ಸುಳ್ಯ ತಾಲೂಕು ಕಳಂಜ ಗ್ರಾಮದ ಬಾಳೆಗುಡ್ಡೆ ದಿ. ಕೃಷ್ಣಪ್ಪ ನಾಯ್ಕ್ ಮತ್ತು ಜಯ ಬಿ ದಂಪತಿಗಳ ಪುತ್ರರಾಗಿರುವ ಸಂದೀಪ್ ಕುಮಾರ್ ಬಿ.ಕೆ ಯವರಿಗೆ ಏ. 23ರಂದು ಮಂಗಳೂರು ವಿಶ್ವವಿದ್ಯಾನಿಲಯದ 40 ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ ಪದವಿ ಪ್ರಧಾನ ಮಾಡಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದರಾಜು ಬಿ.ಎಂ. ಇವರ ಮಾರ್ಗದರ್ಶನದಲ್ಲಿ ಇವರು ಮಂಡಿಸಿದ “ದಕ್ಷಿಣ ಕನ್ನಡ ಜಿಲ್ಲೆಯ ಮರಾಟಿ ನಾಯ್ಕ್ ಸಮುದಾಯದ ಔದ್ಯೋಗಿಕ ಚಲನೆ: ಒಂದು ಸಮಾಜ ಶಾಸ್ತ್ರೀಯ ಅಧ್ಯಯನ” ಸಂಶೋಧನಾ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ. ಪದವಿ ನೀಡಲಾಯಿತು. ಇವರು ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ಸಂಶೋಧನಾ ವಿಚಾರಗಳನ್ನು ಮಂಡಿಸುವ ಜತೆಗೆ ಹಲವು ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ. ಸಂದೀಪ್ ಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆಮುಂಡುಗಾರು, ಪ್ರೌಢ ಶಿಕ್ಷಣವನ್ನು ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲೂ, ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ಳಾರೆ ಮತ್ತು ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಇಲ್ಲಿ ಪಡೆದು ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತಾರೆ. ನಂತರದಲ್ಲಿ ಪಂಜ, ಹರಿಹರಪಲ್ಲತಡ್ಕ, ಕಾಣಿಯೂರು, ಕೆಯ್ಯೂರು, ಗಾಂಧೀನಗರ ಪದವಿಪೂರ್ವ ಕಾಲೇಜು ಹಾಗೂ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ಸ್ನಾತಕೋತ್ತರ ಮತ್ತು ಸಂಶೋಧನಾ ಅಧ್ಯಯನ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಪ್ರಸ್ತುತ ಡಾ. ಸಂದೀಪ್ ಕುಮಾರ್ ಬಿ.ಕೆ.ರವರು ಡಾ. ಕೆ. ಶಿವರಾಮ ಕಾರಂತ ಸರ್ಕಾರೀ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.