ಧಾರ್ಮಿಕ ಸಭಾ ಕಾರ್ಯಕ್ರಮ
ಬಂಗಾರದ ಮನಸ್ಸುಗಳಿಂದ ದೈವಸ್ಥಾನ ಜೀರ್ಣೋದ್ಧಾರಗೊಂಡಿದೆ : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ
ನಮ್ಮ ಧರ್ಮ, ಸಂಸ್ಕೃತಿ ಗಟ್ಟಿಯಾಗಿ ಉಳಿಯಬೇಕು : ಎಸ್ . ಅಂಗಾರ
ಶ್ರೀ ಉಳ್ಳಾಕುಲು ಉಳ್ಳಾಲ್ತಿ ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಅಳ್ಪೆ-ಚಿಂಗಾಣಿಗುಡ್ಡೆ ಪಂಜ ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ. 23 ರಂದು ಸಂಜೆ ಆರಂಭ ಗೊಂಡಿದ್ದು ಎ.25 ತನಕ ಜರಗಲಿರುವುದು. ಎ.24 ರಂದುಸಂಜೆ
ಸಭಾ ಕಾರ್ಯಕ್ರಮ ಜರುಗಿತು.
ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ
ಒಳ್ಳೆಯ ಮನಸ್ಸುಗಳು ತುಂಬಿದಾಗ ಉತ್ತಮ ಕಾರ್ಯಗಳು ನಡೆಯುತ್ತದೆ. ಅದಕ್ಕೆ ಚಿಂಗಾಣಿಗುಡ್ಡೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆದರ್ಶ. ಇಲ್ಲಿ ಯುವಶಕ್ತಿ ಪ್ರಕಟ ಗೊಂಡಿದೆ,ಬಂಗಾರದ ಮನಸ್ಸುಗಳಿಂದ ದೈವಸ್ಥಾನ ಜೀರ್ಣೋದ್ಧಾರ ಗೊಂಡಿದೆ. ಧರ್ಮ-ಸಂಸ್ಕೃತಿಯು ಗಟ್ಟಿಯಾಗಿ ಬೇರೂರಲಿ.”ಎಂದು ಅವರು ಹೇಳಿದರು.
“ಅಂದು ನಾನು ಜೀರ್ಣೋದ್ಧಾರ ಕಾರ್ಯದ ಶಿಲಾನ್ಯಾಸಕ್ಕೆ ಬಂದಾಗ ಇದ್ದ ಈ ಸ್ಥಳ ಇಂದು ಸಂಪೂರ್ಣ ಬದಲಾಗಿದೆ. ನನ್ನ ಮನಸ್ಸು ತುಂಬಿದೆ”. ಎಂದು ಅಭಿವೃದ್ಧಿ ಕಾರ್ಯದ ಕುರಿತು ಅವರು ಸಂತಸ ವ್ಯಕ್ತಪಡಿಸಿದರು..ಮುಖ್ಯ ಅತಿಥಿಯಾದ ಕರ್ನಾಟಕ ಸರಕಾರದ ಉಸ್ತುವಾರಿ ಮತ್ತು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಮಾತನಾಡಿ
“ನಮ್ಮ ಧರ್ಮ ಸಂಸ್ಕೃತಿ ಉಳಿಯ ಬೇಕಾದರೆ ತ್ಯಾಗ ಮಾಡ ಬೇಕಾಗುತ್ತದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ದೈವ ದೇವರುಗಳ ಕಾರ್ಯಗಳಲ್ಲಿ ಸಂಘಟನೆಗಳ ಮೂಲಕ ತೊಡಗಿಸಿ ಕೊಳ್ಳ ಬೇಕು. ಭಕ್ತಿ ಪೂರ್ವಕ ಆರಾಧನೆ ನಡೆಸಿದಾಗ ದೈವ-ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ”. ಎಂದು ಅವರು ಹೇಳಿದರು.
“ಸರಕಾರದ ವತಿಯಿಂದ ಚಿಂಗಾಣಿಗುಡ್ಡೆ ದೈವಸ್ಥಾನಕ್ಕೆ 5 ಲಕ್ಷ ರೂ. ಅನುದಾನ ನೀಡುತ್ತೇನೆ. ಮುಂದೆಯೂ ಸಹಕರಿಸುವುದಾಗಿ”ಅವರು ಹೇಳಿದರು.
ಸಭಾಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ . ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು ಮಾತನಾಡಿದರು. ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವದಾಸ ರೈ ಕೆಬ್ಲಾಡಿ, ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಭರತ್ ರಾಮತೋಟ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ರಾಮಕೃಷ್ಣ ಸಾಯಿಕೃಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವಿಶೇಷ ದಾನಿಗಳನ್ನು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಶರಣ್ಯ ಕೋಟಿಯಡ್ಕ ಪ್ರಾರ್ಥಿಸಿದರು.
ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವದಾಸ ರೈ ಕೆಬ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ಕುಸುಮಾಧರ ಕರಿಮಜಲು ಸ್ವಾಗತಿಸಿದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ಸನ್ಮಾನಿತರ ಪಟ್ಟಿಯಾಚಿಸಿದರು ಮತ್ತು ವಂದಿಸಿದರು. ಸ್ವಾಮೀಜಿಯವರನ್ನು ಪೂರ್ಣ ಕುಂಭ ಮತ್ತು ಚೆಂಡೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.ಬಳಿಕ ಅವರು ದೈವಸ್ಥಾನಕ್ಕೆ ಭೇಟಿ ನೀಡಿದರು.ಸಂಜೆ ಬಂಡಾರ ತೆಗೆಯುವುದು, ರಾತ್ರಿ ಶ್ರೀ ದೈವಂಕುಲು ಮಹಿಷಂತಾಯ, ಮಣಿಪಾನ, ಪಂಜುರ್ಲಿ ಮತ್ತು ಉಳ್ಳಾಲ್ತಿ ಅಮ್ಮನವರ ನೇಮೋತ್ಸವ ಜರುಗಲಿದೆ. ಎ. 25 ರಂದು ಬೆಳಿಗ್ಗೆ ಗಂಟೆ 9 ಕ್ಕೆ ಶ್ರೀ ಉಳ್ಳಾಕುಲು ಮತ್ತು ವರ್ಣಾರ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ, ರಾತ್ರಿ ಗಂಟೆ 9ರಿಂದ ಶ್ರೀ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರುಗಲಿರುವುದು.