ಅತ್ಯಂತ ಪುರಾತನವಾದ ಸಂಪಾಜೆ ಗ್ರಾಮದ ಕಡೆಪಾಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಭಕ್ತಾದಿಗಳ ನಿರಂತರ ಹಗಲುರಾತ್ರಿ ಶ್ರಮದಾನದ ಫಲವಾಗಿ ಮೊಗೇರರು, ತನ್ನಿಮಾನಿಗ, ಕ್ಷೇತ್ರಪಾಲಕ ಗುಳಿಗ, ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜ ಮತ್ತು ನಾಗಬ್ರಹ್ಮ ದೈವಗಳ ಪುನ:ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ಬಾಲಕೃಷ್ಣ ಆಚಾರ್ಯ ತಂತ್ರಿಗಳ ನೇತೃತ್ವದಲ್ಲಿ ಎ.24ರಂದು ಬೆಳಿಗ್ಗೆ ನಡೆಯಿತು.
ಎ. 21ರಂದು ಸಂಜೆ ಕುಟ್ಟಿಪೂಜೆ, ಬಳಿಕ ಅನ್ನಸಂತರ್ಪಣೆ, ಎ. 22ರಂದು ಸಂಜೆ ತಂತ್ರಿಗಳ ಆಗಮನ, ರಾತ್ರಿ ಆಲಯ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ ಮತ್ತು ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ದುರ್ಗಾಪೂಜೆ, ಪ್ರಾಸಾದಬಲಿ, ವಾಸ್ತುಪೂಜೆ, ವಾಸ್ತುಬಲಿ, ದಿಕ್ಪಾಲಬಲಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು.
ಎ. 23ರಂದು ಬೆಳಿಗ್ಗೆ ಅಧ್ಯ ಗಣಯಾಗ, ಪ್ರಾಯಶ್ಚಿತ ಹೋಮ, ನವಗ್ರಹ ಶಾಂತಿ ಹೋಮ, ಭೂ ವರಹ ಶಾಂತಿ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಬಿಂಬಶುದ್ಧಿ, ಬಿಂಬಾಧಿವಾಸ , ಶೈಯಾದಿವಾಸ, ಬ್ರಹ್ಮಕಲಶ ಆರಾಧನೆ, ಅಧಿವಾಸ ಹೋಮ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಎ. 24ರಂದು ಬೆಳಿಗ್ಗೆ ಆಧ್ಯ ಗಣಯಾಗ, ಪ್ರತಿಷ್ಠಾ ಹೋಮ, ಪ್ರಧಾನ ಹೋಮ ನಡೆದು ಬೆಳಿಗ್ಗೆ ಗಂಟೆ 9.33ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶಿಬರ, ಪ್ರತಿಷ್ಠಾಪೂರ್ವಕ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ರೂವಾರಿ ಪದ್ಮನಾಭ ಆಚಾರ್ಯ, ತೇಜಸ್ ಕಡಪಳ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.