ವಸತಿಗೃಹಗಳು ಭರ್ತಿಯಾಗಿದ್ದರೆ ಬೇರೆ ವ್ಯವಸ್ಥೆ ಇದೆ : ದೇಗುಲದ ಸ್ಪಷ್ಟನೆ
ನಿನ್ನೆ ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳಲ್ಲಿ ಅನೇಕರು ದೇಗುಲದ ರಥಬೀದಿಯಲ್ಲಿ ಮಲಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತಂತೆ ಸ್ಪಷ್ಟನೆ ನೀಡಿರುವ ದೇಗುಲದ ಕಾರ್ಯನಿರ್ವಹಣಾಧಿಕಾರಿಯವರು ವಸತಿ ಗೃಹ ಭರ್ತಿಯಾಗಿದ್ದರೆ ಭಕ್ತಾದಿಗಳಿಗೆ ಬೇರೆ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು ಬೆಳಗ್ಗಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ರಥಬೀದಿಯಲ್ಲಿ ರಾತ್ರಿ ವೇಳೆ ಭಕ್ತಾದಿಗಳು ಮಲಗಿರುವ ದೃಶ್ಯಗಳು ಹರಿದಾಡತೊಡಗಿತ್ತು. ನಿರಂತರ ರಜೆಯ ಕಾರಣ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದು, ಹೀಗೆ ಬಂದ ಭಕ್ತಾದಿಗಳಿಗೆ ವಸತಿಗೃಹ ಸಿಗದೆ ಅನೇಕರು ರಥಬೀದಿಯಲ್ಲೇ ಮಲಗಿದ್ದರು.
ಇಂದು ದೇಗುಲದ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸ್ಪಷ್ಟನೆಯೊಂದನ್ನು ಪತ್ರಿಕಾ ಹೇಳಿಕೆ ಮೂಲಕ ನೀಡಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ವಸತಿ ಗೃಹಗಳಲ್ಲಿ ಕೊಠಡಿ ನೀಡಲಾಗುತ್ತಿದೆ.
ವಸತಿಗೃಹಗಳಲ್ಲಿ ಕೊಠಡಿಗಳು ಭರ್ತಿಯಾದ ನಂತರದ ಸಂದರ್ಬದಲ್ಲಿ ಶ್ರೀ ದೇವಳದ ಆದಿ ಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖಪ್ರಸಾದ ಭೋಜನ ಶಾಲೆಯ ಮೇಲ್ಮಹಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೂ ನಿನ್ನೆ ರಾತ್ರಿ ಸುಮಾರು 1 ಗಂಟೆಯ ನಂತರ ಬಂದ ಕೆಲವು ಮಂದಿ ಭಕ್ತಾದಿಗಳು ರಥಬೀದಿಯಲ್ಲಿ ತಂಗಿರುವುದು ಕಂಡುಬಂದಿದೆ. ಅಲ್ಲದೆ ಎ. 3೦, ಮೇ. 1 ಮತ್ತು ಮೇ. ೨ರಂದು ನಿರಂತರ ಸರಕಾರಿ ರಜೆ ಇದ್ದುದರಿಂದ ಅಲ್ಲದೆ ಮೇ. 3 ರಂದು ಸರಕಾರಿ ರಜೆ, ಅಕ್ಷಯ ತೃತೀಯ ಮತ್ತು ಮಂಗಳವಾರವಾದ್ದರಿಂದ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಶ್ರೀ ದೇವಳದ ವಸತಿಗೃಹಗಳಲ್ಲಿ ರಾತ್ರಿ ತಂಗಲು ಕೊಠಡಿಗಳು ಲಭ್ಯವಾಗದ ಸಂದರ್ಭಗಳಲ್ಲಿ ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.