ಚಿಕ್ಕಮಗಳೂರು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿರುವ ಲಕ್ಷ್ಮೀಶ್ ರೈ ರೆಂಜಾಳರವರು ಇಂದು ಸರಕಾರಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
1986 ರಲ್ಲಿ ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 12 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ಒಂದು ವರ್ಷ ಆಲೆಟ್ಟಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿದರು.1998 ರಿಂದ ತಾಲೂಕು ಕ್ರೀಡಾಧಿಕಾರಿಯಾಗಿ 2006 ರವರೆಗೆ ಸೇವೆ ಸಲ್ಲಿಸಿದರು. ಬಳಿಕ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಹುದ್ದೆಯ ಪ್ರಭಾರ ವಹಿಸಿ 1೦ ವರ್ಷಗಳ ಕಾಲ ಸೇವೆ ಸಲ್ಲಿಸಿದರು.2016 ರಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಹುದ್ದೆಯಲ್ಲಿ ಪೂರ್ಣಕಾಲಿಕ ಅಧಿಕಾರಿಯಾಗಿ
ನಿಯುಕ್ತಿಗೊಂಡು ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ತಾಲೂಕು ಯುವಜನ ಸೇವಾ ಇಲಾಖೆಯಲ್ಲಿ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ವಿವಿಧ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಕರ್ತವ್ಯ, ಗ್ರಾಮ ಪಂಚಾಯತ್ಗಳ, ದೇವಸ್ಥಾನಗಳ ಆಡಳಿತಾಧಿಕಾರಿಯಾಗಿ, ತಾಲೂಕು ಮಟ್ಟದ ಹತ್ತು ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸುದ್ದಿ ಬಿಡುಗಡೆ ಜನಾಂದೋನ ಕಾರ್ಯಕ್ರಮದಲ್ಲಿ ಜನ ಸ್ನೇಹಿ ಮತ್ತು ಲಂಚ, ಭ್ರಷ್ಟಾಚಾರ ಮುಕ್ತ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಸುದೀರ್ಘ 35 ವರ್ಷಗಳ ಸರಕಾರಿ ಸೇವೆಯಿಂದ ಇಂದು ವಯೋ ನಿವೃತ್ತಿ ಪಡೆಯಲಿದ್ದಾರೆ.ಅವರಿಗೆ ಚಿಕ್ಕಮಗಳೂರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಭಡ್ತಿ ನೀಡಿ ನಿನ್ನೆ ಸಂಜೆ ಸರಕಾರದಿಂದ ಆದೇಶವಾಗಿದೆ. ಇಂದು ಚಿಕ್ಕಮಗಳೂರು ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಒಂದು ದಿನ ಸೇವೆ ಸಲ್ಲಿಸಿ ನಿವೃತ್ತಿ ಪಡೆಯಲಿದ್ದಾರೆ.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ರೆಂಜಾಳದಲ್ಲಿ ನೆಲೆಸಿರುವ ಲಕ್ಷ್ಮೀಶರು ಮಂಜಪ್ಪ ರೈ, ರತ್ನಾವತಿ ದಂಪತಿಗಳ ಪುತ್ರ. ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಅಳಿಕೆ ಸತ್ಯಸಾಯಿ ಲೋಕ ಸೇವಾ ವಿದ್ಯಾ ಕೇಂದ್ರದಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಪಡೆದರು.ಪುತ್ತೂರು ಸೈಂಟ್ ಫಿಲೊಮಿನಾ ಕಾಲೇಜಿನಲ್ಲಿ ಬಿಎಸ್ಸಿ ಮತ್ತು ಮೈಸೂರಿನಲ್ಲಿ ಬಿಪಿಎಡ್ ಶಿಕ್ಷಣ ಪೂರ್ತಿಗೊಳಿಸಿದರು.
ಪತ್ನಿ ಉಮಾವತಿ ರೈ ಗೃಹಿಣಿಯಾಗಿದ್ದಾರೆ. ಪುತ್ರ ಅಕ್ಷತ್ ರೈ ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಪುತ್ರಿ ಅಂಕಿತಾ ರೈ ಭರತ ನಾಟ್ಯ ಕಲಾವಿದೆ.