ವಿವಿಧ ಕ್ಷೇತ್ರಗಳ ಗಣ್ಯರಿಂದ ಶ್ರದ್ದಾಂಜಲಿ; ಮುಡೂರು ಬದುಕು, ಬರಹದ ಗುಣಗಾನ
ಅಗಲಿದ ಹಿರಿಯ ಸಾಹಿತಿ, ವಿದ್ವಾನ್ ಟಿ.ಜಿ. ಮುಡೂರರಿಗೆ ಶ್ರದ್ದಾಂಜಲಿ ಮತ್ತು ನುಡಿನಮನ ಕಾರ್ಯಕ್ರಮವು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂದು ಕನ್ನಡ ಭವನದಲ್ಲಿ ನಡೆಯಿತು.
ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡರು ಮುಡೂರರ ಭಾವಚಿತ್ರದ ಎದುರು ದೀಪ ಬೆಳಗಿಸಿ, ಪುಷ್ಪನಮನ ಸಲ್ಲಿಸಿದರು. ಭಾಗವಹಿಸಿದವರು ಪುಷ್ಪಾರ್ಚನೆಗೈದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿದರು.
ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಮುಡೂರು ಕೊಡುಗೆ ದೊಡ್ಡದು. ಅವರ ಸಾಹಿತ್ಯದ ಮೌಲ್ಯಕ್ಕೆ ತಕ್ಕ ಯೋಗ್ಯತೆ ಸಿಕ್ಕಿಲ್ಲ ಎನ್ನುವುದು ನೋವಿನ ಸಂಗತಿ. ಕ್ರಾಂತಿಕಾರಿ ನಿಲುವುಗಳ ಮೂಲಕ ಮುಡೂರರು ಸುಳ್ಯದ ಸಾಹಿತ್ಯ ವಲಯವನ್ನು ಜೀವಂತವಾಗಿಟ್ಟವರು ಎಂದು ಹೇಳಿದರು.
ಮುಡೂರರ ಅಳಿಯ ಹಾಗೂ ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಮಾಲಕ ಡಾ. ಯು.ಪಿ.ಶಿವಾನಂದರು ಮಾತನಾಡಿ, ಮೌಲಿಕ ಮತ್ತು ಸ್ವಾವಲಂಬಿ ಜೀವನ ನಡೆಸಿದ ಮುಡೂರರು ನಿರಂತರ ಕ್ರಿಯಾಶೀಲತೆಯ ಮೂಲಕ ಸಾಹಿತ್ಯದ ಜೊತೆಗೆ ಬದುಕಿನ ಕಾರಣದಿಂದಲೂ ಸಮಾಜಕ್ಕೆ ಮಾದರಿಯಾದವರು ಎಂದರು.
ಶಿಕ್ಷಕ, ಜಾನಪದ ಸಂಶೋಧಕ ಡಾ.ಸುಂದರ್ ಕೇನಾಜೆ ಮಾತನಾಡಿ, ಕನ್ನಡಕ್ಕೆ ಶ್ರೇಷ್ಠ ಕೃತಿಗಳನ್ನು ಮುಡೂರು ನೀಡಿದ್ದಾರೆ. ಕಿರಿಯ, ಮಧ್ಯವಯಸ್ಕ, ಪ್ರೌಢ ಹೀಗೆ ಓದಿನ ಮೂರು ವ್ಯಕ್ತಿತ್ವಗಳ ಮತ್ತು ಆಸಕ್ತಿಗಳ ಆಯಾಮದಲ್ಲಿ ಅವರಿಂದ ಸಾಹಿತ್ಯ ಜಗತ್ತಿಗೆ ಕೊಡುಗೆ ಸಂದಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರಾಗಿ, ಸಾಹಿತಿಯಾಗಿ, ಸಮಾಜಪರ ನಿಲುವುಗಳ ಪ್ರತಿಪಾದಕರಾಗಿ, ಸಂಘಟನಾ ಚತುರರಾಗಿ ಹೀಗೆ ಬಹು ಆಯಾಮಗಳಲ್ಲಿ ಮುಡೂರು ಕೊಡುಗೆ ಸಮಾಜಕ್ಕೆ ಸಂದಿದೆ. ಲೇಖಕನಾದವ ಆಯಾ ಕಾಲದ ಕಣ್ಣು ಮತ್ತು ಕಿವಿ ಆಗಬೇಕು ಎಂಬ ಮಾತನ್ನು ನಿಜವಾದ ಅರ್ಥದಲ್ಲಿ ಕಾಪಾಡಿಕೊಂಡು ಬಂದವರು ಮುಡೂರು ಎಂದು ಸುದ್ದಿ ಚಾನೆಲ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ ಹೇಳಿದರು
. ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಉಪನ್ಯಾಸಕ ಸಂಜೀವ ಕುದ್ಪಾಜೆ, ಮುಡೂರರ ಒಡನಾಟ ಮತ್ತು ಸಾಧನೆಯನ್ನು ಸ್ಮರಿಸಿಕೊಂಡರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಮಾತನಾಡಿ, ಸುಳ್ಯದ ಸಾಹಿತ್ಯ ಮತ್ತು ಸಂಘಟನೆಗೆ ಮೌಲಿಕ ಕೊಡುಗೆ ನೀಡಿದ ಮುಡೂರರ ಹೆಸರಿನಲ್ಲಿ ಯೋಜನೆಯೊಂದನ್ನು ಸಾಹಿತ್ಯ ಪರಿಷತ್ ಜಾರಿಗೆ ತರಲಿದ್ದು, ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು. ಹಿರಿಯ ನಾಗರಿಕರ ವೇದಿಕೆ ಮತ್ತು ನಿವೃತ್ತ ಪಿಂಚಣಿದಾರರ ವತಿಯಿಂದ ಸಹಕಾರ ನೀಡುವುದಾಗಿ ಡಾ.ರಂಗಯ್ಯ ಹಾಗೂ ಕುಟುಂಬದವರ ಪರವಾಗಿ ಸಹಕಾರ ನೀಡುವುದಾಗಿ ಡಾ. ಯು.ಪಿ.ಶಿವಾನಂದ ಹೇಳಿದರು.
ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಾಲ ವಂದಿಸಿದರು.
ಡಾ. ರೇವತಿ ನಂದನ್, ಡಾ.ರಂಗಯ್ಯ, ಶ್ರೀಮತಿ ಲೀಲಾ ದಾಮೋದರ್, ಶ್ರೀಮತಿ ಚಂದ್ರಮತಿ ಕೆ. ದಯಾನಂದ ಆಳ್ವ, ಗಣೇಶ್ ಭಟ್ ಸಿ.ಎ., ಜಯಪ್ರಕಾಶ್ ಕುಕ್ಕೆಟ್ಟಿ, ನೂಜಾಲು ಪದ್ಮನಾಭ ಗೌಡ, ಹೊನ್ನಪ್ಪ ಗೌಡ ಅಡ್ತಲೆ, ಕೇಶವ ಸಿ.ಎ., ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ, ಗಂಗಾಧರ ಮಟ್ಟಿ, ಶ್ರೀಮತಿ ಲತಾಶ್ರೀ ಸುಪ್ರೀತ್, ಭೀಮರಾವ್ ವಾಷ್ಠರ್, ಯೋಗೀಶ್ ಹೊಸೋಳಿಕೆ, ತೇಜೇಶ್ವರ ಕುಂದಲ್ಪಾಡಿ, ಜಯರಾಮ್ ಶೆಟ್ಟಿ ದುಗಲಡ್ಕ, ಪುನೀತ್ಕುಮಾರ್ ಉಬರಡ್ಕ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.