ಡಾ. ಸುಂದರ್ ಕೇನಾಜೆ
ರೆಂಜಾಳ ಲಕ್ಷ್ಮೀಶ ರೈಯವರ ಜೊತೆ ಕೆಲಸ ಮಾಡುವ ಖುಷಿ ಹೇಗೆಂದರೆ, ಕಾಳಜಿಯ ಕಾರಣದ ಪ್ರೀತಿ, ಆಯಾಸವನ್ನು ಪರಿಹರಿಸುವ ಹಾಸ್ಯ, ತುರ್ತು ಎಂಬಲ್ಲಿ ಗಂಭೀರ, ಅಗತ್ಯವೆಂಬಲ್ಲಿ ಅವಸರ ಇವೆಲ್ಲದಕ್ಕೂ ಸದಾ ಸಾವಧಾನದ ಸ್ಪರ್ಶ- ಇದು ಲಕ್ಷ್ಮೀಶ ರೈಯವರ ವೃತ್ತಿಪರತೆಯ ಯಶಸ್ಸಿನ ನಡೆಯೂ ಹೌದು. ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯಲ್ಲಿ ಕಳೆದ ಇಪ್ಪತ್ತಮೂರು ವರ್ಷಗಳಿಗೂ ಹೆಚ್ಚು, ಅದಕ್ಕೂ ಮುನ್ನ ಅವರದೇ ಊರಾದ ಮರ್ಕಂಜ ಪ್ರೌಢಶಾಲೆಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚು, ಈಗ ಚಿಕ್ಕಮಗಳೂರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯ ಅನಿರೀಕ್ಷಿತ ಸಿಹಿಯೊಂದಿಗೆ ನಿವೃತ್ತರಾಗಿದ್ದಾರೆ.
ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ ರೈಯವರು ಅಲ್ಲಿ ಹತ್ತು ಹಲವು ಜವಾಬ್ದಾರಿಗಳನ್ನು ಬಹಳ ಎಚ್ಚರದಿಂದ ಮತ್ತು ಅತ್ಯಂತ ಬದ್ಧತೆಯಿಂದ ನಿರ್ವಹಿಸಿದ್ದಾರೆ. ಅನೇಕ ವರ್ಷಗಳಿಂದ ಇಲಾಖೆ ಹಾಗೂ ಇಲಾಖೇತರ ಮಟ್ಟದ ನಾನಾ ಕ್ರೀಡಾಕೂಟಗಳು ಜಿಲ್ಲೆಗೇ ಮಾದರಿ ಎಂಬಂತೆ ಸುಳ್ಯ ತಾಲೂಕಿನಲ್ಲಿ ನಡೆದಿದ್ದರೆ ಅದರ ಹಿಂದೆ ರೈಯವರ ತಾಳ್ಮೆ ಬಹಳ ಕೆಲಸ ಮಾಡಿದೆ. ಸುಮಾರು ಇಪ್ಪತ್ತೈದು ವರ್ಷಗಳಿಂದ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆ ಲೋಪವಿಲ್ಲದಂತೆ ತಾಲೂಕಿನಲ್ಲಿ ನಡೆಯುತ್ತಾ ಬರುವಲ್ಲಿಯೂ ರೈಯವರ ಕರ್ತವ್ಯಪರತೆ ಎದ್ದು ಕಾಣುತ್ತದೆ. ಹಲವು ಪ್ರತಿಭಾ ಕಾರಂಜಿ, ಶಿಕ್ಷಕರ ದಿನಾಚರಣೆ, ತರಬೇತಿ ಕಾರ್ಯಗಾರ, ಗ್ರಾಮ, ತಾಲೂಕು, ಜಿಲ್ಲಾ ಹಂತದ ಸಭೆ-ಸಮಾರಂಭ ಹೀಗೆ ತನಗೆ ಒಪ್ಪಿಸಿದ ಕೆಲಸವನ್ನು ಒಂದಿನಿತೂ ಲೋಪವಾಗದಂತೆ ನಡೆಸುವ ಸಂಘಟನಾ ಜಾಣ್ಮೆ ಲಕ್ಷ್ಮೀಶ ರೈಯವರದು. ಅನೇಕ ವರ್ಷ ತಾಲೂಕು ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯಾಗಿ ತಾಲೂಕಿನ ಯುವಮಿತ್ರರು ನೆನಪಿಡುವಂತಹಾ ಹಲವು ಯುವಜನ ಮೇಳಗಳನ್ನೂ ಸಂಘಟಿಸಿದ್ದಾರೆ. ಎಲ್ಲೆಲ್ಲೂ ಸಾವಧಾನ, ತಾಳ್ಮೆ ಮತ್ತು ಎಚ್ಚರ ಅವರ ಯಶಸ್ಸಿನ ಅಸ್ತ್ರ.
