ಭಾರತ ಸರಕಾರವು 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆರೋಗ್ಯ ಮೇಳ ಆಯೋಜಿಸಲು ನೀಡಿರುವ ನಿರ್ದೇಶನದಂತೆ
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುಳ್ಯತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಸ್ಪತ್ರೆ, ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳ ಏ. 22ರಂದು ಸುಳ್ಯದ ಕೆ.ವಿ.ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಪಂಚಾಯತ್ ಅಧ್ಯಕ್ಷ ವಿಜಯಕುಮಾರ್ ಕಂದಡ್ಕ ಸಭಾಧ್ಯಕ್ಷತೆ ವಹಿಸಿದ್ದರು. ಸುಳ್ಯ ತಹಶಿಲ್ದಾರ್ ಕು. ಅನಿತಾಲಕ್ಷ್ಮಿ, ಸುಳ್ಯ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ, ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಮೆಡಿಕಲ್ ಡೈರೆಕ್ಟರ್ ಡಾ. ಕೆ.ವಿ. ಚಿದಾನಂದ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪೆರಾಜೆ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ,
ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಡೀನ್ ಡಾ. ನೀಲಾಂಬಿಕೆ ನಟರಾಜನ್, ಸುಳ್ಯ ತಾಲೂಕು ನೋಡೆಲ್ ಅಧಿಕಾರಿ ಡಾ. ಜಗದೀಶ್, ಆರ್.ಸಿ.ಹೆಚ್.ಒ. ಡಾ. ರಾಜೇಶ್ ಬೇಕಲ್, ಸಹ ನಿರ್ದೇಶಕಿ ಶ್ರೀಮತಿ ಶುಭ, ಸುಳ್ಯ ರೋಟರಿ ಕ್ಲಬ್ನ ಅಧ್ಯಕ್ಷ ಪ್ರಭಾಕರನ್ ನಾಯರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಡಾ. ವೀಣಾ ದ.ಕ. ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಸಹನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಬಿ. ಸ್ವಾಗತಿಸಿದರು. ಸುಳ್ಯ ಕ್ಷಯ ಚಿಕಿತ್ಸಾ ಘಟಕ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಪ್ರಾರ್ಥಿಸಿದರು. ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸಿಬ್ಬಂದಿ ಶಶಿಕಾಂತ್ ಮಿತ್ತೂರು ಮತ್ತು ಲೋಕೇಶ್ ತಂಟೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಕೆವಿಜಿ ವೃತ್ತದಿಂದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಆವರಣದ ತನಕ ಜಾಥಾ ನಡೆಯಿತು. ಜಾಥಾವನ್ನು ಸಚಿವ ಎಸ್. ಅಂಗಾರ ಉದ್ಘಾಟಿಸಿದರು.
