ಎ. 22 ರಂದು ಸುರಿದ ಭಾರಿ ಗಾಳಿ ಮಳೆಗೆ ಅಡ್ತಲೆ-ಕಾಯರದಲ್ಲಿ ಅಪಾರ ಹಾನಿಯಾದ ಘಟನೆ ವರದಿಯಾಗಿದೆ. ಅಡ್ತಲೆಯ ಶಶಿಕುಮಾರ್ ಅವರ 6 ತೆಂಗಿನ ಮರ ಮತ್ತು 35 ರಬ್ಬರ್ ಮರಗಳು ಉರುಳಿಬಿದ್ದಿದೆ. ಅಲ್ಲದೆ ಹಿಮಕರ ಅಡ್ತಲೆಯವರ ವುಡ್ ಇಂಡಸ್ಟ್ರೀಸ್ ನ ಮಾಡಿನ ಒಂದು ಭಾಗ ಮತ್ತು ಬದಿಯಲ್ಲಿ ನಿಲ್ಲಿಸಿದ್ದ ಪಿಕ್ಕಾಪು ವಾಹನದ ಮೇಲೆ ಮರದ ಮತ್ತು ರಬ್ಬರ್ ಗೆಲ್ಲು ಬಡಿದು ಹಾನಿಯಾಗಿದೆ. ಶಿವಾನಂದ ಪಿಂಡಿಮನೆಯವರ ೪೪ ರಬ್ಬರ್ ಮರಗಳು, ಹೊನ್ನಪ್ಪ ಮಾಸ್ತರ್ ಅಡ್ತಲೆಯವರ ೩೫ರಬ್ಬರ್ ಮರ ಮತ್ತು ಒಂದು ತೆಂಗು, ಹುಕ್ರಪ್ಪ ಅಡ್ತಲೆಯವರ ಮನೆಯ ಒಂದು ಪಕ್ಕಕ್ಕೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಸದಾನಂದ ಅಡ್ತಲೆಯವರ ಮನೆ ಮತ್ತು ಅಂಗಡಿಯ ಶೆಡ್ ಗೆ ಅಳವಡಿಸಿದ್ದ ಸಿಮೆಂಟ್ ಶೀಟ್ ಮತ್ತು ತಗಡಿನ ಶೀಟ್ ಹಾರಿಹೋಗಿ ೮೦ ಸಾವಿರ ನಷ್ಟ ಸಂಭವಿಸಿದೆ.
ಸುನಿಲ್ ಅಡ್ತಲೆಯವರ ಕೋಳಿ ಫಾರಂನ ಮಾಡಿಗೆ ಮರವೊಂದು ಮುರಿದು ಬಿದ್ದು ಸಂಪೂರ್ಣ ಜಖಂಗೊಂಡಿದೆ.ಪ್ರಭಾಕರ್ ಅಡ್ತಲೆಯವರ ಅಂಗಡಿಯ ಶೀಟ್ ಪುಡಿಯಾಗಿದೆ. ಗಣೇಶ್ ಮಾಸ್ತರರ ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ದಾಮೋದರ ಪೂಜಾರಿಮನೆ, ವಿನಯ ಅಡ್ತಲೆ, ಚಿದಾನಂದ ಅಡ್ತಲೆ,ಗಿರೀಶ್ ಅಡ್ತಲೆ,ಪದ್ಮಯ್ಯ ಪಿಂಡಿಮನೆಯವರ ಅಡಿಕೆತೋಟ ಮತ್ತು ಇನ್ನಿತರ ಕೃಷಿಕರಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅಡ್ತಲೆಯಲ್ಲಿ ವಿದ್ಯುತ್ ಟಿಸಿ ಮೇಲೆ ಮರ ಬಿದ್ದು, ವಿದ್ಯುತ್ ತಂತಿಗಳು ದರೆಗಿಳಿದಿದೆ. ಸೋಮಶೇಖರ್ ಪೈಕರವರ ತಂಡದೊಂದಿಗೆ ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ, ಸಂಜೆ ಹೊತ್ತಿಗೆ ವಿದ್ಯುತ್ ಲೈನ್ ದುರಸ್ತಿ ಮಾಡಿದ್ದಾರೆ.