ಲಕ್ಷ್ಮೀಶ ರೈಯವರು ಏನೇ ಕೆಲಸ ಮಾಡಿದರೂ ಅಲ್ಲೊಂದು ಪ್ರಜಾಪ್ರಭುತ್ವದ ಮಾದರಿ ಇರುತ್ತದೆ. ಕ್ರಿಯೆಯಷ್ಟೇ ಪ್ರತಿಕ್ರಿಯೆ ಪಡೆಯಬೇಕೆಂಬ ಆದರ್ಶ ಗುಣರುತ್ತದೆ. ಎಲ್ಲರನ್ನೂ ಒಳಗೊಳ್ಳಿಸುವ ಪ್ರಬುದ್ಧ ನಡೆ ಇರುತ್ತದೆ. ಕೆಲವು ಬಾರಿ ತನ್ನ ಕೆಲಸಕ್ಕೆ ಕನಿಷ್ಟ ಧನ್ಯವಾದ ಸಿಗದಿದ್ದರೂ ಸಹಜವೆನ್ನುವ ನಿರ್ಲಿಪ್ತ ಧೋರಣೆ ಇರುತ್ತದೆ. ಹಾಗಾಗಿ ಔದ್ಯೋಗಿಕ ಮತ್ತು ಸಾರ್ವಜನಿಕ ಭಾಗದಲ್ಲಿನ ಭಾವನಾತ್ಮಕ ಸಂಬಂಧದ ಗಡಿರೇಖೆ ರೈಯವರಲ್ಲಿ ಖಚಿತವಾಗಿತ್ತು. ಇವೆಲ್ಲವನ್ನೂ ಪರಸ್ಪರ ಮಿಶ್ರಣ ಮಾಡದ ಒಂದನ್ನು ಹೆಚ್ಚಾಗಿಯೂ ಇನ್ನೊಂದನ್ನು ಕಡಿಮೆಯಾಗಿಯೂ ನೋಡದ ವ್ಯಕ್ತಿತ್ವದಿಂದ ಮುನ್ನಡೆದವರು. ಒಂದು ವರ್ಗ, ಒಬ್ಬ ವ್ಯಕ್ತಿ ಅಥವಾ ಒಂದು ತತ್ವ ಸಿದ್ಧಾಂತವೆನ್ನುವ ಚೌಕಟ್ಟನ್ನು ಹಾಕಿಕೊಳ್ಳದೇ ಸುದೀರ್ಘ ಔದ್ಯೋಗಿಕ ಬದುಕನ್ನು ಪೂರೈಸಿರುವ ಲಕ್ಷ್ಮೀಶ ರೈಯವರು ಗೌರವಾನ್ವಿತರಾಗಿ ನಿವೃತ್ತರಾಗಿದ್ದಾರೆ. ಸುದ್ದಿಬಿಡುಗಡೆ ಇತ್ತೀಚೆಗಷ್ಟೇ ಗುರುತಿಸಿದ್ದ ಭ್ರಷ್ಟಾಚಾರ ರಹಿತ ಮತ್ತು ಅತ್ಯುತ್ತಮ ಸೇವೆಯ ಅಧಿಕಾರಿಗಳ ಪೈಕಿ ರೈಗಳು ಒಬ್ಬರಾಗಿದ್ದರು.
