೆ. ತೊಂಬತ್ತೈದು ವರ್ಷಗಳ ಸುದೀರ್ಘ ಪಯಣದಲ್ಲಿ ಟಿ.ಜಿ ಮುಡೂರು ಈ ಸಮಾಜಕ್ಕೆ ನೀಡಿದ್ದಷ್ಟುನ್ನು ಪಡೆದಿಲ್ಲ ಎನ್ನುವುದು ಎಷ್ಟು ಸತ್ಯವೋ, ಪಡೆಯಲು ಹಂಬಲಿಸಲಿಲ್ಲ ಎನ್ನುವುದು ಅಷ್ಟೇ ಸತ್ಯ. 1993-94 ತಾಲೂಕು ಕ.ಸಾ.ಪದ ಅಧ್ಯಕ್ಷತೆಯಿಂದ ಮುಡೂರುರವರನ್ನು ಏಕಾಏಕಿ ತೆಗೆದು ಹಾಕಿದ ಸಂದರ್ಭ, ನನಗಿನ್ನೂ ನೆನಪಿದೆ ಸುಳ್ಯದ ಗುರುಭವನದಲ್ಲಿ ನಡೆದ ಪರಿಷತ್ ಸಭೆಗೆ ಈ ಅನ್ಯಾಯವನ್ನು ಪ್ರತಿಭಟಿಸುವ ಪ್ರತಿನಿಧಿಯಾಗಿ ನಾನೂ ಭಾಗವಹಿಸಿದ್ದೆ. ಸರ್ವಾಧಿಕಾರಿ ಧೋರಣೆಯ ಜಿಲ್ಲಾಧ್ಯಕ್ಷರ ವಿರುದ್ಧ ಧ್ವನಿ ಎತ್ತಿದ್ದೆ. ಅದುವರೆಗೂ ಟಿ.ಜಿ ಮುಡೂರು ಎಂಬ ಹೆಸರು ಮಾತ್ರ ಕೇಳಿ ತಿಳಿದಿದ್ದ ಟಿ.ತಮ್ಮಯ್ಯ ಮುಡೂರರ ಆತ್ಮೀಯತೆಯ ಮುಖವನ್ನೂ ಅವರ ಸಾಹಿತ್ಯದ ಗಟ್ಟಿತನವನ್ನೂ ತಿಳಿಯುವ ನೆಪವನ್ನು ಸೃಷ್ಟಿಸಿಕೊಂಡಿದ್ದೆ. ಅಧ್ಯಕ್ಷರನ್ನು ಬದಲಾಯಿಸಿದ ಈ ಪ್ರಕರಣ ಸುಳ್ಯದಿಂದ ರಾಜ್ಯ ರಾಜಧಾನಿಯ ವರೆಗೆ ಪ್ರತಿಧ್ವನಿಸಿದ್ದು ಹೌದು.‌
ಮುಂದೆ ಇದೇ ಪ್ರತಿಧ್ವನಿ ಸುಮಾರು ಏಳೆಂಟು ವರ್ಷಗಳ ನಂತರ ನಾನು ಸಂಘಟಿಸಿದ ಕಾರ್ಯಕ್ರಮವೊಂದರಿಂದ ಮತ್ತೆ ಬರುವಂತೆ ಕಾರಣವಾಯಿತು. ಕನ್ನಡ ಸಾಹಿತ್ಯದಲ್ಲಿ ವೈದಿಕ-ಅವೈದಿಕ ವಿಷಯದಲ್ಲಿ ಮುಡೂರು ದುಗ್ಗಲಡ್ಕದ ಸಾಹಿತ್ಯ ಗೋಷ್ಠಿಯೊಂದರಲ್ಲಿ ಧ್ವನಿ ಎತ್ತಿದರು. ಪರಿಣಾಮ ಅದು ಜಿಲ್ಲೆ ರಾಜ್ಯ ಹಂತದಲ್ಲಿ ಅನುರಣಿಸಿತು.