ನಾವು ವಾಹನವನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುತ್ತೇವೆ. ಆದರೆ ನಮ್ಮ ಆರೋಗ್ಯ ಚೆಕ್ ಅಫ್ ಮಾಡಿಕೊಳ್ಳಲು ಯಾಕೆ ಹಿಂಜರಿಯುತ್ತಾರೆ. ಆರೋಗ್ಯಕ್ಕಿಂತ ಮುಖ್ಯವಾದದ್ದು ಬೇರೇನೂ ಇಲ್ಲ. ವಾಹನ ಚೆಕ್ ಅಫ್ ಮಾಡಿದ ಹಾಗೆ ನಮ್ಮ ಆರೋಗ್ಯವನ್ನೂ ತಪಾಸಣೆ ಮಾಡಿಸಬೇಕು – ಡಾ. ಕೆ.ವಿ. ಚಿದಾನಂದ
ಯಾವ ವಿಚಾರದಲ್ಲಿ ಬದ್ಧತೆ ಇರಬೇಕು ಎಂಬುದನ್ನು ಗಮನಿಸದೆ ಎಲ್ಲದರಲ್ಲೂ ರಾಜಕೀಯ ಮಾಡುತ್ತೇವೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಟೀಕೆಗಳಿಗೆ ಕಿವಿಗೊಡದೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದರು. ನಮ್ಮ ದೇಶದಲ್ಲಿ ಕೊರೋನಾ ವ್ಯಾಕ್ಸಿನ್ ತಂದಾಗ ಅದರಲ್ಲಿ ಬಿಸ್ಲೇರಿ ನೀರು ಇರುವುದೆಂದು ಟೀಕಿಸಿದವರು ಕದ್ದುಮುಚ್ಚಿ ತಗೊಂಡಿದ್ದಾರೆ – ಸಚಿವ ಎಸ್. ಅಂಗಾರ
ಆರೋಗ್ಯ ಮೇಳದಲ್ಲಿ ಎಲ್ಲಾ ಕಾಯಿಲೆಗಳಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ, ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿ ವಿತರಣೆ, ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವಿಕೆ, ಪ್ರಚಾರ, ಆರೋಗ್ಯ ಮಾಹಿತಿ ಮತ್ತು ಶಿಕ್ಷಣ ಹಾಗೂ ಅಗತ್ಯವಿರುವವರಿಗೆ ಪ್ರಯೋಗಾಲಯದ ತಪಾಸಣೆಗಳು ಲಭ್ಯವಿರುತ್ತದೆ.
ಮೇಳದಲ್ಲಿ ವೈದ್ಯಕೀಯ ತಜ್ಞರು, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಹೆಚ್.ಐ.ವಿ. ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ, ಎಲುಬು-ಕೀಲು- ತಜ್ಞರು, ಚರ್ಮ-ಲೈಂಗಿಕ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಕಣ್ಣಿನ ಪರೀಕ್ಷಾ ಕೇಂದ್ರ, ದಂತ ಚಿಕಿತ್ಸಾ ಕೇಂದ್ರ, ಉಚಿತ ಔಷಧಿ ಮತ್ತು ಪ್ರಯೋಗಾಲಯ ಸೇವೆ ಆಯುಷ್ ಕ್ಲಿನಿಕ್, ಆಯುರ್ವೇದಿಕ್, ಅಸಾಂಕ್ರಾಮಿಕ ರೋಗ ತಪಾಸಣೆ (ಎನ್.ಸಿ.ಡಿ. ಕ್ಲಿನಿಕ್), ಆಪ್ತ ಸಮಲೋಚನೆ (ಹದಿಹರೆಯದ ಮಕ್ಕಳಿಗೆ) ಪೌಷ್ಠಿಕ ಆಹಾರ ತಯಾರಿ ಪ್ರಾತ್ಯಕ್ಷಿಕತೆ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಅರಿವು ಮೂಡಿಸುವಿಕೆ, ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ, ಇ – ಸಂಜೀವಿನಿ ಸೌಲಭ್ಯಗಳ ಮಾಹಿತಿ, ಕೋವಿಡ್-19 ಲಸಿಕಾಕರಣ, ಕ್ಷಯರೋಗ, ಮಲೇರಿಯಾ, ಹೀಮೋಗ್ಲೋಬಿನ್ ಪರೀಕ್ಷೆ ಮಾಡಿಸಲಾಗುವುದು. ಸ್ಥಳದಲ್ಲೇ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಕೊಡಲಾಗುವುದು. ಸಾರ್ವಜನಿಕರು ಆಧಾರ್ ಕಾರ್ಡನ್ನು ಖಡ್ಡಾಯವಾಗಿ ತರಬೇಕು. ಶಿಬಿರ ಸಂಜೆ 4.00 ಗಂಟೆಯ ತನಕ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತಾಲೂಕು ಆರೋಗ್ಯಾಧಿಕಾರಿ
ಡಾ. ನಂದಕುಮಾರ್ ಪ್ರಕಟಣೆ ತಿಳಿಸಿರುತ್ತಾರೆ.