ಲಕ್ಷ್ಮೀಶ ರೈಯವರು ಒಬ್ಬ ಅತ್ಯುತ್ತಮ ಯಕ್ಷಾಭಿಮಾನಿ ಮತ್ತು ಸಂಘಟಕ. ತೆಂಕುತಿಟ್ಟಿನ ಅನೇಕ ಹಿರಿಯ, ಪ್ರಸಿದ್ಧ ಕಲಾವಿದರ ಆತ್ಮೀಯ ಒಡನಾಟ ಇರುವವರು. ತನ್ನ ತಂದೆ ಯಕ್ಷಗಾನ ಭಾಗವತರಾಗಿದ್ದ ರೆಂಜಾಳ ಮಂಜಪ್ಪ ರೈಯವರಿಂದ ಸಹಜವಾಗಿಯೇ ಬಂದಿದ್ದ ಯಕ್ಷಗಾನ ಪ್ರೀತಿ ಇವರನ್ನು ಒಬ್ಬ ಉತ್ತಮ ಸಂಘಟಕನಾಗಿಯೂ ರೂಪಿಸಿದೆ. ತಾಲೂಕಿನ ಅನೇಕ ಯಶಸ್ವೀ ಯಕ್ಷಗಾನ ಕಾರ್ಯಕ್ರಮಗಳ ಸಂಘಟನೆಯಲ್ಲಿ ರೈಯವರ ಕಾಣದ ಕೈ ಕೆಲಸ ಮಾಡಿರುತ್ತದೆ. ಜೊತೆಗೆ ಯಕ್ಷಗಾನಕ್ಕಾಗಿ ಮತ್ತು ಕಲಾದರಿಗಾಗಿ ಇಂತಿಷ್ಟು ಖರ್ಚು ಮಾಡಬೇಕೆಂಬ ಅಲಿಖಿತ ಸೂತ್ರವೊಂದನ್ನೂ ಅಳವಡಿಸಿಕೊಂಡಿದ್ದಾರೆ.
ರೈಯವರ ಕೌಟುಂಬಿಕ ಸಂತೋಷವೂ ಅಷ್ಟೇ ಅನುಕರಣೀಯ. ಉದ್ಯೋಗದ ಜೊತೆ ಕೃಷಿಯನ್ನು ಚೆನ್ನಾಗಿ ನಿರ್ವಸುವ ಜಾಣ್ಮೆ ಇವರದು. ಪಿತ್ರಾರ್ಜಿತ ಕೃಷಿ ನಿರ್ವಹಣೆಯಲ್ಲಿ ಇವರ ಪತ್ನಿ ಉಮಾವತಿ ರೈಯವರು ಒಂದು ಹೆಜ್ಜೆ ಮುಂದು. ರೈಯವರಂತೆ ಆತ್ಮೀಯರ ಆತಿಥ್ಯದಲ್ಲೂ ಸಂತೃಪ್ತಿ ಕಾಣುವ ದೊಡ್ಡ ಗುಣದವರು. ಒಳಾಂಗಣ ವಿನ್ಯಾಸಗಾರ ಅಕ್ಷತ್ ಮತ್ತು ಭರತನಾಟ್ಯ ಕಲಾವಿದೆ ಅಂಕಿತಾ ಈ ಈರ್ವರು ತಮ್ಮ ಪ್ರತಿಭೆಯೊಂದಿಗೆ ರೈಯವರ ಸಾತ್ವಕ ಗುಣಗಳೊಂದಿಗೂ ಹೆಜ್ಜೆ ಹಾಕುವವರು. ಪ್ರೀತಿ, ಗೌರವ, ವಿಶ್ವಾಸ ಮತ್ತು ನಿಷ್ಠೆಯ ಮೂಲಕ ನಿಜಾರ್ಥದಲ್ಲಿ ಕರ್ತವ್ಯ ಪೂರೈಸಿದ ಲಕ್ಷ್ಮೀಶ ರೈಯವರು ಈ ನಿವೃತ್ತಿಯ ಸಂದರ್ಭದಲ್ಲಿ ಸಾರ್ವಜನಿಕ ಅಭಿನಂದನೆಗೂ ಅರ್ಹರು. ನಿವೃತ್ತ ಬದುಕಿಗೆ ಶುಭ ಕೋರುತ್ತಾ ಬದುಕಿನ ಉತ್ಸಾಹ ಇಮ್ಮಡಿಯಾಗಿ ಶತಕದ ಕಡೆಗೆ ಸಾಗಲಿ ಎಂದು ಆಶಿಸುತ್ತೇನೆ.
– ಡಾ.ಸುಂದರ ಕೇನಾಜೆ