ಅರಣ್ಯದವರಿಲ್ಲದೇ ಗ್ರಾಮ ಸಭೆ ಬೇಡ : ಗ್ರಾಮಸ್ಥರ ಆಗ್ರಹ – ಮಂಡೆಕೋಲು ಗ್ರಾಮಸಭೆ ಮುಂದೂಡಿಕೆ
ಅರಣ್ಯ ಹಾಗೂ ಮೆಸ್ಕಾಂ ಅಧಿಕಾರಿಗಳು ಗ್ರಾಮ ಸಭೆಗೆ ಬಂದಿಲ್ಲವೆಂಬ ಕಾರಣಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ ಹಾಗೂ ಆ ಇಲಾಖೆಯ ಅಧಿಕಾರಿಗಳು ಬಂದ ಮೇಲೆ ಗ್ರಾಮ ಸಭೆ ಮಾಡಿ ಎಂದು ಗ್ರಾಮಸ್ಥರು ಸಲಹೆ ನೀಡಿದ ಮೇರೆಗೆ ಗ್ರಾಮ ಸಭೆ ಮುಂದೂಡಿದ ಘಟನೆ ಮಂಡೆಕೋಲಿನಲ್ಲಿ ನಡೆದಿದೆ.
ಮಂಡೆಕೋಲು ಗ್ರಾಮ ಸಭೆಯು ಅಧ್ಯಕ್ಷೆ ವಿನುತಾ ಪಾತಿಕಲ್ಲುರವರ ಅಧ್ಯಕ್ಷತೆ ಯಲ್ಲಿ ಆರಂಭಗೊಂಡಿತು.
ಸಭೆಯಲ್ಲಿ ವರದಿ ವಾಚಿಸಲು ಪಿಡಿಒ ಮುಂದಾದಾಗ ಗ್ರಾಮಸ್ಥರಾದ ಕುಮಾರನ್ ಮಾವಂಜಿ ಹಾಗೂ ನವೀನ್ ಯಾವಟೆಯವರು ಇಲಾಖಾಧಿಕಾರಿಗಳು ಬಂದಿದ್ದಾರ? ಎಂದು ಪ್ರಶ್ನಿಸಿದರು.
ಪಶು ಇಲಾಖೆ, ತೋಟಗಾರಿಕೆ, ಬಿ.ಸಿ.ಎಂ., ಸಮಾಜಕಲ್ಯಾಣ, ಆರೋಗ್ಯ ಇಲಾಖೆಯವರು ಬಂದಿದ್ದಾರೆ ಎಂದು ಅಧ್ಯಕ್ಷರು ಹೇಳಿದರು.
ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಸಿಬ್ಬಂದಿಗಳು ಅಗತ್ಯ ವಾಗಿ ಬರಬೇಕು. ಅವರಲ್ಲಿ ಪ್ರಶ್ನೆ ಕೇಳಲು ಇದೆ ಎಂದು ನವೀನ್, ಲಕ್ಷ್ಮಣ ಉಗ್ರಾಣಿಮನೆ, ಅಜಿತ್ ಬನ್ನೂರು, ನಾರಾಯಣ, ಗಣೇಶ ಬೊಳುಗಲ್ಲು, ಪ್ರಕಾಶ್ ಕಣೆಮರಡ್ಕ ಹೇಳಿದರು.
ಈ ಕುರಿತು ಕೆಲ ಹೊತ್ತು ಚರ್ಚೆ ನಡೆದು, ನೋಡೆಲ್ ಅಧಿಕಾರಿಯಾಗಿದ್ದ ಸಿಡಿಪಿಒ ರಶ್ಮಿ ಅಶೋಕ್ ರವರು 19 ಇಲಾಖೆಗೆ ನೋಟೀಸ್ ನೀಡಲಾಗಿದ್ದು 11 ಇಲಾಖೆಯ ಪ್ರತಿನಿಧಿಗಳು ಬಂ ದಿದ್ದಾರೆ ಸಭೆ ನಡೆಸೋಣ ಎಂದು ಹೇಳಿದರು.
ಮೆಸ್ಕಾಂ ನವರು ಬರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಅಧ್ಯಕ್ಷ ರು ಹೇಳಿದರು.
ಅರಣ್ಯ ದವರು ಬಂದ ಬಳಿಕವೇ ಸಭೆ ನಡೆಯಲಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ರವರು ಅರಣ್ಯ ಇಲಾಖೆಯಿಂದ ಆಗಿರುವ ಸಮಸ್ಯೆ ಸಭೆಯ ಮುಂದೆ ಇಟ್ಟರಲ್ಲದೆ, ಇಲಾಖೆ ವಿರುದ್ದ ಖಂಡನಾ ನಿರ್ಣಯಕ್ಕೆ ಸಲಹೆ ನೀಡಿದರು.
ಅಧ್ಯಕ್ಷೆ ವಿನುತಾ, ಸದಸ್ಯ ಬಾಲಚಂದ್ರ ದೇವರಗುಂಡ, ನೋಡೆಲ್ ಅಧಿಕಾರಿ ರಶ್ಮಿ ಸಭೆ ನಡೆಸಲು ಅವಕಾಶ ಕೇಳಿದರೂ, ಗ್ರಾಮಸ್ಥರು ಪಟ್ಟು ಬಿಡಲಿಲ್ಲ. ಜಯರಾಜ್ ಕುಕ್ಕೆಟ್ಟಿ, ಡಾ. ನಿತೀನ್ ಪ್ರಭು ಕೂಡಾ ಸಭೆಯ ಅಗತ್ಯತೆ ಕುರಿತು ಹೇಳಿದರೂ ಗ್ರಾಮಸ್ಥರು ಕೇಳಲಿಲ್ಲ. ಬಳಿಕ ಕೋರಂ ಕೊರತೆ ಎಂದು ಸಭೆ ಮುಂದೂಡುತ್ತಿರುವುದಾಗಿ ನೋಡೆಲ್ಅಧಿಕಾರಿ ಘೋಷಣೆ ಮಾಡಿದರು.