ಬೈಕ್ನಲ್ಲಿ ಹಿಂಬದಿ ಸವಾರನಾಗಿ ತೆರಳುತ್ತಿದ್ದ ಯುವಕ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಗುತ್ತಿಗಾರು ಗ್ರಾಮದ ಪೈಕ ಕೊರ್ತ್ಯಡ್ಕ ದಿ.ಚಂದ್ರಶೇಖರ ಅವರ ಪುತ್ರ ಪರಶುರಾಮ ಕೆ.(34) ಮೃತಪಟ್ಟ ಯುವಕ. ಪರಶುರಾಮರು ಗುತ್ತಿಗಾರಿನಲ್ಲಿ ರಿಕ್ಷಾ ಚಾಲಕರಾಗಿದ್ದು, ಕೆಲವೊಮ್ಮೆ ಐಸ್ಕ್ರೀಂ ವಾಹನದಲ್ಲಿಯೂ ತೆರಳುತ್ತಿದ್ದರು.
ಇಂದು ಮರ್ಕಂಜಕ್ಕೆ ತೇಜಕುಮಾರ್ ಎಂಬವರ ಬೈಕ್ ನಲ್ಲಿ ಪರಶುರಾಮರು ಹಿಂಬದಿ ಸವಾರನಾಗಿ ತೆರಳುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತು. ನೋವು ಜೋರಾಗತೊಡಗಿದ್ದರಿಂದ ತೇಜಕುಮಾರ್ರಲ್ಲಿ ಬೈಕ್ ನಿಲ್ಲಿಸುವಂತೆ ಹೇಳಿ, ಬೈಕ್ನಿಂದ ಇಳಿದು ರಸ್ತೆ ಬದಿ ಹೋಗಿ ಕುಳಿತರೆನ್ನಲಾಗಿದೆ. ಅಲ್ಲಿ ಅವರು ಕುಳಿತಲ್ಲೇ ಕುಸಿದು ಬಿದ್ದರು. ತಕ್ಷಣ ಜತೆಗಿದ್ದ ತೇಜಕುಮಾರ್ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆ ತಲುಪುವ ವೇಳೆಗೆ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಮೃತರು ತಾಯಿ ಜಾನಕಿ, ಸಹೋದರರಾದ ದಿನೇಶ, ಜಗದೀಶ ಹಾಗು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.