ಮತ್ತೆ ನಾಲ್ಕೈದು ವರ್ಷಗಳ ನಂತರ ಕ.ಸಾ.ಪ ರಾಜ್ಯಾಧ್ಯಕ್ಷರೊಬ್ಬರು ಕನ್ನಡ ಸಾಹಿತ್ಯಕ್ಕೆ ವೈದಿಕರ ಕೊಡುಗೆಯೇ ಮುಖ್ಯ ಎಂದಾಗಲೂ ಮುಡೂರರು ಧ್ವನಿ ಎತ್ತಿದರು. ಅದೂ ರಾಜ್ಯದಲ್ಲಿ ಸುದ್ಧಿಯಾಯಿತು. ಹೀಗೆ ಸಾಹಿತ್ಯವೆಂಬ ಸಂಗಮ ಸ್ಥಾನಕ್ಕೆ ವರ್ಗನಿಷ್ಠೆ ಪ್ರವೇಶಿಸುವ ಹುನ್ನಾರಗಳಲ್ಲೆಲ್ಲ ಮುಡೂರು ತನ್ನ ನಿಷ್ಠುರ ನಿಲುವನ್ನು ಮುಲಾಜಿಲ್ಲದೇ ವ್ಯಕ್ತಪಡಿಸುತ್ತಾ ಬಂದರು. ಆದರೆ ತನ್ನ ಪ್ರತಿಕ್ರಿಯೆಯ ಪರಿಣಾಮದಿಂದ ಮಹತ್ವವನ್ನು ಅನುಭವಿಸಬೇಕಾದ ಮುಡೂರರನ್ನು ವ್ಯವಸ್ಥಿತವಾಗಿ ಬದಿಗೆ ನಿಲ್ಲಿಸುತ್ತಾ ಬರಲಾಯಿತು. ಆ ಬಗ್ಗೆ ತಲೆಕೆಡಿಸಿಕೊಳ್ಳದ ಮುಡೂರು ತನ್ನ ವಸ್ತುನಿಷ್ಠ ನಿಲುವನ್ನು ವೈಯಕ್ತಿಕವೆಂದು ಎಂದೂ ಪರಿಗಣಿಸಲೇ ಇಲ್ಲ. ಆದರೆ ಈ ವ್ಯವಸ್ಥೆ ಅವರನ್ನು ಕಳುಹಿಸಿಕೊಡುವ ಈ ವರೆಗೂ ಅವರು ಈ ಸಮಾಜಕ್ಕೆ ಕೊಟ್ಟ ಮೌಲ್ಯಧಾರಿತ ಸಾಹಿತ್ಯ ಹಾಗೂ ಅದನ್ನೂ ಮೀರಿದ ಶಿಷ್ಯ ಬಳಗವನ್ನು ಗಣನೆಗೆ ತೆಗೆದುಕೊಳ್ಳದೇ ಸತ್ಯದ ಮಾತನ್ನೇ ಅನುಮಾನಿಸುವಂತೆ ರಾಜ್ಯವ್ಯಾಪಿ ಬಿತ್ತರಿಸಿಬಿಟ್ಟಿತು. ಈ ತೊಂಬತ್ತೈದು ವರ್ಷ ಅವರು ನಮ್ಮೊಡನಿದ್ದರೂ ಅವರ ನಿಲುವನ್ನು ಸಾಮೂಹಿಕವಾಗಿ ಸಮರ್ಥಿಸದೇ ಕಳುಹಿಸಿಬಿಟ್ಟಿವೋ ಎನ್ನುವ ಸಂಶಯ ಕಾಡುತ್ತಿದೆ.
ಈ ಮಧ್ಯೆ, ಸಮಕಾಲೀನ ಕನ್ನಡದ ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಸಾಹಿತ್ಯ ಕೃತಿ ಹಾಗೂ ಭಾರತೀಯ ಸಾಂಸ್ಕೃತಿಕ ಚಿಂತನೆಗೆ ಕೊಡುಗೆ ನೀಡಬಲ್ಲ ಶಿಷ್ಯ ಬಳಗವನ್ನು ಸೃಷ್ಟಸಿದ ಮುಡೂರಿಗೆ ಈ ತಾಲೂಕನ್ನು ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ, ಸಾಧ್ಯವಾಗಲಿಲ್ಲ ಎನ್ನುವುದಕ್ಕಿಂತ ಸಾಧ್ಯವಾಗಿಸಲಿಲ್ಲ ಎನ್ನುವುದು ಸತ್ಯ. ಇದಕ್ಕೆ ಅವರ ರಾಜಿ ಮಾಡಿಕೊಳ್ಳದ ಗುಣ ಒಂದೇ ಕಾರಣವೆಂದರೂ ತಪ್ಪಾಗಲಾರದು. ಈ ಗುಣವನ್ನಿರಿಸಿ 95 ವರ್ಷ ಸಂತೃಪ್ತಿ ಕಾಣುತ್ತಾ ಬಂದ ಮುಡೂರು ಅತೃಪ್ತಿ ಅನುಭವಿಸಲೇ ಇಲ್ಲ ಎನ್ನುವುದಕ್ಕೆ ಕೊನೆಯವರೆಗಿನ ಅವರ ಅರೋಗ್ಯಕರ ಬದುಕೇ ನಿದರ್ಶನ. ಹಾಗಾಗಿ ಅವರ ನಿಲುವನ್ನು ಯಾರು ಸೋಲಿಸಬೇಕೆಂದು ಬಯಸಿದರೋ ಅವರೇ ಅವರ ಬದುಕಿನ ಮುಂದೆ ಸೋತು ಹೋದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಟಿ.ಜಿ ಮುಡೂರರ ಬದುಕು ಮತ್ತು ಬರಹ ಎರಡೂ ಆದರ್ಶಕ್ಕೆ ಹಿಡಿದ ಕೈಗನ್ನಡಿ. ನುಡಿದಂತೆ ನಡೆಯಬೇಕೆನ್ನುವ ವಾಚಾಳಿಗಳಿಗೆ ಮುಜುಗರ ಹುಟ್ಟಿಸುವಂತದ್ದು. ಈ ಮಧ್ಯೆಯೂ ಪಂಜದ ಜನ ಮುಡೂರರಿಗೆ ನೀಡದ ಗೌರವ-ಮಾನ್ಯತೆ ಆ ಪ್ರದೇಶದ ಶಕ್ತಿಗೂ ಮೀರಿದ್ದು. ಸುಮಾರು ಎಂಟುನೂರೈವತ್ತು ಪುಟಗಳ “ನಂದಾದೀಪ” ಅಭಿನಂದನಾ ಕೃತಿ, ಅದರಲ್ಲಿ ಅವರ ಅಪ್ರಕಟಿತ ಕೃತಿಗಳ ಪ್ರಕಟ ಹಾಗೂ ಬಿಡುಗಡೆಯ ಅದ್ದೂರಿ ಕಾರ್ಯಕ್ರಮ ಅವರ ಕೊಡುಗೆಗೆ ಹುಟ್ಟೂರು ಕೊಟ್ಟ ಮಾನ್ಯತೆ, ಈ ಮಾನ್ಯತೆಯನ್ನು ತಾಲೂಕು, ಜಿಲ್ಲೆ, ರಾಜ್ಯವೂ ಕೊಡುವಷ್ಟು ಗಟ್ಟಿತನ ಅವರಲ್ಲೂ ಅವರು ರಚಿಸಿದ ಕೃತಿಗಳಾದ ಸಾಹಿತ್ಯ ಮತ್ತು ಶಿಷ್ಯ ಬಳಗ ಇವೆರಡರಲ್ಲೂ ಇದೆ. ಕೊಡಲಿಲ್ಲ ಎನ್ನುವುದೇ ವಿಷಾದ. ಅವರ ಅರ್ಧ ಪ್ರಾಯವಾಗದ ನನ್ನಂಥವನಲ್ಲೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಅವರು ತೋರಿದ ಪೋಷಕ ಪ್ರೀತಿ, ಗೌರವ, ಆತ್ಮೀಯತೆಯ ನೆನಪೇ ನನಗೆ ದೊಡ್ಡದು. ನೂರು ದಾಟಿ ಹೋಗಿವಿರೆಂದು ಭಾವಿಸಿದ ನಮಗೆ ಸಣ್ಣ ನಿರಾಶೆ ಮೂಡಿಸಿದರೂ ಇದ್ದಷ್ಟು ದಿನ ತಗ್ಗದೇ ಬಗ್ಗದೇ ಆದರ್ಶದ ಅನುಭವ ಬಿಟ್ಟು ಹೋದ ನಿಮಗೆ ಗೌರವದ ಪ್ರಣಾಮಗಳು ಸರ್.
*ಡಾ.ಸುಂದರ ಕೇನಾಜೆ*

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.